Tuesday, July 5, 2011

ಭಾಗವತ ಕಾಳಿಂಗ ನಾವುಡರ ನೆನಪುಗಳು

ನಾವುಡರ ನೆನಪುಗಳು

ಇತ್ತೀಚೆಗೆ ಕಾಳಿಂಗ ನಾವುಡ ಪ್ರಶಸ್ತಿಯನ್ನು ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಪ್ರದಾನ ಮಾಡಲಾಯಿತು. ನಾವುಡರು ಜನಪ್ರಿಯರಾಗುತ್ತಿದ್ದ ಕಾಲ. ಧಾರೇಶ್ವರರು ದಿ. ನಾರಣಪ್ಪ ಉಪ್ಪೂರರೊಂದಿಗೆ ತಿರುಗಾಟ ಮಾಡುತ್ತಿದ್ದರು. ಉಪ್ಪೂರರ ಗರಡಿಯಲ್ಲಿ ಪಳಗುತ್ತಿದ್ದರು. ಧಾರೇಶ್ವರರು ಆಗಲೇ ಈ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ್ದರು.  ನಾವುಡರ ನಂತರ ಈ ಕ್ಷೇತ್ರವನ್ನು ಧಾರೇಶ್ವರರು ತುಂಬಿಸಿದರು ಎಂದರೆ ಅತಿಶಯೋಕ್ತಿಯಾಗದು. ಧಾರೇಶ್ವರರಿಗೆ ನಾವುಡರ ಬಗ್ಗೆ ಅಪಾರ ಗೌರವ. ಇಂದಿಗೂ ತನ್ನ ಮೇಲಾದ ನಾವುಡರ ಪ್ರಭಾವಗಳನ್ನು ನೆನಪಿಸಿಕೊಳ್ಳಲು ಮರೆಯುವುದಿಲ್ಲ.
ಕಾಳಿಂಗ ನಾವುಡರ ಬಗ್ಗೆ ಕೆಲವು ತಿಂಗಳ ಹಿಂದೆ ಮಹಾಲಿಂಗ ಭಟ್ಟರು ಸುದೀರ್ಘ ಲೇಖನವೊಂದನ್ನು  ಪ್ರಜಾವಾಣಿಯಲ್ಲಿ ಬರೆದರು. ನಾವುಡರ ಅಭಿಮಾನಿಗಳಿಗೆ ಇದು ಅತ್ಯಂತ ಸಂತಸ ತಂದು ಕೊಟ್ಟಿತು.  ಈ ಲೇಖನವನ್ನು ಓದುತ್ತಿದ್ದಂತೆ ನಾವುಡರ ಇನ್ನಿತರ ಗುಣಗಳು ನನ್ನ ನೆನಪಿಗೆ ಬಂದವು. ಮಾಹಾಲಿಂಗ ಭಟ್ಟರು ಹೇಳದ ಈ ಅಂಶಗಳನ್ನು ಅವರ ಅಭಿಮಾನಿಗಳೊಂದಿಗೆ ಏಕೆ ಹಂಚಿಕೊಳ್ಳಬಾರದೆಂದು ಈ ಲೇಖನಕ್ಕೆ ಕೈ ಹಾಕಿದೆ.
ನನ್ನ ಗಣಗಳು ಎಲ್ಲಾ ಕಡೆ ಇದ್ದಾರೆ :
 ನಾವುಡರು ಜನಪ್ರಿಯರಾಗಿದ್ದ ಕಾಲ.ಎಲ್ಲೆಡೆ ಅವರ ಅಭಿಮಾನಿಗಳು ಅವರಿಗೆ ಸನ್ಮಾನ ಏರ್ಪಡಿಸುತ್ತಿದ್ದರು. ಸಾಮಾನ್ಯವಾಗಿ ಸಿದ್ದಾಪುರದ ಆಸುಪಾಸು ಪ್ರದೇಶಗಳಲ್ಲಿ ಅವರಿಗೆ ಸನ್ಮಾನಗಳಾದಾಗ ಅವರ ಬಗ್ಗೆ ಮಾತನಾಡುವ ಅವಕಾಶ ನನಗೇ ಲಭಿಸುತ್ತಿತ್ತು. ನಾವುಡರೇ ನನ್ನ ಹೆಸರನ್ನು ಸೂಚಿಸುತ್ತಿದ್ದರು ಎಂದು ಆಮೇಲೆ ತಿಳಿಯಿತು. ಒಮ್ಮೆ ಶಂಕರನಾರಾಯಣದಲ್ಲಿ ಅವರಿಗೆ ಸನ್ಮಾನ. ಅಂದಿನ ಶಾಸಕರಾದ ದಿ. ಜಿ.ಎಸ್.ಆಚಾರ್ಯರು ಅಂದಿನ ಸಭೆಯಲ್ಲಿ ನಾವುಡರನ್ನು ಸನ್ಮಾನಿಸುವವರು. ನಾವುಡರು ಶಂಕರನಾರಾಯಣದ ಶಿವರಾಮ ಶೆಟ್ಟರ(ಭಾಗವತ ಸುರೇಶ ಶೆಟ್ಟರ ತಂದೆ) ಮನೆಯಲ್ಲಿ ಅಂದು ವಿಶ್ರಾಂತಿ ಪಡೆಯುತ್ತಿದ್ದರು. ನಾವುಡರನ್ನು ಆಟ ನಡೆಯುವ ಸ್ಥಳಕ್ಕೆ ಕರೆದುಕೊಂಡು  ಬರುವ ಹೊಣೆ ನನ್ನ ಮೇಲೆ ಬಿತ್ತು. ಆಗ ನಾವುಡರಲ್ಲಿ ಒಂದು ಬೈಕ್ ಇತ್ತು. ರಾತ್ರಿ ಸುಮಾರು 9 ಗಂಟೆಯ ಸಮಯ. ಬೈಕಿನ ಹಿಂದೆ ಕುಳಿತುಕೊಳ್ಳುವಂತೆ ನಾವುಡರು ಸೂಚಿಸಿದರು. ಬೈಕ್ ಸ್ವಲ್ಪ ಎತ್ತರದ ಗುಡ್ಡ ಪ್ರದೇಶವನ್ನು ಹತ್ತುತ್ತಿತ್ತು. ಅಕಸ್ಮಾತ್ತಾಗಿ ಬೈಕ್ ಬಿದ್ದಿತು. ನಾನು ಕೆಳಗಡೆ ಉರುಳಿದೆ. ಪೆಟ್ಟೇನೂ ಆಗಲಿಲ್ಲ. ನಾವುಡರೇ ನನ್ನನ್ನು ಸಮಧಾನ ಪಡಿಸಿ ಮತ್ತೆ ಕೂರುವಂತೆ ವಿನಂತಿಸಿದರು. ಮುಂದೆ ಸರಾಗವಾಗಿ ಬೈಕ್ ಪ್ರಯಾಣ. ಹೀಗೆ ಹೋಗುವಾಗ ನಾವುಡರನ್ನು ಕೇಳಿದೆ. ನಾವುಡರೇ, ನಿಮಗೆ ಯಾರಾದರೂ ಶಿಷ್ಯರಿದ್ದಾರೆಯೇ?. ಈ ತನಕ ನನಗೆ ಯಾವ ಶಿಷ್ಯರೂ ಇಲ್ಲ ಎಂದರು. ಅನಂತರ ಅವರೇ ನಗುತ್ತಾ ಹೇಳಿದರು. ಆದರೆ ನನಗೆ ಗಣಗಳಿದ್ದಾರೆ. ತಾಳ ಹಿಡಿದ ತತ್ಕ್ಷಣ ನಾನು ಅವರ ಮೈಮೇಲೆ ಬರುತ್ತೇನೆ.   ಇದನ್ನು ಇಂದಿನ ಸನ್ಮಾನ ಸಮಾರಂಭದಲ್ಲಿ ಹೇಳಬಹುದೇ ?.  ಎಂದು ಕೇಳಿದೆ. ಖಂಡಿತ ಹೇಳು. ಏನೂ ಆಕ್ಷೇಪವಿಲ್ಲ ಎಂದರು. ಅಂದಿನ ಸಭೆಯಲ್ಲಿ ನಾವುಡರ ಹಾಸ್ಯ ಲೇಪನದ ಈ ಮಾತು ಬಹಳಷ್ಟು ಜನರಲ್ಲಿ ನಗುವನ್ನು ಉಕ್ಕಿಸಿತು.
ಬೈಕಿನಲ್ಲಿ ಕಾಳಿಂಗ :ಒಮ್ಮೆ ಉಡುಪಿಯಲ್ಲಿ ನಡೆದು ಹೋಗುತ್ತಿದ್ದೆ. ಹೋಟೆಲ್ ನಟರಾಜ್ ಎದುರು ಬೈಕ್ ಒಂದು ನಿಂತಿತ್ತು. ಅಂದಿನ ಸಾಲಿಗ್ರಾಮ ಮೇಳದ ಯಜಮಾನರಾದ ಶ್ರೀನಿವಾಸ ಹೆಗ್ಡೆಯವರು ಆ ಹೋಟೆಲಿನ ಮಾಲಿಕರು. ಬೈಕ್ನ ಹಿಂಭಾಗದಲ್ಲಿ ಕಾಳಿಂಗ ಎಂದು ಬರೆದಿತ್ತು. ಇದು ನಾವುಡರದ್ದೇ ಬೈಕ್. ನಾವುಡರು ಬಹುಶ: ಈ ಹೋಟೆಲಿನಲ್ಲಿರಬಹುದು. ಹೀಗೆ ಊಹಿಸಿ ಹೋಟೆಲ್ನ ಮಹಡಿಗಳನ್ನೇರಿದೆ. ನಾವುಡರ ಅಭಿಮಾನಿಗಳನೇಕರು ಅಲ್ಲಿದ್ದರು. ನಾನು ಕಾಳಿಂಗ ನಾವುಡರನ್ನು ಭೇಟಿಯಾಗಬೇಕಿತ್ತು ಎಂದೆ. ನಾವುಡರು ಪ್ರತ್ಯಕ್ಷರಾದರು. ಆಶ್ಚರ್ಯದಿಂದ ಪ್ರಶ್ನಿಸಿದರು. ನಾನು ಇಲ್ಲಿ ಇರುವ ವಿಚಾರ ಯಾರು ತಿಳಿಸಿದರು ?. ನಿಮ್ಮ ಬೈಕಿನ ಹಿಂಭಾಗದ ಹೆಸರು ಎಂದೆ. ಕೂಡಲೇ ನಾವುಡರು ತುಸು ನಗೆಯಿಂದ ನಾಳೆಯಿಂದ ಆ ಹೆಸರನ್ನೇ ಅಳಿಸುತ್ತೇನೆ ಎಂದರು.
ಆಕಾಶವಾಣಿಯ ಘಟನೆ :ಒಮ್ಮೆ ನಾವುಡರನ್ನು ಸಂದರ್ಶನ ಮಾಡುವಂತೆ ಆಕಾಶವಾಣಿಯೊಂದರಿಂದ ಕರೆ ಬಂದಿತು. ನಾವುಡರನ್ನು ಹುಡುಕಿಕೊಂಡು ಗುಂಡ್ಮಿಯ ಅವರ ಮನೆಗೆ ಧಾವಿಸಿದೆ. ನಾವುಡರು ಬಂದ ಕಾರಣ ಕೇಳಿದರು. ತಮ್ಮನ್ನು ಸಂದಶರ್ಿಸಲು ಕರೆ ಬಂದಿದೆ. ಆಕಾಶವಾಣಿಗೆ ಹೋಗೋಣ ಎಂದೆ. ಯಾಕೋ ಆಕಾಶವಾಣಿಯ ಬಗ್ಗೆ ನಾವುಡರಿಗೆ ಬೇಸರ. ತಾನು ಬರುವುದಿಲ್ಲ ಎಂದು ನುಡಿದರು. ಒಮ್ಮೆ ಮೌನವಾದೆ. ಮತ್ತೆ ಐದು ನಿಮಿಷ ಬಿಟ್ಟು ನಿನಗೆ ಬೇಸರವಾಗುವುದಾದರೆ ಬರುತ್ತೇನೆ. ನಿನ್ನ ಮೇಲಿನ ಪ್ರೀತಿಯಿಂದಷ್ಟೇ ಎಂದರು. ಅಂತೂ ಕಾರಿನಲ್ಲಿ ಆಕಾಶವಾಣಿಯತ್ತ ಸಾಗಿದೆವು. ಆಕಾಶವಾಣಿಯಲ್ಲಿ ಅವರಿಗೆ ನೀಡಿದ ಚೆಕ್ಕನ್ನೂ ನಾವುಡರು ಅನಂತರ ಸ್ವೀಕರಿಸಲಿಲ್ಲ. ಅದನ್ನೂ ನನಗೆ ಕೊಟ್ಟು ನೀನೇ ಇದರ ಪ್ರಯೋಜನ ಪಡೆ ಎಂದರು.
ಪುರಭವನದ ಆಟ :ಒಮ್ಮೆ ಮಂಗಳೂರಿನ ಪುರಭವನದಲ್ಲಿ ತೆಂಕು ಮತ್ತು ಬಡಗುತಿಟ್ಟುಗಳ ಆಟ. ಮೊದಲು ತೆಂಕಿನ ಪ್ರಸಂಗ. ಅನಂತರ ಬಡಗಿನವರ ಸರದಿ. ನಾವುಡರಿನ್ನೂ ಬಂದಿರಲಿಲ್ಲ.  ಆಗಲೇ ಜನರ ಗುಸು ಗುಸು ಆರಂಭವಾಗಿತ್ತು. ಅವರು ವಿಮಾನದಲ್ಲಿ ಬರುತ್ತಿದ್ದಾರಂತೆ. ತೆಂಕಿನವರ ಆಟ ಮುಗಿಯುವುದರೊಳಗೆ ಪುರಭವನವನ್ನು ಪ್ರವೇಶಿಸುತ್ತಾರಂತೆ. ಅಂತೂ ನಾವುಡರು ಪುರಭವನಕ್ಕೆ ಬಂದರು. ಅವರ ಅಭಿಮಾನಿಗಳಾದ ನಾವು ಕೆಲವರು ಅವರ ವಿಶ್ರಾಂತಿ ಕೋಣೆಗೆ ತಲುಪಿದೆವು. ನನ್ನ ಸ್ನೇಹಿತನೊಬ್ಬ ಸ್ವಲ್ಪ ಗಾಬರಿಯಿಂದ ಹೇಳಿದ. ನಾವುಡರೇ, ಈಗಾಗಲೇ ತೆಂಕಿನ ಭಾಗವತರು ಕಪ್ಪು ಮೂರರಲ್ಲಿ ಪದ್ಯ ಹೇಳುತ್ತಿದ್ದಾರೆ. ನಿಮಗೆ ಇದನ್ನು ಮೀರಿಸಲು ಸಾಧ್ಯವೇ?. ನಾವುಡರು ಒಂದು ಕ್ಷಣ ತೆಂಕಿನ ಭಾಗವತರ ಪದ್ಯ ಆಲಿಸಿದರು. ಮತ್ತೆ ಹೇಳಿದರು. ನೋಡಿ ಪದ್ಯ ಹೇಳುವುದೆಂದರೆ ಕಿರುಚಾಟವಲ್ಲ. ಇದೇ ಶ್ರುತಿಯಲ್ಲಿ ನಾನು ಲೀಲಾಜಾಲವಾಗಿ ಹಾಡುವ ವಿಶ್ವಾಸವಿದೆ. ಆಟ ಮುಗಿದ ನಂತರ ಬಂದು ಅಭಿಪ್ರಾಯ ತಿಳಿಸಿ. ಅಂದು ನಾವುಡರು ಕೀಚಕ ವಧೆಯ ಪದ್ಯಗಳನ್ನು ಅದೇ ಶ್ರುತಿಯಲ್ಲಿ ಲೀಲಾಜಾಲವಾಗಿ ಹಾಡಿ ಪ್ರೇಕ್ಷಕರಿಂದ ಅಪಾರ ಕರತಾಡನಗಳನ್ನು ಗಿಟ್ಟಿಸಿಕೊಂಡರು.
ಜಾನುವಾರುಕಟ್ಟೆ ಭಾಗವತರಿಂದ ಭೇಷ್ ಎಂಬ ಹೆಗ್ಗಳಿಕೆ :
ಒಮ್ಮೆ ಮಂದತರ್ಿ ಸಮೀಪ ಸಾಲಿಗ್ರಾಮ ಮೇಳದ ಆಟ. ಅಂದು ಹಿರಿಯ ಭಾಗವತ ಜಾನುವಾರುಕಟ್ಟೆ ಗೋಪಾಲಕೃಷ್ಣ ಕಾಮತ್ ಆಟಕ್ಕೆ ಬಂದಿದ್ದರು. ಚೌಕಿಗೆ ತೆರಳಿದ ಅವರಿಗೆ ನಾವುಡರು ಗೌರವಪೂರ್ವಕವಾಗಿ ಕೈಮುಗಿದರು. ಜಾನುವಾರುಕಟ್ಟೆ ಭಾಗವತರು ನಾವುಡರನ್ನು ತಮಾಷೆಗಾಗಿ ಕೆಣಕಿದರು. ಇಂದು ಭಾಗವತಿಕೆ ಹೆಸರಲ್ಲಿ ಮಂಗನಾಟ ಮಾಡಿದರೆ ನಾನು ಸುಮ್ಮನಿರುವುದಿಲ್ಲ.  ಭಾಗವತರೇ, ಇಂದು ಆಟ ನೋಡಿ. ಶುದ್ಧ ಸಂಪ್ರದಾಯ ಶೈಲಿಯಲ್ಲಿ ನನ್ನ ಪದ್ಯಗಳಿರುತ್ತವೆ. ಅಂದು ನಾವುಡರು ಪರಂಪರೆಯ ಶೈಲಿಯನ್ನು ಬಿಟ್ಟು ಹೋಗಲೇ ಇಲ್ಲ. ಬೆಳಗ್ಗೆ ಜಾನುವಾರುಕಟ್ಟೆಯವರೇ ಕೈಮುಗಿದು, ನೀನೂ ಹೊಸತಕ್ಕೂ, ಹಳತು ಎರಡಕ್ಕೂ ಸಮರ್ಥ ಮಾರಾಯ. ಇಂದಿನಿಂದ ನಾನೂ ನಿನ್ನ ಅಭಿಮಾನಿ.
ನಾವುಡರು ಭಾಗವತಿಕೆಗೆ ಒಂದು ಹೊಸ ಮೆರುಗನ್ನು ನೀಡಿದವರು. ಅವರ ಕಾಲದಲ್ಲಿ ಯಕ್ಷಗಾನಕ್ಕೆ ವಿದ್ಯಾವಂತರ ಒಂದು ವರ್ಗವೇ ಪ್ರೇಕ್ಷಕರಾಗಿ ನಿಮರ್ಾಣವಾಗಿತ್ತು. ಆದರೆ ಅವರ ಕಾಲಾನಂತರ ಆ ಗುಂಪು ಮತ್ತೆ ಕಲೆಯಿಂದ ದೂರ ಸರಿಯಿತು.  ನಾವುಡರಲ್ಲಿ ಕಲಾಪ್ರತಿಭೆಯೊಂದೇ ಹುದುಗಿರಲಿಲ್ಲ. ಅವರಲ್ಲಿ ಮಾನವೀಯ ಗುಣಗಳೂ ಹುದುಗಿದ್ದವು.  ಪರರ ಕಷ್ಟಕ್ಕೆ ಸ್ಪಂದಿಸುವ ಅವರ ಮನೋಭಾವದ ಪರಿಚಯ ಕೆಲವರಿಗಷ್ಟೇ ತಿಳಿದಿತ್ತು. ನಾವುಡರ ಸ್ಥಾನ ತುಂಬುವ ಸಮರ್ಥ ಭಾಗವತ ಇನ್ನು ಮುಂದೆ ಬಂದಾರೆ ?. ಈ ಪ್ರಶ್ನೆ ಇಂದಿಗೂ ಯಕ್ಷಗಾನ ಅಭಿಮಾನಿಗಳನ್ನು ಕಾಡುತ್ತಿದೆ.
   ಡಾ.ಶ್ರೀಕಾಂತ್ ಸಿದ್ದಾಪುರ 

2 comments:

  1. sooper sir... odi thumbaa khushi aayt

    naanu kaalinga navudara bagge ondu lekhana bardidde.. odi nimma abhipraaya heli..

    http://vijaykannantha.wordpress.com/2010/07/06/kalinganavudaru/

    ReplyDelete
  2. ಧನ್ಯವಾದಗಳು ನಿಮ್ಮ ಲೇಖನಕ್ಕೆ...

    ReplyDelete