Monday, August 22, 2011

Osho & Education

ಓಶೋ ಅವರ  ಶೈಕ್ಷಣಿಕ ಚಿಂತನೆಗಳು
(ಕನಿಷ್ಠ ಎರಡು ಭಾಷೆಗಳ ಜ್ಞಾನ ಬೇಕು)
 ಶೈಕ್ಷಣಿಕವಾಗಿ ನಮ್ಮಲ್ಲಿ ಚಿಂತನೆಗಳಿಗೆ ಕೊರತೆ ಇಲ್ಲ. ಇದರೊಂದಿಗೆ ಸುಧಾರಣೆಯ ಹೆಸರಲ್ಲಿ ನೂರಾರು ಆಯೋಗಗಳು ವರದಿ ನೀಡುತ್ತಿವೆ. ಆದರೂ ನಿರೀಕ್ಷಿತ ಸುಧಾರಣೆಗಳಾಗಿಲ್ಲ. ಇನ್ನೂ ಚಿಂತನೆಗಳು ಹುಟ್ಟುತ್ತಲೇ ಇವೆ.  ಓಶೋರವರೂ ಈ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು. ಅವರದ್ದೇ ಆದ ಚಿಂತನೆಗಳನ್ನು ನೀಡಿದವರು.

 ಮಾಹಿತಿಯೇ ಪ್ರಧಾನವಾಗಬಾರದು :
 ಓಶೋ ಇತರರಂತೆ ಇಂದಿನ ಶಿಕ್ಷಣ ಪದ್ಧತಿಯ ಟೀಕಾಕಾರರಲ್ಲಿ ಒಬ್ಬರು.  ಅವರ ಪ್ರಕಾರ ಶಿಕ್ಷಣ ಎಂದರೆ ಕೇವಲ ಮಾಹಿತಿಗಳ ಸಂಗ್ರಹವಲ್ಲ. ಮಾಹಿತಿಗಳು ಅಗತ್ಯವಾದರೂ ಅವುಗಳೇ ಪ್ರಧಾನವಾಗಬಾರದು.  ಈ ಬಗ್ಗೆ ಒಂದು ಚಿಕ್ಕ ಕತೆಯನ್ನೂ ಓಶೋ ನೀಡುತ್ತಾರೆ. ಒಬ್ಬ ವ್ಯಕ್ತಿಯ ಕೈಯಲ್ಲಿ ಯಾವಾಗಲೂ ಒಂದು ಕೊಡೆ ಇರುತ್ತದೆ. ಮಳೆ ಇರಲಿ ಅಥವಾ ಬಿಸಿಲಿರಲಿ.  ಕೊಡೆ ಈ ವ್ಯಕ್ತಿಯ ಕೈಯಿಂದ ತಪ್ಪುವುದೇ ಇಲ್ಲ. ವಿಚಿತ್ರ ಎಂದರೆ ಆ ವ್ಯಕ್ತಿ  ಕೊಡೆಯನ್ನು ಎಂದಿಗೂ ಬಿಡಿಸಿಲ್ಲ ಮತ್ತು  ಬಿಡಿಸುವುದೂ ಇಲ್ಲ. ಕೊನೆಗೆ ನೋಡುವಾಗ ಆ ಕೊಡೆ ನಿರುಪಯುಕ್ತ.  ಅದರ ಅರಿವೆಯ ತುಂಬಾ  ಹಲವು ರಂಧ್ರಗಳು. ಕೇವಲ  ಮಾಹಿತಿ ಪ್ರಧಾನವಾದ ವಿದ್ಯಾಭ್ಯಾಸ ಇದರಿಂದ ಹೊರತಲ್ಲ.
 ಮಕ್ಕಳಲ್ಲೂ ಸ್ವಂತ ಯೋಚನೆಗಳಿವೆ :
 ಮಕ್ಕಳ ಯೋಚನೆ ಅಥವಾ ಚಿಂತನೆಗಳನ್ನು ಅರಳಿಸುವತ್ತ ನಮ್ಮ ಶಿಕ್ಷಣ ಸಾಗಬೇಕು ಎಂಬುದು ಓಶೋರವರ ನಿಲುವು.  ಮಕ್ಕಳ ಮೇಲೆ ನಮ್ಮ ಅಭಿಪ್ರಾಯಗಳನ್ನು ಹೇರುವುದರತ್ತ ಅವರ ಪ್ರಮುಖ ಆಕ್ಷೇಪ. ಮಕ್ಕಳಲ್ಲಿರುವ ಸರ್ಜನಶೀಲ ಗುಣಗಳನ್ನು ಗುರುತಿಸಬೇಕು. ಅವುಗಳನ್ನು ಅರಳಿಸಲು ಪ್ರೋತ್ಸಾಹಿಸಬೇಕು.  ಮಕ್ಕಳು ನಾವು ತಿಳಿದಂತೆ ದಡ್ಡರಲ್ಲ ಎನ್ನುವ ಓಶೋ ಹಲವು ಕತೆಗಳ ಮೂಲಕ ಮಕ್ಕಳ ಈ ಗುಣಗಳನ್ನು ವಿವರಿಸುತ್ತಾರೆ.  ಈ  ಕುರಿತಂತೆ ಓಶೋ ನೀಡುವ ಹಲವು ಒಂದು ನಿದರ್ಶನಗಳಲ್ಲಿ ಒಂದು  ಹೀಗಿದೆ.  ಒಬ್ಬ ತಂದೆ ನಿರಂತರ ತನ್ನ ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದನು. ತನ್ನ ಯೋಚನೆಗಳನ್ನು ಹೇರುವುದರಲ್ಲೇ ಆತನಿಗೆ ಆನಂದ. ತಾನು ಬಯಸಿದಂತೆ ತನ್ನ ಮಗ ಬೆಳೆಯಲೇಬೇಕೆಂಬ ಕನಸು.  ತಂದೆಯ ನಿರಂತರ ಬೋಧೆ ಮಗನಿಗೆ ಬೇಸರ ತರಿಸದೇ ಇರುತ್ತದೆಯೇ?.  ಒಮ್ಮೆ ಹೀಗಾಯಿತು. ಬೇರೆ ಮಕ್ಕಳಿಗೆ ಹೋಲಿಸಿ ತನ್ನ ಮಗನನ್ನು ತಂದೆ ಕೆಣಕುತ್ತಾನೆ. ಆ ಮಕ್ಕಳ ಮುಂದೆ ನೀನು ಶತದಂಡ ಎಂದು ತಂದೆಗೆ ಮಾತಿನ ಮೂಲಕ ಸಾಬೀತು ಪಡಿಸುವ ತವಕ. ಮಗನಿಗೂ  ತಂದೆಯ ಮತುಗಳನ್ನು ಕೇಳಿ ಕೇಳಿ ಸಾಕಾಗಿತ್ತು.  ಮಗನು ತಂದೆಗೆ ಅದೇ ದಾಟಿಯಲ್ಲಿ ಉತ್ತರಿಸುತ್ತಾನೆ.   ಅಪ್ಪಾ ! ಆತನ ತಂದೆ ಕೂಡ ಅತ್ಯಂತ ಪ್ರತಿಭಾವಂತನು. ನಿನ್ನಂತೆಯಲ್ಲ.
ಓಶೋರವರ ಪ್ರಮುಖ ಸಲಹೆಗಳು :
 ಓಶೋರವರ ಶೈಕ್ಷಣಿಕ ಚಿಂತನೆಗಳಲ್ಲಿ ಐದು ಅಂಶಗಳು ಪ್ರಮುಖವಾಗಿ ಅಡಗಿವೆ.  ಅದರಲ್ಲಿ ಪ್ರಮುಖವಾದುದು ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳ ವಿಕಾಸಕ್ಕೆ ಶಿಕ್ಷಣ ಪೂರಕವಾಗಿರಬೇಕು.  ಶಿಕ್ಷಣದಲ್ಲಿ ಚರಿತ್ರೆ,  ಸಂಸ್ಕೃತಿ, ಭೂಗೋಳ ಮೊದಲಾದ ಮಾಹಿತಿಗಳನ್ನು ಒದಗಿಸುವ ವಿಷಯಗಳ ಕಲಿಕೆಗಳನ್ನು ಕೈಬಿಡಬಾರದು.  ಇದೇ ಹಂತದಲ್ಲಿ ಭಾಷಾ ಕಲಿಕೆಯತ್ತಲೂ ಗಮನ ಹರಿಸಬೇಕು. ಓಶೋರವರು ತಿಳಿಸುವಂತೆ ಮಕ್ಕಳಿಗೆ ಕನಿಷ್ಠ ಎರಡು ಭಾಷೆಗಳನ್ನಾದರೂ ಕಲಿಸಬೇಕು. ಒಂದು ಮಾತೃಭಾಷೆ, ಇನ್ನೊಂದು ಅಂತಾರಾಷ್ಟ್ರೀಯ ಭಾಷೆ ಇಂಗ್ಲೀಷ್. ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮಾತೃಭಾಷೆಯಷ್ಟು ಪರಿಣಾಮಕಾರಿ ಭಾಷೆ ಬೇರೆ ಇಲ್ಲ.  ಹಿರಿಯ ವಿದ್ವಾಂಸರ ಹೇಳಿಕೆಯೊಂದನ್ನು ಓಶೋ ಈ ಸಂದರ್ಭದಲ್ಲಿ ಉಲ್ಲೇಖಿಸುತ್ತಾರೆ. ನೀನು ಪರಕೀಯ ಭಾಷೆಯಲ್ಲಿ ಎಲ್ಲವನ್ನೂ ತಿಳಿಯಬಹುದು. ಆದರೆ ಜಗಳವಾಡಲು ಅಥವಾ ಪ್ರೇಮಿಸಲು ಮಾತೃಭಾಷೆ ಬಿಟ್ಟರೆ ಬೇರೊಂದಿಲ್ಲ.ಅಂದರೆ ಭಾವನೆಗಳ ಪರಿಣಾಮಕಾರಿ ಸಂವಹನ ಕೇವಲ ಮಾತೃಭಾಷೆಯಲ್ಲಿ ಮಾತ್ರಾ ಸಾಧ್ಯ.
 ಶಿಕ್ಷಣದಲ್ಲಿ ವೈಜ್ಞಾನಿಕ ವಿಚಾರಗಳ ಕಲಿಕೆ ಇನ್ನೊಂದು ಪ್ರಮುಖ ಅಂಶ. ಇದರೊಂದಿಗೆ ಇಂದಿನ ಶಿಕ್ಷಣದಲ್ಲಿ ಮಹತ್ತ್ವ ಕಳೆದುಕೊಳ್ಳುತ್ತಿರುವ ಜೀವನ ಕಲೆಗೆ ಆದ್ಯತೆ. ಓಶೋರವರ ಪ್ರಕಾರ ಕಲಿಕೆಯ ಈ ಹಂತದಲ್ಲಿ ಮಕ್ಕಳನ್ನು ಗಂಭೀರವದನರಾಗುವಂತೆ ನೋಡಿಕೊಳ್ಳಬಾರದು. ಹಾಸ್ಯದ ಭಾಷೆಗೆ ಶಿಕ್ಷಣದಲ್ಲಿ ಒತ್ತು ನೀಡಬೇಕು.  ಓದಿನಲ್ಲಿ ಗಂಭೀರರಾಗಿ ಅಥವಾ ದು:ಖಿಗಳಾಗಿ  ದಿನ ಕಳೆದಲ್ಲಿ ಬದುಕು ವ್ಯರ್ಥವಾಗುತ್ತದೆ.  ನಮ್ಮ ನರನಾಡಿಗಳ ತುಂಬಾ  ಇವುಗಳೇ ತುಂಬಿಕೊಳ್ಳುತ್ತವೆ. ಹಾಸ್ಯ ಅಥವಾ ನಗುವಿನ ಭಾಷೆಯೇ ಮರೆತು ಹೋಗುವ ಅಪಾಯವಿದೆ. ಹಾಗಾಗಿ ಹಾಸ್ಯ ಅಥವಾ ನಗುವನ್ನು ಅರಳಿಸುವ ಅಂಶ ಶಿಕ್ಷಣದಲ್ಲಿ ಸೇರ್ಪಡೆಗೊಳ್ಳಬೇಕು. ಗಂಭೀರತೆ ಅಥವಾ ದು:ಖ ದೂರವಾಗಬೇಕು.
 ಶಿಕ್ಷಣದಲ್ಲಿ ಅಳವಿಸಬಹುದಾದ ಮತ್ತೊಂದು ಅಂಶ ಕಲೆ ಮತ್ತು ಸೃಜನಶೀಲತೆ. ಚಿತ್ರಕಲೆ, ಸಂಗೀತ, ಕುಂಬಾರಿಕೆ , ಕಲ್ಲುಕಟ್ಟಣೆ ಹೀಗೆ ಹಲವು ವಿಚಾರಗಳನ್ನು ಇಲ್ಲಿ ಓಶೋರವರು ನೀಡುತ್ತಾರೆ.  ಸೃಜನಾತ್ಮಕವಾದ ಈ ಅಂಶಗಳನ್ನು ಕಲಿಕೆಯಲ್ಲಿ ಆಯ್ದುಕೊಳ್ಳಲು ಮಕ್ಕಳಿಗೆ ಸ್ವಾತಂತ್ಯ್ರವಿರಬೇಕು.  ಹೆಚ್ಚಿನ ಕಲೆಗಳನ್ನು ಆಯ್ದುಕೊಳ್ಳುವ ಅವಕಾಶಗಳನ್ನೂ ಇಲ್ಲಿ ಕಲ್ಪಿಸಬಹುದು.  ಓಶೋರವರ ಪ್ರಕಾರ ಮನುಷ್ಯನ ಅಸ್ತಿತ್ವವು ಅಡಗಿರುವುದು ಈ ಸೃಜನಾತ್ಮಕ ಕಲೆಗಳ ಮೂಲಕ. ನೂತನ ಸೃಷ್ಟಿಗೆ ಇದು ಪೂರಕವಾಗುತ್ತದೆ.
 ಓಶೋರವರು ತಿಳಿಸುವ ಇನ್ನೊಂದು ಅಂಶ ಅಧ್ಯಾತ್ಮ ವಿಚಾರಕ್ಕೆ ಸಂಬಂಧಿಸಿದುದು. ಮಕ್ಕಳಲ್ಲಿ ಧೈರ್ಯವನ್ನು ಬೆಳೆಸುವಲ್ಲಿ  ಇದು ಸಹಕಾರಿಯಾಗಬೇಕು. ಭಯವು ಮನುಷ್ಯನ ಎಲ್ಲಾ ವ್ಯಕ್ತಿತ್ವವನ್ನೂ ಮಸಕುಗೊಳಿಸುತ್ತದೆ. ಮಕ್ಕಳಲ್ಲಿ ಧೈರ್ಯ, ಸಾಹಸ ತುಂಬುವ ಕೆಲಸ ಶಿಕ್ಷಣದಿಂದ ಆಗಬೇಕು. ಅದಕ್ಕಾಗಿ ಈ ನಿಟ್ಟಿನಲ್ಲಿ ಸಾಧಿಸಿ ಜೀವನ ಸಾರ್ಥಕ ಪಡಿಸಿಕೊಂಡ ಮಹಾತ್ಮರನ್ನು ಮಕ್ಕಳಿಗೆ ಪರಿಚಯಿಸಬೇಕು. ಅವರ ಧೈರ್ಯ, ಸಾಧನೆಗಳ ಹಾದಿಯತ್ತ ಮಕ್ಕಳ ಗಮನ ಸೆಳೆಯಬೇಕು. ಝೆನ್, ತಾವೋ ಮೊದಲಾದವರ ವಿಚಾರಧಾರೆಗಳನ್ನು ಮಕ್ಕಳಿಗೆ ಪರಿಚಯಿಸುವ ಕೆಲಸವಾಗಬೇಕು ಎನ್ನುತ್ತಾರೆ.   ಧ್ಯಾನ , ಯೋಗ, ಪ್ರಾಣಾಯಾಮ ಮತ್ತು ಇವುಗಳೊಂದಿಗೆ ಆತ್ಮರಕ್ಷಣಾ ವಿದ್ಯೆಗಳನ್ನು ಮಕ್ಕಳಿಗೆ ಕಲಿಸಬೇಕು.
 ಪ್ರಸ್ತುತ ಶಿಕ್ಷಣ ಪದ್ಧತಿಯ ಬಗ್ಗೆ ಅತ್ಯಂತ ಕಳವಳ ವ್ಯಕ್ತಪಡಿಸುವ ಓಶೋ ಅಮೆರಿಕಾದಲ್ಲಿ ಇಂದು ಮನ:ಶಾಸ್ತ್ರಜ್ಞರಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ. ಉನ್ನತ ಶಿಕ್ಷಣ ಹೊಂದಿದವರು ಹೆಚ್ಚಿನ ಸಂಖ್ಯೆಯಲ್ಲಿ ಮಾನಸಿಕವಾಗಿ ಅಸ್ವಸ್ಥರಾಗುತ್ತಿದ್ದಾರೆ. ಭಾರತಕ್ಕೂ ಈ ರೋಗ ತಗಲಬಹುದು. ಭ್ರಷ್ಟಾಚಾರ, ಅನೈತಿಕ ಚಟುವಟಿಕೆ, ವಿವಾಹ ವಿಚ್ಛೇದನ ಮೊದಲಾದ ಪಿಡುಗುಗಳು ಶಿಕ್ಷಿತ ಸಮುದಾಯದಲ್ಲಿ ಅಧಿಕವಾಗುತ್ತಿದೆ. ಬೌದ್ಧಿಕ ಬೆಳವಣಿಗೆಗಳೊಂದಿಗೆ ಭಾವನೆ ಮತ್ತು ಮೌಲ್ಯಗಳನ್ನು ಬೆಳೆಸುವ ಕೆಲಸಗಳು ಮಹತ್ತ್ವ ಕಳೆದು ಕೊಳ್ಳುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ. ಈ ಎಲ್ಲಾ ಆಶಯಗಳನ್ನೂ ಪೂರೈಸುವ ಶಿಕ್ಷಣ ಪದ್ಧತಿ ಬಂದೀತೇ?.        
   ಡಾ.ಶ್ರೀಕಾಂತ್ ಸಿದ್ದಾಪುರ
 

1 comment: