ಶನಿವಾರ, ಸೆಪ್ಟೆಂಬರ್ 10, 2011

ಸಂಸಾರದ ಭಾಗ್ಯ ನಮಗಿರಲಿ

ಸಂಸಾರ ಎಂಬಂಥ ಭಾಗ್ಯ ನಮಗಿರಲಿ
        ಸಂಸಾರದ ಬಗ್ಗೆ ಯೋಚಿಸುವಾಗ ನಮ್ಮ ನೆನಪಿಗೆ ಮೊದಲು ಬರುವುದು ನರಸಿಂಹಸ್ವಾಮಿಯವರ ಪ್ರೇಮ ಕವನಗಳು. ಸ್ವಾಮಿಯವರು  ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಎಂದರು.  ಅಷ್ಟು ಮಾತ್ರವಲ್ಲ ; ಅವರ ಹತ್ತಿರ ಹೆಂಡತಿ ಇದ್ದರೆ ಆಗ ಅವರು ಸಿಪಾಯಿಯಂತೆ. ಬಸವಣ್ಣನವರೂ ಸಂಸಾರವನ್ನು ಕಂಡ ರೀತಿಯೇ ಬೇರೆ. ಸಂಸಾರವು ಅವರ ಪಾಲಿಗೆ ಏಳು ಮತ್ತು ಬೀಳುಗಳ ಪಯಣ. ಅವರೇ ಹೇಳಿದ ಮಾತು. ಕಾಲಲ್ಲಿ ಕಬ್ಬಿಣದ ಗುಂಡು.  ಕೊರಳಲ್ಲಿ ಬೆಂಡು. ಒಂದು ಮುಳುಗಿಸಿದರೆ, ಇನ್ನೊಂದು ತೇಲಿಸುತ್ತದೆ. ಸಂಸಾರ ಎಂಬುದು ಸುಖ ಮತ್ತು ಕಷ್ಟಗಳ ಮಿಶ್ರಣ. ಸಂಸಾರ ಸಾಗರದಲ್ಲಿ ಈಸಿ ಯಶಸ್ಸನ್ನು ಕಾಣಲು ಎದೆಗಾರಿಕೆ ಬೇಕು. ಅಕ್ಕಮಹಾದೇವಿಯು ಕೌಶಿಕ ರಾಜನನ್ನು ತಿರಸ್ಕರಿಸಿದರೂ ಸಂಸಾರಿಗಳನ್ನು ಟೀಕಿಸಲಿಲ್ಲ. ಸಂಸಾರದ ಸಮರ್ಥ ನಿರ್ವಹಣೆಗೆ ಆಕೆ ಸೂತ್ರವೊಂದನ್ನು ನೀಡುತ್ತಾಳೆ. ಅವಳ ಒಂದು ವಚನ ಇದನ್ನೇ ಪ್ರತಿಪಾದಿಸುವಂತಿದೆ. ಹಾವ ಬಾಯ ಹಲ್ಲ ಕಳೆದು ಹಾವನ್ನಾಡಿಸಬಲ್ಲಡೆ ಹಾವಿನ ಸಂಘವೇ ಲೇಸು. ಸಂಸಾರದಲ್ಲಿ ನಮ್ಮ ಅವನತಿಗೆ ಕಾರಣವಾಗಬಹುದಾದ ಷಡ್ವೈರಿಗಳನ್ನು ಆಕೆ ವಿಷದ ಹಲ್ಲಿಗೆ ಹೋಲಿಸುತ್ತಾಳೆ. ಇದು ಅತಿಯಾದರೆ ಅಪಾಯ. ಹಾಗಾಗಿ ಮೋಹರಹಿತವಾದ ನೈಜ ಪ್ರೀತಿ, ಪರಸ್ಪರ ಅಥರ್ೈಸುವಿಕೆ ಸುಖ ಸಂಸಾರಕ್ಕೆ ಇಂಬು ನೀಡೀತು. ದಾಸರೂ ಸಂಸಾರ ಎಂಬ ಭಾಗ್ಯ ನಮಗಿರಲಿ ಎಂದರು.  ಅವರ ಪ್ರಕಾರ ಇದು ಕಂಸಾರಿಯ ನೆನೆವ ಸೌಭಾಗ್ಯ
ಸಂಸಾರ ಎಂದ ಮೇಲೆ ಕಷ್ಟಕೋಟಲೆಗಳು ಹಲವು. ಅದರಿಂದ ಬೇಸತ್ತು ವಿಚ್ಛೇದನಕ್ಕೆ ಮುಂದಾಗುವವರ ಸಂಖ್ಯೆ ಇಂದು ಅಧಿಕ. ಇನ್ನು ಕೆಲವರು ಜೀವನದಲ್ಲಿ ಜಿಗುಪ್ಸೆ ಪಡೆಯುತ್ತಾರೆ. ಅಷ್ಟಕ್ಕೇ ನಿಲ್ಲದ ಅವರ ಮನಸ್ಸು ಆತ್ಮಹತ್ಯೆಗೂ ಮುಂದಾಗುತ್ತದೆ. ಈ ದುರಂತಗಳ ಹಿನ್ನೆಲೆಯಲ್ಲಿ ಸಂಸಾರಿಗಳ ಪಾಡು ಕಷ್ಟದ ಗೂಡು. ಆದರೆ ಈ ಸಮಸ್ಯೆಗಳ ನಡುವೆಯೂ ಬಾಳನ್ನು ಸಾಗಿಸಿದ ಅನೇಕ ಮಹಾತ್ಮರು ನಮ್ಮ ಮುಂದೆ ಇದ್ದಾರೆ. ಅವರಲ್ಲೂ ಈ ತಳಮಳ ಸಹಜವಾಗಿಯೇ ಇದ್ದಿತ್ತು. ಆದರೆ ಅವರು ಪಠಿಸಿದ್ದು ತಾಳ್ಮೆ ಎಂಬ ಮಂತ್ರ. ಅದೇ ಅವರ ಜೀವನಕ್ಕೆ ಉತ್ಸಾಹ ನೀಡಿತು. ಸಾಧನೆಗೆ ಸಹಕರಿಸಿತು. ಅಂತಹ ಮಹಾತ್ಮರಲ್ಲಿ ಒಬ್ಬರು ಸಾಕ್ರೆಟೀಸ್.
ಸಾಕ್ರೆಟೀಸ್ ದೊಡ್ಡ ತತ್ತ್ವಜ್ಞಾನಿ. ಅವರ ಸಂಸಾರವು ಸದಾ ಪತ್ನಿಪೀಡಿತವಾಗಿತ್ತು. ಅವರ ಮಡದಿ ಕ್ಸಾಂಥಿಪೆ. ಅತ್ಯಂತ ದುಡುಕು ಸ್ವಭಾವದವಳು. ಗಂಡನ ಮೇಲೆ ಎಗರುವುದರಲ್ಲಿ ಎತ್ತಿದ ಕೈ. ಒಮ್ಮೆ ಹೀಗಾಯಿತು. ಅವರ ಮನೆಗೆ ಕೆಲವು ವಿದ್ಯಾಥರ್ಿಗಳು, ಮಿತ್ರರು ಬಂದಿದ್ದರು. ಸಾಕ್ರೆಟೀಸ್ ಅವರೊಂದಿಗೆ ಚಚರ್ಿಸುತ್ತಿದ್ದರು. ಅವರ ಮಡದಿ ಇದನ್ನು ಗಮನಿಸಿದಳು. ಅವಳ ಕೋಪ ತುತ್ತತುದಿಯ ಹಂತ ತಲುಪಿತು. ಬಿಸಿ ನೀರನ್ನು ತಂದು ಸಿಟ್ಟಿನಿಂದ ಸಾಕ್ರೆಟೀಸ್ನ ಮುಖದ ಮೇಲೆ ಚೆಲ್ಲಿದಳು. ಅದು ಎಂತಹ ಬಿಸಿ ಎಂದರೆ ಸಾಕ್ರೆಟೀಸ್ನ ಮುಖದ ಅರ್ಧಭಾಗ ಸುಟ್ಟು ಹೋಗುವಂತಾಯಿತು. ಅವರ ಸುತ್ತ ಇದ್ದವರಿಗೆ ಸಾಕ್ರೆಟೀಸ್ ಬಗ್ಗೆ ಅನುಕಂಪ ಮೂಡಿತು. ಅವರಲ್ಲೊಬ್ಬ ಕೇಳಿಯೇ ಬಿಟ್ಟ. ಸರ್, ನಿಮ್ಮ ಹೆಂಡತಿಯ ಈ ತರನಾದ ವರ್ತನೆ ಬಗ್ಗೆ ನಿಮಗೇನನಿಸುತ್ತದೆ ?.  ಸಾಕ್ರೆಟೀಸ್ ಯಾವುದೇ ಉದ್ವೇಗಕ್ಕೆ ಒಳಗಾಗದೇ ಉತ್ತರಿಸಿದರು. ನನಗೆ ಅವಳ ಕಷ್ಟ ಅರ್ಥವಾಗುತ್ತಿದೆ. ಆಕೆಯ ವೇದನೆಯೂ ತಿಳಿಯುತ್ತದೆ. ನಿಮ್ಮೊಂದಿಗೆ ಚಚರ್ಿಸುವಾಗ ಸಹಜವಾಗಿ ನಾನು ತಲ್ಲೀನನಾಗಿ ಬಿಡುತ್ತೇನೆ. ಅವಳ ಮಮತೆ, ಮೋಹ ಇದನ್ನು ಸಹಿಸುವುದಿಲ್ಲ. ಹಾಗಾಗಿ ಸಹಜವಾಗಿ ಉದ್ರೇಕಕ್ಕೆ ಒಳಗಾಗುತ್ತಾಳೆ. ಇಷ್ಟು ಹೇಳಿ ಮಿತ್ರರೊಂದಿಗೆ ಮಾತನ್ನು ಮುಂದುವರಿಸಿದರು.
ಸಾಕ್ರೆಟೀಸ್ನ ಬಳಿ ಒಬ್ಬ ಯುವಕ ಬಂದನು. ಆತನಿಗಿನ್ನೂ ಮದುವೆಯಾಗಿರಲಿಲ್ಲ. ಮದುವೆಯ ವಯಸ್ಸು. ಆತ ಸಾಕ್ರೆಟೀಸ್ನನ್ನು ಕೇಳಿದ. ತಾನು ಮದುವೆಯಾಗಬಹುದೇ?. ಸಾಕ್ರೆಟೀಸ್ ಖಂಡಿತವಾಗಿ ಮದುವೆಗೆ ಸಮ್ಮತಿ ಕೊಡಲಾರರು ಎಂಬ ಅಭಿಪ್ರಾಯ ಆತನದ್ದಾಗಿತ್ತು. ಆದರೆ ಸಾಕ್ರೆಟೀಸ್ನ ಉತ್ತರ ಆತನನ್ನು ಆಶ್ಚರ್ಯಗೊಳಿಸಿತು. ನೀನು ಮದುವೆಯಾಗಬೇಕು. ನಿನಗೆ ಒಳ್ಳೆಯ ಪತ್ನಿ ಸಿಕ್ಕಿದರೆ ನೀನು ಆನಂದದಿಂದ ಜೀವಿಸುವೆ. ಆನಂದದಿಂದ ಅನೇಕ ವಿಚಾರಗಳು ಹೊಳೆಯುತ್ತವೆ. ನಿನ್ನ ಅಂತರಂಗ ವಿಕಸಿಸುತ್ತದೆ. ಒಂದೊಮ್ಮೆ ಕೆಟ್ಟ ಪತ್ನಿ ಸಿಕ್ಕಿದರೆ ನಿನಗೆ ಜೀವನದಲ್ಲಿ ಜಿಗುಪ್ಸೆ ಮೂಡೀತು. ಆಗಲೂ ನಿನಗೆ ಲಾಭವಿದೆ. ನೀನೊಬ್ಬ ಒಳ್ಳೆಯ ದಾರ್ಶನಿಕನಾಗುವೆ. ಎರಡರಲ್ಲೂ ಲಾಭವಿರುವುದರಿಂದ ಖಂಡಿತಾ ಮದುವೆಯಾಗು.
ಕನ್ನಡ ಸಾಹಿತಿಗಳಲ್ಲಿ ಮಹಾದೇವ ಪ್ರಭಾಕರ ಪೂಜಾರ್ ಅವರ ಹೆಸರನ್ನು ಕೇಳದವರು ವಿರಳ. ಅವರು ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ವಿದ್ವಾಂಸರು.  ವೆಂಕಟಾಚಲ ಶಾಸ್ತ್ರಿಗಳು ತಮ್ಮ ಉದಾರಚರಿತರು, ಉದಾತ್ತಪ್ರಸಂಗಗಳು ಕೃತಿಯಲ್ಲಿ ಪೂಜಾರ್ರವರ ಸಾಂಸಾರಿಕ ಚಿತ್ರಣವನ್ನು ನೀಡಿರುತ್ತಾರೆ. ಪೂಜಾರ್ರವರ ಸಂಸಾರವು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಅವರ ಪತ್ನಿ ಮಾನಸಿಕವಾಗಿ ಅಸ್ವಸ್ಥರು. ಮದುವೆಯಾದ ಮೇಲೆ ಮಾವನೇ ಇದನ್ನು ಬಹಿರಂಗ ಪಡಿಸಿದ್ದರು. ಅವರಿಗೆ ಹುಟ್ಟಿದ ಮಕ್ಕಳೂ ಮಾನಸಿಕ ಅಸ್ವಸ್ಥತೆಯಿಂದ ಕೂಡಿದ್ದರು. ಅವರೇ ತನ್ನ ಕಾಲೇಜು ಕೆಲಸದೊಂದಿಗೆ ಮನೆಗೆಲಸಗಳನ್ನೂ ಮಾಡಬೇಕಾಗಿತ್ತು. ಅವರ ಮಗಳ ಮದುವೆಯೂ ಆಯಿತು. ಆದರೆ ಅಳಿಯ ಮಗಳನ್ನು ಕೈಬಿಟ್ಟ. ಮಗಳೊಂದಿಗೆ ಮೊಮ್ಮಗಳ ಹೊಣೆಯೂ ಇವರ ಮೇಲೆ ಬಿದ್ದಿತು. ಒಮ್ಮೆ ಮಗಳು ಮೈಸುಟ್ಟು ಕೊಂಡು ಅಂಗಹೀನೆಯಾದಳು. ಕೆಲವೇ ಸಮಯದಲ್ಲಿ ಆಕೆ ತೀರಿಕೊಂಡಾಗ ಪೂಜಾರರು ಮಗಳ ಸಾವಿನ ಬಗ್ಗೆ ಸಂತಸ ಪಡಲಿಲ್ಲ. ಕಣ್ಣೀರು ಸುರಿಸಿದರು. ಸಂಸಾರದ ಈ ದು:ಖಗಳ ನಡುವೆ ಅವರೆಂದೂ ಬದುಕನ್ನು ಹಳಿಯಲಿಲ್ಲ. ತಮ್ಮ ಅಳಿಯನ ಎರಡನೆಯ ಮದುವೆಯ ಹಿಂದಿನ ದಿನ ಬೀಗರನ್ನು ತಮ್ಮ ಮನೆಗೇ ಬರಹೇಳಿ ಉಪಚರಿಸಿದರು.
ಥಾಮಸ್ ಅಲ್ವಾ ಎಡಿಸನ್ ಸಂಸಾರದಲ್ಲೂ ಅಬ್ಸೆಂಟ್ ಮೈಡೆಡ್ ಪ್ರೊಫೆಸರ್. ಒಮ್ಮೆ ಅವರು ಹೊರಗೆ ತಿರುಗಾಟಕ್ಕೆ ಹೊರಟಿದ್ದರು. ಅವರ ಹೆಂಡತಿ ಮತ್ತು ಕೆಲಸದಾಕೆ ಒಟ್ಟಿಗೆ ಬಂದು ಅವರನ್ನು ಬೀಳ್ಗೊಳ್ಳಲು ಮುಂದಾದರು. ಅವರು ತಪ್ಪಿ ಕೆಲಸದಾಕೆಗೆ ಕಿಸ್ ಕೊಟ್ಟು ಮಡದಿಗೆ ಟಾ ಟಾ ಹೇಳಿದರು. ಕೂಡಲೇ ಅವರ ಮಡದಿ ಎಚ್ಚರಿಸಿದರು. ಅವರು ಆ ಬಗ್ಗೆ ಅಷ್ಟು ಸೀರಿಯಸ್ ಆಗಲೇ ಇಲ್ಲ. ಒಂದು ಕೆಲಸ ಮಾಡಿ. ನೀವು ನೀವೇ ಅದಲು ಬದಲು ಮಾಡಿಕೊಳ್ಳಿ. ಮಡದಿಯೂ ಅದನ್ನು ಅಲ್ಲಿಗೇ ಮರೆತು ಬಿಟ್ಟಳು. ಮತ್ತೆ ಮುಂದುವರಿಸಲಿಲ್ಲ.
ಮಹಾತ್ಮ ಗಾಂಧಿಯವರು ಒಮ್ಮೆ ಶ್ರೀಲಂಕೆಗೆ ಹೋಗಿದ್ದರಂತೆ. ಅವರೊಂದಿಗೆ ಅವರ ಮಡದಿ ಕಸ್ತೂಬರ್ಾ ಕೂಡ ಇದ್ದರು. ಇವರನ್ನು ಸಭೆಗೆ ಪರಿಚಯಿಸುವ ಸಮಯ ಬಂತು. ಪರಿಚಯಿಸುವಾತ ಗಾಂಧಿಯವರು ತಮ್ಮ ತಾಯಿಯೊಂದಿಗೆ ಬಂದಿದ್ದಾರೆ ಎಂದು ತಪ್ಪಾಗಿ ಪರಿಚಯಿಸಿದನು. ಎಲ್ಲರಿಗೂ ಭಯ. ಗಾಂಧಿಯವರಿಗೆ ಸಿಟ್ಟು ಬರಬಹುದೆಂದು. ಆದರೆ ಗಾಂಧಿಯವರು ತಮ್ಮ ಭಾಷಣದಲ್ಲಿ ಪರಿಚಯ ಮಾಡಿದಾತನ ತಪ್ಪನ್ನು ಖಂಡಿಸಲಿಲ್ಲ. ಸಂಸಾರದಲ್ಲಿ ಮೊದ ಮೊದಲು ಪತಿ-ಪತ್ನಿಯರ ಸಂಬಂಧ. ಆದರೆ ಅನಂತರ ಇದು ತಾಯಿ-ಮಗನಂತೆ ಪವಿತ್ರ ಸಂಬಂಧಕ್ಕೆ ತಿರುಗುತ್ತದೆ.  ನಮ್ಮಲ್ಲೂ ಅಂತಹ ಪವಿತ್ರವಾದ ಪ್ರೇಮ ಸಂಬಂಧವಿದೆ. ಓಶೋ ಹೇಳುವಂತೆ ಪ್ರೇಮದ ಆಳಕ್ಕಿಳಿದಂತೆ ಕಾಮವು ದೂರವಾಗಿ ಸಂಬಂಧ ಪವಿತ್ರವಾಗುತ್ತದೆ.
ಸ್ವಾರ್ಥ, ಅಹಂಗಳು ಸಂಸಾರಿಗಳನ್ನೂ ಇಂದು ಬಿಟ್ಟಿಲ್ಲ. ಪತಿ-ಪತ್ನಿಯರ ನಡುವಿನ ಪ್ರತಿಷ್ಠೆ ಸಂಸಾರದ ನೆಮ್ಮದಿಯನ್ನು ಕೆಡಿಸುತ್ತಿದೆ.  ಪ್ರೇಮದ ಸ್ಥಾನವನ್ನು ಕಾಮವು ಆಕ್ರಮಿಸುತ್ತಿದೆ. ಹಾಗಾಗಿ ಮದುವೆಯ ಹಿಂದಿನ ಹುಡುಗಾಟಿಕೆಯ ನಿಧರ್ಾರ ಮದುವೆಯಾದ ಎರಡೇ ವರ್ಷಗಳಲ್ಲಿ ಕರಗಿ ಹೋಗುತ್ತದೆ. ತಾಳ್ಮೆ, ಸಹನೆ ಮತ್ತು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದರಿಂದ ಸಂಸಾರ ಸಾಂಗವಾಗಿ ಸಾಗೀತು. ಆದರೆ ಈ ತಾಳ್ಮೆ, ಸಹನೆಗಳು ನಮ್ಮಲ್ಲಿ ಮೂಡಿಯಾವೇ ?.    
   ಡಾ.ಶ್ರೀಕಾಂತ್ ಸಿದ್ದಾಪುರ
ಪ್ರಜಾವಾಣಿ(10-9-2011) ಪ್ರಕಟಗೊಂಡಿದೆ.
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ