ಶುಕ್ರವಾರ, ನವೆಂಬರ್ 25, 2011










ಸಜ್ಜನಿಕೆಯ ಸಂಗೀತ ಗುರು ಮಧೂರು
ಉಡುಪಿಯಲ್ಲಿ ಮಧೂರರ ಗಾಯನ ಕೇಳದವರೇ ವಿರಳ. ಉಡುಪಿ ಮತ್ತು ಆಸುಪಾಸಿನ ಸಂಗೀತಾಭಿಮಾನಿಗಳೆಲ್ಲ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಇವರ ಶಿಷ್ಯರೇ.  ಮಧೂರರನ್ನು ನೋಡಿದಾಕ್ಷಣ ಇವರೊಬ್ಬ ಸಂಗೀತ ವಿದ್ವಾಂಸರೇ ಎಂಬ ಸಂಶಯ ಯಾರಿಗೂ ಬಾರದೇ ಇರದು.  ಅಷ್ಟು ಸರಳ ಬದುಕು ಅವರದ್ದು.  ಸಂಗೀತದ ಸೇವೆಗೊಂದು ಚಿಕ್ಕ ಬೈಕ್. ಅದರಲ್ಲಿಯೇ ಸವಾರಿ. ಯಾರೇ ಪರಿಚಿತರು ಸಿಗಲಿ.  ಅವರು ಶಿಷ್ಯರಾಗಲಿ, ಅಭಿಮಾನಿಗಳಾಗಲಿ ; ಮಧೂರರ ಬೈಕ್ಗೆ ಅಲ್ಲಿ ಒಂದು ಕ್ಷಣದ ನಿಲುಗಡೆ. ಯೋಗಕ್ಷೇಮದ ವಿಚಾರಣೆ. ಕೊನೆಯಲ್ಲಿ ಮನೆಯಲ್ಲಿ ಎಲ್ಲಾ ಕ್ಷೇಮ ತಾನೇ? ಎಂಬ ಮುಕ್ತಾಯದ ನುಡಿಯೊಂದಿಗೆ ಮುಂದಿನ ಪ್ರಯಾಣ.
 ಮಧೂರರ ಪೂರ್ಣ ಹೆಸರು ಮಧೂರು ಪಿ. ಬಾಲಸುಬ್ರಹ್ಮಣ್ಯಂ. ಉಡುಪಿಯಲ್ಲಿ ಕಳೆದ ಕೆಲವು ವರ್ಷಗಳಿಂದ ವಾಸಿಸುತ್ತಿದ್ದರೂ, ಮೂಲತ: ಇವರು ಯಕ್ಷಗಾನದ ಪಾತರ್ಿಸುಬ್ಬನ ಊರಿನವರು. ತಂದೆ ನಾರಾಯಣಯ್ಯ, ತಾಯಿ ಭಾಗೀರಥಿ. ಮಗನನ್ನು ಸಂಗೀತ ವಿದ್ವಾಂಸನನ್ನಾಗಿ ರೂಪಿಸುವ ಕನಸು ತಂದೆಯವರದ್ದಾಗಿತ್ತು. ಬಾಲಕ ಮಧೂರರಲ್ಲೂ ಈ ಲಕ್ಷಣಗಳು ಇದ್ದವು.  ಈ ಹಿನ್ನೆಲೆಯ ಪ್ರೋತ್ಸಾಹದಿಂದ ಸಂಗೀತಕ್ಷೇತ್ರಕ್ಕೆ  ಮಧೂರರು ಅಂಬೆಗಾಲಿಕ್ಕುತ್ತಾ ಪ್ರವೇಶಿಸಿದರು. .  ಇವರ ಮೊದಲ ಗುರು ಮಾಣಿ ಭಾಗವತರ್. ಮಾಣಿ ಭಾಗವತರ  ನಿಜನಾಮ ಪಡುಬಿದ್ರಿ ಸುಬ್ರಾಯ ಭಾಗವತರು.  ಅನಂತರದ ದಿನಗಳಲ್ಲಿ ಇವರ ಸಂಗೀತಾಸಕ್ತಿಗೆ ಸೂಕ್ತ ಮಾರ್ಗದರ್ಶನ ಮಾಡಿದವರು ಕಾಂಚನ ವೆಂಕಟಸುಬ್ರಹ್ಮಣ್ಯ ಅಯ್ಯರ್. ಇದೀಗ ಸಂಗೀತ ಶಿಕ್ಷಕರಾಗಿರುವ ಮಧೂರರು ಈ ಕ್ಷೇತ್ರದಲ್ಲಿ ವಿದ್ವತ್ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದವರು.
1983 ರಲ್ಲಿ ಮಧೂರರು ಉಡುಪಿಯ ಮಣಿಪಾಲ್ ಅಕಾಡೆಮಿ ಆಫ್ ಮೂಸಿಕ್ ಅಂಡ್ ಫೈನ್ ಆಟ್ಸರ್್ ಸಂಗೀತ ಶಿಕ್ಷಣ ವಿದ್ಯಾಲಯಕ್ಕೆ ಶಿಕ್ಷಕರಾಗಿ ಸೇರಿಕೊಂಡರು. ಅಂದಿನಿಂದ ಸಂಗೀತಶಿಕ್ಷಣವನ್ನೇ ಉಸಿರಿನಂತೆ ಸ್ವೀಕರಿಸಿದರು.  ಬೆಳಗ್ಗೆ ಆರು ಗಂಟೆಗೆ ಗೆಜ್ಜೆ ಕಟ್ಟುವ ಮಧೂರರು ಇರುಳ ತನಕ ಸಂಗೀತಕ್ಕಾಗಿ ಸಂಚರಿಸುವವರು. ಸಂಗೀತ ವಿದ್ಯಾಲಯದ ಪಾಠದೊಂದಿಗೆ ಮನೆ ಪಾಠ ಇವರ ಇನ್ನೊಂದು ವಿಧದ ಕೈಂಕರ್ಯ. ಸಂಗೀತ ಶಾಲೆಯ ಸಮಯಕ್ಕೆ ಬರಲಾಗದ ಅನೇಕರಿಗೆ ಅವರ ಮನೆಯಲ್ಲೇ ಸಂಗೀತ ಶಿಕ್ಷಣ.ಎಳೆಯವರಿಂದ ಹಿಡಿದು ಹಳೆಯವರ ತನಕ ಈ ಮೂಲಕ ಮಧೂರರ ಶಿಷ್ಯರು. ಅವರವರ ವಯೋಮಾನಕ್ಕೆ ಅನುಗುಣವಾಗಿ ಬೋಧನಾ ವಿಧಾನ.ಹಾಗಾಗಿ ಮಧೂರರು ಸಂಚಾರಿ ಸಂಗೀತ ಶಿಕ್ಷಕರಾಗಿಯೂ ಪ್ರಸಿದ್ಧರು.
ವಿದ್ಯೆಯೊಂದಿಗೆ ವಿನಯ ಮಧೂರರ ಒಂದು ಮುಖ್ಯ ಲಕ್ಷಣ.ಉಡುಪಿಯ ಸಂಗೀತದ ಎಲ್ಲಾ ಕಾರ್ಯಕ್ರಮಗಳಲ್ಲೂ ಉಪಸ್ಥಿತರಿರುವ ಮಧೂರರು ಯಾವ ಗಾಯಕರನ್ನೂ ಟೀಕಿಸುವವರಲ್ಲ.ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಆರೋಪ ಮಾಡುವವರಲ್ಲ.  ಅವರ ಸಾಮಥ್ರ್ಯಕ್ಕೆ ಅಷ್ಟು ಸಾಕು ಎಂಬ ವಿನಯೋಕ್ತಿ. ಸಂಗೀತಾಸಕ್ತಿಯಿಂದ ಬರುವ ಎಲ್ಲರನ್ನೂ ಸೌಜನ್ಯಪೂರ್ವಕವಾಗಿಯೇ ಮಾತನಾಡಿಸುವವರು. ನಿನ್ನಿಂದ ಸಂಗೀತ ಕಲಿಕೆ ಅಸಾಧ್ಯ. ನೀನು ಬೇರೆ ಕೆಲಸ ನೋಡಿಕೋಎಂಬ ಉದ್ಧಟತನದ ಮಾತು ಅವರ ಬತ್ತಳಿಕೆಯಲ್ಲಿಲ್ಲ.ಸರ್,ಸಂಗೀತ ಶಿಕ್ಷಣ ಗುರುಕುಲ ಮಾದರಿಯಲ್ಲಿರಬೇಕಲ್ಲವೇ?. ಶಿಕ್ಷೆ ಇಲ್ಲದೆ ಶಿಕ್ಷಣ ಸಾಧ್ಯವೇ?. ನೀವ್ಯಾಕೆ ಶಿಷ್ಯರತ್ತ ಇಷ್ಟು ಮೃದುವಾಗಿರುತ್ತೀರಿ? ಎಂದು ಕೇಳಿದಾಗ ಮಧೂರರ ಉತ್ತರ ಗಮನಾರ್ಹ. ಹೌದು, ನೀವು ಹೇಳುವುದು ಸರಿ. ನಾನೂ ಇದೇ ಕಠಿನವಾದ ಹಾದಿಯಲ್ಲಿ ಸಂಗೀತ ಕಲಿತವನು. ಆ ಕ್ರಮವೂ ನನಗೆ ತಿಳಿದಿದೆ. ಆದರೆ ಈಗ ಕಾಲ ಬದಲಾಗಿದೆ. ಈ ಕ್ಷೇತ್ರದತ್ತ ಬರುವವರ ಸಂಖ್ಯೆ ವಿರಳವಾಗುತ್ತಿದೆ. ಅದರೊಂದಿಗೆ ಸಂಗೀತ ಶಿಕ್ಷಕನೂ ಬದುಕಬೇಕಲ್ಲವೇ?. ಹಾಗಾಗಿ ಮೃದು ಧೋರಣೆ ಅನಿವಾರ್ಯ. ಆ ಮೂಲಕವಾದರೂ ಸಂಗೀತಾಸಕ್ತಿ ಬೆಳೆಯಲಿ ಎಂಬುದು ನನ್ನ ನಿಲುವು  ಎನ್ನುತ್ತಾರೆ.
ಊರ ಮತ್ತು ಪರವೂರುಗಳಲ್ಲಿ ಅನೇಕ ಕಚೇರಿಗಳನ್ನು ನೀಡಿದ ಮಧೂರರು ಆ ಭಾಗದಲ್ಲೆಲ್ಲಾ ಪ್ರಶಂಸೆಗೆ ಪಾತ್ರರಾದವರು. ಆದರೆ ಅದನ್ನೆಂದೂ ಹೇಳಿಕೊಳ್ಳುತ್ತಾ ಸಾಗಿದವರಲ್ಲ. ಒಮ್ಮೆ ಮಧೂರರಿಗೆ ಜಿ.ಟಿ.ನಾರಾಯಣ ರಾಯರಿಂದ ಪತ್ರ ಬಂದಿತು. ಇವರ ಒಂದು ಕಚೇರಿಗೆ ನಾರಾಯಣ ರಾಯರು ಹೋಗಿದ್ದರು.  ಜಿ..ಟಿ ಯವರಿಗೆ ಕಚೇರಿ ಖುಷಿ ಕೊಟ್ಟಿರಬೇಕು. ಅವರೇ ಕಿರುವಿಮಶರ್ೆಯನ್ನು ಪತ್ರಿಕೆಯೊಂದರಲ್ಲಿ ಪ್ರಕಟಿಸಿದ್ದರು. ಅದರ ಒಂದು ಪ್ರತಿಯನ್ನು ಅಂಚೆ ಮೂಲಕ ತಮ್ಮ ವೈಯಕ್ತಿಕ ಪತ್ರದೊಂದಿಗೆ ಮಧೂರರಿಗೆ ಕಳುಹಿಸಿದ್ದರು.
ಈಗಾಗಲೇ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಮಧೂರರು ಅಪಾರ ಸಂಖ್ಯೆಯ ಶಿಷ್ಯವೃಂದವನ್ನು ಹೊಂದಿದವರು. ಸಂಗೀತಕ್ಷೇತ್ರದಲ್ಲಿ ನೂತನ ಪ್ರಯೋಗಗಳಿಗೂ ಮುಂದಾದವರು. ಅದರಲ್ಲೂ ಸೈ ಎನಿಸಿಕೊಂಡವರು. ಅಂತಹ ಒಂದು ಪ್ರಯೋಗ ಸಹಸ್ರ ಕಂಠ ಗಾಯನ. ಮಧೂರರ ಶಿಷ್ಯರೇ ಇಲ್ಲಿ ಸಹಸ್ರ ಸಂಖ್ಯೆಯಲ್ಲಿ ಕಂಠದಾನ ಮಾಡುವವರು. ಮಧೂರರಿಗೆ ಇದೀಗ ಸಂಗೀತೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸೋಣ.
     ಶ್ರೀಕಾಂತ ಸಿದ್ದಾಪುರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ