ಶನಿವಾರ, ಡಿಸೆಂಬರ್ 10, 2011

ಕಲಾಸ್ವಾದಕ್ಕೊಂದು ಕೈಗನ್ನಡಿ: ಪಂಪನ ನೀಳಾಂಜನೆ

 ಪಂಪನು ಕನ್ನಡದ ಆದಿಕವಿ. ಕ್ರಿ.ಶ. 10 ನೇ ಶತಮಾನದಲ್ಲಿ ಅರಿಕೇಸರಿಯ ಆಸ್ಥಾನದಲ್ಲಿದ್ದವನು.  ಪಂಪಭಾರತ ಮತ್ತು ಆದಿಪುರಾಣ ಈತನ ಎರಡು ಕೃತಿಗಳು. ಇವುಗಳಲ್ಲಿ ಆದಿಪುರಾಣವು ಜೈನಧರ್ಮಕ್ಕೆ ಸಂಬಂಧಿಸಿದ ಕಾವ್ಯ. ಈ ಕೃತಿಯನ್ನು ಕ್ರಿ.ಶ. 942 ರಲ್ಲಿ ರಚಿಸಿರುವುದಾಗಿ ಪಂಪನೇ ಹೇಳಿಕೊಂಡಿರುತ್ತಾನೆ. ಈ ಕೃತಿ ರಚನೆಗೆ ಆತನು ತೆಗೆದುಕೊಂಡ ಕಾಲ ಕೇವಲ ಮೂರು ತಿಂಗಳಂತೆ.
 ಆದಿಪುರಾಣದಲ್ಲಿ ಬರುವ ರಸಘಟ್ಟಗಳಲ್ಲಿ ಒಂದು ನೀಳಾಂಜನೆಯ ನಾಟ್ಯ. ಜಿನಸೇನಾಚಾರ್ಯರ ಪೂರ್ವಪುರಾಣದಲ್ಲಿ ಸುಮಾರು ಮೂರು ಶ್ಲೋಕಗಳಲ್ಲಿ ನೀಳಾಂಜನೆಯ ನಾಟ್ಯದ ವರ್ಣನೆಯಿದೆ. ಆದರೆ ಪಂಪನು ಅದನ್ನು 30 ಪದ್ಯಗಳಿಗೆ ಇಲ್ಲಿ ವಿಸ್ತರಿಸಿರುತ್ತಾನೆ.ಜೈನರ ಮೊದಲನೆಯ ತೀರ್ಥಂಕರನಾದ ವೃಷಭನಾಥನ ವೈರಾಗ್ಯಕ್ಕೆ ಪ್ರೇರಣೆಯಾಗಿ ಈ ನಾಟ್ಯ ಸನ್ನಿವೇಶವು ಮೂಡಿಬಂದಿದೆ.
 ಪಂಪನ ನೀಳಾಂಜನೆಯ ನಾಟ್ಯದ ವರ್ಣನೆಯು ಪಂಪನ ಕಲಾಪ್ರತಿಭೆಗೆ ಸಾಕ್ಷಿಯಾಗಿದೆ. ಪಂಪನಿಗೆ ನಾಟ್ಯಶಾಸ್ತ್ರದ ಮೇಲಿದ್ದ ಅಪಾರ ಅನುಭವಗಳನ್ನು ಈ ಭಾಗದ ವರ್ಣನೆಗಳು ಸಾಬೀತು ಪಡಿಸುತ್ತವೆ.ನೀಳಾಂಜನೆಯು ಅಸಾಮಾನ್ಯ ಸೌಂದರ್ಯದ ಅದ್ಭುತ ನರ್ತಕಿ ಎಂಬುದನ್ನು ಮನವರಿಕೆ ಮಾಡಿಕೊಡುವ ಯತ್ನದಲ್ಲಿ ಪಂಪನು ತನ್ನ ಕಲಾ ಪರಿಣತಿಯನ್ನೂ ಓದುಗರ ಮುಂದಿಡುತ್ತಾನೆ.  ಇಲ್ಲಿ ಕಂಡುಬರುವ ನಾಟ್ಯಶಾಸ್ತ್ರದ ಪಾರಿಭಾಷಿಕ ಪದಗಳಾದ ಭಾರತಿ, ಸಾತ್ವತಿ, ಕೈಶಿಕಿ, ಆರಭಟಿ, ಆಹಾರ್ಯ, ಜತಿ ಮೊದಲಾದವುಗಳು ಇದನ್ನೇ ಪುಷ್ಟೀಕರಿಸುವಂತಿವೆ. ಶಾಸ್ತ್ರದ ಈ ವಿಚಾರಗಳಿಗಷ್ಟೇ ಈ ಭಾಗ ಸೀಮಿತವಾಗದಿರುವುದು ಇಲ್ಲಿ ಅಗತ್ಯವಾಗಿ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶ. ನಾಟ್ಯ ಕಲಾವಿದೆಯನ್ನು ಮತ್ತು ನಾಟ್ಯದಂತಹ ಕಲೆಯನ್ನು ಅಂದಿನ ಶ್ರೀಮಂತ ಸಮಾಜ ನೋಡುತ್ತಿದ್ದ ರೀತಿಯನ್ನೂ ಪಂಪನು ಓದುಗರ ಮುಂದೆ ಬೇಸರದಿಂದ ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆ ಮೂಲಕ ನೀಳಾಂಜನೆಯ ಪರವಾದ ಅನುಕಂಪವನ್ನೂ ಸಹೃದಯ ಬಂಧುಗಳಿಂದ ನಿರೀಕ್ಷಿಸುತ್ತಾನೆ.
 ನೀಳಾಂಜನೆ ನಾಟ್ಯವನ್ನೆಸಗುವ ಸಭೆಯಲ್ಲಿ ಉಪಸ್ಥಿತರಿರುವ ಪ್ರೇಕ್ಷಕರತ್ತ ಗಮನಿಸೋಣ. ಅಲ್ಲಿರುವವರಲ್ಲಿ ಹೆಚ್ಚಿನವರು ಅರಸರು, ಇಂದ್ರಾದಿ ದೇವತೆಗಳು. ಹಾಗಾಗಿ ಇದು ಸಭ್ಯರೆಂದು ಭಾಸವಾಗುವವರು ಉಪಸ್ಥಿತರಿದ್ದ ಶ್ರೀಮಂತರ ಸಭೆ. ಇವರೆಲ್ಲಾ ನಾಟ್ಯ ಕಲೆಯ ಆರಾಧಕರೇ?. ಹಾಗೆ ಎದೆತಟ್ಟಿ ಹೇಳುವಂತಿಲ್ಲ. ಇವರಿಗೆ ನಾಟ್ಯ ಕೇವಲ ಮನೋರಂಜನೆಯ ಮಾಧ್ಯಮ.  ಇಲ್ಲಿ ನೆರೆದವರೆಲ್ಲರೂ ಎಲ್ಲಾ ರಸಗಳಲ್ಲೂ ಪ್ರಿಯರಲ್ಲ. ಕೇವಲ ಶೃಂಗಾರರಸಪ್ರಿಯರು. ಒಂದರ್ಥದಲ್ಲಿ  ಇವರ ಪಾಲಿಗೆ ಇದೊಂದು ಮೋಜಿನ ವಿಷಯ. ಆದರೆ ನೀಳಾಂಜನೆಯು ನಾಟ್ಯದಲ್ಲಿ ನಿಜವಾದ ಪರಿಶ್ರಮವುಳ್ಳವಳು. ಅದನ್ನು ಗೌರವಭಾವದಿಂದ ಕರಗತ ಮಾಡಿಕೊಂಡವಳು.ಪಂಪನ ಪ್ರಕಾರ ನಾಟ್ಯಶಾಸ್ತ್ರಕ್ಕೆ ಹೊಸಭಾಷ್ಯ ಬರೆಯುವ ಸಾಮಥ್ರ್ಯವುಳ್ಳವಳು.ಅಂತಹ ಅದ್ಭುತ ಕಲಾವಿದೆಗೆ ಈ ಮಂದಿಯ ಮುಂದೆ ನಾಟ್ಯ ಪ್ರದರ್ಶನ ನೀಡಬೇಕಾದುದು ಅನಿವಾರ್ಯ ಕರ್ಮ. ಅದು ಆ ಕಾಲದ ಸ್ಥಿತಿಯೂ ಆಗಿತ್ತು. ಅಲ್ಲಿನ ಈ ಪ್ರೇಕ್ಷಕರನ್ನು ಆಕಷರ್ಿಸಲು ನೀಳಾಂಜನೆ ತನ್ನ ಮನಸ್ಸಿಗೆ ಹಿತವಾಗಿಯೋ ಅಥವಾ ಅಹಿತವಾಗಿಯೋ ಹಲವು ಕಸರತ್ತುಗಳನ್ನು ನಾಟ್ಯದ ವೇಳೆ ಕೈಗೊಳ್ಳಲೇಬೇಕು.  ಇದು ಸಭ್ಯತೆಯ ಎಲ್ಲೆಯನ್ನು ಮೀರುವಂತೆ ಮಡಿವಂತ ಕಣ್ಣುಗಳಿಗೆ ಕಾಣಿಸಬಹುದು. ಆದರೆ ಅಲ್ಲಿರುವ ಅರಸು ಸಮುದಾಯದಿಂದ ಶಹಭಾಸ್ಗಿರಿ ಪಡೆಯಲು ಈ ತಂತ್ರ ಆಕೆಗೆ ಅನಿವಾರ್ಯ. ಅಲ್ಲಿರುವ ಪ್ರೇಕ್ಷಕ ಸಮುದಾಯಕ್ಕೆ ನೀಳಾಂಜನೆಯ ಈ ಭಂಗಿಗಳು ಕೊಟ್ಟಷ್ಟು ಆನಂದವನ್ನು ಅವಳ  ನೈಜ ಶಾಸ್ತ್ರೀಯ ನಾಟ್ಯವೈಖರಿ ಖಂಡಿತಾ ನೀಡದು. ಪಂಪನ ಒಂದೆರಡು ಪದ್ಯಗಳು ಈ ಅಂಶಗಳನ್ನು ಪುಷ್ಟೀಕರಿಸುವಂತಿವೆ.  ಅವುಗಳ ಸಾರಾಂಶ ಹೀಗಿದೆ.  ಅಲ್ಲಿರುವ ದೇವತೆಗಳು, ಅರಸರು ಆಕೆಯ ನಾಭಿಮೂಲ ಮತ್ತು ಬಾಹುಮೂಲಗಳನ್ನು ಕಣ್ಣುಗಳನ್ನು ಮುಚ್ಚದೆ ನೋಡುತ್ತಾ ಕುಳಿತರಂತೆ.  ಮನ್ಮಥನು ಈ ಭಾಗಗಳಲ್ಲಿ ಅಮೃತವನ್ನು ಬಯ್ತಿಟ್ಟಿದ್ದನಂತೆ. ಈ ಅಮೃತವು ಇಂದ್ರಾದಿ ದೇವತೆಗಳ ಮತ್ತು ಅರಸರ ಕಣ್ಣುಗಳಿಗೆ ತಂಪನ್ನು ನೀಡಿದುವಂತೆ. ಆಕೆ ರೇಷ್ಮೆ ವಸ್ತ್ರವನ್ನುಟ್ಟಿದ್ದಳು.ಪ್ರೇಕ್ಷಕರನ್ನು ಆಕರ್ಷಿಸಲು ತನ್ನ ದೇವಾಂಗವಸ್ತ್ರದ ಒಳ ಉಡುಗೆಯನ್ನು ಆಗಾಗ ಪಕ್ಕಕ್ಕೆ ಸರಿಸುವಳು.  ಎದೆಯ ಮೇಲೆ ಕಂಗೊಳಿಸುತ್ತಿರುವ ತನ್ನ ಕಂಠದ ಹಾರವನ್ನು ಆಗಾಗ ಸರಿಪಡಿಸಿಕೊಳ್ಳುವಳು.ಇದು ಮದನರಾಜರಾಜ್ಯವಿಲಾಸ ಎಂಬಂತೆ ಕಂಗೊಳಿಸಿತಂತೆ. ನೀಳಾಂಜನೆಯ ಈ ಅಭಿನಯ ಅಥವಾ ಕಸರತ್ತುಗಳು ಸಭ್ಯಸಮಾಜಕ್ಕೆ ಅಸಹ್ಯವಾಗಿ ಕಾಣಿಸಬಹುದು. ಆದರೆ ಅಲ್ಲಿ ನೆರೆದಿರುವ ಪ್ರೇಕ್ಷಕ ಸಮುದಾಯ ಇದನ್ನು ಆಕೆಯಿಂದ ನಿರೀಕ್ಷಿಸುತ್ತಿದೆ.  ಈ ರೀತಿ ಆಕೆ ನರ್ತಿಸದಿದ್ದಲ್ಲಿ ಅಲ್ಲಿರುವ ಸಮುದಾಯಕ್ಕೆ ರಸಾಸ್ವಾದ ಆಗದು. ಇದನ್ನು ಹೊರತುಪಡಿಸಿದ ಯಾವುದೇ ಪ್ರಬುದ್ಧ ಅಭಿನಯವೇ ಇರಲಿ. ಅದು ಅವರ ಮನ ಸೂರೆಗೊಳ್ಳದು. ಹಾಗಾಗಿ ಅಲ್ಲಿರುವವರೆಲ್ಲಾ ಈ ವಿಧದ ಅಭಿನಯವನ್ನೇ ಕಾದುಕುಳಿತವರು.ಅದೇ ಅವರ ಪ್ರಧಾನ ಆಸಕ್ತಿ.ಒಂದರ್ಥದಲ್ಲಿ ಇದು ಕೀಳು ಮನೋರಂಜನೆಯ ದೃಷ್ಟಿಯನ್ನು ಬಿಂಬಿಸುವಂತೆ ಭಾಸವಾಗಬಹುದು.ಆದರೆ ಅಲ್ಲಿರುವ ಶ್ರೀಮಂತ ಪ್ರೇಕ್ಷಕರ ಮನ:ಸ್ಥಿತಿ ಇದನ್ನು ಮೀರಿ ಎತ್ತರಕ್ಕೇರಲಾರದು.
  ಪಂಪನ ನೀಳಾಂಜನೆ ನಾಟ್ಯದ ಪ್ರಸಂಗದ ಮುಂದಿನ ಸನ್ನಿವೇಶದಲ್ಲಿ ನೀಳಾಂಜನೆ ರಂಗದಿಂದ ಅದೃಶ್ಯಳಾಗುತ್ತಾಳೆ.  ಈ ಸೂಕ್ಷ ಸಂಗತಿ ಅಲ್ಲಿದ್ದ ವೃಷಭನಾಥನ ಗಮನಕ್ಕೆ ಮಾತ್ರ ಬರುತ್ತದೆ. ನಾಟ್ಯದ ಮೋಹದ ಮತ್ತಿನಲ್ಲಿ ಮುಳುಗಿದ್ದ ಉಳಿದವರಿಗೆ ಇದರ ಅರಿವಾಗುವುದೇ ಇಲ್ಲ.  ಇಂದ್ರನು ರಸ ಭಂಗವಾಗದಂತೆ ಮತ್ತೊಂದು ಪಾತ್ರವನ್ನು ಕೂಡಲೇ ತಂದು ನಿಲ್ಲಿಸಿ, ನಾಟ್ಯ ಮುಂದುವರಿಯುವಂತೆ ನೋಡಿಕೊಳ್ಳುತ್ತಾನೆ.  ಪಂಪನು ಕಾವ್ಯಭಾಗವನ್ನು ಅಷ್ಟಕ್ಕೇ ಸೀಮಿತಗೊಳಿಸದೆ ಕಲೆಯ ವಿಚಾರದಲ್ಲಿ ಬೇರೆ ಯಾವುದೋ ಸಂದೇಶವನ್ನು ಕೊಡುವ ಪ್ರಯತ್ನವನ್ನು ಮಾಡುತ್ತಿದ್ದಾನೆ. ಕಲಾವಿದೆಯೊಬ್ಬಳನ್ನು ಮೋಜು ಅಥವಾ ಮನೋರಂಜನೆಯನ್ನು ಕೊಡುವ ವಸ್ತುವನ್ನಾಗಿ ಅಥವಾ ಯಂತ್ರವನ್ನಾಗಿ ನೋಡುವ ಪರಿಪಾಠದ ವಿರುದ್ಧ ಪಂಪನ ಅಸಮಾಧಾನವಿದೆ. ಮಾನವೀಯತೆ ಮರೆತ ಮೋಜಿನ ಶ್ರೀಮಂತ ಸಮಾಜದ ವಿರುದ್ಧ ಆಕ್ರೋಶವಿದೆ.ಅವಳು ಅದೃಶ್ಯಳಾದಾಗ ಅವಳ ಬಗ್ಗೆ ಒಂದಿನಿಸೂ ಅನುಕಂಪವನ್ನು ಸೂಚಿಸದೇ ನಾಟ್ಯವನ್ನು ಮುಂದುವರಿಸುವುದಕ್ಕೇ ಮಾತ್ರ ಇಂದ್ರಾದಿಗಳು ಶ್ರಮಿಸಿದ ಬಗ್ಗೆ ಆಕ್ಷೇಪವಿದೆ. ಈ ಕಾರಣಕ್ಕಾಗಿಯೇ ಪಂಪನೂ ಅವಳ ಅದೃಶ್ಯದ ದುರಂತದ ಬಗ್ಗೆ ಒಂದೇ ಒಂದು ನೋವಿನ ಮಾತನ್ನೂ ಅಲ್ಲಿದ್ದ ಅರಸರು ಅಥವಾ ಇಂದ್ರಾದಿಗಳ ಮೂಲಕ ಹೊರಹಾಕಿಲ್ಲ. ಅವರ ಅನುಕಂಪವನ್ನು ಬಿಂಬಿಸುವ ಯಾವುದೇ ಪದ್ಯವನ್ನೂ ಎಡೆಯಲ್ಲಿ ತರುವ ಗೋಜಿಗೆ ಹೋಗಿಲ್ಲ. ಈ ಮೂಲಕ ಪಂಪನು ತನ್ನ ನಾಟ್ಯದ ಮೂಲಕ ಸಭೆಯಲ್ಲಿ ಮಿಂಚಿನ ಸಂಚಾರವನ್ನು ಉಂಟುಮಾಡಿದ ಕಲಾವಿದೆಯನ್ನು ಈ ತರನಾಗಿ ನಡೆಸಿಕೊಳ್ಳುವುದು ಸೂಕ್ತವೇ?. ಎಂಬ ಪ್ರಶ್ನೆಯನ್ನು ಓದುಗರ ಮುಂದೆ ಇಡುವ ಪ್ರಯತ್ನ ಮಾಡುತ್ತಾನೆ.ಪಂಪನ ಪ್ರಕಾರ ಆ ಸಭೆಯಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ನೀಳಾಂಜನೆಯ ಬಗ್ಗೆ ಗೌರವ ಮತ್ತು ಅನುಕಂಪ ಹೊಂದಿದ್ದ ಒಬ್ಬ ವ್ಯಕ್ತಿ ವೃಷಭನಾಥ. ವೃಷಭನಾಥನು ಅವಳನ್ನು ವೇದನೆಯಿಂದ ನಾರೀ ರೂಪದ ಯಂತ್ರ ಎಂದೇ ಕರೆಯುತ್ತಾನೆ. ಅವನಿಗೆ ಮಾತ್ರ ಈಕೆಯ ಅದೃಶ್ಯದ ಸುಳಿವು ಸಿಕ್ಕುತ್ತದೆ. ಹಾಗಾಗಿ ವೃಷಭನಾಥನ ಬಗ್ಗೆ ಪಂಪನಿಗೆ ವಿಶೇಷ ಗೌರವ.  ಈತನನ್ನು ಪಂಪನು ವಿದ್ಯಾನಿಲಯ ಎಂದು ಕರೆಯುತ್ತಾನೆ.  ಪ್ರಾಪಂಚಿಕವಾದ ಬಯಕೆಗಳಲ್ಲಿ ತುಂಬಿದ ಜನರಿಂದ ಇಂತಹ ಕಲಾವಿದೆೆ ಗೌರವವನ್ನು ನಿರೀಕ್ಷಿಸುವುದು ಮೂರ್ಖತನವಾದೀತು.  ಅಧ್ಯಾತ್ಮದತ್ತ ಒಲವುಳ್ಳ ಅಂದರೆ ಶುದ್ಧ ಮನಸ್ಸಿನ ವ್ಯಕ್ತಿಗಳಿಂದ ಮಾತ್ರ ಕಲಾವಿದೆಗೆ ನಿಜವಾದ ಅರ್ಥದಲ್ಲಿ ಗೌರವ ಲಭಿಸೀತು. ವಿದ್ಯೆ ಎಂದರೆ ಸದಾ ಎಚ್ಚರ.  ವೃಷಭನಾಥನನ್ನು ಹೊರತುಪಡಿಸಿ ಲೌಕಿಕವಾದ ಮೋಹದಲ್ಲಿ ಮುಳುಗಿದ್ದ ಉಳಿದ ಯಾವ ಪ್ರೇಕ್ಷಕರಿಗೂ ಅಲ್ಲಿ ಎಚ್ಚರವಿಲ್ಲ.  ವೃಷಭನಾಥನ ಪಾಲಿಗೆ ಆಕೆ ಸಂಸಾರದ ಅನಿತ್ಯತೆಯನ್ನು ತನ್ನ ಮನಸ್ಸಿಗೆ ನಾಟುವಂತೆ ತೋರಿಸಿ,ತನ್ನ ಕಣ್ಣನ್ನು ತೆರೆಸಿದವಳು.ಅವನ ಪಾಲಿಗೆ ಸಂಸ್ಕೃತಿ ನಾಟಕದ ಪಾಠವನ್ನು ಬೋಧಿಸಿದವಳು.ಈ ಪ್ರಸಂಗದ ಕೊನೆಯಲ್ಲಿ ಎಂತಹ ಪ್ರೇಕ್ಷಕವರ್ಗ ಬೇಕು ಎಂಬುದನ್ನು ವೃಷಭನಾಥನ ಮೂಲಕ ಸೂಚಿಸಲು ಪಂಪನು ಪ್ರಯತ್ನಿಸಿದ್ದಾನೆ.ಕಲೆ ಅಂತರಂಗದಚಕ್ಷುವನ್ನುತೆರೆಸಬೇಕು.ಲೌಕಿಕ ಬೇಡಿಕೆಗಳತ್ತ ಅಂಕುಶವನ್ನೊಡ್ಡುವಂತಿರಬೇಕು. ಲೌಕಿಕದಿಂದ ಅಲೌಕಿಕದತ್ತ ನಮ್ಮನ್ನು ಸೆಳೆಯುವಂತಿರಬೇಕು.ಕಲೆಯತ್ತ ನಿಜವಾದ ಆಸಕ್ತಿ ಇರುವ ಪ್ರೇಕ್ಷಕರಲ್ಲಿ ಈ ಮನೋಭಾವಗಳಿರಬೇಕು.ಈ ಹಿನ್ನೆಲೆಯಲ್ಲಿ ಕಲೆ ಮತ್ತು ಕಲಾವಿದರನ್ನು ನೋಡುವ ಗುಣ ಸಮಾಜದಲ್ಲಿ ಬೇರೂರಬೇಕು. ಅದಕ್ಕೆ ಬೇಕಾದುದು ಕಲೆಯ ಬಗ್ಗೆ ಅನುಭಾವದ ನೆಲೆಯ ಸ್ಪಂದನ.
 ಜಾಗತೀಕರಣ, ವ್ಯಾಪಾರೀಕರಣದ ಇಂದಿನ ದಿನಗಳಲ್ಲಿ ಕಲೆ ಮತ್ತು ಸ್ತ್ರೀಯನ್ನು ನೋಡುವ ನಮ್ಮ ಕಣ್ಣುಗಳಲ್ಲಿ ಮತ್ತೊಮ್ಮೆ ಮಲಿನತೆ ಮೂಡಿಬರುತ್ತಿದೆ.ಅಂತರಂಗದ ಸೌಂದರ್ಯಕ್ಕಿಂತ ಬಹಿರಂಗದ ಸೌಂದರ್ಯವೇ ಆಕರ್ಷಣೆಯ ಪ್ರಧಾನ ವಿಷಯವಾಗಿದೆ. ಇಂದಿಗೂ ಮಾಧ್ಯಮಗಳಲ್ಲಿ ತೋರಿಸುವ ಹೆಣ್ಣಿನ ಅರೆಬರೆ ಉಡುಗೆಗಳ ಹಿಂದೆ ಬಾರೀ ಪ್ರಮಾಣದ ಆರ್ಥಿಕ ಲಾಭದ ಹುನ್ನಾರವಿದೆ.  ಕೆಲವು ಧಾರಾವಾಹಿ ಅಥವಾ ಚಲನಚಿತ್ರಗಳಲ್ಲಿ ಹೆಣ್ಣಿನ ಚಿತ್ರಣ ಇಂದಿನ ದಿನಗಳಲ್ಲಿ ವಿವೇಚನಾರ್ಹ. ಆರ್ಥಿಕಲಾಭದೃಷ್ಟಿಯಿಂದ ಕೀಳುಮಟ್ಟದ ಅಭಿರುಚಿಯ ಸಾಧನವನ್ನಾಗಿ ಕಲೆ ಮತ್ತು ಹೆಣ್ಣನ್ನು ಬಳಸಿಕೊಳ್ಳುವುದರ ವಿರುದ್ಧ ಸಮಾಜ ಜಾಗೃತವಾಗಬೇಕಾಗಿದೆ. ಈ ದೃಷ್ಟಿಯಿಂದ ಪಂಪನ ಸಂದೇಶ ಸಮಕಾಲೀನ ಸಂದರ್ಭದಲ್ಲೂ ಮಹತ್ತ್ವವಾಗಿದೆ.
       ಡಾ.ಶ್ರೀಕಾಂತ್ ಸಿದ್ದಾಪುರ.
 

ಶುಕ್ರವಾರ, ನವೆಂಬರ್ 25, 2011










ಸಜ್ಜನಿಕೆಯ ಸಂಗೀತ ಗುರು ಮಧೂರು
ಉಡುಪಿಯಲ್ಲಿ ಮಧೂರರ ಗಾಯನ ಕೇಳದವರೇ ವಿರಳ. ಉಡುಪಿ ಮತ್ತು ಆಸುಪಾಸಿನ ಸಂಗೀತಾಭಿಮಾನಿಗಳೆಲ್ಲ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಇವರ ಶಿಷ್ಯರೇ.  ಮಧೂರರನ್ನು ನೋಡಿದಾಕ್ಷಣ ಇವರೊಬ್ಬ ಸಂಗೀತ ವಿದ್ವಾಂಸರೇ ಎಂಬ ಸಂಶಯ ಯಾರಿಗೂ ಬಾರದೇ ಇರದು.  ಅಷ್ಟು ಸರಳ ಬದುಕು ಅವರದ್ದು.  ಸಂಗೀತದ ಸೇವೆಗೊಂದು ಚಿಕ್ಕ ಬೈಕ್. ಅದರಲ್ಲಿಯೇ ಸವಾರಿ. ಯಾರೇ ಪರಿಚಿತರು ಸಿಗಲಿ.  ಅವರು ಶಿಷ್ಯರಾಗಲಿ, ಅಭಿಮಾನಿಗಳಾಗಲಿ ; ಮಧೂರರ ಬೈಕ್ಗೆ ಅಲ್ಲಿ ಒಂದು ಕ್ಷಣದ ನಿಲುಗಡೆ. ಯೋಗಕ್ಷೇಮದ ವಿಚಾರಣೆ. ಕೊನೆಯಲ್ಲಿ ಮನೆಯಲ್ಲಿ ಎಲ್ಲಾ ಕ್ಷೇಮ ತಾನೇ? ಎಂಬ ಮುಕ್ತಾಯದ ನುಡಿಯೊಂದಿಗೆ ಮುಂದಿನ ಪ್ರಯಾಣ.
 ಮಧೂರರ ಪೂರ್ಣ ಹೆಸರು ಮಧೂರು ಪಿ. ಬಾಲಸುಬ್ರಹ್ಮಣ್ಯಂ. ಉಡುಪಿಯಲ್ಲಿ ಕಳೆದ ಕೆಲವು ವರ್ಷಗಳಿಂದ ವಾಸಿಸುತ್ತಿದ್ದರೂ, ಮೂಲತ: ಇವರು ಯಕ್ಷಗಾನದ ಪಾತರ್ಿಸುಬ್ಬನ ಊರಿನವರು. ತಂದೆ ನಾರಾಯಣಯ್ಯ, ತಾಯಿ ಭಾಗೀರಥಿ. ಮಗನನ್ನು ಸಂಗೀತ ವಿದ್ವಾಂಸನನ್ನಾಗಿ ರೂಪಿಸುವ ಕನಸು ತಂದೆಯವರದ್ದಾಗಿತ್ತು. ಬಾಲಕ ಮಧೂರರಲ್ಲೂ ಈ ಲಕ್ಷಣಗಳು ಇದ್ದವು.  ಈ ಹಿನ್ನೆಲೆಯ ಪ್ರೋತ್ಸಾಹದಿಂದ ಸಂಗೀತಕ್ಷೇತ್ರಕ್ಕೆ  ಮಧೂರರು ಅಂಬೆಗಾಲಿಕ್ಕುತ್ತಾ ಪ್ರವೇಶಿಸಿದರು. .  ಇವರ ಮೊದಲ ಗುರು ಮಾಣಿ ಭಾಗವತರ್. ಮಾಣಿ ಭಾಗವತರ  ನಿಜನಾಮ ಪಡುಬಿದ್ರಿ ಸುಬ್ರಾಯ ಭಾಗವತರು.  ಅನಂತರದ ದಿನಗಳಲ್ಲಿ ಇವರ ಸಂಗೀತಾಸಕ್ತಿಗೆ ಸೂಕ್ತ ಮಾರ್ಗದರ್ಶನ ಮಾಡಿದವರು ಕಾಂಚನ ವೆಂಕಟಸುಬ್ರಹ್ಮಣ್ಯ ಅಯ್ಯರ್. ಇದೀಗ ಸಂಗೀತ ಶಿಕ್ಷಕರಾಗಿರುವ ಮಧೂರರು ಈ ಕ್ಷೇತ್ರದಲ್ಲಿ ವಿದ್ವತ್ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದವರು.
1983 ರಲ್ಲಿ ಮಧೂರರು ಉಡುಪಿಯ ಮಣಿಪಾಲ್ ಅಕಾಡೆಮಿ ಆಫ್ ಮೂಸಿಕ್ ಅಂಡ್ ಫೈನ್ ಆಟ್ಸರ್್ ಸಂಗೀತ ಶಿಕ್ಷಣ ವಿದ್ಯಾಲಯಕ್ಕೆ ಶಿಕ್ಷಕರಾಗಿ ಸೇರಿಕೊಂಡರು. ಅಂದಿನಿಂದ ಸಂಗೀತಶಿಕ್ಷಣವನ್ನೇ ಉಸಿರಿನಂತೆ ಸ್ವೀಕರಿಸಿದರು.  ಬೆಳಗ್ಗೆ ಆರು ಗಂಟೆಗೆ ಗೆಜ್ಜೆ ಕಟ್ಟುವ ಮಧೂರರು ಇರುಳ ತನಕ ಸಂಗೀತಕ್ಕಾಗಿ ಸಂಚರಿಸುವವರು. ಸಂಗೀತ ವಿದ್ಯಾಲಯದ ಪಾಠದೊಂದಿಗೆ ಮನೆ ಪಾಠ ಇವರ ಇನ್ನೊಂದು ವಿಧದ ಕೈಂಕರ್ಯ. ಸಂಗೀತ ಶಾಲೆಯ ಸಮಯಕ್ಕೆ ಬರಲಾಗದ ಅನೇಕರಿಗೆ ಅವರ ಮನೆಯಲ್ಲೇ ಸಂಗೀತ ಶಿಕ್ಷಣ.ಎಳೆಯವರಿಂದ ಹಿಡಿದು ಹಳೆಯವರ ತನಕ ಈ ಮೂಲಕ ಮಧೂರರ ಶಿಷ್ಯರು. ಅವರವರ ವಯೋಮಾನಕ್ಕೆ ಅನುಗುಣವಾಗಿ ಬೋಧನಾ ವಿಧಾನ.ಹಾಗಾಗಿ ಮಧೂರರು ಸಂಚಾರಿ ಸಂಗೀತ ಶಿಕ್ಷಕರಾಗಿಯೂ ಪ್ರಸಿದ್ಧರು.
ವಿದ್ಯೆಯೊಂದಿಗೆ ವಿನಯ ಮಧೂರರ ಒಂದು ಮುಖ್ಯ ಲಕ್ಷಣ.ಉಡುಪಿಯ ಸಂಗೀತದ ಎಲ್ಲಾ ಕಾರ್ಯಕ್ರಮಗಳಲ್ಲೂ ಉಪಸ್ಥಿತರಿರುವ ಮಧೂರರು ಯಾವ ಗಾಯಕರನ್ನೂ ಟೀಕಿಸುವವರಲ್ಲ.ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಆರೋಪ ಮಾಡುವವರಲ್ಲ.  ಅವರ ಸಾಮಥ್ರ್ಯಕ್ಕೆ ಅಷ್ಟು ಸಾಕು ಎಂಬ ವಿನಯೋಕ್ತಿ. ಸಂಗೀತಾಸಕ್ತಿಯಿಂದ ಬರುವ ಎಲ್ಲರನ್ನೂ ಸೌಜನ್ಯಪೂರ್ವಕವಾಗಿಯೇ ಮಾತನಾಡಿಸುವವರು. ನಿನ್ನಿಂದ ಸಂಗೀತ ಕಲಿಕೆ ಅಸಾಧ್ಯ. ನೀನು ಬೇರೆ ಕೆಲಸ ನೋಡಿಕೋಎಂಬ ಉದ್ಧಟತನದ ಮಾತು ಅವರ ಬತ್ತಳಿಕೆಯಲ್ಲಿಲ್ಲ.ಸರ್,ಸಂಗೀತ ಶಿಕ್ಷಣ ಗುರುಕುಲ ಮಾದರಿಯಲ್ಲಿರಬೇಕಲ್ಲವೇ?. ಶಿಕ್ಷೆ ಇಲ್ಲದೆ ಶಿಕ್ಷಣ ಸಾಧ್ಯವೇ?. ನೀವ್ಯಾಕೆ ಶಿಷ್ಯರತ್ತ ಇಷ್ಟು ಮೃದುವಾಗಿರುತ್ತೀರಿ? ಎಂದು ಕೇಳಿದಾಗ ಮಧೂರರ ಉತ್ತರ ಗಮನಾರ್ಹ. ಹೌದು, ನೀವು ಹೇಳುವುದು ಸರಿ. ನಾನೂ ಇದೇ ಕಠಿನವಾದ ಹಾದಿಯಲ್ಲಿ ಸಂಗೀತ ಕಲಿತವನು. ಆ ಕ್ರಮವೂ ನನಗೆ ತಿಳಿದಿದೆ. ಆದರೆ ಈಗ ಕಾಲ ಬದಲಾಗಿದೆ. ಈ ಕ್ಷೇತ್ರದತ್ತ ಬರುವವರ ಸಂಖ್ಯೆ ವಿರಳವಾಗುತ್ತಿದೆ. ಅದರೊಂದಿಗೆ ಸಂಗೀತ ಶಿಕ್ಷಕನೂ ಬದುಕಬೇಕಲ್ಲವೇ?. ಹಾಗಾಗಿ ಮೃದು ಧೋರಣೆ ಅನಿವಾರ್ಯ. ಆ ಮೂಲಕವಾದರೂ ಸಂಗೀತಾಸಕ್ತಿ ಬೆಳೆಯಲಿ ಎಂಬುದು ನನ್ನ ನಿಲುವು  ಎನ್ನುತ್ತಾರೆ.
ಊರ ಮತ್ತು ಪರವೂರುಗಳಲ್ಲಿ ಅನೇಕ ಕಚೇರಿಗಳನ್ನು ನೀಡಿದ ಮಧೂರರು ಆ ಭಾಗದಲ್ಲೆಲ್ಲಾ ಪ್ರಶಂಸೆಗೆ ಪಾತ್ರರಾದವರು. ಆದರೆ ಅದನ್ನೆಂದೂ ಹೇಳಿಕೊಳ್ಳುತ್ತಾ ಸಾಗಿದವರಲ್ಲ. ಒಮ್ಮೆ ಮಧೂರರಿಗೆ ಜಿ.ಟಿ.ನಾರಾಯಣ ರಾಯರಿಂದ ಪತ್ರ ಬಂದಿತು. ಇವರ ಒಂದು ಕಚೇರಿಗೆ ನಾರಾಯಣ ರಾಯರು ಹೋಗಿದ್ದರು.  ಜಿ..ಟಿ ಯವರಿಗೆ ಕಚೇರಿ ಖುಷಿ ಕೊಟ್ಟಿರಬೇಕು. ಅವರೇ ಕಿರುವಿಮಶರ್ೆಯನ್ನು ಪತ್ರಿಕೆಯೊಂದರಲ್ಲಿ ಪ್ರಕಟಿಸಿದ್ದರು. ಅದರ ಒಂದು ಪ್ರತಿಯನ್ನು ಅಂಚೆ ಮೂಲಕ ತಮ್ಮ ವೈಯಕ್ತಿಕ ಪತ್ರದೊಂದಿಗೆ ಮಧೂರರಿಗೆ ಕಳುಹಿಸಿದ್ದರು.
ಈಗಾಗಲೇ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಮಧೂರರು ಅಪಾರ ಸಂಖ್ಯೆಯ ಶಿಷ್ಯವೃಂದವನ್ನು ಹೊಂದಿದವರು. ಸಂಗೀತಕ್ಷೇತ್ರದಲ್ಲಿ ನೂತನ ಪ್ರಯೋಗಗಳಿಗೂ ಮುಂದಾದವರು. ಅದರಲ್ಲೂ ಸೈ ಎನಿಸಿಕೊಂಡವರು. ಅಂತಹ ಒಂದು ಪ್ರಯೋಗ ಸಹಸ್ರ ಕಂಠ ಗಾಯನ. ಮಧೂರರ ಶಿಷ್ಯರೇ ಇಲ್ಲಿ ಸಹಸ್ರ ಸಂಖ್ಯೆಯಲ್ಲಿ ಕಂಠದಾನ ಮಾಡುವವರು. ಮಧೂರರಿಗೆ ಇದೀಗ ಸಂಗೀತೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸೋಣ.
     ಶ್ರೀಕಾಂತ ಸಿದ್ದಾಪುರ

ಶುಕ್ರವಾರ, ಅಕ್ಟೋಬರ್ 14, 2011

ಕುಂದಾಪ್ರ ಪರಿಸರದಲ್ಲಿ ಚಿಕ್ಕಮೇಳದ ಗೆಜ್ಜೆನಾದ 
ಇದೀಗ ಮಳೆಗಾಲ. ಯಕ್ಷಗಾನ ಮೇಳಗಳು ನಿದ್ರೆ ಹೋಗಿವೆ.  ಕಲಾವಿದರಿಗೂ  ಸ್ವಲ್ಪ  ವಿಶ್ರಾಂತಿ. ಈ ಸಮಯದಲ್ಲಿ ಯಕ್ಷಗಾನ ನೋಡಬೇಕೇ?. ನಗರ ಪ್ರದೇಶದ ಸಭಾಭವನಕ್ಕೆ ಹೋಗಬೇಕು. ಆದರೆ ಬಯಲಿನಲ್ಲಿ ಕುಳಿತು ನೋಡಿದಷ್ಟು ಖುಷಿಯನ್ನು ಇದು ನೀಡೀತೇ?. ಖಂಡಿತಾ ಇಲ್ಲ.  ಮಳೆಗಾಲದಲ್ಲಿ ಮೇಳದ ತಿರುಗಾಟವಿಲ್ಲ್ಲ ಎಂದು ಪ್ರೇಕ್ಷಕರು ಕೊರಗುವ ಅಗತ್ಯವಿಲ್ಲ.  ಮಳೆಗಾಲದಲ್ಲೂ ಮನೆಮನೆಯಲ್ಲೂ ಯಕ್ಷಗಾನ. ಹೀಗೊಂದು ಪ್ರಯತ್ನವು ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಅದೇ ಮನೆ ಮನೆ ಸುತ್ತುವ ಚಿಕ್ಕಮೇಳ
 ಹೆಸರೇ ಹೇಳುತ್ತಿದೆ. ಇದು ಚೊಕ್ಕ ಮತ್ತು ಚಿಕ್ಕಮೇಳ. ಇಬ್ಬರು ವೇಷಧಾರಿಗಳು ಹೆಚ್ಚೆಂದರೆ ಇಬ್ಬರೇ. ಒಂದು ಪುರುಷ ವೇಷವಾದರೆ; ಇನ್ನೊಂದು ಸ್ತ್ರೀವೇಷ. ಜೊತೆಗೆ ಭಾಗವತರು ಬೇಕಲ್ಲವೇ?. ಅವರೊಂದಿಗೆ ಮದ್ದಲೆಯವರು ಮತ್ತು ಶ್ರುತಿಯವರು.  ಅಬ್ಬಬ್ಬಾ ಎಂದರೆ ಒಂದೈದು ಮಂದಿ. ಚಿಕ್ಕಮೇಳ ಸಂಜೆ 6 ರಿಂದ ರಾತ್ರಿ 10:30 ರ ತನಕ ತಿರುಗಾಟ ನಡೆಸುತ್ತದೆ. ಒಂದೊಂದು ಮನೆಯಲ್ಲಿ  ಸುಮಾರು 15-20 ನಿಮಿಷ ಪ್ರದರ್ಶನ. ಮನೆಯ ಮುಂಭಾಗದ ಚಾವಡಿಯೆ ರಂಗಸ್ಥಳ.  ಗ್ರಾಮೀಣ ಭಾಗದ ಜನರಿಗೆ ಹೀಗೆ ಬರುವ ಮೇಳದ ಬಗ್ಗೆ ಗೌರವ ಮತ್ತು ಭಕ್ತಿ. ಅಕ್ಕಿ, ತೆಂಗಿನ ಕಾಯಿ. ಅಡಿಕೆ, ವೀಳ್ಯದೆಲೆ, ದೀಪ ಮೊದಲಾದವುಗಳನ್ನು ಸಿದ್ಧಪಡಿಸಿ ಕೊಂಡು ಕಾಯುತ್ತಿರುತ್ತಾರೆ. ಈ ಭಕ್ತಿಗೂ ಒಂದು ಕಾರಣವಿದೆ. ಚಿಕ್ಕಮೇಳದಲ್ಲಿಯೂ ದೇವತಾ ಆರಾಧನೆಯ ಕಲ್ಪನೆ ಇದೆ.  ಇದೂ ಒಂದು ಸೇವೆ. ಗೆಜ್ಜೆಸೇವೆ ಎಂದೇ ಗೌರವ. ಈ ಸೇವೆಯನ್ನು ಮನೆ ಮುಂದೆ ನಡೆಸಿದಲ್ಲಿ ಅನಿಷ್ಠಗಳೆಲ್ಲಾ ನಾಶವಾಗುತ್ತವೆ ಎಂಬ ನಂಬಿಕೆ. ಚಿಕ್ಕಮೇಳಕ್ಕೆ ಸಂಭಾವನೆಯೂ ಅವರವರ ಇಷ್ಟಕ್ಕೆ ಬಿಟ್ಟ ವಿಚಾರ. ರೂ.50, 100, 200 ಹೀಗೆ ಅವರವರ  ಅನುಕೂಲಕ್ಕೆ ತಕ್ಕಂತೆ ನೀಡುತ್ತಾರೆ. ಪುರಾಣ ಪ್ರಸಂಗಗಳ ಸನ್ನಿವೇಶದ ಪ್ರದರ್ಶನಕ್ಕೆ ಇಲ್ಲಿನ ಆದ್ಯತೆ. ಎರಡು ಪಾತ್ರಕ್ಕೆ ತಕ್ಕುದಾದ ಕಥಾಭಾಗವನ್ನೇ ಆಯ್ದುಕೊಳ್ಳುವುದು ಸಾಮಾನ್ಯ ಕ್ರಮ. ಸುಮಾರು 15 ನಿಮಿಷಗಳ ಪ್ರದರ್ಶನದ ತರುವಾಯ ಮನೆಮಂದಿಗೆ ಒಳಿತನ್ನೇ ಮಾಡುವಂತೆ ಪ್ರಾರ್ಥಿಸಿ ದೇವರ ಪ್ರಸಾದವನ್ನು ನೀಡಲಾಗುತ್ತದೆ.ಕೆಲವು ಮನೆಯವರು ಚಿಕ್ಕಮೇಳದ ಕಲಾವಿದರಿಗೆ ಎಲೆ ಅಡಿಕೆ ಮೆಲ್ಲಲು ನೀಡುವುದುಂಟು. ಕೆಲವು ಮನೆಯವರು ಚಾ, ತಿಂಡಿಗಳನ್ನೂ ನೀಡುತ್ತಾರೆ. ಆದರೆ ಹಾಗೆ ಕೊಡಲೇಬೇಕೆಂಬ ಆಗ್ರಹವಿಲ್ಲ.
 ಈ ಕಲೆಗೆ ಪುನರ್ಜನ್ಮ ನೀಡುವ ದೃಷ್ಟಿಯಿಂದ ಸಂಘಟನೆಯೊಂದು ಕುಂದಾಪುರದ ಪರಿಸರದಲ್ಲಿ ಹುಟ್ಟಿಕೊಂಡಿರುವುದು ಸಂತéೋಷದ ಸಂಗತಿ.  ಮಂದಾತರ್ಿ ಸಮೀಪದ ನಡೂರಿನ ಯಕ್ಷಸಿರಿ ಯಕ್ಷಗಾನ ಚಿಕ್ಕಮೇಳ ಈ ಹೊಣೆ ಹೊತ್ತಿದೆ. ಮಂದಾತರ್ಿ ಮೇಳದ ಕಲಾವಿದ ದಿನಕರ ಕುಂದರ್ ಈ ಪುನರುಜ್ಜೀವ ಕ್ರಿಯೆಯ ಮುಂಚೂಣಿಯಲ್ಲಿದ್ದಾರೆ. ಆಲೂರು ಸುರೇಶ್, ಬುಕ್ಕಿಗುಡ್ಡೆ ಮಹಾಬಲ, ಕೆರಾಡಿ ವಿಶ್ವನಾಥ, ಜಯರಾಮ ಶಂಕರನಾರಾಯಣ ಮೊದಲಾದವರು ಚಿಕ್ಕಮೇಳದಲ್ಲಿ ಕಲಾವಿದರಾಗಿ ಜೀವತುಂಬಲು ಶ್ರಮಿಸುತ್ತಿದ್ದಾರೆ. ಗ್ರಾಮೀಣ ಸಂಸ್ಕೃತಿ ನಾಶವಾಗುತ್ತಿದೆ ಎಂಬ ಕೂಗು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ.ಈ ನಿರಾಶೆಯ ಕಾರ್ಮೋಡದ ನಡುವೆಯೂ ಈ ಕಲಾವಿದರ ಶ್ರಮ ಹೊಸ ಆಶಾಕಿರಣವನ್ನು ಮೂಡಿಸುತ್ತಿದೆ. ಮರೆಯಾಗುತ್ತಿರುವ ಈ ಕಲೆಯ ಉಳಿಸುವಿಕೆಗೆ ಶ್ರಮಿಸುತ್ತಿರುವ ಇವರನ್ನು ಅಭಿನಂದಿಸೋಣ.            
           ಡಾ.ಶ್ರೀಕಾಂತ್ ಸಿದ್ದಾಪುರ.

 

ಭಾನುವಾರ, ಸೆಪ್ಟೆಂಬರ್ 25, 2011

Dr. Chandrashekhar Kambara was in PPC

ಶ್ರೀ ಕೃಷ್ಣನ ನೆಲದಲ್ಲಿ ಕಂಬಾರರ ನೆನಪು
ಡಾ.ಶ್ರೀಕಾಂತ್ ಸಿದ್ದಾಪುರ
ಡಾ.ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇದು ಕನ್ನಡಿಗರಿಗೆ ಸಂತಸದ ವಿಷಯ.  ಕಂಬಾರರೊಂದಿಗಿನ ಸಂಬಂಧದ ಕುರಿತಂತೆ ನಾನಾ ರೀತಿಯ ನೆನಪುಗಳು ಅವರ ಅಭಿಮಾನಿಗಳಿಂದ ರೆಕ್ಕೆ ಬಿಚ್ಚಿಕೊಳ್ಳುತ್ತಿವೆ. ಕರಾವಳಿಯ ಕೃಷ್ಣನ ನಾಡಾದ ಉಡುಪಿಯೂ ಇದೀಗ ಹೆಮ್ಮೆಯಿಂದ ಕಂಬಾರರನ್ನು ಅಭಿನಂದಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಕಂಬಾರರಿಗೂ, ಉಡುಪಿಗೂ ಇದ್ದ ನಂಟು, ಬಾಂಧವ್ಯ.
 ಹುಬ್ಬೇರಿಸಬೇಡಿ. ಉತ್ತರ ಕನರ್ಾಟಕದ ಕಂಬಾರರಿಗೆ ಉಡುಪಿಯೊಂದಿಗೆ ಅದೆಂತಹ ಬಾಂಧವ್ಯ ?. ಈ ಬಾಂಧವ್ಯ ವೃತ್ತಿ ಸಂಬಂಧ ಬೆಳೆದು ಬಂದುದು. ಡಾ. ಕಂಬಾರರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದಲ್ಲಿ ಕೆಲವು ತಿಂಗಳು ಕನ್ನಡ ಬೋಧಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಅದಮಾರು ಮಠದ ಯತಿಗಳಾದ ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಆಗ ಇದರ ಅಧ್ಯಕ್ಷರು. ಕಾಲೇಜನ್ನು ಎತ್ತರಕ್ಕೆ ಬೆಳೆಸಬೇಕೆಂಬ ಹಂಬಲ ಹೊತ್ತವರು. ನಾಡಿನ ಮೂಲೆಯಲ್ಲಿರುವ ಪ್ರತಿಭೆಗಳನ್ನು ತಮ್ಮ ಕಾಲೇಜಿನತ್ತ ಸೆಳೆಯುವ ಹುಡುಕಾಟದಲ್ಲಿ ನಿರತರಾಗಿದ್ದರು.  ಹೀಗೆ ಕಂಬಾರರನ್ನು ಉಡುಪಿಗೆ ತಂದವರು ಶ್ರೀ ವಿಬುಧೇಶತೀರ್ಥ ಶ್ರೀಪಾದರು.
   1968 ರಲ್ಲಿ ಉಡುಪಿಗೆ ಬಂದ ಕಂಬಾರರು ಇದಕ್ಕೆ ಮೊದಲು ಸಾಗರದ ಕಾಲೇಜಿನಲ್ಲಿ ದುಡಿಯುತ್ತಿದ್ದರು. ಎಂ. ಗೋಪಾಲಕೃಷ್ಣ ಅಡಿಗರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿಗೆ ಏಕೆ ಸೇರಬಾರದು ? ಎಂದು ಕಂಬಾರರನ್ನು ಕೆಣಕಿದರು. ಅಡಿಗರ ಸೂಚನೆಯ ಮೇರೆಗೆ ಉಡುಪಿಗೆ ಬಂದ ಕಂಬಾರರನ್ನು ಕಾಲೇಜಿನಲ್ಲಿ ಸ್ವಾಗತಿಸಿದವರು  ಅಂದಿನ ಪ್ರಾಂಶುಪಾಲ ಶಂಕರ್ ಮೊಕಾಶಿಯವರು. ಪೂರ್ಣಪ್ರಜ್ಞ ಕಾಲೇಜಿನಲ್ಲಿ ಕನ್ನಡ ಆದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಕನ್ನಡದ ಧೀಮಂತ ಸಾಹಿತಿ ಡಾ.ರಾಜಪುರೋಹಿತ್ ಆಗಷ್ಟೇ ಪಿಪಿಸಿ ಯನ್ನು  ತೊರೆದು, ಕೇರಳ ವಿ.ವಿ.ಯತ್ತ ಹೊರಟಿದ್ದರು. ಈ ಸ್ಥಾನವನ್ನು ಕಂಬಾರರು ಭತರ್ಿ ಮಾಡಿದರು. ಮೊಕಾಶಿಯವರು ಮುಂಬೈಗೆ ತೆರಳಿದ ಬಳಿಕ ಅಡಿಗರು ಪಿಪಿಸಿಯ ಪ್ರಾಂಶುಪಾಲರಾದರು. ಕಂಬಾರರಿಗೆ ಅಂದು ದೊರೆತ ಈ ಇಬ್ಬರ ಒಡನಾಟವು ಸಾಹಿತ್ಯದ ಕುರಿತು ಹೊಸ ಹುರುಪನ್ನು ಕಂಬಾರರಲ್ಲಿ ಬೆಳೆಸಿತು.
 ಕಂಬಾರರೊಂದಿಗೆ ಅಂದು ಸೇವೆ ಸಲ್ಲಿಸಿದ್ದ ಪಿಪಿಸಿ ಯ ಹಲವು ಅಧ್ಯಾಪಕರು ಇದೀಗ ಕಂಬಾರರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕುತ್ತಾರೆ. ನಿವೃತ್ತ ಹಿಂದಿ ಉಪನ್ಯಾಸಕ ಶ್ರೀ ನಟರಾಜ ದೀಕ್ಷಿತ್ ಕಂಬಾರರ ಬಗ್ಗೆ ಹೀಗೆ ನೆನಪಿಸಿಕೊಳ್ಳುತ್ತಾರೆ. ಕಂಬಾರರು ಅಂದು ಉದಯೋನ್ಮುಖ ಕವಿ. ಅವರ ಕಂಠ ಸಾಕಷ್ಟು ಮಧುರವಾಗಿತ್ತು. ತರಗತಿಯಲ್ಲಿ ಧಾರವಾಡ ಸೊಗಸಾದ ಕನ್ನಡವನ್ನು ಅವರ ಬಾಯಿಯಿಂದ ಕೇಳುವುದೆಂದರೆ ವಿದ್ಯಾಥರ್ಿಗಳಿಗೆ ಅತ್ಯಂತ ಖುಷಿ.  ಡಾ.ಎಸ್.ಎಲ್. ಕಣರ್ೀಕರು ಕಂಬಾರರು ಸೇರಿದ ವರ್ಷವೇ ಪಿಪಿಸಿಯ ವಿಜ್ಞಾನ ವಿಭಾಗಕ್ಕೆ ಉಪನ್ಯಾಸಕರಾಗಿ ಸೇರಿಕೊಂಡವರು. ಆಗ ವಿಜ್ಞಾನದ ವಿಭಾಗವು ವಳಕಾಡಿನಲ್ಲಿತ್ತು. ಉಳಿದವು ಸಂಸ್ಕೃತ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಕಂಬಾರರು ವಿಜ್ಞಾನ ವಿಭಾಗದ ವಿದ್ಯಾಥರ್ಿಗಳಿಗೆ ಕನ್ನಡ ಭಾಷೆ ಬೋಧಿಸಲು ಇಲ್ಲಿಗೆ ಬರುತ್ತಿದ್ದರು. ಹಾಗೆ ಬಂದಾಗ ನನ್ನ ಮತ್ತು ಇತರ ವಿಜ್ಞಾನದ ಉಪನ್ಯಾಸಕರೊಂದಿಗೆ ಕೆಲವು ಹೊತ್ತು ಮಾತನಾಡುತ್ತಿದ್ದರು.
 ಜನವರಿ 9, 2000 ದಂದು ನಡೆದ ಪಿಪಿಸಿಯ ವಾಷರ್ಿಕೋತ್ಸವಕ್ಕೆ ಕಂಬಾರರೇ ಮುಖ್ಯ ಅತಿಥಿ. ಡಾ.ಎಸ್.ಎಲ್. ಕಣರ್ೀಕ್ ಅಂದು ಪ್ರಾಂಶುಪಾಲರು. ಕಂಬಾರರು ಅಂದು ಪಿಪಿಸಿ ಯ ತನ್ನ ಹಿಂದಿನ ದಿನಗಳನ್ನು ಮೆಲುಕು ಹಾಕಿದುದನ್ನು ಕಣರ್ೀಕರು ನೆನಪಿಸಿಕೊಳ್ಳುತ್ತಾರೆ. ವಿಶೇಷವಾಗಿ ಬಿ.ಬಿ. ರಾಜಪುರೋಹಿತರ ನೆನಪು ಅವರನ್ನು ಕಾಡಿತ್ತಂತೆ.
 ಅಡಿಗರು ಪ್ರಾಂಶುಪಾಲರಾಗಿದ್ದ ಸಮಯ. ಕಂಬಾರರಿಗೆ ಚಿಕಾಗೋ ವಿ.ವಿ. ಗೆ ವಿಶೇಷ ಅಧ್ಯಯನಕ್ಕೆ ಹೋಗುವ ಕಾಲ ಕೂಡಿ ಬಂದಿತು. ಫುಲ್ ಬ್ರೈಟ್ ವಿದ್ಯಾಥರ್ಿವೇತನದೊಂದಿಗೆ ಅಮೆರಿಕಾಕ್ಕೆ ತೆರಳಲಿರುವ ಕಂಬಾರರನ್ನು ಶ್ರೀ ವಿಬುಧೇಶತೀರ್ಥರು ಈ ಸಂದರ್ಭದಲ್ಲಿ ಪ್ರೋತ್ಸಾಹಿಸಿದರು. ಕಂಬಾರರು ಚಿಕಾಗೋ ವಿ.ವಿ. ಗೆ ಹೋದ ಅಂದಿನ ದಿನಗಳನ್ನು ನೆನಪಿಸಿಕೊಳ್ಳುವ ನಟರಾಜ ದೀಕ್ಷಿತ್ ಚಿಕಾಗೋದಲ್ಲಿ ಅದು ಭಾರತದ ಭಾಷೆಗಳ ಅಧ್ಯಯನ ಕೇಂದ್ರವಾಗಿತ್ತು. ಕಂಬಾರರು ಅಲ್ಲಿಗೆ ಸೇರಿಕೊಂಡ ನಂತರವೂ ಆಗಾಗ ನನ್ನೊಡನೆ ತಮ್ಮ ಅಮೆರಿಕಾದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಒಮ್ಮೆ ನನಗೂ ಚಿಕಾಗೋಗೆ ಬರುವಂತೆ ಕೇಳಿಕೊಂಡರು. ಆಗ ಅಧ್ಯಯನಕ್ಕಾಗಿ 12 ಡಾಲರ್ ತೆರಬೇಕಾಗಿತ್ತು. ಕಂಬಾರರೇ ಈ ವಿಷಯ ತಿಳಿಸಿ ಅಮೆರಿಕಾಕ್ಕೆ ಬರುವಂತೆ ಆಹ್ವಾನಿಸಿದರೂ, ನನಗೆ ಹೋಗಲು ಸಾಧ್ಯವಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಕೌಟುಂಬಿಕ ಸಮಸ್ಯೆ. ಕಂಬಾರರು ಸುಮಾರು ಒಂಬತ್ತು ತಿಂಗಳು ಅಮೆರಿಕಾದಲ್ಲಿದ್ದರು. ಅನಂತರ ಅವರು ಉಡುಪಿಗೆ ಬಂದಾಗ ಶ್ರೀ ವಿಬುಧೇಶತೀರ್ಥರು ಅವರನ್ನು ಸನ್ಮಾನಿಸಿದ್ದರು.
 ಕಂಬಾರರೊಂದಿಗೆ ಅಂದು ಪಿಪಿಸಿ ಯಲ್ಲಿ ದುಡಿಯುತ್ತಿದ್ದ ಪ್ರಮುಖರೆಂದರೆ ಡಾ.ಎನ್.ಎ. ಮಧ್ಯಸ್ಥ, ವರದರಾಜ ಬಲ್ಲಾಳ್, ಎಂ. ರಾಜಗೋಪಾಲ ಆಚಾರ್ಯ ಮೊದಲಾದವರು. ಡಾ.ಚಂದ್ರಶೇಖರ ಕಂಬಾರರಿಗೆ ಕನ್ನಡದ ಎಂಟನೆಯ ಜ್ಞಾನಪೀಠ ಪ್ರಶಸ್ತಿ ಒಲಿದಿದೆ. ಉಡುಪಿಯ ಜನತೆ ಎದೆತುಂಬಿ ಕಂಬಾರರನ್ನು ಅಭಿನಂದಿಸುತ್ತಿದ್ದಾರೆ. ಅವರ ಪಾಲಿಗೆ ಇವ ನಮ್ಮವ ಇವ ನಮ್ಮವ. ಅವರನ್ನು ಮತ್ತೊಮ್ಮೆ ಅಭಿನಂದಿಸೋಣ.

ಬುಧವಾರ, ಸೆಪ್ಟೆಂಬರ್ 21, 2011

ಡಾ.ಕಂಬಾರ ಮತ್ತು ಪಿಪಿಸಿ

ಡಾ.ಚಂದ್ರಶೇಖರ ಕಂಬಾರ್ ಮತ್ತು ಪೂರ್ಣಪ್ರಜ್ಞ ಕಾಲೇಜು

1967-68 ರ ಕಾಲ. ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಬಿ.ಬಿ. ಪುರೋಹಿತ್  ಕೇರಳ ವಿ.ವಿ. ಗೆ ತೆರಳಿದರು. ಅವರ ಸ್ಥಾನದಲ್ಲಿ ಡಾ.ಕಂಬಾರರು ಕನ್ನಡ ಅಧ್ಯಾಪಕರಾಗಿ ನೇಮಕಗೊಂಡರು. ಆಗ ಖ್ಯಾತ ವಿಮರ್ಶಕ ಶಂಕರ್ಮೊಕಾಶಿ ಪುಣೇಕರ್ ಪ್ರಾಂಶುಪಾಲರು. 1968-69 ರ ಅವಧಿಯಲ್ಲಿ  ಡಾ.ಕಂಬಾರರು ಪುಲ್ ಬ್ರೈಟ್ ವಿದ್ಯಾಥರ್ಿವೇತನದೊಂದಿಗೆ ಅಮೆರಿಕಾಕ್ಕೆ ತೆರಳಿದರು.  ಆಗ ಪಿಪಿಸಿಯಲ್ಲಿ ನವ್ಯ ಕವಿ ಎಂ.ಗೋಪಾಲಕೃಷ್ಣ ಅಡಿಗರು ಪ್ರಾಂಶುಪಾಲರು. ಕಂಬಾರರೇ ನೆನಪಿಸಿಕೊಂಡಂತೆ ಅಡಿಗ, ಮೊಕಾಶಿಯವರೊಂದಿಗಿನ ಅಂದಿನ ಸಾಹಿತ್ಯ ಸಂಪರ್ಕ ತನ್ನ ಜೀವನದ ದಿಕ್ಕನ್ನೇ ಬದಲಾಯಿಸಿತು.  ಕಂಬಾರರನ್ನು ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಸನ್ಮಾನಿಸಿದ್ದರು.  ಶ್ರೀಗಳಿಗೆ ಕಂಬಾರರ ಬಗ್ಗೆ ಅತೀವ ಗೌರವ.
 

ಶನಿವಾರ, ಸೆಪ್ಟೆಂಬರ್ 10, 2011

ಅಡಿಗ ಕಾವ್ಯ ಕಮ್ಮಟ (4-09-2011 ಭಾನುವಾರ) ಗಾಯನ ತರಬೇತಿ

ಎಂ.ಗೋಪಾಲಕೃಷ್ಣ ಅಡಿಗಕಾವ್ಯಕಮ್ಮಟ
ಮಂಗಳೂರು ವಿ.ವಿ.ಮಟ್ಟದ ಕಾರ್ಯಾಗಾರ








ಸಂಸಾರದ ಭಾಗ್ಯ ನಮಗಿರಲಿ

ಸಂಸಾರ ಎಂಬಂಥ ಭಾಗ್ಯ ನಮಗಿರಲಿ
        ಸಂಸಾರದ ಬಗ್ಗೆ ಯೋಚಿಸುವಾಗ ನಮ್ಮ ನೆನಪಿಗೆ ಮೊದಲು ಬರುವುದು ನರಸಿಂಹಸ್ವಾಮಿಯವರ ಪ್ರೇಮ ಕವನಗಳು. ಸ್ವಾಮಿಯವರು  ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಎಂದರು.  ಅಷ್ಟು ಮಾತ್ರವಲ್ಲ ; ಅವರ ಹತ್ತಿರ ಹೆಂಡತಿ ಇದ್ದರೆ ಆಗ ಅವರು ಸಿಪಾಯಿಯಂತೆ. ಬಸವಣ್ಣನವರೂ ಸಂಸಾರವನ್ನು ಕಂಡ ರೀತಿಯೇ ಬೇರೆ. ಸಂಸಾರವು ಅವರ ಪಾಲಿಗೆ ಏಳು ಮತ್ತು ಬೀಳುಗಳ ಪಯಣ. ಅವರೇ ಹೇಳಿದ ಮಾತು. ಕಾಲಲ್ಲಿ ಕಬ್ಬಿಣದ ಗುಂಡು.  ಕೊರಳಲ್ಲಿ ಬೆಂಡು. ಒಂದು ಮುಳುಗಿಸಿದರೆ, ಇನ್ನೊಂದು ತೇಲಿಸುತ್ತದೆ. ಸಂಸಾರ ಎಂಬುದು ಸುಖ ಮತ್ತು ಕಷ್ಟಗಳ ಮಿಶ್ರಣ. ಸಂಸಾರ ಸಾಗರದಲ್ಲಿ ಈಸಿ ಯಶಸ್ಸನ್ನು ಕಾಣಲು ಎದೆಗಾರಿಕೆ ಬೇಕು. ಅಕ್ಕಮಹಾದೇವಿಯು ಕೌಶಿಕ ರಾಜನನ್ನು ತಿರಸ್ಕರಿಸಿದರೂ ಸಂಸಾರಿಗಳನ್ನು ಟೀಕಿಸಲಿಲ್ಲ. ಸಂಸಾರದ ಸಮರ್ಥ ನಿರ್ವಹಣೆಗೆ ಆಕೆ ಸೂತ್ರವೊಂದನ್ನು ನೀಡುತ್ತಾಳೆ. ಅವಳ ಒಂದು ವಚನ ಇದನ್ನೇ ಪ್ರತಿಪಾದಿಸುವಂತಿದೆ. ಹಾವ ಬಾಯ ಹಲ್ಲ ಕಳೆದು ಹಾವನ್ನಾಡಿಸಬಲ್ಲಡೆ ಹಾವಿನ ಸಂಘವೇ ಲೇಸು. ಸಂಸಾರದಲ್ಲಿ ನಮ್ಮ ಅವನತಿಗೆ ಕಾರಣವಾಗಬಹುದಾದ ಷಡ್ವೈರಿಗಳನ್ನು ಆಕೆ ವಿಷದ ಹಲ್ಲಿಗೆ ಹೋಲಿಸುತ್ತಾಳೆ. ಇದು ಅತಿಯಾದರೆ ಅಪಾಯ. ಹಾಗಾಗಿ ಮೋಹರಹಿತವಾದ ನೈಜ ಪ್ರೀತಿ, ಪರಸ್ಪರ ಅಥರ್ೈಸುವಿಕೆ ಸುಖ ಸಂಸಾರಕ್ಕೆ ಇಂಬು ನೀಡೀತು. ದಾಸರೂ ಸಂಸಾರ ಎಂಬ ಭಾಗ್ಯ ನಮಗಿರಲಿ ಎಂದರು.  ಅವರ ಪ್ರಕಾರ ಇದು ಕಂಸಾರಿಯ ನೆನೆವ ಸೌಭಾಗ್ಯ
ಸಂಸಾರ ಎಂದ ಮೇಲೆ ಕಷ್ಟಕೋಟಲೆಗಳು ಹಲವು. ಅದರಿಂದ ಬೇಸತ್ತು ವಿಚ್ಛೇದನಕ್ಕೆ ಮುಂದಾಗುವವರ ಸಂಖ್ಯೆ ಇಂದು ಅಧಿಕ. ಇನ್ನು ಕೆಲವರು ಜೀವನದಲ್ಲಿ ಜಿಗುಪ್ಸೆ ಪಡೆಯುತ್ತಾರೆ. ಅಷ್ಟಕ್ಕೇ ನಿಲ್ಲದ ಅವರ ಮನಸ್ಸು ಆತ್ಮಹತ್ಯೆಗೂ ಮುಂದಾಗುತ್ತದೆ. ಈ ದುರಂತಗಳ ಹಿನ್ನೆಲೆಯಲ್ಲಿ ಸಂಸಾರಿಗಳ ಪಾಡು ಕಷ್ಟದ ಗೂಡು. ಆದರೆ ಈ ಸಮಸ್ಯೆಗಳ ನಡುವೆಯೂ ಬಾಳನ್ನು ಸಾಗಿಸಿದ ಅನೇಕ ಮಹಾತ್ಮರು ನಮ್ಮ ಮುಂದೆ ಇದ್ದಾರೆ. ಅವರಲ್ಲೂ ಈ ತಳಮಳ ಸಹಜವಾಗಿಯೇ ಇದ್ದಿತ್ತು. ಆದರೆ ಅವರು ಪಠಿಸಿದ್ದು ತಾಳ್ಮೆ ಎಂಬ ಮಂತ್ರ. ಅದೇ ಅವರ ಜೀವನಕ್ಕೆ ಉತ್ಸಾಹ ನೀಡಿತು. ಸಾಧನೆಗೆ ಸಹಕರಿಸಿತು. ಅಂತಹ ಮಹಾತ್ಮರಲ್ಲಿ ಒಬ್ಬರು ಸಾಕ್ರೆಟೀಸ್.
ಸಾಕ್ರೆಟೀಸ್ ದೊಡ್ಡ ತತ್ತ್ವಜ್ಞಾನಿ. ಅವರ ಸಂಸಾರವು ಸದಾ ಪತ್ನಿಪೀಡಿತವಾಗಿತ್ತು. ಅವರ ಮಡದಿ ಕ್ಸಾಂಥಿಪೆ. ಅತ್ಯಂತ ದುಡುಕು ಸ್ವಭಾವದವಳು. ಗಂಡನ ಮೇಲೆ ಎಗರುವುದರಲ್ಲಿ ಎತ್ತಿದ ಕೈ. ಒಮ್ಮೆ ಹೀಗಾಯಿತು. ಅವರ ಮನೆಗೆ ಕೆಲವು ವಿದ್ಯಾಥರ್ಿಗಳು, ಮಿತ್ರರು ಬಂದಿದ್ದರು. ಸಾಕ್ರೆಟೀಸ್ ಅವರೊಂದಿಗೆ ಚಚರ್ಿಸುತ್ತಿದ್ದರು. ಅವರ ಮಡದಿ ಇದನ್ನು ಗಮನಿಸಿದಳು. ಅವಳ ಕೋಪ ತುತ್ತತುದಿಯ ಹಂತ ತಲುಪಿತು. ಬಿಸಿ ನೀರನ್ನು ತಂದು ಸಿಟ್ಟಿನಿಂದ ಸಾಕ್ರೆಟೀಸ್ನ ಮುಖದ ಮೇಲೆ ಚೆಲ್ಲಿದಳು. ಅದು ಎಂತಹ ಬಿಸಿ ಎಂದರೆ ಸಾಕ್ರೆಟೀಸ್ನ ಮುಖದ ಅರ್ಧಭಾಗ ಸುಟ್ಟು ಹೋಗುವಂತಾಯಿತು. ಅವರ ಸುತ್ತ ಇದ್ದವರಿಗೆ ಸಾಕ್ರೆಟೀಸ್ ಬಗ್ಗೆ ಅನುಕಂಪ ಮೂಡಿತು. ಅವರಲ್ಲೊಬ್ಬ ಕೇಳಿಯೇ ಬಿಟ್ಟ. ಸರ್, ನಿಮ್ಮ ಹೆಂಡತಿಯ ಈ ತರನಾದ ವರ್ತನೆ ಬಗ್ಗೆ ನಿಮಗೇನನಿಸುತ್ತದೆ ?.  ಸಾಕ್ರೆಟೀಸ್ ಯಾವುದೇ ಉದ್ವೇಗಕ್ಕೆ ಒಳಗಾಗದೇ ಉತ್ತರಿಸಿದರು. ನನಗೆ ಅವಳ ಕಷ್ಟ ಅರ್ಥವಾಗುತ್ತಿದೆ. ಆಕೆಯ ವೇದನೆಯೂ ತಿಳಿಯುತ್ತದೆ. ನಿಮ್ಮೊಂದಿಗೆ ಚಚರ್ಿಸುವಾಗ ಸಹಜವಾಗಿ ನಾನು ತಲ್ಲೀನನಾಗಿ ಬಿಡುತ್ತೇನೆ. ಅವಳ ಮಮತೆ, ಮೋಹ ಇದನ್ನು ಸಹಿಸುವುದಿಲ್ಲ. ಹಾಗಾಗಿ ಸಹಜವಾಗಿ ಉದ್ರೇಕಕ್ಕೆ ಒಳಗಾಗುತ್ತಾಳೆ. ಇಷ್ಟು ಹೇಳಿ ಮಿತ್ರರೊಂದಿಗೆ ಮಾತನ್ನು ಮುಂದುವರಿಸಿದರು.
ಸಾಕ್ರೆಟೀಸ್ನ ಬಳಿ ಒಬ್ಬ ಯುವಕ ಬಂದನು. ಆತನಿಗಿನ್ನೂ ಮದುವೆಯಾಗಿರಲಿಲ್ಲ. ಮದುವೆಯ ವಯಸ್ಸು. ಆತ ಸಾಕ್ರೆಟೀಸ್ನನ್ನು ಕೇಳಿದ. ತಾನು ಮದುವೆಯಾಗಬಹುದೇ?. ಸಾಕ್ರೆಟೀಸ್ ಖಂಡಿತವಾಗಿ ಮದುವೆಗೆ ಸಮ್ಮತಿ ಕೊಡಲಾರರು ಎಂಬ ಅಭಿಪ್ರಾಯ ಆತನದ್ದಾಗಿತ್ತು. ಆದರೆ ಸಾಕ್ರೆಟೀಸ್ನ ಉತ್ತರ ಆತನನ್ನು ಆಶ್ಚರ್ಯಗೊಳಿಸಿತು. ನೀನು ಮದುವೆಯಾಗಬೇಕು. ನಿನಗೆ ಒಳ್ಳೆಯ ಪತ್ನಿ ಸಿಕ್ಕಿದರೆ ನೀನು ಆನಂದದಿಂದ ಜೀವಿಸುವೆ. ಆನಂದದಿಂದ ಅನೇಕ ವಿಚಾರಗಳು ಹೊಳೆಯುತ್ತವೆ. ನಿನ್ನ ಅಂತರಂಗ ವಿಕಸಿಸುತ್ತದೆ. ಒಂದೊಮ್ಮೆ ಕೆಟ್ಟ ಪತ್ನಿ ಸಿಕ್ಕಿದರೆ ನಿನಗೆ ಜೀವನದಲ್ಲಿ ಜಿಗುಪ್ಸೆ ಮೂಡೀತು. ಆಗಲೂ ನಿನಗೆ ಲಾಭವಿದೆ. ನೀನೊಬ್ಬ ಒಳ್ಳೆಯ ದಾರ್ಶನಿಕನಾಗುವೆ. ಎರಡರಲ್ಲೂ ಲಾಭವಿರುವುದರಿಂದ ಖಂಡಿತಾ ಮದುವೆಯಾಗು.
ಕನ್ನಡ ಸಾಹಿತಿಗಳಲ್ಲಿ ಮಹಾದೇವ ಪ್ರಭಾಕರ ಪೂಜಾರ್ ಅವರ ಹೆಸರನ್ನು ಕೇಳದವರು ವಿರಳ. ಅವರು ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ವಿದ್ವಾಂಸರು.  ವೆಂಕಟಾಚಲ ಶಾಸ್ತ್ರಿಗಳು ತಮ್ಮ ಉದಾರಚರಿತರು, ಉದಾತ್ತಪ್ರಸಂಗಗಳು ಕೃತಿಯಲ್ಲಿ ಪೂಜಾರ್ರವರ ಸಾಂಸಾರಿಕ ಚಿತ್ರಣವನ್ನು ನೀಡಿರುತ್ತಾರೆ. ಪೂಜಾರ್ರವರ ಸಂಸಾರವು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಅವರ ಪತ್ನಿ ಮಾನಸಿಕವಾಗಿ ಅಸ್ವಸ್ಥರು. ಮದುವೆಯಾದ ಮೇಲೆ ಮಾವನೇ ಇದನ್ನು ಬಹಿರಂಗ ಪಡಿಸಿದ್ದರು. ಅವರಿಗೆ ಹುಟ್ಟಿದ ಮಕ್ಕಳೂ ಮಾನಸಿಕ ಅಸ್ವಸ್ಥತೆಯಿಂದ ಕೂಡಿದ್ದರು. ಅವರೇ ತನ್ನ ಕಾಲೇಜು ಕೆಲಸದೊಂದಿಗೆ ಮನೆಗೆಲಸಗಳನ್ನೂ ಮಾಡಬೇಕಾಗಿತ್ತು. ಅವರ ಮಗಳ ಮದುವೆಯೂ ಆಯಿತು. ಆದರೆ ಅಳಿಯ ಮಗಳನ್ನು ಕೈಬಿಟ್ಟ. ಮಗಳೊಂದಿಗೆ ಮೊಮ್ಮಗಳ ಹೊಣೆಯೂ ಇವರ ಮೇಲೆ ಬಿದ್ದಿತು. ಒಮ್ಮೆ ಮಗಳು ಮೈಸುಟ್ಟು ಕೊಂಡು ಅಂಗಹೀನೆಯಾದಳು. ಕೆಲವೇ ಸಮಯದಲ್ಲಿ ಆಕೆ ತೀರಿಕೊಂಡಾಗ ಪೂಜಾರರು ಮಗಳ ಸಾವಿನ ಬಗ್ಗೆ ಸಂತಸ ಪಡಲಿಲ್ಲ. ಕಣ್ಣೀರು ಸುರಿಸಿದರು. ಸಂಸಾರದ ಈ ದು:ಖಗಳ ನಡುವೆ ಅವರೆಂದೂ ಬದುಕನ್ನು ಹಳಿಯಲಿಲ್ಲ. ತಮ್ಮ ಅಳಿಯನ ಎರಡನೆಯ ಮದುವೆಯ ಹಿಂದಿನ ದಿನ ಬೀಗರನ್ನು ತಮ್ಮ ಮನೆಗೇ ಬರಹೇಳಿ ಉಪಚರಿಸಿದರು.
ಥಾಮಸ್ ಅಲ್ವಾ ಎಡಿಸನ್ ಸಂಸಾರದಲ್ಲೂ ಅಬ್ಸೆಂಟ್ ಮೈಡೆಡ್ ಪ್ರೊಫೆಸರ್. ಒಮ್ಮೆ ಅವರು ಹೊರಗೆ ತಿರುಗಾಟಕ್ಕೆ ಹೊರಟಿದ್ದರು. ಅವರ ಹೆಂಡತಿ ಮತ್ತು ಕೆಲಸದಾಕೆ ಒಟ್ಟಿಗೆ ಬಂದು ಅವರನ್ನು ಬೀಳ್ಗೊಳ್ಳಲು ಮುಂದಾದರು. ಅವರು ತಪ್ಪಿ ಕೆಲಸದಾಕೆಗೆ ಕಿಸ್ ಕೊಟ್ಟು ಮಡದಿಗೆ ಟಾ ಟಾ ಹೇಳಿದರು. ಕೂಡಲೇ ಅವರ ಮಡದಿ ಎಚ್ಚರಿಸಿದರು. ಅವರು ಆ ಬಗ್ಗೆ ಅಷ್ಟು ಸೀರಿಯಸ್ ಆಗಲೇ ಇಲ್ಲ. ಒಂದು ಕೆಲಸ ಮಾಡಿ. ನೀವು ನೀವೇ ಅದಲು ಬದಲು ಮಾಡಿಕೊಳ್ಳಿ. ಮಡದಿಯೂ ಅದನ್ನು ಅಲ್ಲಿಗೇ ಮರೆತು ಬಿಟ್ಟಳು. ಮತ್ತೆ ಮುಂದುವರಿಸಲಿಲ್ಲ.
ಮಹಾತ್ಮ ಗಾಂಧಿಯವರು ಒಮ್ಮೆ ಶ್ರೀಲಂಕೆಗೆ ಹೋಗಿದ್ದರಂತೆ. ಅವರೊಂದಿಗೆ ಅವರ ಮಡದಿ ಕಸ್ತೂಬರ್ಾ ಕೂಡ ಇದ್ದರು. ಇವರನ್ನು ಸಭೆಗೆ ಪರಿಚಯಿಸುವ ಸಮಯ ಬಂತು. ಪರಿಚಯಿಸುವಾತ ಗಾಂಧಿಯವರು ತಮ್ಮ ತಾಯಿಯೊಂದಿಗೆ ಬಂದಿದ್ದಾರೆ ಎಂದು ತಪ್ಪಾಗಿ ಪರಿಚಯಿಸಿದನು. ಎಲ್ಲರಿಗೂ ಭಯ. ಗಾಂಧಿಯವರಿಗೆ ಸಿಟ್ಟು ಬರಬಹುದೆಂದು. ಆದರೆ ಗಾಂಧಿಯವರು ತಮ್ಮ ಭಾಷಣದಲ್ಲಿ ಪರಿಚಯ ಮಾಡಿದಾತನ ತಪ್ಪನ್ನು ಖಂಡಿಸಲಿಲ್ಲ. ಸಂಸಾರದಲ್ಲಿ ಮೊದ ಮೊದಲು ಪತಿ-ಪತ್ನಿಯರ ಸಂಬಂಧ. ಆದರೆ ಅನಂತರ ಇದು ತಾಯಿ-ಮಗನಂತೆ ಪವಿತ್ರ ಸಂಬಂಧಕ್ಕೆ ತಿರುಗುತ್ತದೆ.  ನಮ್ಮಲ್ಲೂ ಅಂತಹ ಪವಿತ್ರವಾದ ಪ್ರೇಮ ಸಂಬಂಧವಿದೆ. ಓಶೋ ಹೇಳುವಂತೆ ಪ್ರೇಮದ ಆಳಕ್ಕಿಳಿದಂತೆ ಕಾಮವು ದೂರವಾಗಿ ಸಂಬಂಧ ಪವಿತ್ರವಾಗುತ್ತದೆ.
ಸ್ವಾರ್ಥ, ಅಹಂಗಳು ಸಂಸಾರಿಗಳನ್ನೂ ಇಂದು ಬಿಟ್ಟಿಲ್ಲ. ಪತಿ-ಪತ್ನಿಯರ ನಡುವಿನ ಪ್ರತಿಷ್ಠೆ ಸಂಸಾರದ ನೆಮ್ಮದಿಯನ್ನು ಕೆಡಿಸುತ್ತಿದೆ.  ಪ್ರೇಮದ ಸ್ಥಾನವನ್ನು ಕಾಮವು ಆಕ್ರಮಿಸುತ್ತಿದೆ. ಹಾಗಾಗಿ ಮದುವೆಯ ಹಿಂದಿನ ಹುಡುಗಾಟಿಕೆಯ ನಿಧರ್ಾರ ಮದುವೆಯಾದ ಎರಡೇ ವರ್ಷಗಳಲ್ಲಿ ಕರಗಿ ಹೋಗುತ್ತದೆ. ತಾಳ್ಮೆ, ಸಹನೆ ಮತ್ತು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದರಿಂದ ಸಂಸಾರ ಸಾಂಗವಾಗಿ ಸಾಗೀತು. ಆದರೆ ಈ ತಾಳ್ಮೆ, ಸಹನೆಗಳು ನಮ್ಮಲ್ಲಿ ಮೂಡಿಯಾವೇ ?.    
   ಡಾ.ಶ್ರೀಕಾಂತ್ ಸಿದ್ದಾಪುರ
ಪ್ರಜಾವಾಣಿ(10-9-2011) ಪ್ರಕಟಗೊಂಡಿದೆ.
 

ಸೋಮವಾರ, ಆಗಸ್ಟ್ 22, 2011

Osho & Education

ಓಶೋ ಅವರ  ಶೈಕ್ಷಣಿಕ ಚಿಂತನೆಗಳು
(ಕನಿಷ್ಠ ಎರಡು ಭಾಷೆಗಳ ಜ್ಞಾನ ಬೇಕು)
 ಶೈಕ್ಷಣಿಕವಾಗಿ ನಮ್ಮಲ್ಲಿ ಚಿಂತನೆಗಳಿಗೆ ಕೊರತೆ ಇಲ್ಲ. ಇದರೊಂದಿಗೆ ಸುಧಾರಣೆಯ ಹೆಸರಲ್ಲಿ ನೂರಾರು ಆಯೋಗಗಳು ವರದಿ ನೀಡುತ್ತಿವೆ. ಆದರೂ ನಿರೀಕ್ಷಿತ ಸುಧಾರಣೆಗಳಾಗಿಲ್ಲ. ಇನ್ನೂ ಚಿಂತನೆಗಳು ಹುಟ್ಟುತ್ತಲೇ ಇವೆ.  ಓಶೋರವರೂ ಈ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು. ಅವರದ್ದೇ ಆದ ಚಿಂತನೆಗಳನ್ನು ನೀಡಿದವರು.

 ಮಾಹಿತಿಯೇ ಪ್ರಧಾನವಾಗಬಾರದು :
 ಓಶೋ ಇತರರಂತೆ ಇಂದಿನ ಶಿಕ್ಷಣ ಪದ್ಧತಿಯ ಟೀಕಾಕಾರರಲ್ಲಿ ಒಬ್ಬರು.  ಅವರ ಪ್ರಕಾರ ಶಿಕ್ಷಣ ಎಂದರೆ ಕೇವಲ ಮಾಹಿತಿಗಳ ಸಂಗ್ರಹವಲ್ಲ. ಮಾಹಿತಿಗಳು ಅಗತ್ಯವಾದರೂ ಅವುಗಳೇ ಪ್ರಧಾನವಾಗಬಾರದು.  ಈ ಬಗ್ಗೆ ಒಂದು ಚಿಕ್ಕ ಕತೆಯನ್ನೂ ಓಶೋ ನೀಡುತ್ತಾರೆ. ಒಬ್ಬ ವ್ಯಕ್ತಿಯ ಕೈಯಲ್ಲಿ ಯಾವಾಗಲೂ ಒಂದು ಕೊಡೆ ಇರುತ್ತದೆ. ಮಳೆ ಇರಲಿ ಅಥವಾ ಬಿಸಿಲಿರಲಿ.  ಕೊಡೆ ಈ ವ್ಯಕ್ತಿಯ ಕೈಯಿಂದ ತಪ್ಪುವುದೇ ಇಲ್ಲ. ವಿಚಿತ್ರ ಎಂದರೆ ಆ ವ್ಯಕ್ತಿ  ಕೊಡೆಯನ್ನು ಎಂದಿಗೂ ಬಿಡಿಸಿಲ್ಲ ಮತ್ತು  ಬಿಡಿಸುವುದೂ ಇಲ್ಲ. ಕೊನೆಗೆ ನೋಡುವಾಗ ಆ ಕೊಡೆ ನಿರುಪಯುಕ್ತ.  ಅದರ ಅರಿವೆಯ ತುಂಬಾ  ಹಲವು ರಂಧ್ರಗಳು. ಕೇವಲ  ಮಾಹಿತಿ ಪ್ರಧಾನವಾದ ವಿದ್ಯಾಭ್ಯಾಸ ಇದರಿಂದ ಹೊರತಲ್ಲ.
 ಮಕ್ಕಳಲ್ಲೂ ಸ್ವಂತ ಯೋಚನೆಗಳಿವೆ :
 ಮಕ್ಕಳ ಯೋಚನೆ ಅಥವಾ ಚಿಂತನೆಗಳನ್ನು ಅರಳಿಸುವತ್ತ ನಮ್ಮ ಶಿಕ್ಷಣ ಸಾಗಬೇಕು ಎಂಬುದು ಓಶೋರವರ ನಿಲುವು.  ಮಕ್ಕಳ ಮೇಲೆ ನಮ್ಮ ಅಭಿಪ್ರಾಯಗಳನ್ನು ಹೇರುವುದರತ್ತ ಅವರ ಪ್ರಮುಖ ಆಕ್ಷೇಪ. ಮಕ್ಕಳಲ್ಲಿರುವ ಸರ್ಜನಶೀಲ ಗುಣಗಳನ್ನು ಗುರುತಿಸಬೇಕು. ಅವುಗಳನ್ನು ಅರಳಿಸಲು ಪ್ರೋತ್ಸಾಹಿಸಬೇಕು.  ಮಕ್ಕಳು ನಾವು ತಿಳಿದಂತೆ ದಡ್ಡರಲ್ಲ ಎನ್ನುವ ಓಶೋ ಹಲವು ಕತೆಗಳ ಮೂಲಕ ಮಕ್ಕಳ ಈ ಗುಣಗಳನ್ನು ವಿವರಿಸುತ್ತಾರೆ.  ಈ  ಕುರಿತಂತೆ ಓಶೋ ನೀಡುವ ಹಲವು ಒಂದು ನಿದರ್ಶನಗಳಲ್ಲಿ ಒಂದು  ಹೀಗಿದೆ.  ಒಬ್ಬ ತಂದೆ ನಿರಂತರ ತನ್ನ ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದನು. ತನ್ನ ಯೋಚನೆಗಳನ್ನು ಹೇರುವುದರಲ್ಲೇ ಆತನಿಗೆ ಆನಂದ. ತಾನು ಬಯಸಿದಂತೆ ತನ್ನ ಮಗ ಬೆಳೆಯಲೇಬೇಕೆಂಬ ಕನಸು.  ತಂದೆಯ ನಿರಂತರ ಬೋಧೆ ಮಗನಿಗೆ ಬೇಸರ ತರಿಸದೇ ಇರುತ್ತದೆಯೇ?.  ಒಮ್ಮೆ ಹೀಗಾಯಿತು. ಬೇರೆ ಮಕ್ಕಳಿಗೆ ಹೋಲಿಸಿ ತನ್ನ ಮಗನನ್ನು ತಂದೆ ಕೆಣಕುತ್ತಾನೆ. ಆ ಮಕ್ಕಳ ಮುಂದೆ ನೀನು ಶತದಂಡ ಎಂದು ತಂದೆಗೆ ಮಾತಿನ ಮೂಲಕ ಸಾಬೀತು ಪಡಿಸುವ ತವಕ. ಮಗನಿಗೂ  ತಂದೆಯ ಮತುಗಳನ್ನು ಕೇಳಿ ಕೇಳಿ ಸಾಕಾಗಿತ್ತು.  ಮಗನು ತಂದೆಗೆ ಅದೇ ದಾಟಿಯಲ್ಲಿ ಉತ್ತರಿಸುತ್ತಾನೆ.   ಅಪ್ಪಾ ! ಆತನ ತಂದೆ ಕೂಡ ಅತ್ಯಂತ ಪ್ರತಿಭಾವಂತನು. ನಿನ್ನಂತೆಯಲ್ಲ.
ಓಶೋರವರ ಪ್ರಮುಖ ಸಲಹೆಗಳು :
 ಓಶೋರವರ ಶೈಕ್ಷಣಿಕ ಚಿಂತನೆಗಳಲ್ಲಿ ಐದು ಅಂಶಗಳು ಪ್ರಮುಖವಾಗಿ ಅಡಗಿವೆ.  ಅದರಲ್ಲಿ ಪ್ರಮುಖವಾದುದು ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ವಿಕಾಸಕ್ಕೆ ಶಿಕ್ಷಣ ಪೂರಕವಾಗಿರಬೇಕು.  ಶಿಕ್ಷಣದಲ್ಲಿ ಚರಿತ್ರೆ,  ಸಂಸ್ಕೃತಿ, ಭೂಗೋಳ ಮೊದಲಾದ ಮಾಹಿತಿಗಳನ್ನು ಒದಗಿಸುವ ವಿಷಯಗಳ ಕಲಿಕೆಗಳನ್ನು ಕೈಬಿಡಬಾರದು.  ಇದೇ ಹಂತದಲ್ಲಿ ಭಾಷಾ ಕಲಿಕೆಯತ್ತಲೂ ಗಮನ ಹರಿಸಬೇಕು. ಓಶೋರವರು ತಿಳಿಸುವಂತೆ ಮಕ್ಕಳಿಗೆ ಕನಿಷ್ಠ ಎರಡು ಭಾಷೆಗಳನ್ನಾದರೂ ಕಲಿಸಬೇಕು. ಒಂದು ಮಾತೃಭಾಷೆ, ಇನ್ನೊಂದು ಅಂತಾರಾಷ್ಟ್ರೀಯ ಭಾಷೆ ಇಂಗ್ಲೀಷ್. ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮಾತೃಭಾಷೆಯಷ್ಟು ಪರಿಣಾಮಕಾರಿ ಭಾಷೆ ಬೇರೆ ಇಲ್ಲ.  ಹಿರಿಯ ವಿದ್ವಾಂಸರ ಹೇಳಿಕೆಯೊಂದನ್ನು ಓಶೋ ಈ ಸಂದರ್ಭದಲ್ಲಿ ಉಲ್ಲೇಖಿಸುತ್ತಾರೆ. ನೀನು ಪರಕೀಯ ಭಾಷೆಯಲ್ಲಿ ಎಲ್ಲವನ್ನೂ ತಿಳಿಯಬಹುದು. ಆದರೆ ಜಗಳವಾಡಲು ಅಥವಾ ಪ್ರೇಮಿಸಲು ಮಾತೃಭಾಷೆ ಬಿಟ್ಟರೆ ಬೇರೊಂದಿಲ್ಲ.ಅಂದರೆ ಭಾವನೆಗಳ ಪರಿಣಾಮಕಾರಿ ಸಂವಹನ ಕೇವಲ ಮಾತೃಭಾಷೆಯಲ್ಲಿ ಮಾತ್ರಾ ಸಾಧ್ಯ.
 ಶಿಕ್ಷಣದಲ್ಲಿ ವೈಜ್ಞಾನಿಕ ವಿಚಾರಗಳ ಕಲಿಕೆ ಇನ್ನೊಂದು ಪ್ರಮುಖ ಅಂಶ. ಇದರೊಂದಿಗೆ ಇಂದಿನ ಶಿಕ್ಷಣದಲ್ಲಿ ಮಹತ್ತ್ವ ಕಳೆದುಕೊಳ್ಳುತ್ತಿರುವ ಜೀವನ ಕಲೆಗೆ ಆದ್ಯತೆ. ಓಶೋರವರ ಪ್ರಕಾರ ಕಲಿಕೆಯ ಈ ಹಂತದಲ್ಲಿ ಮಕ್ಕಳನ್ನು ಗಂಭೀರವದನರಾಗುವಂತೆ ನೋಡಿಕೊಳ್ಳಬಾರದು. ಹಾಸ್ಯದ ಭಾಷೆಗೆ ಶಿಕ್ಷಣದಲ್ಲಿ ಒತ್ತು ನೀಡಬೇಕು.  ಓದಿನಲ್ಲಿ ಗಂಭೀರರಾಗಿ ಅಥವಾ ದು:ಖಿಗಳಾಗಿ  ದಿನ ಕಳೆದಲ್ಲಿ ಬದುಕು ವ್ಯರ್ಥವಾಗುತ್ತದೆ.  ನಮ್ಮ ನರನಾಡಿಗಳ ತುಂಬಾ  ಇವುಗಳೇ ತುಂಬಿಕೊಳ್ಳುತ್ತವೆ. ಹಾಸ್ಯ ಅಥವಾ ನಗುವಿನ ಭಾಷೆಯೇ ಮರೆತು ಹೋಗುವ ಅಪಾಯವಿದೆ. ಹಾಗಾಗಿ ಹಾಸ್ಯ ಅಥವಾ ನಗುವನ್ನು ಅರಳಿಸುವ ಅಂಶ ಶಿಕ್ಷಣದಲ್ಲಿ ಸೇರ್ಪಡೆಗೊಳ್ಳಬೇಕು. ಗಂಭೀರತೆ ಅಥವಾ ದು:ಖ ದೂರವಾಗಬೇಕು.
 ಶಿಕ್ಷಣದಲ್ಲಿ ಅಳವಿಸಬಹುದಾದ ಮತ್ತೊಂದು ಅಂಶ ಕಲೆ ಮತ್ತು ಸೃಜನಶೀಲತೆ. ಚಿತ್ರಕಲೆ, ಸಂಗೀತ, ಕುಂಬಾರಿಕೆ , ಕಲ್ಲುಕಟ್ಟಣೆ ಹೀಗೆ ಹಲವು ವಿಚಾರಗಳನ್ನು ಇಲ್ಲಿ ಓಶೋರವರು ನೀಡುತ್ತಾರೆ.  ಸೃಜನಾತ್ಮಕವಾದ ಈ ಅಂಶಗಳನ್ನು ಕಲಿಕೆಯಲ್ಲಿ ಆಯ್ದುಕೊಳ್ಳಲು ಮಕ್ಕಳಿಗೆ ಸ್ವಾತಂತ್ಯ್ರವಿರಬೇಕು.  ಹೆಚ್ಚಿನ ಕಲೆಗಳನ್ನು ಆಯ್ದುಕೊಳ್ಳುವ ಅವಕಾಶಗಳನ್ನೂ ಇಲ್ಲಿ ಕಲ್ಪಿಸಬಹುದು.  ಓಶೋರವರ ಪ್ರಕಾರ ಮನುಷ್ಯನ ಅಸ್ತಿತ್ವವು ಅಡಗಿರುವುದು ಈ ಸೃಜನಾತ್ಮಕ ಕಲೆಗಳ ಮೂಲಕ. ನೂತನ ಸೃಷ್ಟಿಗೆ ಇದು ಪೂರಕವಾಗುತ್ತದೆ.
 ಓಶೋರವರು ತಿಳಿಸುವ ಇನ್ನೊಂದು ಅಂಶ ಅಧ್ಯಾತ್ಮ ವಿಚಾರಕ್ಕೆ ಸಂಬಂಧಿಸಿದುದು. ಮಕ್ಕಳಲ್ಲಿ ಧೈರ್ಯವನ್ನು ಬೆಳೆಸುವಲ್ಲಿ  ಇದು ಸಹಕಾರಿಯಾಗಬೇಕು. ಭಯವು ಮನುಷ್ಯನ ಎಲ್ಲಾ ವ್ಯಕ್ತಿತ್ವವನ್ನೂ ಮಸಕುಗೊಳಿಸುತ್ತದೆ. ಮಕ್ಕಳಲ್ಲಿ ಧೈರ್ಯ, ಸಾಹಸ ತುಂಬುವ ಕೆಲಸ ಶಿಕ್ಷಣದಿಂದ ಆಗಬೇಕು. ಅದಕ್ಕಾಗಿ ಈ ನಿಟ್ಟಿನಲ್ಲಿ ಸಾಧಿಸಿ ಜೀವನ ಸಾರ್ಥಕ ಪಡಿಸಿಕೊಂಡ ಮಹಾತ್ಮರನ್ನು ಮಕ್ಕಳಿಗೆ ಪರಿಚಯಿಸಬೇಕು. ಅವರ ಧೈರ್ಯ, ಸಾಧನೆಗಳ ಹಾದಿಯತ್ತ ಮಕ್ಕಳ ಗಮನ ಸೆಳೆಯಬೇಕು. ಝೆನ್, ತಾವೋ ಮೊದಲಾದವರ ವಿಚಾರಧಾರೆಗಳನ್ನು ಮಕ್ಕಳಿಗೆ ಪರಿಚಯಿಸುವ ಕೆಲಸವಾಗಬೇಕು ಎನ್ನುತ್ತಾರೆ.   ಧ್ಯಾನ , ಯೋಗ, ಪ್ರಾಣಾಯಾಮ ಮತ್ತು ಇವುಗಳೊಂದಿಗೆ ಆತ್ಮರಕ್ಷಣಾ ವಿದ್ಯೆಗಳನ್ನು ಮಕ್ಕಳಿಗೆ ಕಲಿಸಬೇಕು.
 ಪ್ರಸ್ತುತ ಶಿಕ್ಷಣ ಪದ್ಧತಿಯ ಬಗ್ಗೆ ಅತ್ಯಂತ ಕಳವಳ ವ್ಯಕ್ತಪಡಿಸುವ ಓಶೋ ಅಮೆರಿಕಾದಲ್ಲಿ ಇಂದು ಮನ:ಶಾಸ್ತ್ರಜ್ಞರಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ. ಉನ್ನತ ಶಿಕ್ಷಣ ಹೊಂದಿದವರು ಹೆಚ್ಚಿನ ಸಂಖ್ಯೆಯಲ್ಲಿ ಮಾನಸಿಕವಾಗಿ ಅಸ್ವಸ್ಥರಾಗುತ್ತಿದ್ದಾರೆ. ಭಾರತಕ್ಕೂ ಈ ರೋಗ ತಗಲಬಹುದು. ಭ್ರಷ್ಟಾಚಾರ, ಅನೈತಿಕ ಚಟುವಟಿಕೆ, ವಿವಾಹ ವಿಚ್ಛೇದನ ಮೊದಲಾದ ಪಿಡುಗುಗಳು ಶಿಕ್ಷಿತ ಸಮುದಾಯದಲ್ಲಿ ಅಧಿಕವಾಗುತ್ತಿದೆ. ಬೌದ್ಧಿಕ ಬೆಳವಣಿಗೆಗಳೊಂದಿಗೆ ಭಾವನೆ ಮತ್ತು ಮೌಲ್ಯಗಳನ್ನು ಬೆಳೆಸುವ ಕೆಲಸಗಳು ಮಹತ್ತ್ವ ಕಳೆದು ಕೊಳ್ಳುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ. ಈ ಎಲ್ಲಾ ಆಶಯಗಳನ್ನೂ ಪೂರೈಸುವ ಶಿಕ್ಷಣ ಪದ್ಧತಿ ಬಂದೀತೇ?.        
   ಡಾ.ಶ್ರೀಕಾಂತ್ ಸಿದ್ದಾಪುರ
 

ಸೋಮವಾರ, ಆಗಸ್ಟ್ 8, 2011

ಹಳಗನ್ನಡ ಕಾವ್ಯ ಕಲಿಕೆ ಕಬ್ಬಿಣದ ಕಡಲೆಯೇ ?
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದೆ.  ಕನ್ನಡಕ್ಕೆ ಈ ಸ್ಥಾನಮಾನ ದೊರಕಿಸುವಲ್ಲಿ ಶ್ರಮಿಸಿದ ಸಮಸ್ತ ಕನ್ನಡಾಭಿಮಾನಿಗಳನ್ನು ಇಲ್ಲಿ ಸ್ಮರಿಸಲೇಬೇಕು. ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ ಕಾರಣ ಹಳಗನ್ನಡಕ್ಕೆ  ಇಂದು ವಿಶೇಷ ಪ್ರಾಶಸ್ತ್ಯ ಬಂದಿದೆ. ಅದರ ಅಧ್ಯಯನದತ್ತ ಒಲವು ಹೆಚ್ಚುತ್ತಿದೆ. ಆದರೆ ಹಲವರ ಪಾಲಿಗೆ ಹಳಗನ್ನಡ ಇಂದು ಕಬ್ಬಿಣದ ಕಡಲೆ. ಕೆಲವು ಅಧ್ಯಾಪಕರಿಗೂ ಅದರತ್ತ ವಕ್ರದೃಷ್ಟಿ. ವಿದ್ಯಾಥರ್ಿಗಳ ಪಾಲಿಗಂತೂ ಇದು ನೀರಿಳಿಯದ ಗಂಟಲೊಳ್ ಕಡುಂಬಂ ತುರುಂಕುವ ಪ್ರಯತ್ನ.  ಹಳಗನ್ನಡವನ್ನು ಸಮರ್ಥವಾಗಿ ವಿಶ್ಲೇಷಿಸಬಲ್ಲ ವಿದ್ವಾಂಸರ ಮತ್ತು ಪಂಡಿತರ ಕೊರತೆ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಅಂದಿಗಿಂತ ಇಂದು ಹೆಚ್ಚು ಬಾಧಿಸುತ್ತಿದೆ. ಅದರ ಕಲಿಕೆಯತ್ತ ಆಸಕ್ತಿಯೂ ಕುಂಠಿತವಾಗುತ್ತಿದೆ.   ಹೀಗಾಗಿ ಕನ್ನಡ ಕಲಿಕೆಯತ್ತ ಚಿಂತಿಸುವ ಕಾಲ ಈಗ ಸನ್ನಿಹಿತವಾಗಿದೆ.
ಪಠ್ಯದಲ್ಲಿ ಹಳಗನ್ನಡ ಕಾವ್ಯಗಳು :
ಹಳಗನ್ನಡದ ಕಾವ್ಯಭಾಗಗಳು ಇದೀಗ ಪಠ್ಯದಿಂದ ನಿಧಾನಕ್ಕೆ ಮರೆಯಾಗುವ ಹಂತದಲ್ಲಿದೆ. ಇದಕ್ಕೆ ಒಂದು ಕಾರಣ ವಿದ್ಯಾಥರ್ಿಗಳಿಗೆ ಸುಲಭವಾಗುವ ಪಠ್ಯಗಳ ನಿರೂಪಣೆಗೆ ನೀಡುತ್ತಿರುವ ಒತ್ತು. ಇದರೊಂದಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಇಂಗ್ಲೀಷ್ ಭಾಷಾ ವ್ಯಾಮೋಹದ ಪ್ರವಾಹದಲ್ಲಿ ಕನ್ನಡ ಕಲಿಕೆಯನ್ನು ಹೇಗಾದರೂ ಉಳಿಸಲೇಬೇಕಾದ ಅನಿವಾರ್ಯತೆ. ಇಂದು ವಿದ್ಯಾಥರ್ಿಗಳು ಕಠಿಣವಾದ ಕನ್ನಡವನ್ನು ಆಯ್ಕೆ ಮಾಡಿಕೊಂಡು ಓದುವಲ್ಲಿ ಉತ್ಸುಕತೆ ತೋರಿಸರು. ಒಂದೊಮ್ಮೆ ಕಲಿತರೂ ಅದಕ್ಕೆ ಸೂಕ್ತ ಉದ್ಯೋಗ ಲಭ್ಯತೆಯ ಆಸೆ ಕ್ಷೀಣ.  ಅಧ್ಯಾಪಕರಿಗೂ ಹಳಗನ್ನಡ ಕಲಿಸುವಿಕೆ ಒಂದು ಸವಾಲು. ಇಲ್ಲಿರುವ ಹೆಚ್ಚಿನ ಶಬ್ದಗಳು ಸಂಸ್ಕೃತ ಭಾಷೆಯಿಂದ ಎರವಲು ಪಡೆದವು.  ಇದರಿಂದಾಗಿ ಹಳಗನ್ನಡ ಕಾವ್ಯಗಳ ಪಾಠದ ತಯಾರಿಗೆ ಅಧ್ಯಾಪಕರಿಗೆ ಹೆಚ್ಚಿನ ಸಮಯ ಅನಿವಾರ್ಯ.  ಇವುಗಳನ್ನು ಅರ್ಥಪೂರ್ಣವಾಗಿ ಕಲಿಸಬೇಕಾದರೆ ಕೇವಲ ಭಾಷಾಜ್ಞಾನವೊಂದೇ ಸಾಲದು. ಇದರೊಂದಿಗೆ ವ್ಯಾಕರಣ, ಅಲಂಕಾರ ಮತ್ತು ಛಂದಸ್ಸುಗಳ ಜ್ಞಾನವೂ ಸ್ವಲ್ಪ ಅಗತ್ಯ.  ಸಂಸ್ಕೃತ ಭಾಷೆಯಲ್ಲಿ ಕನಿಷ್ಠ ಪರಿಶ್ರಮವಿಲ್ಲದಿದ್ದರೂ ಹಳಗನ್ನಡ ಕಾವ್ಯಗಳನ್ನು ಅರ್ಥಮಾಡಿಕೊಳ್ಳಲು ಕಷ್ಟಪಡಬೇಕಾಗುತ್ತದೆ.  ಹಳಗನ್ನಡ ಕಾವ್ಯಗಳ ಬೋಧನೆಗೆ ತಾಳ್ಮೆ ಅತ್ಯಗತ್ಯ. ನಿಗದಿತ ಪಠ್ಯವನ್ನು ಅವಸರವಸರವಾಗಿ ಮುಗಿಸುವ ತುರಾತುರಿಗೆ ಹಳಗನ್ನಡ ಕಾವ್ಯಗಳು ಒಗ್ಗಿಕೊಳ್ಳವು. ಆದರೆ ಈಗಿನದು ಸ್ಪಧರ್ಾತ್ಮಕ ಯುಗ.  ಕಲಿಕೆಗೂ ಇದು ಅನ್ವಯಿಸುತ್ತದೆ. ಬೋಧನಾಕ್ರಮದಲ್ಲಿ ಆಮೆ ನಡಿಗೆಗೆ ಅವಕಾಶವಿಲ್ಲ. ಸೆಮಿಸ್ಟರ್ ಪದ್ಧತಿಯಲ್ಲಿ ಶೀಘ್ರವಾಗಿ ನಿಗದಿತ ಪಠ್ಯವನ್ನು ಮುಗಿಸಲೇಬೇಕು. ಕನ್ನಡ ಕಲಿಕೆಗೇ ಒಲವು ಕುಂಠಿತವಾಗುತ್ತಿರುವ ಇಂದಿನ ದಿನಗಳಲ್ಲಿ ಇಷ್ಟು ಕಷ್ಟಪಟ್ಟು ಕನ್ನಡ ಕಲಿಯುವ ಕಷ್ಟವನ್ನು ಯಾರು ತಾನೇ ಆಹ್ವಾನಿಸಿ ಕೊಳ್ಳುತ್ತಾರೆ?.   ವಿಷಯದ ಗಂಭೀರ ಅಧ್ಯಯನಕ್ಕಿಂತ ಅಂಕ ಗಳಿಕೆಗೆ ಇಂದು ಪ್ರಾಧಾನ್ಯ.  ಅಧ್ಯಯನಕ್ಕಿದ್ದ ಹಳಗನ್ನಡದ ಕಾವ್ಯಗಳ ಹೊಸಗನ್ನಡಾನುವಾದ ಓದಿಕೊಂಡರೆ  ಉತ್ತಮ ಅಂಕ ಪಡೆಯಬಹುದೆಂಬ ಭಾವನೆ ವಿದ್ಯಾಥರ್ಿಗಳಲ್ಲಿ ಬೆಳೆಯುತ್ತಿದೆ.  ಅಧ್ಯಾಪಕರ ಹಳಗನ್ನಡ ಕಾವ್ಯ ಬೋಧನೆಯ ಎಲ್ಲಾ ಕಸರತ್ತುಗಳನ್ನೂ ಬದಿಗಿಕ್ಕಿ ಕೇವಲ ಅನುವಾದಕ್ಕಾಗಿ ವಿನಂತಿಸುವುದರಲ್ಲಿಯೇ ವಿದ್ಯಾಥರ್ಿಗಳ ಶ್ರಮ.  ಕಾವ್ಯಗಳ ಒಳಹೊಕ್ಕು ರಸವನ್ನು ಆಸ್ವಾದಿಸುವ ಆಸಕ್ತಿ ಇಂದಿನ ಹಳಗನ್ನಡ ಕಾವ್ಯಗಳ ಕಲಿಕೆಯಲ್ಲಿ ಕಡಿಮೆಯಾಗುತ್ತಿದೆ. 
ಈ ಸವಾಲನ್ನು ಎದುರಿಸಬಹುದೇ ? :
1. ಕನ್ನಡ ಕಲಿಕಾ ವಾತಾವರಣ ನಿಮರ್ಾಣ :
ಈಗ ಎದುರಾಗಿರುವ ಸವಾಲನ್ನು ನಿಭಾಯಿಸಲು ಮೊದಲು ಕನ್ನಡ ಕಲಿಕೆಯತ್ತ ಆಸಕ್ತಿಯನ್ನು ಸರಕಾರ ಬೆಳೆಸಬೇಕಾಗಿದೆ. ಕನ್ನಡ ಭಾಷಾ ಬೋಧನೆಯ ವಿಚಾರದಲ್ಲಿ ಗೊಂದಲಗಳೇ ಮುಂದುವರಿಯುತ್ತಿರುವಾಗ ಕನ್ನಡದ ಬೆಳವಣಿಗೆ ಹೇಗೆ ಸಾಧ್ಯ?.  ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುವುದರೊಂದಿಗೆ ಕನ್ನಡ ಕಲಿಕೆಯಿಂದಲೂ ಉದ್ಯೋಗ ಮತ್ತು ಗಳಿಕೆ ಸಾಧ್ಯ ಎಂಬ ವಾತಾವರಣವನ್ನು ನಿಮರ್ಿಸಬೇಕಾಗಿದೆ.
2. ಶಾಸ್ತ್ರ ವಿಚಾರಗಳತ್ತ ಧನಾತ್ಮಕ ಒಲವು :
ಹಳಗನ್ನಡ ಅಧ್ಯಯನಕ್ಕೆ ಪೂರಕವಾದ ಛಂದಸ್ಸು, ಅಲಂಕಾರ, ವ್ಯಾಕರಣ, ಸಂಸ್ಕೃತ ಭಾಷೆ ಮತ್ತು ಗಮಕ ಕಲೆಗಳ ಪ್ರಾಥಮಿಕ ಜ್ಞಾನವನ್ನು ಕನ್ನಡ ಬೋಧಿಸುವ ಅಧ್ಯಾಪಕರಿಗೆ ನೀಡಬೇಕು. ಅದರಲ್ಲಿ ಪಾಂಡಿತ್ಯ ಸಾಧಿಸಬೇಕೆಂಬ ಆಗ್ರಹವಲ್ಲ. ಹಳಗನ್ನಡ ಕಾವ್ಯಗಳನ್ನು  ಆಕರ್ಷಕವಾಗಿ, ಅರ್ಥಪೂರ್ಣವಾಗಿ ಕಲಿಸಲು ಪೂರಕವಾಗುವಂತೆ ಇವುಗಳ ಜ್ಞಾನ ಅತ್ಯಗತ್ಯ.
3. ಗಮಕ ಕಲೆ :
ಕನಿಷ್ಠ ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ಕಲಿಯುತ್ತಿರುವ  ವಿದ್ಯಾಥರ್ಿಗಳಿಗಾದರೂ ಗಮಕ ಕಲೆಯ ಪರಿಚಯ ಮಾಡಿಸಬೇಕಾಗಿದೆ. ಕನ್ನಡ ಬೋಧಿಸುವ ಅಧ್ಯಾಪಕರಿಗೆ ಈ ಕುರಿತಂತೆ ವಿಶೇಷ ತರಬೇತಿ ನೀಡಬೇಕು. ಕನರ್ಾಟಕದಲ್ಲಿರುವ ಗಮಕ ಕಲಾ ಪರಿಷತ್ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು.  ಆಶ್ಚರ್ಯ ಎಂದರೆ ಕನರ್ಾಟಕದಲ್ಲಿ ಹೀಗೊಂದು ಪರಿಷತ್ತು ಅಸ್ತಿತ್ವದಲ್ಲಿ ಇದೆ ಎಂಬುದೇ ಅನೇಕರಿಗೆ ತಿಳಿದಿಲ್ಲ.  ಗಮಕ ಪರಿಷತ್  ಕನರ್ಾಟಕದ ಕನ್ನಡ ಕಲಿಸುವ ಶಾಲಾ, ಕಾಲೇಜುಗಳ ಅಧ್ಯಾಪಕರೊಂದಿಗೆ ಸಂಪರ್ಕದಲ್ಲಿರಬೇಕು. ಅವರಿಗೆ ಪರಿಷತ್ತಿನ ಕಾರ್ಯಕಲಾಪಗಳ ಬಗ್ಗೆ ಆಗಾಗ ಮಾಹಿತಿ ನೀಡುತ್ತಿರಬೇಕು.  ಅದು ನಡೆಸುತ್ತಿರುವ ಪರೀಕ್ಷೆಗಳ ಬಗ್ಗೆ ತಿಳಿಸಿ, ಅದರಲ್ಲಿ ಹೆಚ್ಚಿನವರು ಹಾಜರಾಗುವಂತೆ ಉತ್ತೇಜಿಸಬೇಕು.  ಇದರೊಂದಿಗೆ ಆಗಾಗ ಕಮ್ಮಟಗಳನ್ನು ನಡೆಸುವುದರ ಮೂಲಕ ಗಮಕ ಕಲೆಯನ್ನು ಮತ್ತು ಹಳಗನ್ನಡವನ್ನು ಶಿಕ್ಷಣದಲ್ಲಿ ಉಳಿಸುವ ಪ್ರಯತ್ನ ಮಾಡಬೇಕು.
4. ಕನ್ನಡಪರವಾದ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು :
ಕನರ್ಾಟಕದಲ್ಲಿ  ಕನ್ನಡಪರವಾಗಿ ಕೆಲಸ ಮಾಡುವ ಸರಕಾರದ ಇಲಾಖೆಗಳಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರಕಾರದ ಅಧೀನದಲ್ಲಿರುವ ಅಂತಹ  ಒಂದು ಇಲಾಖೆ. ಕನ್ನಡ ಸಾಹಿತ್ಯ ಪರಿಷತ್ತೂ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಆದರೆ ಸಾಹಿತ್ಯ ಪರಿಷತ್ತು ಕೇವಲ ಸಮ್ಮೇಳನಕ್ಕಷ್ಟೇ ಸೀಮಿತವಾಗಬಾರದು. ಕನ್ನಡಾಭಿವೃದ್ಧಿ ಪ್ರಾಧಿಕಾರವು ಕನ್ನಡಾಭಿವೃದ್ಧಿಪರ ನಿರಂತರ ಚಿಂತಿಸುತ್ತಿದೆ.  ಆದರೂ ಕನ್ನಡ ಬೋಧಿಸುವ ಶಾಲಾ, ಕಾಲೇಜುಗಳೊಂದಿಗೆ ಇವುಗಳ ಸಂಬಂಧ ಇನ್ನಷ್ಟು ಹೆಚ್ಚಬೇಕಾಗಿದೆ.  ಈಗಾಗಲೇ ಹಳಗನ್ನಡ ಮತ್ತು ನಡುಗನ್ನಡದ ಕವಿಗಳ ಕಾವ್ಯಗಳ ಸಿ.ಡಿ. ಗಳು ಬಿಡುಗಡೆಯಾದ ವಿಚಾರ ಪತ್ರಿಕೆಗಳಲ್ಲಿ ಬಂದಿತ್ತು. ನಗರ ಮತ್ತು ಗ್ರಾಮೀಣ ಪ್ರದೇಶದ ಜನಪ್ರಿಯ ಕ್ಯಾಸೆಟ್ ಅಂಗಡಿಗಳಲ್ಲಿ ಇವುಗಳು ಅಲಭ್ಯ. ಇದಕ್ಕೆ  ಉಳಿದ ಕ್ಯಾಸೆಟ್ಗಳಂತೆ ನಿರೀಕ್ಷಿತ ಬೇಡಿಕೆಯೂ ಇಲ್ಲ.   ಆದರೂ ಹಳಗನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಇಂತಹ ಅಮೂಲ್ಯ ಸಿ.ಡಿ. ಮತ್ತು ಉತ್ತಮ ಪುಸ್ತಕಗಳನ್ನು ಕನ್ನಡ ಬೋಧಿಸುವ ಹಳ್ಳಿಗಳ ಶಾಲಾ, ಕಾಲೇಜುಗಳಿಗೂ, ಸಾಹಿತ್ಯಾಸಕ್ತರಿಗೂ  ಸುಲಭವಾಗಿ ಲಭಿಸುವಂತೆ ಈ ಸಂಸ್ಥೆಗಳು ಅಥವಾ ಇಲಾಖೆಗಳು ನೋಡಿಕೊಳ್ಳಬೇಕು.
 ಈ ಎಲ್ಲಾ ತೊಡರುಗಳ ನಡುವೆಯೂ ಹಳಗನ್ನಡದ ಸಂಶೋಧನೆ ಮತ್ತು ಅಧ್ಯಯನದತ್ತ ಸಂಕಿರಣಗಳು ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಶಾಲೆ ಮತ್ತು ಕಾಲೇಜುಗಳಲ್ಲಿನ ಕನ್ನಡ ಕಲಿಕೆಗೆ ಮೇಲಿನಂತೆ ಬದಲಾವಣೆ ತರುವುದರ ಮೂಲಕ ಈ ಮತ್ತೊಮ್ಮೆ ಆಸಕ್ತಿಯನ್ನು ಕುದುರಿಸಬಹುದೇ ?. ಹಳಗನ್ನಡವನ್ನು ಉಳಿಸಬಹುದೇ ?.
      ಡಾ.ಶ್ರೀಕಾಂತ್ ಸಿದ್ದಾಪುರ
 

 

ಮಂಗಳವಾರ, ಜುಲೈ 5, 2011

ಭಾಗವತ ಕಾಳಿಂಗ ನಾವುಡರ ನೆನಪುಗಳು

ನಾವುಡರ ನೆನಪುಗಳು

ಇತ್ತೀಚೆಗೆ ಕಾಳಿಂಗ ನಾವುಡ ಪ್ರಶಸ್ತಿಯನ್ನು ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಪ್ರದಾನ ಮಾಡಲಾಯಿತು. ನಾವುಡರು ಜನಪ್ರಿಯರಾಗುತ್ತಿದ್ದ ಕಾಲ. ಧಾರೇಶ್ವರರು ದಿ. ನಾರಣಪ್ಪ ಉಪ್ಪೂರರೊಂದಿಗೆ ತಿರುಗಾಟ ಮಾಡುತ್ತಿದ್ದರು. ಉಪ್ಪೂರರ ಗರಡಿಯಲ್ಲಿ ಪಳಗುತ್ತಿದ್ದರು. ಧಾರೇಶ್ವರರು ಆಗಲೇ ಈ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ್ದರು.  ನಾವುಡರ ನಂತರ ಈ ಕ್ಷೇತ್ರವನ್ನು ಧಾರೇಶ್ವರರು ತುಂಬಿಸಿದರು ಎಂದರೆ ಅತಿಶಯೋಕ್ತಿಯಾಗದು. ಧಾರೇಶ್ವರರಿಗೆ ನಾವುಡರ ಬಗ್ಗೆ ಅಪಾರ ಗೌರವ. ಇಂದಿಗೂ ತನ್ನ ಮೇಲಾದ ನಾವುಡರ ಪ್ರಭಾವಗಳನ್ನು ನೆನಪಿಸಿಕೊಳ್ಳಲು ಮರೆಯುವುದಿಲ್ಲ.
ಕಾಳಿಂಗ ನಾವುಡರ ಬಗ್ಗೆ ಕೆಲವು ತಿಂಗಳ ಹಿಂದೆ ಮಹಾಲಿಂಗ ಭಟ್ಟರು ಸುದೀರ್ಘ ಲೇಖನವೊಂದನ್ನು  ಪ್ರಜಾವಾಣಿಯಲ್ಲಿ ಬರೆದರು. ನಾವುಡರ ಅಭಿಮಾನಿಗಳಿಗೆ ಇದು ಅತ್ಯಂತ ಸಂತಸ ತಂದು ಕೊಟ್ಟಿತು.  ಈ ಲೇಖನವನ್ನು ಓದುತ್ತಿದ್ದಂತೆ ನಾವುಡರ ಇನ್ನಿತರ ಗುಣಗಳು ನನ್ನ ನೆನಪಿಗೆ ಬಂದವು. ಮಾಹಾಲಿಂಗ ಭಟ್ಟರು ಹೇಳದ ಈ ಅಂಶಗಳನ್ನು ಅವರ ಅಭಿಮಾನಿಗಳೊಂದಿಗೆ ಏಕೆ ಹಂಚಿಕೊಳ್ಳಬಾರದೆಂದು ಈ ಲೇಖನಕ್ಕೆ ಕೈ ಹಾಕಿದೆ.
ನನ್ನ ಗಣಗಳು ಎಲ್ಲಾ ಕಡೆ ಇದ್ದಾರೆ :
 ನಾವುಡರು ಜನಪ್ರಿಯರಾಗಿದ್ದ ಕಾಲ.ಎಲ್ಲೆಡೆ ಅವರ ಅಭಿಮಾನಿಗಳು ಅವರಿಗೆ ಸನ್ಮಾನ ಏರ್ಪಡಿಸುತ್ತಿದ್ದರು. ಸಾಮಾನ್ಯವಾಗಿ ಸಿದ್ದಾಪುರದ ಆಸುಪಾಸು ಪ್ರದೇಶಗಳಲ್ಲಿ ಅವರಿಗೆ ಸನ್ಮಾನಗಳಾದಾಗ ಅವರ ಬಗ್ಗೆ ಮಾತನಾಡುವ ಅವಕಾಶ ನನಗೇ ಲಭಿಸುತ್ತಿತ್ತು. ನಾವುಡರೇ ನನ್ನ ಹೆಸರನ್ನು ಸೂಚಿಸುತ್ತಿದ್ದರು ಎಂದು ಆಮೇಲೆ ತಿಳಿಯಿತು. ಒಮ್ಮೆ ಶಂಕರನಾರಾಯಣದಲ್ಲಿ ಅವರಿಗೆ ಸನ್ಮಾನ. ಅಂದಿನ ಶಾಸಕರಾದ ದಿ. ಜಿ.ಎಸ್.ಆಚಾರ್ಯರು ಅಂದಿನ ಸಭೆಯಲ್ಲಿ ನಾವುಡರನ್ನು ಸನ್ಮಾನಿಸುವವರು. ನಾವುಡರು ಶಂಕರನಾರಾಯಣದ ಶಿವರಾಮ ಶೆಟ್ಟರ(ಭಾಗವತ ಸುರೇಶ ಶೆಟ್ಟರ ತಂದೆ) ಮನೆಯಲ್ಲಿ ಅಂದು ವಿಶ್ರಾಂತಿ ಪಡೆಯುತ್ತಿದ್ದರು. ನಾವುಡರನ್ನು ಆಟ ನಡೆಯುವ ಸ್ಥಳಕ್ಕೆ ಕರೆದುಕೊಂಡು  ಬರುವ ಹೊಣೆ ನನ್ನ ಮೇಲೆ ಬಿತ್ತು. ಆಗ ನಾವುಡರಲ್ಲಿ ಒಂದು ಬೈಕ್ ಇತ್ತು. ರಾತ್ರಿ ಸುಮಾರು 9 ಗಂಟೆಯ ಸಮಯ. ಬೈಕಿನ ಹಿಂದೆ ಕುಳಿತುಕೊಳ್ಳುವಂತೆ ನಾವುಡರು ಸೂಚಿಸಿದರು. ಬೈಕ್ ಸ್ವಲ್ಪ ಎತ್ತರದ ಗುಡ್ಡ ಪ್ರದೇಶವನ್ನು ಹತ್ತುತ್ತಿತ್ತು. ಅಕಸ್ಮಾತ್ತಾಗಿ ಬೈಕ್ ಬಿದ್ದಿತು. ನಾನು ಕೆಳಗಡೆ ಉರುಳಿದೆ. ಪೆಟ್ಟೇನೂ ಆಗಲಿಲ್ಲ. ನಾವುಡರೇ ನನ್ನನ್ನು ಸಮಧಾನ ಪಡಿಸಿ ಮತ್ತೆ ಕೂರುವಂತೆ ವಿನಂತಿಸಿದರು. ಮುಂದೆ ಸರಾಗವಾಗಿ ಬೈಕ್ ಪ್ರಯಾಣ. ಹೀಗೆ ಹೋಗುವಾಗ ನಾವುಡರನ್ನು ಕೇಳಿದೆ. ನಾವುಡರೇ, ನಿಮಗೆ ಯಾರಾದರೂ ಶಿಷ್ಯರಿದ್ದಾರೆಯೇ?. ಈ ತನಕ ನನಗೆ ಯಾವ ಶಿಷ್ಯರೂ ಇಲ್ಲ ಎಂದರು. ಅನಂತರ ಅವರೇ ನಗುತ್ತಾ ಹೇಳಿದರು. ಆದರೆ ನನಗೆ ಗಣಗಳಿದ್ದಾರೆ. ತಾಳ ಹಿಡಿದ ತತ್ಕ್ಷಣ ನಾನು ಅವರ ಮೈಮೇಲೆ ಬರುತ್ತೇನೆ.   ಇದನ್ನು ಇಂದಿನ ಸನ್ಮಾನ ಸಮಾರಂಭದಲ್ಲಿ ಹೇಳಬಹುದೇ ?.  ಎಂದು ಕೇಳಿದೆ. ಖಂಡಿತ ಹೇಳು. ಏನೂ ಆಕ್ಷೇಪವಿಲ್ಲ ಎಂದರು. ಅಂದಿನ ಸಭೆಯಲ್ಲಿ ನಾವುಡರ ಹಾಸ್ಯ ಲೇಪನದ ಈ ಮಾತು ಬಹಳಷ್ಟು ಜನರಲ್ಲಿ ನಗುವನ್ನು ಉಕ್ಕಿಸಿತು.
ಬೈಕಿನಲ್ಲಿ ಕಾಳಿಂಗ :ಒಮ್ಮೆ ಉಡುಪಿಯಲ್ಲಿ ನಡೆದು ಹೋಗುತ್ತಿದ್ದೆ. ಹೋಟೆಲ್ ನಟರಾಜ್ ಎದುರು ಬೈಕ್ ಒಂದು ನಿಂತಿತ್ತು. ಅಂದಿನ ಸಾಲಿಗ್ರಾಮ ಮೇಳದ ಯಜಮಾನರಾದ ಶ್ರೀನಿವಾಸ ಹೆಗ್ಡೆಯವರು ಆ ಹೋಟೆಲಿನ ಮಾಲಿಕರು. ಬೈಕ್ನ ಹಿಂಭಾಗದಲ್ಲಿ ಕಾಳಿಂಗ ಎಂದು ಬರೆದಿತ್ತು. ಇದು ನಾವುಡರದ್ದೇ ಬೈಕ್. ನಾವುಡರು ಬಹುಶ: ಈ ಹೋಟೆಲಿನಲ್ಲಿರಬಹುದು. ಹೀಗೆ ಊಹಿಸಿ ಹೋಟೆಲ್ನ ಮಹಡಿಗಳನ್ನೇರಿದೆ. ನಾವುಡರ ಅಭಿಮಾನಿಗಳನೇಕರು ಅಲ್ಲಿದ್ದರು. ನಾನು ಕಾಳಿಂಗ ನಾವುಡರನ್ನು ಭೇಟಿಯಾಗಬೇಕಿತ್ತು ಎಂದೆ. ನಾವುಡರು ಪ್ರತ್ಯಕ್ಷರಾದರು. ಆಶ್ಚರ್ಯದಿಂದ ಪ್ರಶ್ನಿಸಿದರು. ನಾನು ಇಲ್ಲಿ ಇರುವ ವಿಚಾರ ಯಾರು ತಿಳಿಸಿದರು ?. ನಿಮ್ಮ ಬೈಕಿನ ಹಿಂಭಾಗದ ಹೆಸರು ಎಂದೆ. ಕೂಡಲೇ ನಾವುಡರು ತುಸು ನಗೆಯಿಂದ ನಾಳೆಯಿಂದ ಆ ಹೆಸರನ್ನೇ ಅಳಿಸುತ್ತೇನೆ ಎಂದರು.
ಆಕಾಶವಾಣಿಯ ಘಟನೆ :ಒಮ್ಮೆ ನಾವುಡರನ್ನು ಸಂದರ್ಶನ ಮಾಡುವಂತೆ ಆಕಾಶವಾಣಿಯೊಂದರಿಂದ ಕರೆ ಬಂದಿತು. ನಾವುಡರನ್ನು ಹುಡುಕಿಕೊಂಡು ಗುಂಡ್ಮಿಯ ಅವರ ಮನೆಗೆ ಧಾವಿಸಿದೆ. ನಾವುಡರು ಬಂದ ಕಾರಣ ಕೇಳಿದರು. ತಮ್ಮನ್ನು ಸಂದಶರ್ಿಸಲು ಕರೆ ಬಂದಿದೆ. ಆಕಾಶವಾಣಿಗೆ ಹೋಗೋಣ ಎಂದೆ. ಯಾಕೋ ಆಕಾಶವಾಣಿಯ ಬಗ್ಗೆ ನಾವುಡರಿಗೆ ಬೇಸರ. ತಾನು ಬರುವುದಿಲ್ಲ ಎಂದು ನುಡಿದರು. ಒಮ್ಮೆ ಮೌನವಾದೆ. ಮತ್ತೆ ಐದು ನಿಮಿಷ ಬಿಟ್ಟು ನಿನಗೆ ಬೇಸರವಾಗುವುದಾದರೆ ಬರುತ್ತೇನೆ. ನಿನ್ನ ಮೇಲಿನ ಪ್ರೀತಿಯಿಂದಷ್ಟೇ ಎಂದರು. ಅಂತೂ ಕಾರಿನಲ್ಲಿ ಆಕಾಶವಾಣಿಯತ್ತ ಸಾಗಿದೆವು. ಆಕಾಶವಾಣಿಯಲ್ಲಿ ಅವರಿಗೆ ನೀಡಿದ ಚೆಕ್ಕನ್ನೂ ನಾವುಡರು ಅನಂತರ ಸ್ವೀಕರಿಸಲಿಲ್ಲ. ಅದನ್ನೂ ನನಗೆ ಕೊಟ್ಟು ನೀನೇ ಇದರ ಪ್ರಯೋಜನ ಪಡೆ ಎಂದರು.
ಪುರಭವನದ ಆಟ :ಒಮ್ಮೆ ಮಂಗಳೂರಿನ ಪುರಭವನದಲ್ಲಿ ತೆಂಕು ಮತ್ತು ಬಡಗುತಿಟ್ಟುಗಳ ಆಟ. ಮೊದಲು ತೆಂಕಿನ ಪ್ರಸಂಗ. ಅನಂತರ ಬಡಗಿನವರ ಸರದಿ. ನಾವುಡರಿನ್ನೂ ಬಂದಿರಲಿಲ್ಲ.  ಆಗಲೇ ಜನರ ಗುಸು ಗುಸು ಆರಂಭವಾಗಿತ್ತು. ಅವರು ವಿಮಾನದಲ್ಲಿ ಬರುತ್ತಿದ್ದಾರಂತೆ. ತೆಂಕಿನವರ ಆಟ ಮುಗಿಯುವುದರೊಳಗೆ ಪುರಭವನವನ್ನು ಪ್ರವೇಶಿಸುತ್ತಾರಂತೆ. ಅಂತೂ ನಾವುಡರು ಪುರಭವನಕ್ಕೆ ಬಂದರು. ಅವರ ಅಭಿಮಾನಿಗಳಾದ ನಾವು ಕೆಲವರು ಅವರ ವಿಶ್ರಾಂತಿ ಕೋಣೆಗೆ ತಲುಪಿದೆವು. ನನ್ನ ಸ್ನೇಹಿತನೊಬ್ಬ ಸ್ವಲ್ಪ ಗಾಬರಿಯಿಂದ ಹೇಳಿದ. ನಾವುಡರೇ, ಈಗಾಗಲೇ ತೆಂಕಿನ ಭಾಗವತರು ಕಪ್ಪು ಮೂರರಲ್ಲಿ ಪದ್ಯ ಹೇಳುತ್ತಿದ್ದಾರೆ. ನಿಮಗೆ ಇದನ್ನು ಮೀರಿಸಲು ಸಾಧ್ಯವೇ?. ನಾವುಡರು ಒಂದು ಕ್ಷಣ ತೆಂಕಿನ ಭಾಗವತರ ಪದ್ಯ ಆಲಿಸಿದರು. ಮತ್ತೆ ಹೇಳಿದರು. ನೋಡಿ ಪದ್ಯ ಹೇಳುವುದೆಂದರೆ ಕಿರುಚಾಟವಲ್ಲ. ಇದೇ ಶ್ರುತಿಯಲ್ಲಿ ನಾನು ಲೀಲಾಜಾಲವಾಗಿ ಹಾಡುವ ವಿಶ್ವಾಸವಿದೆ. ಆಟ ಮುಗಿದ ನಂತರ ಬಂದು ಅಭಿಪ್ರಾಯ ತಿಳಿಸಿ. ಅಂದು ನಾವುಡರು ಕೀಚಕ ವಧೆಯ ಪದ್ಯಗಳನ್ನು ಅದೇ ಶ್ರುತಿಯಲ್ಲಿ ಲೀಲಾಜಾಲವಾಗಿ ಹಾಡಿ ಪ್ರೇಕ್ಷಕರಿಂದ ಅಪಾರ ಕರತಾಡನಗಳನ್ನು ಗಿಟ್ಟಿಸಿಕೊಂಡರು.
ಜಾನುವಾರುಕಟ್ಟೆ ಭಾಗವತರಿಂದ ಭೇಷ್ ಎಂಬ ಹೆಗ್ಗಳಿಕೆ :
ಒಮ್ಮೆ ಮಂದತರ್ಿ ಸಮೀಪ ಸಾಲಿಗ್ರಾಮ ಮೇಳದ ಆಟ. ಅಂದು ಹಿರಿಯ ಭಾಗವತ ಜಾನುವಾರುಕಟ್ಟೆ ಗೋಪಾಲಕೃಷ್ಣ ಕಾಮತ್ ಆಟಕ್ಕೆ ಬಂದಿದ್ದರು. ಚೌಕಿಗೆ ತೆರಳಿದ ಅವರಿಗೆ ನಾವುಡರು ಗೌರವಪೂರ್ವಕವಾಗಿ ಕೈಮುಗಿದರು. ಜಾನುವಾರುಕಟ್ಟೆ ಭಾಗವತರು ನಾವುಡರನ್ನು ತಮಾಷೆಗಾಗಿ ಕೆಣಕಿದರು. ಇಂದು ಭಾಗವತಿಕೆ ಹೆಸರಲ್ಲಿ ಮಂಗನಾಟ ಮಾಡಿದರೆ ನಾನು ಸುಮ್ಮನಿರುವುದಿಲ್ಲ.  ಭಾಗವತರೇ, ಇಂದು ಆಟ ನೋಡಿ. ಶುದ್ಧ ಸಂಪ್ರದಾಯ ಶೈಲಿಯಲ್ಲಿ ನನ್ನ ಪದ್ಯಗಳಿರುತ್ತವೆ. ಅಂದು ನಾವುಡರು ಪರಂಪರೆಯ ಶೈಲಿಯನ್ನು ಬಿಟ್ಟು ಹೋಗಲೇ ಇಲ್ಲ. ಬೆಳಗ್ಗೆ ಜಾನುವಾರುಕಟ್ಟೆಯವರೇ ಕೈಮುಗಿದು, ನೀನೂ ಹೊಸತಕ್ಕೂ, ಹಳತು ಎರಡಕ್ಕೂ ಸಮರ್ಥ ಮಾರಾಯ. ಇಂದಿನಿಂದ ನಾನೂ ನಿನ್ನ ಅಭಿಮಾನಿ.
ನಾವುಡರು ಭಾಗವತಿಕೆಗೆ ಒಂದು ಹೊಸ ಮೆರುಗನ್ನು ನೀಡಿದವರು. ಅವರ ಕಾಲದಲ್ಲಿ ಯಕ್ಷಗಾನಕ್ಕೆ ವಿದ್ಯಾವಂತರ ಒಂದು ವರ್ಗವೇ ಪ್ರೇಕ್ಷಕರಾಗಿ ನಿಮರ್ಾಣವಾಗಿತ್ತು. ಆದರೆ ಅವರ ಕಾಲಾನಂತರ ಆ ಗುಂಪು ಮತ್ತೆ ಕಲೆಯಿಂದ ದೂರ ಸರಿಯಿತು.  ನಾವುಡರಲ್ಲಿ ಕಲಾಪ್ರತಿಭೆಯೊಂದೇ ಹುದುಗಿರಲಿಲ್ಲ. ಅವರಲ್ಲಿ ಮಾನವೀಯ ಗುಣಗಳೂ ಹುದುಗಿದ್ದವು.  ಪರರ ಕಷ್ಟಕ್ಕೆ ಸ್ಪಂದಿಸುವ ಅವರ ಮನೋಭಾವದ ಪರಿಚಯ ಕೆಲವರಿಗಷ್ಟೇ ತಿಳಿದಿತ್ತು. ನಾವುಡರ ಸ್ಥಾನ ತುಂಬುವ ಸಮರ್ಥ ಭಾಗವತ ಇನ್ನು ಮುಂದೆ ಬಂದಾರೆ ?. ಈ ಪ್ರಶ್ನೆ ಇಂದಿಗೂ ಯಕ್ಷಗಾನ ಅಭಿಮಾನಿಗಳನ್ನು ಕಾಡುತ್ತಿದೆ.
   ಡಾ.ಶ್ರೀಕಾಂತ್ ಸಿದ್ದಾಪುರ 

ಶನಿವಾರ, ಜುಲೈ 2, 2011

ನಕ್ಕುಬಿಡಿ ಸಾರ್

ನಕ್ಕುಬಿಡಿ ಸಾಕು
 ಸರಸ ಸಂಸಾರ
ಹಾಸ್ಯ ಎಂದರೆ ಯಾರಿಗೆ ಇಷ್ಟವಾಗದು ?. ಭಾಷಣವಿರಲಿ, ಲೇಖನವಿರಲಿ ಹಾಸ್ಯದ ಸನ್ನಿವೇಶ ಬಂತೆಂದರೆ ಅದರ ಆನಂದವೇ ಬೇರೆ. ಹಾಸ್ಯದ ಸಂದರ್ಭವನ್ನೂ ಗಂಭೀರವಾಗಿ ಸ್ವೀಕರಿಸುವ ಮಂದಿಯೂ ಇರಬಹುದು. ಅದರಲ್ಲೂ ದೋಷಗಳನ್ನೇ ಹುಡುಕುವ ಹವ್ಯಾಸ. ಇದು ರಸದಲ್ಲಿ ಕಸ ಹುಡುಕುವ ಪ್ರಯತ್ನವಷ್ಟೇ.  ಜೀವನವನ್ನು ರಸಮಯವಾಗಿರಿಸಲು ಹಾಸ್ಯಪ್ರಜ್ಞೆಯನ್ನು ನಮ್ಮವರು ಎಲ್ಲಾ ಕ್ಷೇತ್ರಗಳಲ್ಲೂ ತಂದಿರುತ್ತಾರೆ. ಪತಿ ಮತ್ತು ಪತ್ನಿಯರ ಸಂಬಂಧವೂ ಇದರಿಂದ ಹೊರತಾಗಿಲ್ಲ.  ಸತಿ ಮತ್ತು ಪತಿಯರ ಸಂಬಂಧ ಹೇಗಿರಬೇಕು ?. ನಮ್ಮವರು ಇದನ್ನು ವಿವರಿಸಲು ಸಂಖ್ಯಾಶಾಸ್ತ್ರದ ಮರೆಹೋಗಿರುತ್ತಾರೆ. ಸತಿ ಮತ್ತು ಪತಿಯರ ಸಂಬಂಧವು 63 ರಂತಿರಬೇಕಂತೆ.  36 ರಂತಿರಬಾರದಂತೆ.  ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ ಎಂಬುದು ನಮ್ಮ ಜನಪದರ ನಿಲುವು. ಕೆಲವರು ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂದು ಹಾಸ್ಯ ಚಟಾಕಿ ಹಾರಿಸುವುದುಂಟು. ಅಧ್ಯಾತ್ಮ ಕ್ಷೇತ್ರದಲ್ಲೂ ಈ ಸಂಬಂಧದ ಕುರಿತ ನಗೆಹನಿಗಳು ಸಾಕಷ್ಟಿವೆ. ಅಧ್ಯಾತ್ಮವನ್ನು ವಿಶಿಷ್ಟವಾದ ರೀತಿಯಲ್ಲಿ ಪ್ರತಿಪಾದಿಸಿದ ಓಶೋ ನೀಡುವ ಕೆಲವು ನಗೆಹನಿಗಳಿಲ್ಲಿ ಉಲ್ಲೇಖಾರ್ಹ.
                     *******
 ಗಂಡನ ಇತ್ತೀಚಿನ ವರ್ತನೆ ಕಂಡು ಸತಿಯೊಬ್ಬಳು ಚಿಂತಾಕ್ರಾಂತಳಾಗಿದ್ದಾಳೆ. ಅವರು ನೇರವಾಗಿ ಕುಟುಂಬದ ವೈದ್ಯರೊಬ್ಬರ ಬಳಿ ಬರುತ್ತಾಳೆ.  ನಮ್ಮದು ಬೆಳ್ಳಿ ಹಬ್ಬದ ಹೊಸ್ತಿಲಲ್ಲಿರುವ ಸಂಸಾರ ಸಾರ್.  ಈ ತನಕ ತೃಪ್ತಿಯಿಂದಲೇ ಇದ್ದೆವು. ಆದರೆ ನಿಮ್ಮ ಹತ್ತಿರ ತಲೆನೋವಿನ ನೆಪದಲ್ಲಿ ಚಿಕಿತ್ಸೆ ಪಡೆದ ಅನಂತರ ನಮ್ಮವರ  ವರ್ತನೆಯೇ ಬದಲಾಗಿ ಬಿಟ್ಟಿದೆ. ನನ್ನನ್ನು ಕಂಡರೆ  ಯಾಕೋ ಮುಖ ಸಿಂಡರಿಸುತ್ತಾರೆ. ನನ್ನನ್ನು ನೋಡುವುದನ್ನೂ ಈಗೀಗ ಮರೆತು ಬಿಟ್ಟಿರುತ್ತಾರೆ. ನೀವೇನು ಚಿಕಿತ್ಸೆ ನೀಡಿದಿರೋ ದೇವರೇ ಬಲ್ಲ. ವೈದ್ಯರಿಗೆ ಆಶ್ಚರ್ಯವಾಯಿತು. ಚಿಕಿತ್ಸೆ ! ನಾನು ಅಂತಹ ಚಿಕಿತ್ಸೆ ನೀಡಿಲ್ಲವಲ್ಲ!. ಅವರಿಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ಕನ್ನಡಕವೊಂದನ್ನಷ್ಟೇ ಶಿಫಾರಸು ಮಾಡಿದೆ. ಬಹುಶ: ಕನ್ನಡಕ ಧರಿಸಿದ ಮೇಲೆ ದೃಷ್ಟಿಯಲ್ಲಿ ಸುಧಾರಣೆಯಾಗಿರಬಹುದು.
*****
 ಗಂಡಸೊಬ್ಬನಿಗೆ  ಮದುವೆಯಾಯಿತು. ಅವನ ಹೆಂಡತಿ ಮದುವೆಯ ಅನಂತರ ಗಂಡನನ್ನು ತಮಾಷೆಗಾಗಿ ಕೇಳಿದಳು.  ರೀ, ನಾನು ನನ್ನ ಮುಖವನ್ನು ಯಾರ್ಯಾರಿಗೆ ತೋರಿಸಬಹುದು?. ಪಾಪ! ಆ ಪತಿರಾಯ ತನ್ನ ಹೆಂಡತಿಯ ಮುಖವನ್ನೇ ಅಂದಿನ ತನಕ ಸರಿಯಾಗಿ ನೋಡಿರಲಿಲ್ಲ. ಯಾವುದಕ್ಕೂ ಮೊದಲು ನನಗೆ ತೋರಿಸು. ಅನಂತರ ನಿನ್ನ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದ. ಹೆಂಡತಿ ಸಂತೋಷದಿಂದ ತನ್ನ ಮುಖದ ಪರದೆಯನ್ನು ಸರಿಸಿದಳು. ಪತಿ ಮಹಾಶಯನು ಕತ್ತನ್ನು ಬೇರೆ ಕಡೆಗೆ ತಿರುಗಿಸಿದ. ಹೆಂಡತಿಗೆ ಆಶ್ಚರ್ಯ. ಕೂಡಲೇ ಪತಿರಾಯ ಹೇಳಿಯೇ ಬಿಟ್ಟ. ದಯವಿಟ್ಟು ಇನ್ನು ಮುಂದೆ ನನ್ನನ್ನು ಬಿಟ್ಟು ಬೇರಾರಿಗಾದರೂ ತೋರಿಸು. ನನ್ನ ಆಕ್ಷೇಪವಿಲ್ಲ.
******
 ಸಂಸಾರವೊಂದರಲ್ಲಿ ಹೆಂಡತಿಗೆ ಸಂಗೀತ ಕಲಿಯುವ ಹುಚ್ಚು. ಸಂಗೀತ ಶಾಲೆಗೂ ಸೇರಿದಳು. ದಿನಾ ಮನೆಯಲ್ಲಿ ಅಭ್ಯಾಸ ಆರಂಭವಾಯಿತು. ಹೆಂಡತಿ ಹಾಮರ್ೋನಿಯಂ ಹಿಡಿದು ಕುಳಿತಳೆಂದರೆ ಗಂಡ ಮನೆಯ ಮುಂದೆ ತಿರುಗಾಡಲು ಆರಂಭಿಸುತ್ತಾನೆ. ಗಂಡನ ವರ್ತನೆಗೆ ಬೇಸತ್ತ ಹೆಂಡತಿ ಕೇಳಿದಳು. ರೀ, ನಾನು ಸಂಗೀತ ಅಭ್ಯಾಸ ಮಾಡುವಾಗ ನೀವು ಮನೆಯ ಎದುರುಗಡೆ ಹಿಂದೆ ಮುಂದೆ ತಿರುಗುವುದೇಕೆ?.  ಮತ್ತೇನಲ್ಲ ಪ್ರಿಯೆ, ಅಕ್ಕ ಪಕ್ಕದವರು ನಾನು ನಿನಗೆ ಬಡಿದೆನೆಂದು ಭಾವಿಸದಿರಲಿ ಎಂದು.
******
 ಹುಲಿಯೊಂದರ ಮದುವೆ ಸನ್ನಿವೇಶ. ಎಲ್ಲಾ ಹುಲಿಗಳೂ ನತರ್ಿಸುತ್ತಿವೆ. ಈ ಹುಲಿಗಳ ಗುಂಪಿನಲ್ಲಿ ಇಲಿಯೊಂದೂ ನತರ್ಿಸುತ್ತಿದೆ. ಹುಲಿಗಳಿಗೆ ಆಶ್ಚರ್ಯ. ನಮ್ಮ ನಡುವೆ ಇಲಿಗೇನು ಕೆಲಸ !. ಹುಲಿಯೊಂದು ಕೇಳಿಯೇ ಬಿಟ್ಟಿತು. ನಿನಗೇನು ಇಲ್ಲಿ ಕೆಲಸ?. ಇಲಿ ಹೇಳಿತು ಮದುಮಗನ ಅಣ್ಣ ನಾನು. ಹುಲಿಗಳಿಗೆ ಅರ್ಥವಾಗಲಿಲ್ಲ. ಏನಿದರ ಅರ್ಥ?. ಸ್ವಲ್ಪ ಸರಿಯಾಗಿ ಹೇಳಿಬಿಡು. ಇಲಿ ಕೂಡಲೇ ಉತ್ತರಿಸಿತು.  ವಿಶೇಷ ಅರ್ಥ ಏನಿಲ್ಲ. ನಾನೂ ಮದುವೆಗೆ ಮೊದಲು ಹುಲಿಯಾಗಿಯೇ ಇದ್ದೆ.
******
 ಪತಿರಾಯನೊಬ್ಬ ತನ್ನ ಸ್ನೇಹಿತನಲ್ಲಿ ಅಳಲನ್ನು ತೋಡಿಕೊಂಡ. ಬೇರೆ ದಾರಿಯಿಲ್ಲ. ನಾನು ನನ್ನ ಪತ್ನಿಯೊಂದಿಗಿನ ಸಂಬಂಧಕ್ಕೆ ವಿಚ್ಛೇದನಾ ಅಜರ್ಿ ಸಲ್ಲಿಸುತ್ತಿದ್ದೇನೆ.  ಅಂತಹ ವಿರಸ ಏನು ಮಾರಾಯ? ಸ್ನೇಹಿತ ಪ್ರಶ್ನಿಸಿದ.  ಕಳೆದ ಮೂರು ತಿಂಗಳಿನಿಂದ ಆಕೆ ನನ್ನೊಂದಿಗೆ ಒಂದೂ ಮಾತನ್ನು ಆಡಿಲ್ಲ. ಸ್ನೇಹಿತ ಹೇಳಿದ. ಸ್ವಲ್ಪ ಯೋಚಿಸುವುದು ಕ್ಷೇಮ.  ಏಕೆಂದರೆ ಇಂತಹ ಹೆಂಡತಿ ಸಿಗಬೇಕಾದರೆ  ನಿಜವಾಗಿ ಅದೃಷ್ಟ ಮಾಡಿರಬೇಕು.
*******
 ಒಮ್ಮೆ ಮಗ ತಂದೆಯನ್ನು ಕುತೂಹಲದಿಂದ ಪ್ರಶ್ನಿಸಿದ. ಅಪ್ಪಾ, ವಾಕ್ಚಾತುರ್ಯ ಅಂತಾರಲ್ಲ ಹಾಗೆಂದರೇನು?.  ಮಗನೇ ಹಾಗೆಲ್ಲ ಹೇಳಿದರೆ ನಿನಗೆ ಅರ್ಥವಾಗದು. ಒಂದು ಉದಾಹರಣೆ ಮೂಲಕ ವಿವರಿಸುತ್ತೇನೆ. ನಿನ್ನ ಅಮ್ಮನೊಂದಿಗೆ ನಾನು ಹೀಗೆ ಹೇಳುತ್ತೇನೆ. ನಿನ್ನ ಮುಖ ನೋಡಿದರೆ ಗಡಿಯಾರವೂ ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತದೆ. ಆಗ ನಿನ್ನ ಅಮ್ಮ ಸುಮ್ಮನಿದ್ದಾಳೇ?. ನಾನು ಮಹಾಮೂರ್ಖನಾಗುವುದಿಲ್ಲವೇ?. ಅದರ ಬದಲು ಹೀಗೆ ಹೇಳಿದರೆ ಅದು ವಾಕ್ಚಾತುರ್ಯ. ನಿನ್ನನ್ನು ನೋಡಿದರೆ ಸಮಯವೇ ನಿಂತು ಹೋಗುತ್ತದೆ.  ಈಗ ಅರ್ಥವಾಯ್ತೇ?.
*******
 ಲೈಂಗಿಕ ಸಂಬಂಧ ಸಂಸಾರವೊಂದರಲ್ಲಿ ತೃಪ್ತಿಕರವಾಗಿರಲಿಲ್ಲ. ಗಂಡ ವೈದ್ಯರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಂಡ. ವೈದ್ಯರು ಚಮತ್ಕಾರಕಾರಿ ಮಾತ್ರೆಗಳನ್ನು ಪತಿಗೆ ನೀಡಿದರು. ಒಂದು ತಿಂಗಳ ಅನಂತರ ಆತ ವೈದ್ಯರನ್ನು ಮತ್ತೇ ಭೇಟಿಯಾದ.  ವೈದ್ಯರೇ ನಿಮ್ಮ ಮಾತ್ರೆಗಳು ಪರಿಣಾಮಕಾರಿಯಾಗಿವೆ. ಸಂಶಯವೇ ಇಲ್ಲ.  ವೈದ್ಯರು ಕೇಳಿದರು. ನಿಮ್ಮ ಸುಧಾರಣೆಯ ಬಗ್ಗೆ ಪತ್ನಿಯ ಅನಿಸಿಕೆ?.  ಗಂಡ ಹೇಳಿದ. ಪತ್ನಿ?. ನಾನು ಒಂದು ತಿಂಗಳಿನಿಂದ ಮನೆಗೇ ಹೋಗಿಲ್ಲ.
 ಇಂದು ವಿರಸದ ಕಾಲ. ವಿಚ್ಛೇದನ ಸಮಾಜವನ್ನು ಬಾಧಿಸುತ್ತಿರುವ ಅತಿ ದೊಡ್ಡ ಸಮಸ್ಯೆ. ಇದಕ್ಕೂ ಕಾರಣ ವಿಪರೀತ ಒತ್ತಡ. ಒತ್ತಡದ ನಡುವೆ ಬದುಕನ್ನು ಹಸನಾಗಿರಿಸಲು ಹಾಸ್ಯವೊಂದೇ ಮದ್ದು. ಆದರೆ ಹಾಸ್ಯಕ್ಕೂ ಕೊರತೆ ನಮ್ಮ ದುರಂತ. ಹಾಗಾಗಿ ಹಾಸ್ಯದ ಕ್ಲಬ್ಬುಗಳು ಅಲ್ಲಲ್ಲಿ ತಲೆ ಎತ್ತುತ್ತಿವೆ. ಅಂತೂ ಬದುಕಿಗೆ ಹಾಸ್ಯ ಅನಿವಾರ್ಯ ಎಂಬುವುದರಲ್ಲಿ ಎರಡು ಮಾತಿಲ್ಲ.  ಹಾಸ್ಯಮಯ ಜೀವನಶೈಲಿಯಿಂದ  ವಿರಸವ ಮರೆಯೋಣ. ಸರಸವ ಸವಿಯೋಣ. ಸಮರಸದಿಂದ ಬದುಕೋಣ.
       ಡಾ.ಶ್ರೀಕಾಂತ್ ಸಿದ್ದಾಪುರ

 

ಶುಕ್ರವಾರ, ಜುಲೈ 1, 2011

ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದವರು -ಕನ್ನಡಕ್ಕೆ ಕೀರ್ತಿ ತಂದವರು

ಕುವೆಂಪು-1968 ಶ್ರೀ ರಾಮಾಯಣ ದರುಶನಂ

ದ.ರಾ.ಬೇಂದ್ರೆ-1974 ನಾಕುತಂತಿ

ಡಾ.ಶಿವರಾಮ ಕಾರಂತ-1978 ಮೂಕಜ್ಜಿಯ ಕನಸುಗಳು

ಮಾಸ್ತಿ ವೆಂಕಟೇಶ ಅಯ್ಯಂಗಾರ್ 1983 ಚಿಕವೀರರಾಜೇಂದ್ರ

ಡಾ.ಗೋಕಾಕ್ 1991 ಭಾರತ ಸಿಂಧುರಶ್ಮಿ

ಯು.ಆರ್. ಅನಂತಮೊರ್ತಿ 1994 ಸಮಗ್ರ ಸಾಹಿತ್ಯ
ಗಿರೀಶ್  ಕಾರ್ನಾಡ್ 1998 ಸಮಗ್ರ ಸಾಹಿತ್ಯಡಾ.ಕಂಬಾರ