ಶನಿವಾರ, ಜುಲೈ 2, 2011

ನಕ್ಕುಬಿಡಿ ಸಾರ್

ನಕ್ಕುಬಿಡಿ ಸಾಕು
 ಸರಸ ಸಂಸಾರ
ಹಾಸ್ಯ ಎಂದರೆ ಯಾರಿಗೆ ಇಷ್ಟವಾಗದು ?. ಭಾಷಣವಿರಲಿ, ಲೇಖನವಿರಲಿ ಹಾಸ್ಯದ ಸನ್ನಿವೇಶ ಬಂತೆಂದರೆ ಅದರ ಆನಂದವೇ ಬೇರೆ. ಹಾಸ್ಯದ ಸಂದರ್ಭವನ್ನೂ ಗಂಭೀರವಾಗಿ ಸ್ವೀಕರಿಸುವ ಮಂದಿಯೂ ಇರಬಹುದು. ಅದರಲ್ಲೂ ದೋಷಗಳನ್ನೇ ಹುಡುಕುವ ಹವ್ಯಾಸ. ಇದು ರಸದಲ್ಲಿ ಕಸ ಹುಡುಕುವ ಪ್ರಯತ್ನವಷ್ಟೇ.  ಜೀವನವನ್ನು ರಸಮಯವಾಗಿರಿಸಲು ಹಾಸ್ಯಪ್ರಜ್ಞೆಯನ್ನು ನಮ್ಮವರು ಎಲ್ಲಾ ಕ್ಷೇತ್ರಗಳಲ್ಲೂ ತಂದಿರುತ್ತಾರೆ. ಪತಿ ಮತ್ತು ಪತ್ನಿಯರ ಸಂಬಂಧವೂ ಇದರಿಂದ ಹೊರತಾಗಿಲ್ಲ.  ಸತಿ ಮತ್ತು ಪತಿಯರ ಸಂಬಂಧ ಹೇಗಿರಬೇಕು ?. ನಮ್ಮವರು ಇದನ್ನು ವಿವರಿಸಲು ಸಂಖ್ಯಾಶಾಸ್ತ್ರದ ಮರೆಹೋಗಿರುತ್ತಾರೆ. ಸತಿ ಮತ್ತು ಪತಿಯರ ಸಂಬಂಧವು 63 ರಂತಿರಬೇಕಂತೆ.  36 ರಂತಿರಬಾರದಂತೆ.  ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ ಎಂಬುದು ನಮ್ಮ ಜನಪದರ ನಿಲುವು. ಕೆಲವರು ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂದು ಹಾಸ್ಯ ಚಟಾಕಿ ಹಾರಿಸುವುದುಂಟು. ಅಧ್ಯಾತ್ಮ ಕ್ಷೇತ್ರದಲ್ಲೂ ಈ ಸಂಬಂಧದ ಕುರಿತ ನಗೆಹನಿಗಳು ಸಾಕಷ್ಟಿವೆ. ಅಧ್ಯಾತ್ಮವನ್ನು ವಿಶಿಷ್ಟವಾದ ರೀತಿಯಲ್ಲಿ ಪ್ರತಿಪಾದಿಸಿದ ಓಶೋ ನೀಡುವ ಕೆಲವು ನಗೆಹನಿಗಳಿಲ್ಲಿ ಉಲ್ಲೇಖಾರ್ಹ.
                     *******
 ಗಂಡನ ಇತ್ತೀಚಿನ ವರ್ತನೆ ಕಂಡು ಸತಿಯೊಬ್ಬಳು ಚಿಂತಾಕ್ರಾಂತಳಾಗಿದ್ದಾಳೆ. ಅವರು ನೇರವಾಗಿ ಕುಟುಂಬದ ವೈದ್ಯರೊಬ್ಬರ ಬಳಿ ಬರುತ್ತಾಳೆ.  ನಮ್ಮದು ಬೆಳ್ಳಿ ಹಬ್ಬದ ಹೊಸ್ತಿಲಲ್ಲಿರುವ ಸಂಸಾರ ಸಾರ್.  ಈ ತನಕ ತೃಪ್ತಿಯಿಂದಲೇ ಇದ್ದೆವು. ಆದರೆ ನಿಮ್ಮ ಹತ್ತಿರ ತಲೆನೋವಿನ ನೆಪದಲ್ಲಿ ಚಿಕಿತ್ಸೆ ಪಡೆದ ಅನಂತರ ನಮ್ಮವರ  ವರ್ತನೆಯೇ ಬದಲಾಗಿ ಬಿಟ್ಟಿದೆ. ನನ್ನನ್ನು ಕಂಡರೆ  ಯಾಕೋ ಮುಖ ಸಿಂಡರಿಸುತ್ತಾರೆ. ನನ್ನನ್ನು ನೋಡುವುದನ್ನೂ ಈಗೀಗ ಮರೆತು ಬಿಟ್ಟಿರುತ್ತಾರೆ. ನೀವೇನು ಚಿಕಿತ್ಸೆ ನೀಡಿದಿರೋ ದೇವರೇ ಬಲ್ಲ. ವೈದ್ಯರಿಗೆ ಆಶ್ಚರ್ಯವಾಯಿತು. ಚಿಕಿತ್ಸೆ ! ನಾನು ಅಂತಹ ಚಿಕಿತ್ಸೆ ನೀಡಿಲ್ಲವಲ್ಲ!. ಅವರಿಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ಕನ್ನಡಕವೊಂದನ್ನಷ್ಟೇ ಶಿಫಾರಸು ಮಾಡಿದೆ. ಬಹುಶ: ಕನ್ನಡಕ ಧರಿಸಿದ ಮೇಲೆ ದೃಷ್ಟಿಯಲ್ಲಿ ಸುಧಾರಣೆಯಾಗಿರಬಹುದು.
*****
 ಗಂಡಸೊಬ್ಬನಿಗೆ  ಮದುವೆಯಾಯಿತು. ಅವನ ಹೆಂಡತಿ ಮದುವೆಯ ಅನಂತರ ಗಂಡನನ್ನು ತಮಾಷೆಗಾಗಿ ಕೇಳಿದಳು.  ರೀ, ನಾನು ನನ್ನ ಮುಖವನ್ನು ಯಾರ್ಯಾರಿಗೆ ತೋರಿಸಬಹುದು?. ಪಾಪ! ಆ ಪತಿರಾಯ ತನ್ನ ಹೆಂಡತಿಯ ಮುಖವನ್ನೇ ಅಂದಿನ ತನಕ ಸರಿಯಾಗಿ ನೋಡಿರಲಿಲ್ಲ. ಯಾವುದಕ್ಕೂ ಮೊದಲು ನನಗೆ ತೋರಿಸು. ಅನಂತರ ನಿನ್ನ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದ. ಹೆಂಡತಿ ಸಂತೋಷದಿಂದ ತನ್ನ ಮುಖದ ಪರದೆಯನ್ನು ಸರಿಸಿದಳು. ಪತಿ ಮಹಾಶಯನು ಕತ್ತನ್ನು ಬೇರೆ ಕಡೆಗೆ ತಿರುಗಿಸಿದ. ಹೆಂಡತಿಗೆ ಆಶ್ಚರ್ಯ. ಕೂಡಲೇ ಪತಿರಾಯ ಹೇಳಿಯೇ ಬಿಟ್ಟ. ದಯವಿಟ್ಟು ಇನ್ನು ಮುಂದೆ ನನ್ನನ್ನು ಬಿಟ್ಟು ಬೇರಾರಿಗಾದರೂ ತೋರಿಸು. ನನ್ನ ಆಕ್ಷೇಪವಿಲ್ಲ.
******
 ಸಂಸಾರವೊಂದರಲ್ಲಿ ಹೆಂಡತಿಗೆ ಸಂಗೀತ ಕಲಿಯುವ ಹುಚ್ಚು. ಸಂಗೀತ ಶಾಲೆಗೂ ಸೇರಿದಳು. ದಿನಾ ಮನೆಯಲ್ಲಿ ಅಭ್ಯಾಸ ಆರಂಭವಾಯಿತು. ಹೆಂಡತಿ ಹಾಮರ್ೋನಿಯಂ ಹಿಡಿದು ಕುಳಿತಳೆಂದರೆ ಗಂಡ ಮನೆಯ ಮುಂದೆ ತಿರುಗಾಡಲು ಆರಂಭಿಸುತ್ತಾನೆ. ಗಂಡನ ವರ್ತನೆಗೆ ಬೇಸತ್ತ ಹೆಂಡತಿ ಕೇಳಿದಳು. ರೀ, ನಾನು ಸಂಗೀತ ಅಭ್ಯಾಸ ಮಾಡುವಾಗ ನೀವು ಮನೆಯ ಎದುರುಗಡೆ ಹಿಂದೆ ಮುಂದೆ ತಿರುಗುವುದೇಕೆ?.  ಮತ್ತೇನಲ್ಲ ಪ್ರಿಯೆ, ಅಕ್ಕ ಪಕ್ಕದವರು ನಾನು ನಿನಗೆ ಬಡಿದೆನೆಂದು ಭಾವಿಸದಿರಲಿ ಎಂದು.
******
 ಹುಲಿಯೊಂದರ ಮದುವೆ ಸನ್ನಿವೇಶ. ಎಲ್ಲಾ ಹುಲಿಗಳೂ ನತರ್ಿಸುತ್ತಿವೆ. ಈ ಹುಲಿಗಳ ಗುಂಪಿನಲ್ಲಿ ಇಲಿಯೊಂದೂ ನತರ್ಿಸುತ್ತಿದೆ. ಹುಲಿಗಳಿಗೆ ಆಶ್ಚರ್ಯ. ನಮ್ಮ ನಡುವೆ ಇಲಿಗೇನು ಕೆಲಸ !. ಹುಲಿಯೊಂದು ಕೇಳಿಯೇ ಬಿಟ್ಟಿತು. ನಿನಗೇನು ಇಲ್ಲಿ ಕೆಲಸ?. ಇಲಿ ಹೇಳಿತು ಮದುಮಗನ ಅಣ್ಣ ನಾನು. ಹುಲಿಗಳಿಗೆ ಅರ್ಥವಾಗಲಿಲ್ಲ. ಏನಿದರ ಅರ್ಥ?. ಸ್ವಲ್ಪ ಸರಿಯಾಗಿ ಹೇಳಿಬಿಡು. ಇಲಿ ಕೂಡಲೇ ಉತ್ತರಿಸಿತು.  ವಿಶೇಷ ಅರ್ಥ ಏನಿಲ್ಲ. ನಾನೂ ಮದುವೆಗೆ ಮೊದಲು ಹುಲಿಯಾಗಿಯೇ ಇದ್ದೆ.
******
 ಪತಿರಾಯನೊಬ್ಬ ತನ್ನ ಸ್ನೇಹಿತನಲ್ಲಿ ಅಳಲನ್ನು ತೋಡಿಕೊಂಡ. ಬೇರೆ ದಾರಿಯಿಲ್ಲ. ನಾನು ನನ್ನ ಪತ್ನಿಯೊಂದಿಗಿನ ಸಂಬಂಧಕ್ಕೆ ವಿಚ್ಛೇದನಾ ಅಜರ್ಿ ಸಲ್ಲಿಸುತ್ತಿದ್ದೇನೆ.  ಅಂತಹ ವಿರಸ ಏನು ಮಾರಾಯ? ಸ್ನೇಹಿತ ಪ್ರಶ್ನಿಸಿದ.  ಕಳೆದ ಮೂರು ತಿಂಗಳಿನಿಂದ ಆಕೆ ನನ್ನೊಂದಿಗೆ ಒಂದೂ ಮಾತನ್ನು ಆಡಿಲ್ಲ. ಸ್ನೇಹಿತ ಹೇಳಿದ. ಸ್ವಲ್ಪ ಯೋಚಿಸುವುದು ಕ್ಷೇಮ.  ಏಕೆಂದರೆ ಇಂತಹ ಹೆಂಡತಿ ಸಿಗಬೇಕಾದರೆ  ನಿಜವಾಗಿ ಅದೃಷ್ಟ ಮಾಡಿರಬೇಕು.
*******
 ಒಮ್ಮೆ ಮಗ ತಂದೆಯನ್ನು ಕುತೂಹಲದಿಂದ ಪ್ರಶ್ನಿಸಿದ. ಅಪ್ಪಾ, ವಾಕ್ಚಾತುರ್ಯ ಅಂತಾರಲ್ಲ ಹಾಗೆಂದರೇನು?.  ಮಗನೇ ಹಾಗೆಲ್ಲ ಹೇಳಿದರೆ ನಿನಗೆ ಅರ್ಥವಾಗದು. ಒಂದು ಉದಾಹರಣೆ ಮೂಲಕ ವಿವರಿಸುತ್ತೇನೆ. ನಿನ್ನ ಅಮ್ಮನೊಂದಿಗೆ ನಾನು ಹೀಗೆ ಹೇಳುತ್ತೇನೆ. ನಿನ್ನ ಮುಖ ನೋಡಿದರೆ ಗಡಿಯಾರವೂ ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತದೆ. ಆಗ ನಿನ್ನ ಅಮ್ಮ ಸುಮ್ಮನಿದ್ದಾಳೇ?. ನಾನು ಮಹಾಮೂರ್ಖನಾಗುವುದಿಲ್ಲವೇ?. ಅದರ ಬದಲು ಹೀಗೆ ಹೇಳಿದರೆ ಅದು ವಾಕ್ಚಾತುರ್ಯ. ನಿನ್ನನ್ನು ನೋಡಿದರೆ ಸಮಯವೇ ನಿಂತು ಹೋಗುತ್ತದೆ.  ಈಗ ಅರ್ಥವಾಯ್ತೇ?.
*******
 ಲೈಂಗಿಕ ಸಂಬಂಧ ಸಂಸಾರವೊಂದರಲ್ಲಿ ತೃಪ್ತಿಕರವಾಗಿರಲಿಲ್ಲ. ಗಂಡ ವೈದ್ಯರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಂಡ. ವೈದ್ಯರು ಚಮತ್ಕಾರಕಾರಿ ಮಾತ್ರೆಗಳನ್ನು ಪತಿಗೆ ನೀಡಿದರು. ಒಂದು ತಿಂಗಳ ಅನಂತರ ಆತ ವೈದ್ಯರನ್ನು ಮತ್ತೇ ಭೇಟಿಯಾದ.  ವೈದ್ಯರೇ ನಿಮ್ಮ ಮಾತ್ರೆಗಳು ಪರಿಣಾಮಕಾರಿಯಾಗಿವೆ. ಸಂಶಯವೇ ಇಲ್ಲ.  ವೈದ್ಯರು ಕೇಳಿದರು. ನಿಮ್ಮ ಸುಧಾರಣೆಯ ಬಗ್ಗೆ ಪತ್ನಿಯ ಅನಿಸಿಕೆ?.  ಗಂಡ ಹೇಳಿದ. ಪತ್ನಿ?. ನಾನು ಒಂದು ತಿಂಗಳಿನಿಂದ ಮನೆಗೇ ಹೋಗಿಲ್ಲ.
 ಇಂದು ವಿರಸದ ಕಾಲ. ವಿಚ್ಛೇದನ ಸಮಾಜವನ್ನು ಬಾಧಿಸುತ್ತಿರುವ ಅತಿ ದೊಡ್ಡ ಸಮಸ್ಯೆ. ಇದಕ್ಕೂ ಕಾರಣ ವಿಪರೀತ ಒತ್ತಡ. ಒತ್ತಡದ ನಡುವೆ ಬದುಕನ್ನು ಹಸನಾಗಿರಿಸಲು ಹಾಸ್ಯವೊಂದೇ ಮದ್ದು. ಆದರೆ ಹಾಸ್ಯಕ್ಕೂ ಕೊರತೆ ನಮ್ಮ ದುರಂತ. ಹಾಗಾಗಿ ಹಾಸ್ಯದ ಕ್ಲಬ್ಬುಗಳು ಅಲ್ಲಲ್ಲಿ ತಲೆ ಎತ್ತುತ್ತಿವೆ. ಅಂತೂ ಬದುಕಿಗೆ ಹಾಸ್ಯ ಅನಿವಾರ್ಯ ಎಂಬುವುದರಲ್ಲಿ ಎರಡು ಮಾತಿಲ್ಲ.  ಹಾಸ್ಯಮಯ ಜೀವನಶೈಲಿಯಿಂದ  ವಿರಸವ ಮರೆಯೋಣ. ಸರಸವ ಸವಿಯೋಣ. ಸಮರಸದಿಂದ ಬದುಕೋಣ.
       ಡಾ.ಶ್ರೀಕಾಂತ್ ಸಿದ್ದಾಪುರ

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ