ಭಾನುವಾರ, ಫೆಬ್ರವರಿ 19, 2012

ಡಾ. ಕಂಬಾರರಿಗೆ ಪಿಪಿಸಿಯಲ್ಲಿ ಸಂಮಾನ

                            ಡಾ.ಕಂಬಾರ ಮತ್ತು ಕನ್ನಡ
 ಡಾ.ಚಂದ್ರಶೇಖರ ಕಂಬಾರರಿಗೆ ಇತ್ತೀಚೆಗಷ್ಟೇ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಉಡುಪಿ ಮತ್ತು  ಕಂಬಾರರ ನಡುವೆ ಬಲವಾದ ಬಾಂಧವ್ಯದ ಬೆಸುಗೆ ಇದೆ. ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದವರು.  1968 ರಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಡಾ.ಕಂಬಾರರು ಫೆಬ್ರವರಿ 18 ರಂದು ತಾನು ಸೇವೆ ಸಲ್ಲಿಸಿದ ಸಂಸ್ಥೆಯ ಆಹ್ವಾನದ ಮೇರೆಗೆ  ಉಡುಪಿಗೆ ಆಗಮಿಸುತ್ತಿದ್ದಾರೆ. ಪೂರ್ಣಪ್ರಜ್ಞ ಆಡಳಿತ ಸಮಿತಿಯು ಡಾ. ಕಂಬಾರರನ್ನು  ಅಂದು ಅಭಿನಂದಿಸಲಿದೆ. ಉಡುಪಿ ಶ್ರೀ ಅದಮಾರುಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿರುವ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕಂಬಾರರನ್ನು ಅಭಿನಂದಿಸಿ ಆಶೀರ್ವಚಿಸಲಿದ್ದಾರೆ.
ಮೊಕಾಶಿ,ಅಡಿಗ ಮತ್ತು ಕಂಬಾರ : ಡಾ. ಕಂಬಾರರು ಉಡುಪಿಯ ಪಿಪಿಸಿಗೆ ಬರುವ ಮೊದಲು ಸಾಗರದ ಕಾಲೇಜಿನಲ್ಲಿದ್ದರು.  ಗೋಪಾಲಕೃಷ್ಣ ಅಡಿಗರ ಸೂಚನೆಯಂತೆ ಉಡುಪಿಯ ಪಿಪಿಸಿಗೆ ಕನ್ನಡ ಅಧ್ಯಾಪಕರಾಗಿ ಆಗಮಿಸಿದರು.ಆಗ ಖ್ಯಾತ ವಿಮರ್ಶಕ ಶಂಕರ್ಮೊಕಾಶಿ ಪುಣೇಕರ್ ಕಾಲೇಜಿನ ಪ್ರಾಂಶುಪಾಲರು.ಸುಮಾರು ಒಂದು ವರ್ಷ ದುಡಿದ ಕಂಬಾರರಿಗೆ ಅನಂತರ ಅಮೆರಿಕಾದ ಚಿಕಾಗೋಗೆ ಹೋಗುವ ಅವಕಾಶ ಒದಗಿ ಬಂತು.ಈ ಸಂದರ್ಭದಲ್ಲಿ ಅವರನ್ನು ಹರಸಿ ಸಹಕರಿಸಿದವರು ಅದಮಾರುಮಠದ ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು.ಅಮೆರಿಕಾದಿಂದ ಮರಳಿದ ನಂತರ ಶ್ರೀ ಶ್ರೀ ವಿಬುಧೇಶತೀರ್ಥರು ಕಂಬಾರರನ್ನು ಸನ್ಮಾನಿಸಿದ್ದರು.
ಎಲಿಯಟ್ ಆಗಲಿಲ್ಲ; ಕಂಬಾರನಾದೆ :
 ಡಾ. ಕಂಬಾರರು ಕನ್ನಡ ನುಡಿ ಮತ್ತು ಇಲ್ಲಿನ ದೇಶೀಯ ಸಂಸ್ಕೃತಿಗಳ ಬಗ್ಗೆ ಅಪಾರ ಗೌರವ ಹೊಂದಿದ್ದವರು. ಅವರ ಸಾಹಿತ್ಯ ಸಾಧನೆಗೆ ಪ್ರಮುಖ ಪ್ರೇರಣೆಯೇ ಜಾನಪದ ಸಂಪತ್ತು.ಪಿಪಿಸಿಯನ್ನು ಬಿಡುವ ಮೊದಲು ಕೆಲವು ದಿನಗಳ ಕಾಲ ಅಡಿಗರ ಒಡನಾಟದಲ್ಲಿ ಕಂಬಾರರು ಕನ್ನಡ ಅಧ್ಯಾಪಕರಾಗಿ ದುಡಿದ್ದಿದ್ದರು. ಆಗ ನವ್ಯದ ಕಾಲ. ಕಂಬಾರರ ಮೇಲೂ ನವ್ಯದ ಪ್ರಭಾವ ಬೀರಿತ್ತು. ಆದರೆ ನವ್ಯದ ಈ ಪ್ರಭಾವ ಕಂಬಾರರ ದೇಶೀಯತೆಯನ್ನು ಬಲಿ ತೆಗೆದುಕೊಳ್ಳಲಿಲ್ಲ. ಅವರೇ ಒಂದು ಕಡೆ ಹೀಗೆ ಹೇಳುತ್ತಾರೆ.ನವ್ಯರು ಎಲಿಯಟ್ ತರಹ ಬರೆಯಲು ಆರಂಭಿಸಿದರೆ,ನಾನು ಹೇಳತೇನ ಕೇಳ ಬರೆದು ಎಲಿಯಟ್ ಬದಲು ಕಂಬಾರನಾದೆ.ನನ್ನ ಸಂಸ್ಕೃತಿಯನ್ನು ಹೇಗೆ ಪ್ರೀತಿಸಬೇಕು ಅನ್ನೋದು ನನಗೆ ಮುಖ್ಯ.ಎಲಿಯಟ್ನನ್ನು ಕಾಪಿ ಮಾಡೋದಲ್ಲ. ನನ್ನ ಹಳ್ಳಿಯನ್ನು ನಾವು ಪ್ರೀತಿಸದಿದ್ದರೆ ಮತ್ಯಾರು ಪ್ರೀತಿಸುತ್ತಾರೆ?. ಹಾಗಾಗಿ ನವ್ಯದ ಕಾವಿನ ನಡುವೆ ನವ್ಯಕ್ಕಿಂತ ಭಿನ್ನವಾಗಿ ಬರೆದ ಕಂಬಾರರು  ದೇಶೀಯ ಸಂಸ್ಕೃತಿಯ ಆಳವಾದ ಅಪ್ಪುಗೆಯಿಂದ ಹೊರಬರಲಿಲ್ಲ.
ಕಾವ್ಯವನ್ನು ಓದು ಕಂಬಾರ : ಡಾ.ಕಂಬಾರರಿಗೆ ಅಡಿಗರ ಮೇಲೆ ಗೌರವವಿತ್ತು.ಅವರ ಕಾವ್ಯವನ್ನು ಮೆಚ್ಚಿಕೊಂಡಿದ್ದರು. ಅಡಿಗರು ಆಗಾಗ ಕಂಬಾರರನ್ನು ಕೆಣಕುತ್ತಿದ್ದರು.ನೀನು ಕಾವ್ಯವನ್ನು ಓದು.ಹಾಡಬೇಡ.ನವ್ಯ ಕಾವ್ಯಗಳು ಹಾಡುವಿಕೆಗಿಂತ ಓದಲಿಕ್ಕೇ ಹೆಚ್ಚು ಸೂಕ್ತವಾದವುಗಳು.ಆದರೆ ಸಭೆಯಲ್ಲಿ ಕಂಬಾರರು ಕಾವ್ಯ ಓದಿದರೆ ಹಾಡಿ ಎಂಬ ಬೇಡಿಕೆ.ಕಂಬಾರರ ಕಾವ್ಯದಲ್ಲಿದ್ದ ಜಾನಪದ ಸತ್ವ, ಅದರ ಧಾಟಿ, ಅವರ ತುಂಬುಕಂಠ ಓದುವುದಕ್ಕಿಂತ ಹಾಡುವುದಕ್ಕೇ ಹೇಳಿ ಮಾಡಿಸಿದಂತಿತ್ತು.
ಕಾವ್ಯ ಹೃದಯದ ಭಾಷೆ : ಕಂಬಾರರ ದೃಷ್ಟಿಯಲ್ಲಿ ಕಾವ್ಯ ಹೃದಯಕ್ಕೆ ನಾಟುವಂತಿರಬೇಕು.ಅದು ಕೇವಲ ಬೌದ್ಧಿಕ ಕಸರತ್ತಾಗಿರಬಾರದು. ಒಮ್ಮೆ ಜೀನ್ಸ್ ಪ್ಯಾಂಟ್ ಧರಿಸಿದ ಕವಿಯೊಬ್ಬ ಕಂಬಾರರನ್ನು ಭೇಟಿಯಾದನಂತೆ. ಆಗ ಅವರ ಪ್ರಶ್ನೆ- ತಲೀ ಒಳಗ ಏನಿದ್ಯೋ ತಮ್ಮಾ?.ಮಿದುಳಿದೆ ಸಾರ್ ಕವಿಯ ಉತ್ತರ.ಥೂ !ನಿನ್ನ ಕವಿ ಹೃದಯದೊಳಗ ಹೃದಯ ಇರಬೇಕೋ ತಮ್ಮಾ ಎಂಬುದು ಕಂಬಾರರ ಉಪದೇಶ.ಕಂಬಾರರು ಹೇಳುವಂತೆ ಕಾವ್ಯ ಅಂದ್ರೆ ಶುದ್ಧಾಂಗ ಶಬ್ದವನ್ನೇ ನಂಬಿರುವ ಮಾಧ್ಯಮ. ಕಾವ್ಯ ರಚನೆ ಅಂದ್ರೆ ಒಂದು ಬಗೆಯ ತಪಸ್ಸು ಮಾಡಿದ ಹಾಗೆ.ತಪಸ್ಸು ಮಾಡಬೇಕು. ಅದರ ಮೂಲಕ ಶಬ್ದಗಳಲ್ಲಿ ಮಾಂತ್ರಿಕ ಶಕ್ತಿ ತುಂಬಬೇಕು. ಮಂತ್ರಗಳಲ್ಲಿ ದೇವತೆಗಳನ್ನು ಅಡಗಿಸಿರಲಿಲ್ಲವೇ?. ಹಾಗೆ.
ಕನ್ನಡ ಕಟ್ಟುವ ಕನಸು :
 1992 ರಿಂದ 98 ರ ತನಕ ಹಂಪಿ ಕನ್ನಡ ವಿ.ವಿ. ಯ ಉಪಕುಲಪತಿಗಳಾಗಿದ್ದ ಕಂಬಾರರಿಗೆ ಕನ್ನಡವನ್ನು ಕಟ್ಟಬೇಕೆಂಬ ಕನಸು.  ಹಂಪಿಯ ಮೊದಲ ಉಪಕುಲಪತಿಗಳಾಗಿ ನೇಮಕಗೊಂಡ ಕಂಬಾರರು  ಕನ್ನಡ ಭಾಷೆ ಮತ್ತು ದೇಶಿ ಸಂಸ್ಕೃತಿಯ ಉಳಿವಿಗೆ ಶ್ರಮಿಸಿದರು.ಉಪಕುಲಪತಿಗಳಾದಾಗ ಅವರ ಕನಸನ್ನು ಅವರೇ ಹೇಳಿಕೊಂಡಿದ್ದಾರೆ. ಹಂಪಿಯೊಳಗ ಕನ್ನಡ ಕಟ್ತೀನಿ,ಕನ್ನಡ ಸಂಸ್ಕೃತಿ ಮತ್ತೆ ತರ್ತೀನಿ.ಅವರ ಕನಸಿನ ಫಲವೇ ಕನ್ನಡ ಜಾನಪದ ವಿಶ್ವಕೋಶ. ಕುರ್ತಕೋಟಿಯವರು ಕಂಬಾರರ ಕುರಿತು ಒಂದು ಕಡೆ ಹೇಳುವ ಮಾತುಗಳಿಲ್ಲಿ ಗಮನಾರ್ಹ. ಕಂಬಾರರ ಮಹಾಕಾವ್ಯಗಳು ಎರಡು. ಚಕೋರಿ ಮತ್ತು ಕನ್ನಡ ವಿಶ್ವವಿದ್ಯಾನಿಲಯ.ಕಂಬಾರರ ಕನ್ನಡಾಭಿಮಾನ ಅವರ ಮಾತುಗಳಲ್ಲೇ ಕೇಳೋಣ.ನಾನು ಏನು ಹೇಳಬೇಕೋ ಅದನ್ನು ಹೇಳುವುದಕ್ಕೆ ಕನ್ನಡದಲ್ಲಿ ಶಕ್ತಿಯಿದೆ. ಅರ್ಥವಂತಿಕೆ ಕಟ್ಟಿಕೊಡುವ ಶಕ್ತಿ ನನ್ನ ಭಾಷೆಗಿದೆ. ನನ್ನ ಕನ್ನಡ ಭಾಷೆ, ಕನ್ನಡ ಅನುಭವದ ಮೇಲೆ ನನಗೆ ನಂಬಿಕೆ ಇದೆ.
ಜಾಗತೀಕರಣ ದೇಶೀಯ ಸಂಸ್ಕೃತಿಗೆ ಮಾರಕ : ಕನ್ನಡ ನೆಲದ ಶ್ರೀಮಂತ ಸಂಸ್ಕೃತಿಯಾದ ದೇಶೀಯತೆಯನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ಕಂಬಾರರು ಸಿದ್ಧರಿರಲಿಲ್ಲ.ಜಾಗತೀಕರಣದಿಂದ ಈ ಶ್ರೀಮಂತ ಸಂಸ್ಕೃತಿ ನಾಶವಾದೀತೆಂಬ ಭಯ. ಹಾಗಾಗಿ ಕಟುವಾದ ಮಾತುಗಳಲ್ಲೇ ಜಾಗತೀಕರಣವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.ಅವರ ಪ್ರಕಾರ ಜಾಗತೀಕರಣ ಎಂದರೆ ಅಮೆರಿಕಾಮಯ.ಅಮೆರಿಕಾದಲ್ಲಿ ಜಾನಪದ ಇಲ್ಲ.ಅಲ್ಲಿ ಒಂದು ಒಳ್ಳೆಯ ಕತೆ ಹುಟ್ಟಲು ಸಾಧ್ಯವಿಲ್ಲ.ಹಾಗಾಗಿ ಅವರು ಶೌಚಾಲಯದ ಮೇಲಿನ ಬರಹವನ್ನೇ ಜಾನಪದ ಎನ್ನಬಹುದು.ಆದರೆ ನಮ್ಮದು ಇದಕ್ಕಿಂತ ಭಿನ್ನವಾದುದು.ಜಾಗತೀಕರಣದ ಮುಷ್ಟಿಯಿಂದ ಅದು ಮುಕ್ತವಾಗಬೇಕು.
 ಕಂಬಾರರ ಕೃತಿಗಳಲ್ಲಿ ಇಲ್ಲಿನ ಗ್ರಾಮೀಣ ಸಂಸ್ಕೃತಿ ಮತ್ತು ನೆಲದ ಪ್ರೀತಿಯ ಸೆಳೆತವಿದೆ. ಸೊಗಸಾದ ಗ್ರಾಮೀಣ ಭಾಷೆಯ ಕಂಪಿದೆ.ಆಧುನಿಕ ಶಿಕ್ಷಣ,ಜಾಗತೀಕರಣ,ಪಾಶ್ಚಾತ್ಯಸಂಸ್ಕೃತಿಗಳ ದಟ್ಟಪ್ರಭಾವಗಳ ನಡುವೆಯೂ ಕಂಬಾರರು ದೇಶೀಯತೆಯ ದಾರಿ ತನ್ನದು ಎಂದರು.ಅದರಂತೆ ಬರೆದರು.ಈ ಹಿನ್ನೆಲೆಯಲ್ಲಿ ಇವರಿಗೆ ದೊರೆತ ಜ್ಞಾನಪೀಠ ಪ್ರಶಸ್ತಿ ಇಲ್ಲಿನ ಶ್ರೀಮಂತ ದೇಶೀಯ ಸಂಸ್ಕೃತಿಗೆ ಸಂದ ಗೌರವವೆನ್ನಲು ಹೆಮ್ಮೆ ಎನಿಸುತ್ತಿದೆ.

(18-02-2012 ರ ವಿಜಯಕರ್ನಾಟಕದಲ್ಲಿ ಪ್ರಕಟವಾದ ಲೇಖನ)
       (ಆಧಾರ ಗ್ರಂಥ : ಶಿವಾಪುರ ಕಂಬಾರ ನಮಸ್ಕಾರ)
          ಡಾ.ಶ್ರೀಕಾಂತ್ ಸಿದ್ದಾಪುರ

 
 

ಸೋಮವಾರ, ಜನವರಿ 23, 2012

ಶನಿವಾರ, ಡಿಸೆಂಬರ್ 10, 2011

ಕಲಾಸ್ವಾದಕ್ಕೊಂದು ಕೈಗನ್ನಡಿ: ಪಂಪನ ನೀಳಾಂಜನೆ

 ಪಂಪನು ಕನ್ನಡದ ಆದಿಕವಿ. ಕ್ರಿ.ಶ. 10 ನೇ ಶತಮಾನದಲ್ಲಿ ಅರಿಕೇಸರಿಯ ಆಸ್ಥಾನದಲ್ಲಿದ್ದವನು.  ಪಂಪಭಾರತ ಮತ್ತು ಆದಿಪುರಾಣ ಈತನ ಎರಡು ಕೃತಿಗಳು. ಇವುಗಳಲ್ಲಿ ಆದಿಪುರಾಣವು ಜೈನಧರ್ಮಕ್ಕೆ ಸಂಬಂಧಿಸಿದ ಕಾವ್ಯ. ಈ ಕೃತಿಯನ್ನು ಕ್ರಿ.ಶ. 942 ರಲ್ಲಿ ರಚಿಸಿರುವುದಾಗಿ ಪಂಪನೇ ಹೇಳಿಕೊಂಡಿರುತ್ತಾನೆ. ಈ ಕೃತಿ ರಚನೆಗೆ ಆತನು ತೆಗೆದುಕೊಂಡ ಕಾಲ ಕೇವಲ ಮೂರು ತಿಂಗಳಂತೆ.
 ಆದಿಪುರಾಣದಲ್ಲಿ ಬರುವ ರಸಘಟ್ಟಗಳಲ್ಲಿ ಒಂದು ನೀಳಾಂಜನೆಯ ನಾಟ್ಯ. ಜಿನಸೇನಾಚಾರ್ಯರ ಪೂರ್ವಪುರಾಣದಲ್ಲಿ ಸುಮಾರು ಮೂರು ಶ್ಲೋಕಗಳಲ್ಲಿ ನೀಳಾಂಜನೆಯ ನಾಟ್ಯದ ವರ್ಣನೆಯಿದೆ. ಆದರೆ ಪಂಪನು ಅದನ್ನು 30 ಪದ್ಯಗಳಿಗೆ ಇಲ್ಲಿ ವಿಸ್ತರಿಸಿರುತ್ತಾನೆ.ಜೈನರ ಮೊದಲನೆಯ ತೀರ್ಥಂಕರನಾದ ವೃಷಭನಾಥನ ವೈರಾಗ್ಯಕ್ಕೆ ಪ್ರೇರಣೆಯಾಗಿ ಈ ನಾಟ್ಯ ಸನ್ನಿವೇಶವು ಮೂಡಿಬಂದಿದೆ.
 ಪಂಪನ ನೀಳಾಂಜನೆಯ ನಾಟ್ಯದ ವರ್ಣನೆಯು ಪಂಪನ ಕಲಾಪ್ರತಿಭೆಗೆ ಸಾಕ್ಷಿಯಾಗಿದೆ. ಪಂಪನಿಗೆ ನಾಟ್ಯಶಾಸ್ತ್ರದ ಮೇಲಿದ್ದ ಅಪಾರ ಅನುಭವಗಳನ್ನು ಈ ಭಾಗದ ವರ್ಣನೆಗಳು ಸಾಬೀತು ಪಡಿಸುತ್ತವೆ.ನೀಳಾಂಜನೆಯು ಅಸಾಮಾನ್ಯ ಸೌಂದರ್ಯದ ಅದ್ಭುತ ನರ್ತಕಿ ಎಂಬುದನ್ನು ಮನವರಿಕೆ ಮಾಡಿಕೊಡುವ ಯತ್ನದಲ್ಲಿ ಪಂಪನು ತನ್ನ ಕಲಾ ಪರಿಣತಿಯನ್ನೂ ಓದುಗರ ಮುಂದಿಡುತ್ತಾನೆ.  ಇಲ್ಲಿ ಕಂಡುಬರುವ ನಾಟ್ಯಶಾಸ್ತ್ರದ ಪಾರಿಭಾಷಿಕ ಪದಗಳಾದ ಭಾರತಿ, ಸಾತ್ವತಿ, ಕೈಶಿಕಿ, ಆರಭಟಿ, ಆಹಾರ್ಯ, ಜತಿ ಮೊದಲಾದವುಗಳು ಇದನ್ನೇ ಪುಷ್ಟೀಕರಿಸುವಂತಿವೆ. ಶಾಸ್ತ್ರದ ಈ ವಿಚಾರಗಳಿಗಷ್ಟೇ ಈ ಭಾಗ ಸೀಮಿತವಾಗದಿರುವುದು ಇಲ್ಲಿ ಅಗತ್ಯವಾಗಿ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶ. ನಾಟ್ಯ ಕಲಾವಿದೆಯನ್ನು ಮತ್ತು ನಾಟ್ಯದಂತಹ ಕಲೆಯನ್ನು ಅಂದಿನ ಶ್ರೀಮಂತ ಸಮಾಜ ನೋಡುತ್ತಿದ್ದ ರೀತಿಯನ್ನೂ ಪಂಪನು ಓದುಗರ ಮುಂದೆ ಬೇಸರದಿಂದ ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆ ಮೂಲಕ ನೀಳಾಂಜನೆಯ ಪರವಾದ ಅನುಕಂಪವನ್ನೂ ಸಹೃದಯ ಬಂಧುಗಳಿಂದ ನಿರೀಕ್ಷಿಸುತ್ತಾನೆ.
 ನೀಳಾಂಜನೆ ನಾಟ್ಯವನ್ನೆಸಗುವ ಸಭೆಯಲ್ಲಿ ಉಪಸ್ಥಿತರಿರುವ ಪ್ರೇಕ್ಷಕರತ್ತ ಗಮನಿಸೋಣ. ಅಲ್ಲಿರುವವರಲ್ಲಿ ಹೆಚ್ಚಿನವರು ಅರಸರು, ಇಂದ್ರಾದಿ ದೇವತೆಗಳು. ಹಾಗಾಗಿ ಇದು ಸಭ್ಯರೆಂದು ಭಾಸವಾಗುವವರು ಉಪಸ್ಥಿತರಿದ್ದ ಶ್ರೀಮಂತರ ಸಭೆ. ಇವರೆಲ್ಲಾ ನಾಟ್ಯ ಕಲೆಯ ಆರಾಧಕರೇ?. ಹಾಗೆ ಎದೆತಟ್ಟಿ ಹೇಳುವಂತಿಲ್ಲ. ಇವರಿಗೆ ನಾಟ್ಯ ಕೇವಲ ಮನೋರಂಜನೆಯ ಮಾಧ್ಯಮ.  ಇಲ್ಲಿ ನೆರೆದವರೆಲ್ಲರೂ ಎಲ್ಲಾ ರಸಗಳಲ್ಲೂ ಪ್ರಿಯರಲ್ಲ. ಕೇವಲ ಶೃಂಗಾರರಸಪ್ರಿಯರು. ಒಂದರ್ಥದಲ್ಲಿ  ಇವರ ಪಾಲಿಗೆ ಇದೊಂದು ಮೋಜಿನ ವಿಷಯ. ಆದರೆ ನೀಳಾಂಜನೆಯು ನಾಟ್ಯದಲ್ಲಿ ನಿಜವಾದ ಪರಿಶ್ರಮವುಳ್ಳವಳು. ಅದನ್ನು ಗೌರವಭಾವದಿಂದ ಕರಗತ ಮಾಡಿಕೊಂಡವಳು.ಪಂಪನ ಪ್ರಕಾರ ನಾಟ್ಯಶಾಸ್ತ್ರಕ್ಕೆ ಹೊಸಭಾಷ್ಯ ಬರೆಯುವ ಸಾಮಥ್ರ್ಯವುಳ್ಳವಳು.ಅಂತಹ ಅದ್ಭುತ ಕಲಾವಿದೆಗೆ ಈ ಮಂದಿಯ ಮುಂದೆ ನಾಟ್ಯ ಪ್ರದರ್ಶನ ನೀಡಬೇಕಾದುದು ಅನಿವಾರ್ಯ ಕರ್ಮ. ಅದು ಆ ಕಾಲದ ಸ್ಥಿತಿಯೂ ಆಗಿತ್ತು. ಅಲ್ಲಿನ ಈ ಪ್ರೇಕ್ಷಕರನ್ನು ಆಕಷರ್ಿಸಲು ನೀಳಾಂಜನೆ ತನ್ನ ಮನಸ್ಸಿಗೆ ಹಿತವಾಗಿಯೋ ಅಥವಾ ಅಹಿತವಾಗಿಯೋ ಹಲವು ಕಸರತ್ತುಗಳನ್ನು ನಾಟ್ಯದ ವೇಳೆ ಕೈಗೊಳ್ಳಲೇಬೇಕು.  ಇದು ಸಭ್ಯತೆಯ ಎಲ್ಲೆಯನ್ನು ಮೀರುವಂತೆ ಮಡಿವಂತ ಕಣ್ಣುಗಳಿಗೆ ಕಾಣಿಸಬಹುದು. ಆದರೆ ಅಲ್ಲಿರುವ ಅರಸು ಸಮುದಾಯದಿಂದ ಶಹಭಾಸ್ಗಿರಿ ಪಡೆಯಲು ಈ ತಂತ್ರ ಆಕೆಗೆ ಅನಿವಾರ್ಯ. ಅಲ್ಲಿರುವ ಪ್ರೇಕ್ಷಕ ಸಮುದಾಯಕ್ಕೆ ನೀಳಾಂಜನೆಯ ಈ ಭಂಗಿಗಳು ಕೊಟ್ಟಷ್ಟು ಆನಂದವನ್ನು ಅವಳ  ನೈಜ ಶಾಸ್ತ್ರೀಯ ನಾಟ್ಯವೈಖರಿ ಖಂಡಿತಾ ನೀಡದು. ಪಂಪನ ಒಂದೆರಡು ಪದ್ಯಗಳು ಈ ಅಂಶಗಳನ್ನು ಪುಷ್ಟೀಕರಿಸುವಂತಿವೆ.  ಅವುಗಳ ಸಾರಾಂಶ ಹೀಗಿದೆ.  ಅಲ್ಲಿರುವ ದೇವತೆಗಳು, ಅರಸರು ಆಕೆಯ ನಾಭಿಮೂಲ ಮತ್ತು ಬಾಹುಮೂಲಗಳನ್ನು ಕಣ್ಣುಗಳನ್ನು ಮುಚ್ಚದೆ ನೋಡುತ್ತಾ ಕುಳಿತರಂತೆ.  ಮನ್ಮಥನು ಈ ಭಾಗಗಳಲ್ಲಿ ಅಮೃತವನ್ನು ಬಯ್ತಿಟ್ಟಿದ್ದನಂತೆ. ಈ ಅಮೃತವು ಇಂದ್ರಾದಿ ದೇವತೆಗಳ ಮತ್ತು ಅರಸರ ಕಣ್ಣುಗಳಿಗೆ ತಂಪನ್ನು ನೀಡಿದುವಂತೆ. ಆಕೆ ರೇಷ್ಮೆ ವಸ್ತ್ರವನ್ನುಟ್ಟಿದ್ದಳು.ಪ್ರೇಕ್ಷಕರನ್ನು ಆಕರ್ಷಿಸಲು ತನ್ನ ದೇವಾಂಗವಸ್ತ್ರದ ಒಳ ಉಡುಗೆಯನ್ನು ಆಗಾಗ ಪಕ್ಕಕ್ಕೆ ಸರಿಸುವಳು.  ಎದೆಯ ಮೇಲೆ ಕಂಗೊಳಿಸುತ್ತಿರುವ ತನ್ನ ಕಂಠದ ಹಾರವನ್ನು ಆಗಾಗ ಸರಿಪಡಿಸಿಕೊಳ್ಳುವಳು.ಇದು ಮದನರಾಜರಾಜ್ಯವಿಲಾಸ ಎಂಬಂತೆ ಕಂಗೊಳಿಸಿತಂತೆ. ನೀಳಾಂಜನೆಯ ಈ ಅಭಿನಯ ಅಥವಾ ಕಸರತ್ತುಗಳು ಸಭ್ಯಸಮಾಜಕ್ಕೆ ಅಸಹ್ಯವಾಗಿ ಕಾಣಿಸಬಹುದು. ಆದರೆ ಅಲ್ಲಿ ನೆರೆದಿರುವ ಪ್ರೇಕ್ಷಕ ಸಮುದಾಯ ಇದನ್ನು ಆಕೆಯಿಂದ ನಿರೀಕ್ಷಿಸುತ್ತಿದೆ.  ಈ ರೀತಿ ಆಕೆ ನರ್ತಿಸದಿದ್ದಲ್ಲಿ ಅಲ್ಲಿರುವ ಸಮುದಾಯಕ್ಕೆ ರಸಾಸ್ವಾದ ಆಗದು. ಇದನ್ನು ಹೊರತುಪಡಿಸಿದ ಯಾವುದೇ ಪ್ರಬುದ್ಧ ಅಭಿನಯವೇ ಇರಲಿ. ಅದು ಅವರ ಮನ ಸೂರೆಗೊಳ್ಳದು. ಹಾಗಾಗಿ ಅಲ್ಲಿರುವವರೆಲ್ಲಾ ಈ ವಿಧದ ಅಭಿನಯವನ್ನೇ ಕಾದುಕುಳಿತವರು.ಅದೇ ಅವರ ಪ್ರಧಾನ ಆಸಕ್ತಿ.ಒಂದರ್ಥದಲ್ಲಿ ಇದು ಕೀಳು ಮನೋರಂಜನೆಯ ದೃಷ್ಟಿಯನ್ನು ಬಿಂಬಿಸುವಂತೆ ಭಾಸವಾಗಬಹುದು.ಆದರೆ ಅಲ್ಲಿರುವ ಶ್ರೀಮಂತ ಪ್ರೇಕ್ಷಕರ ಮನ:ಸ್ಥಿತಿ ಇದನ್ನು ಮೀರಿ ಎತ್ತರಕ್ಕೇರಲಾರದು.
  ಪಂಪನ ನೀಳಾಂಜನೆ ನಾಟ್ಯದ ಪ್ರಸಂಗದ ಮುಂದಿನ ಸನ್ನಿವೇಶದಲ್ಲಿ ನೀಳಾಂಜನೆ ರಂಗದಿಂದ ಅದೃಶ್ಯಳಾಗುತ್ತಾಳೆ.  ಈ ಸೂಕ್ಷ ಸಂಗತಿ ಅಲ್ಲಿದ್ದ ವೃಷಭನಾಥನ ಗಮನಕ್ಕೆ ಮಾತ್ರ ಬರುತ್ತದೆ. ನಾಟ್ಯದ ಮೋಹದ ಮತ್ತಿನಲ್ಲಿ ಮುಳುಗಿದ್ದ ಉಳಿದವರಿಗೆ ಇದರ ಅರಿವಾಗುವುದೇ ಇಲ್ಲ.  ಇಂದ್ರನು ರಸ ಭಂಗವಾಗದಂತೆ ಮತ್ತೊಂದು ಪಾತ್ರವನ್ನು ಕೂಡಲೇ ತಂದು ನಿಲ್ಲಿಸಿ, ನಾಟ್ಯ ಮುಂದುವರಿಯುವಂತೆ ನೋಡಿಕೊಳ್ಳುತ್ತಾನೆ.  ಪಂಪನು ಕಾವ್ಯಭಾಗವನ್ನು ಅಷ್ಟಕ್ಕೇ ಸೀಮಿತಗೊಳಿಸದೆ ಕಲೆಯ ವಿಚಾರದಲ್ಲಿ ಬೇರೆ ಯಾವುದೋ ಸಂದೇಶವನ್ನು ಕೊಡುವ ಪ್ರಯತ್ನವನ್ನು ಮಾಡುತ್ತಿದ್ದಾನೆ. ಕಲಾವಿದೆಯೊಬ್ಬಳನ್ನು ಮೋಜು ಅಥವಾ ಮನೋರಂಜನೆಯನ್ನು ಕೊಡುವ ವಸ್ತುವನ್ನಾಗಿ ಅಥವಾ ಯಂತ್ರವನ್ನಾಗಿ ನೋಡುವ ಪರಿಪಾಠದ ವಿರುದ್ಧ ಪಂಪನ ಅಸಮಾಧಾನವಿದೆ. ಮಾನವೀಯತೆ ಮರೆತ ಮೋಜಿನ ಶ್ರೀಮಂತ ಸಮಾಜದ ವಿರುದ್ಧ ಆಕ್ರೋಶವಿದೆ.ಅವಳು ಅದೃಶ್ಯಳಾದಾಗ ಅವಳ ಬಗ್ಗೆ ಒಂದಿನಿಸೂ ಅನುಕಂಪವನ್ನು ಸೂಚಿಸದೇ ನಾಟ್ಯವನ್ನು ಮುಂದುವರಿಸುವುದಕ್ಕೇ ಮಾತ್ರ ಇಂದ್ರಾದಿಗಳು ಶ್ರಮಿಸಿದ ಬಗ್ಗೆ ಆಕ್ಷೇಪವಿದೆ. ಈ ಕಾರಣಕ್ಕಾಗಿಯೇ ಪಂಪನೂ ಅವಳ ಅದೃಶ್ಯದ ದುರಂತದ ಬಗ್ಗೆ ಒಂದೇ ಒಂದು ನೋವಿನ ಮಾತನ್ನೂ ಅಲ್ಲಿದ್ದ ಅರಸರು ಅಥವಾ ಇಂದ್ರಾದಿಗಳ ಮೂಲಕ ಹೊರಹಾಕಿಲ್ಲ. ಅವರ ಅನುಕಂಪವನ್ನು ಬಿಂಬಿಸುವ ಯಾವುದೇ ಪದ್ಯವನ್ನೂ ಎಡೆಯಲ್ಲಿ ತರುವ ಗೋಜಿಗೆ ಹೋಗಿಲ್ಲ. ಈ ಮೂಲಕ ಪಂಪನು ತನ್ನ ನಾಟ್ಯದ ಮೂಲಕ ಸಭೆಯಲ್ಲಿ ಮಿಂಚಿನ ಸಂಚಾರವನ್ನು ಉಂಟುಮಾಡಿದ ಕಲಾವಿದೆಯನ್ನು ಈ ತರನಾಗಿ ನಡೆಸಿಕೊಳ್ಳುವುದು ಸೂಕ್ತವೇ?. ಎಂಬ ಪ್ರಶ್ನೆಯನ್ನು ಓದುಗರ ಮುಂದೆ ಇಡುವ ಪ್ರಯತ್ನ ಮಾಡುತ್ತಾನೆ.ಪಂಪನ ಪ್ರಕಾರ ಆ ಸಭೆಯಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ನೀಳಾಂಜನೆಯ ಬಗ್ಗೆ ಗೌರವ ಮತ್ತು ಅನುಕಂಪ ಹೊಂದಿದ್ದ ಒಬ್ಬ ವ್ಯಕ್ತಿ ವೃಷಭನಾಥ. ವೃಷಭನಾಥನು ಅವಳನ್ನು ವೇದನೆಯಿಂದ ನಾರೀ ರೂಪದ ಯಂತ್ರ ಎಂದೇ ಕರೆಯುತ್ತಾನೆ. ಅವನಿಗೆ ಮಾತ್ರ ಈಕೆಯ ಅದೃಶ್ಯದ ಸುಳಿವು ಸಿಕ್ಕುತ್ತದೆ. ಹಾಗಾಗಿ ವೃಷಭನಾಥನ ಬಗ್ಗೆ ಪಂಪನಿಗೆ ವಿಶೇಷ ಗೌರವ.  ಈತನನ್ನು ಪಂಪನು ವಿದ್ಯಾನಿಲಯ ಎಂದು ಕರೆಯುತ್ತಾನೆ.  ಪ್ರಾಪಂಚಿಕವಾದ ಬಯಕೆಗಳಲ್ಲಿ ತುಂಬಿದ ಜನರಿಂದ ಇಂತಹ ಕಲಾವಿದೆೆ ಗೌರವವನ್ನು ನಿರೀಕ್ಷಿಸುವುದು ಮೂರ್ಖತನವಾದೀತು.  ಅಧ್ಯಾತ್ಮದತ್ತ ಒಲವುಳ್ಳ ಅಂದರೆ ಶುದ್ಧ ಮನಸ್ಸಿನ ವ್ಯಕ್ತಿಗಳಿಂದ ಮಾತ್ರ ಕಲಾವಿದೆಗೆ ನಿಜವಾದ ಅರ್ಥದಲ್ಲಿ ಗೌರವ ಲಭಿಸೀತು. ವಿದ್ಯೆ ಎಂದರೆ ಸದಾ ಎಚ್ಚರ.  ವೃಷಭನಾಥನನ್ನು ಹೊರತುಪಡಿಸಿ ಲೌಕಿಕವಾದ ಮೋಹದಲ್ಲಿ ಮುಳುಗಿದ್ದ ಉಳಿದ ಯಾವ ಪ್ರೇಕ್ಷಕರಿಗೂ ಅಲ್ಲಿ ಎಚ್ಚರವಿಲ್ಲ.  ವೃಷಭನಾಥನ ಪಾಲಿಗೆ ಆಕೆ ಸಂಸಾರದ ಅನಿತ್ಯತೆಯನ್ನು ತನ್ನ ಮನಸ್ಸಿಗೆ ನಾಟುವಂತೆ ತೋರಿಸಿ,ತನ್ನ ಕಣ್ಣನ್ನು ತೆರೆಸಿದವಳು.ಅವನ ಪಾಲಿಗೆ ಸಂಸ್ಕೃತಿ ನಾಟಕದ ಪಾಠವನ್ನು ಬೋಧಿಸಿದವಳು.ಈ ಪ್ರಸಂಗದ ಕೊನೆಯಲ್ಲಿ ಎಂತಹ ಪ್ರೇಕ್ಷಕವರ್ಗ ಬೇಕು ಎಂಬುದನ್ನು ವೃಷಭನಾಥನ ಮೂಲಕ ಸೂಚಿಸಲು ಪಂಪನು ಪ್ರಯತ್ನಿಸಿದ್ದಾನೆ.ಕಲೆ ಅಂತರಂಗದಚಕ್ಷುವನ್ನುತೆರೆಸಬೇಕು.ಲೌಕಿಕ ಬೇಡಿಕೆಗಳತ್ತ ಅಂಕುಶವನ್ನೊಡ್ಡುವಂತಿರಬೇಕು. ಲೌಕಿಕದಿಂದ ಅಲೌಕಿಕದತ್ತ ನಮ್ಮನ್ನು ಸೆಳೆಯುವಂತಿರಬೇಕು.ಕಲೆಯತ್ತ ನಿಜವಾದ ಆಸಕ್ತಿ ಇರುವ ಪ್ರೇಕ್ಷಕರಲ್ಲಿ ಈ ಮನೋಭಾವಗಳಿರಬೇಕು.ಈ ಹಿನ್ನೆಲೆಯಲ್ಲಿ ಕಲೆ ಮತ್ತು ಕಲಾವಿದರನ್ನು ನೋಡುವ ಗುಣ ಸಮಾಜದಲ್ಲಿ ಬೇರೂರಬೇಕು. ಅದಕ್ಕೆ ಬೇಕಾದುದು ಕಲೆಯ ಬಗ್ಗೆ ಅನುಭಾವದ ನೆಲೆಯ ಸ್ಪಂದನ.
 ಜಾಗತೀಕರಣ, ವ್ಯಾಪಾರೀಕರಣದ ಇಂದಿನ ದಿನಗಳಲ್ಲಿ ಕಲೆ ಮತ್ತು ಸ್ತ್ರೀಯನ್ನು ನೋಡುವ ನಮ್ಮ ಕಣ್ಣುಗಳಲ್ಲಿ ಮತ್ತೊಮ್ಮೆ ಮಲಿನತೆ ಮೂಡಿಬರುತ್ತಿದೆ.ಅಂತರಂಗದ ಸೌಂದರ್ಯಕ್ಕಿಂತ ಬಹಿರಂಗದ ಸೌಂದರ್ಯವೇ ಆಕರ್ಷಣೆಯ ಪ್ರಧಾನ ವಿಷಯವಾಗಿದೆ. ಇಂದಿಗೂ ಮಾಧ್ಯಮಗಳಲ್ಲಿ ತೋರಿಸುವ ಹೆಣ್ಣಿನ ಅರೆಬರೆ ಉಡುಗೆಗಳ ಹಿಂದೆ ಬಾರೀ ಪ್ರಮಾಣದ ಆರ್ಥಿಕ ಲಾಭದ ಹುನ್ನಾರವಿದೆ.  ಕೆಲವು ಧಾರಾವಾಹಿ ಅಥವಾ ಚಲನಚಿತ್ರಗಳಲ್ಲಿ ಹೆಣ್ಣಿನ ಚಿತ್ರಣ ಇಂದಿನ ದಿನಗಳಲ್ಲಿ ವಿವೇಚನಾರ್ಹ. ಆರ್ಥಿಕಲಾಭದೃಷ್ಟಿಯಿಂದ ಕೀಳುಮಟ್ಟದ ಅಭಿರುಚಿಯ ಸಾಧನವನ್ನಾಗಿ ಕಲೆ ಮತ್ತು ಹೆಣ್ಣನ್ನು ಬಳಸಿಕೊಳ್ಳುವುದರ ವಿರುದ್ಧ ಸಮಾಜ ಜಾಗೃತವಾಗಬೇಕಾಗಿದೆ. ಈ ದೃಷ್ಟಿಯಿಂದ ಪಂಪನ ಸಂದೇಶ ಸಮಕಾಲೀನ ಸಂದರ್ಭದಲ್ಲೂ ಮಹತ್ತ್ವವಾಗಿದೆ.
       ಡಾ.ಶ್ರೀಕಾಂತ್ ಸಿದ್ದಾಪುರ.