ಭಾನುವಾರ, ಮೇ 20, 2012

ಪ್ರೀತಿ ಹೆಜ್ಜೆಯಿಡುವ ಹಾದಿ ಹಿಂದೆ ಬರದ ಹಾದಿ- ಸತ್ಯವೇ?


ಪ್ರೀತಿಯೊಂದು ನಾಗಸ್ವರ
ಎಕ್ಕುಂಡಿಯವರ ನಾಗಿಯ ಕತೆ 

        ಸುಬ್ಬಣ್ಣ ರಂಗನಾಥ ಎಕ್ಕುಂಡಿಯವರ ಕಥನ ಕವನಗಳಲ್ಲಿ ಒಂದು ನಾಗಿಯ ಕತೆ. ಈ ಕವನದ ಪ್ರಧಾನ ವಸ್ತು ಪ್ರೀತಿ.             ಕವನದ ನಾಯಕಿ ನಾಗಿ ಎಂಬ ಹೆಸರಿನ ತರುಣಿ. ಆಕೆಯ ನಿಜನಾಮ ನಾಗವೇಣಿ. ಪ್ರೀತಿ ಅಥವಾ ಪ್ರೇಮ ಎಷ್ಟು ಸೂಕ್ಷವಾದುದು?. ಹದಿಹರೆಯದವರನ್ನು ಯಾವ ಕ್ಷಣದಲ್ಲೂ ಆಕರ್ಷಿಸಬಹುದು. ಕೆಲವೊಮ್ಮೆ ಅವರ ಬದುಕನ್ನು ಶಾಶ್ವತವಾಗಿ ಅರಳಿಸಿದರೆ; ಕೆಲವು ಸಲ ಕೆಲವು ಕಾಲ ಬದುಕನ್ನು ಅರಳಿಸಿ ನರಳಿಸಬಹುದು. 
     ನಾಗಿ ಹಳ್ಳಿ ಪರಿಸರದಲ್ಲಿ ಬೆಳೆದ ಮುಗ್ಧ ಯುವತಿ. ಆಕರ್ಷಕ ರೂಪವನ್ನು ಹೊಂದಿದವಳು. ಹಳ್ಳಿಯ ಶ್ರಮಜೀವಿ ಮಂಜು   ಗೌಡನ ಒಬ್ಬಳೇ ಮಗಳು. ತಂದೆಯಂತೆ ಈಕೆಯೂ ಶ್ರಮಜೀವಿ. ಹೆಸರಿಗೆ ಅನ್ವರ್ಥವಾಗಿ ಹಾವಿನಂತಹ ಜಡೆ ಉಳ್ಳವಳು.  ತಾಯಿಯ ಆಸರೆಯಲ್ಲಿ ಹಳ್ಳಿ ಜೀವನಕ್ಕೆ ಹೊಂದಿಕೊಂಡವಳು. ಆದರೂ ಈ ಮುಗ್ಧ ಯುವತಿ ಪ್ರೇಮದ ಸುಳಿಯಿಂದ ಪಾರಾಗಲಿಲ್ಲ.  ಸುಪ್ತವಾಗಿ ಯಾವುದೋ  ಮೂಲೆಯಲ್ಲಿ  ಅವಿತಿದ್ದ ಪ್ರೀತಿ ಅಥವಾ ಪ್ರೇಮ ಇಂತಹ ಮುಗ್ಧ ಹೆಣ್ಣುಮಗಳನ್ನೂ ಸೆಳೆಯಿತು ಎನ್ನುವುದರ ಮೂಲಕ ಕವಿ ಪ್ರೀತಿಯ ಶಕ್ತಿಯನ್ನು ಓದುಗರ ಮುಂದಿಡುತ್ತಾರೆ. ಈ ಕುರಿತಂತೆ ಪ್ರೇಮಿಗಳನ್ನು ಚಿಂತನೆಗೆ ಗುರಿಪಡಿಸುತ್ತವೆ..
   ಕವನದ ಆರಂಭದ ಚರಣಗಳು ಯೌವನಕ್ಕೆ ಕಾಲಿಟ್ಟ ಹೆಣ್ಣಿನ ಮನಸ್ಸಿನ ಈ ಸುಪ್ತ ಬಯಕೆಗಳನ್ನು ಪ್ರೇರೇಪಿಸುವ ಪರಿಸರವನ್ನು ವರ್ಣಿಸುತ್ತದೆ. ಎತ್ತರದ ಬೆಟ್ಟದ ಸಾಲು, ಸುತ್ತ ತೆನೆ ಹೊತ್ತ ಹಸಿರು ಗದ್ದೆ, ಸಾಲು ಮರದ ನೆರಳಿನ ಹಾವಿನಂಥ ಹಾದಿ. ಈ ಪರಿಸರಗಳು ಆ ವಯಸ್ಸಿನಲ್ಲಿ ಸಹಜವಾಗಿ ಸುಪ್ತವಾದ ಬಯಕೆಯ ಉದ್ದೀಪನಕ್ಕೆ ವೇದಿಕೆ ನಿರ್ಮಿಸುತ್ತವೆ. (ನಾಗಿಯಂತಹ ಹಳ್ಳಿಯ ಮುಗ್ಧ ಯುವತಿಗೆ ಅಂದು ಈ ಪರಿಸರ ಪ್ರೇರಣೆ ನೀಡಿದರೆ; ಆಧುನಿಕ ಪರಿಸರದಲ್ಲಿ ಮೊಬೈಲ್, ಫೇಸ್ಬುಕ್, ದೂರದರ್ಶನದ ದಾರಾವಾಹಿ, ಚಲನಚಿತ್ರಗಳು ಪ್ರೀತಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತವೆ.) 
ಕವನದ ಮುಂದಿನ ಕೆಲವು ಸಾಲುಗಳು ನಾಗಿಯ ರೂಪವನ್ನು ವರ್ಣಿಸಲು ಮೀಸಲಾಗಿವೆ. ಅವಳ ಬೊಗಸೆ ಕಣ್ಣು, ಗಲ್ಲದ ಮೇಲಿನ ಮಲ್ಲಿಗೆಯಂತಹ ನಗೆ, ಜಡೆಯ ತುಂಬಾ ಮುಡಿದ ಮಲ್ಲಿಗೆಯ ಕಂಪು, ನೂರು ಬಗೆಯ ನಗೆ ಹೀಗೆ ಆಕೆಯ ರೂಪಲಾವಣ್ಯ ಎಂತಹವರನ್ನೂ ಸೆಳೆಯದೇ ಬಿಡದು.  ಕವಿ ತಿಳಿಸುವಂತೆ ಅವಳು ಹುಲ್ಲು ಹೊರೆ ಹೊತ್ತು ಸಾಗುವಾಗ ಸೂರ್ಯನು ನೆತ್ತಿಗೆ ನಿಂತರೂ ತಣ್ಣಗಾದನಂತೆ. ಈ ಸಾಲೇ ಆಕೆಯ ಅಪ್ರತಿಮ ಸೌಂದರ್ಯಕ್ಕೆ ಸಾಕ್ಷಿ ಎನ್ನಬಹುದು.    
       ಹೀಗೆ ಯೌವನಕ್ಕೆ ಕಾಲಿಟ್ಟ ನಾಗಿಯ ಎದೆಗೆ ಪ್ರೀತಿ ಲಗ್ಗೆ ಇಟ್ಟ ಚಿತ್ರಣ ಮುಂದಿನದ್ದು.  ಗೇರು ಹೂವಿನಂತೆ ಗುಂಪು ಗುಂಪಾಗಿ   ಪ್ರೀತಿ ಈಕೆಯ ಎದೆಯ ಮೇಲೆ ಲಗ್ಗೆ ಇಟ್ಟಿತು ಎಂಬ ಕವಿವಾಣಿ ಪ್ರೀತಿ ಎಷ್ಟು ತೀವ್ರವಾಗಿ ಈ ವಯಸ್ಸಿನಲ್ಲಿರುವವರನ್ನು ಪ್ರಭಾವಿಸುತ್ತದೆ ಎಂಬುದನ್ನು ಚಿತ್ರಿಸುವಂತಿದೆ. ಆಕೆಯ ಬದುಕಿನಲ್ಲಿ ಬದಲಾವಣೆಗೆ ಕಾರಣವಾದ ಪ್ರೀತಿ ದಾಳಿ ನಡೆಸಿದ್ದು ಆ ಊರಿನ ಜಾತ್ರೆಯ ಸಂದರ್ಭದಲ್ಲಿ. ಹಳ್ಳಿಗಳಲ್ಲಿ ವರ್ಷಕ್ಕೊಮ್ಮೆ ಬರುವ ಜಾತ್ರೆ ಎಂದರೆ ಏನೋ ಸಂಭ್ರಮ.  ವಸಂತ ಕಾಲವು  ಪ್ರಕೃತಿಯಲ್ಲಿ ತಂದ ಸಂತಸದಂತೆ. ಹೊಸ ಉಡುಗೆಯನ್ನು ಧರಿಸಿ ಖುಷಿ ಪಡುವ ಸಮಯ. ಜಾತ್ರೆಯ ಸಂಭ್ರಮ ಎಲ್ಲರಂತೆ ಮುಗ್ಧ ಯುವತಿ ನಾಗಿಯನ್ನೂ ಬಿಡಲಿಲ್ಲ. ನಾಗಿಯೂ ಹಸಿರು ಸೀರೆ ಉಟ್ಟಿದ್ದಳು.  ಇಂದ್ರ ದನುವಿನಂತೆ ಹೊಳೆವ ರವಕೆ ತೊಟ್ಟಿದ್ದಳು. ಅಂದು ಉತ್ಸಾಹದಿಂದ ಬೆಳಗ್ಗೆ ಬೇಗನೆ ಎದ್ದು ಜಾತ್ರೆಗೆ ತೆರಳುವ ಸಿದ್ಧತೆ ನಡೆಸಿದ್ದಳು. ಹೀಗೆ ಶೃಂಗರಿಸಿಕೊಂಡು ಸಾಗಿದ ಆಕೆಯ ಸುಪ್ತ ಬಯಕೆಗೆ  ಜಾತ್ರೆಯು ಹೊಸ ತಿರುವು ನೀಡುವ ಕ್ಷಣವಾದುದು ಕಾವ್ಯದ ಪ್ರಮುಖ ಅಂಶ.
         ಜಾತ್ರೆಯಲ್ಲಿ ತಾಯಿಯೊಂದಿಗೆ ಸುತ್ತುತ್ತಾ ಸಾಗಿದ ನಾಗಿಯ ದೃಷ್ಟಿಯು ಸ್ತ್ರೀ ಸಹಜವಾದ ಬಯಕೆಯಂತೆ   ಸೀರೆ ಅಂಗಡಿಯ      ಮೇಲೆ ಬಿದ್ದಿತು.  ಸೀರೆ ಅಂಗಡಿಯ ಬಣ್ಣ ಬಣ್ಣದ ಸೀರೆಗಳು ನಾಗಿಯನ್ನು ಮುಂದೆ ಸಾಗದಂತೆ ತಡೆದು ನಿಲ್ಲಿಸಿದವು.  ಒಂದು ಕ್ಷಣ ಸೀರೆಗಳನ್ನೇ ನೋಡುತ್ತಾ ನಿಂತಳು. ಆದರೆ ಆಕೆಯ ದೃಷ್ಟಿ ಸೀರೆಗೇ ಸೀಮಿತವಾಗಲಿಲ್ಲ. ಸೀರೆಗಳನ್ನು ವೀಕ್ಷಿಸುತ್ತಾ ನಾಗಿಯ ಕಣ್ಣು ಅರಿವಿಲ್ಲದಂತೆ ಸೀರೆ ಮಾರುವ ಯುವಕನ ಮೇಲೆ ಬಿತ್ತು. 'ಸೀರೆ ಬೇಕೇ ಸೀರೆ' ಎಂಬ ಆತನ ಕೂಗು ನಾಗಿಯ ಕಿವಿಯನ್ನು ಪ್ರವೇಶಿಸಿ ಅವ್ಯಕ್ತವಾದ ಭಾವನಾ ತರಂಗಗಳನ್ನೆಬ್ಬಿಸಿತು.  ಆತನೂ ಚಿಗುರು ಮೀಸೆಯವನು. ಎಳೆಯ ನಗೆ ಹೊತ್ತವನು. ಆತನೂ ನಾಗಿಯನ್ನು ಒಂದು ಕ್ಷಣ ನೋಡಿದನು. ನಾಗಿಯ ರೂಪು ಆತನ ಎದೆಯ ಕದವನ್ನು ತಟ್ಟಿತು.  ಕಣ್ಣು ಕಣ್ಣು ಕೂಡಿತು. ಮಿಂಚು ಝಳಪಿಸಿತು.  ಹೊಂಚು ಹಾಕುತ್ತಿದ್ದ ಪ್ರೀತಿ ಎಂಬ ಸಿಡಿಲು ಇವರಿಬ್ಬರಿಗೂ ಹೊಡೆಯಿತು.
ಕವನದ ಈ ಚರಣಗಳನ್ನು ಗಮನಿಸಿದಾಗ ಪ್ರೀತಿ ಎಂಬುದು ಕುರುಡು ಎಂಬ ಮಾತನ್ನೇ ಮತ್ತೆ ಮತ್ತೆ ನೆನಪಿಸುವಂತಿವೆ. ಈ ಕ್ಷಣದಲ್ಲಿ ಬುದ್ಧಿ ಶೂನ್ಯವಾಗಬಹುದು. ಹೃದಯ ಭಾವನೆಗಳ ಬೀಡಾಗಬಹುದು. ತಂದೆ, ತಾಯಿ, ಬಂಧುಬಳಗ ಇತ್ಯಾದಿ ಸಂಬಂಧಗಳೆಲ್ಲವೂ ದೂರವಾಗಬಹುದು. ಈ ಪ್ರಬಲ ಶಕ್ತಿ ಪ್ರೀತಿಯ ಈ ಕ್ಷಣಕ್ಕಿದೆ. ನಾಗಿಯನ್ನು ಯಾವ ರೇವಿಗೊಯ್ಯಿತೋ ಎಂಬ ಕವಿಯ ಮಾತು ಇದನ್ನೇ ಪುಷ್ಟೀಕರಿಸುವಂತಿದೆ. ಹಾಗಾಗಿಯೇ ಪ್ರೀತಿ ಎಂಬುದು ಕವಿಯ ಪ್ರಕಾರ ಸಿಡಿಲಿನಂತೆ. ಇದು ಹೊತ್ತಿ ಉರಿವ ಪಂಜಿನಂತೆ. ಪ್ರೇಮಿಗಳ ಬದುಕಿನ ಭವಿಷ್ಯವು ಈ ಸಂದರ್ಭವನ್ನು ಸ್ವೀಕರಿಸುವ ಅವರ ಮನ: ಸ್ಥಿತಿಯ ಮೇಲೆ ನಿಂತಿದೆ.
       ಜಾತ್ರೆಯ ಒಂದು ಕ್ಷಣದ ನೋಟವೇ ನಾಗಿಯ ಮನಸ್ಸನ್ನು ಕೆಡಿಸಿತು. ಅಂದಿನಿಂದ ಅವಳು ಎಂದಿನ ನಾಗಿಯಲ್ಲ. ಅವಳ ಮನದ ತುಂಬಾ ಸೀರೆ ಮಾರುತ್ತಿದ್ದ ಯುವಕನ ನೆನಪು. ಅವಳ ಕಿವಿಯ ತುಂಬಾ ಆತನ ಸೀರೆ ಬೇಕೇ ಎಂಬ ಕೂಗು. ಹೀಗೆ ಮುಂದುವರಿದ ಕವನದ ಕೊನೆಯಲ್ಲಿ ನಾಗಿ ನಾಪತ್ತೆಯಾಗುವ ಚಿತ್ರಣವಿದೆ. ಇದರ ಅರಿವಿರದ ಮಂಜು ಗೌಡ ದಂಪತಿಗಳು ನಾಗಿಯ ನಾಪತ್ತೆಯಿಂದ ಕಂಗಾಲಾಗುತ್ತಾರೆ. ನಾಪತ್ತೆಯಾದ ನಾಗಿಗಾಗಿ ಅವರ ಹುಡುಕಾಟದೊಂದಿಗೆ ಕವನ ಕೊನೆಗೊಳ್ಳುತ್ತದೆ.
      ಕವಿ ಎಕ್ಕುಂಡಿಯವರು ಪ್ರೀತಿಯ ಶಕ್ತಿ ಮತ್ತು ನಾಗಿಯ ನಾಪತ್ತೆಗಳನ್ನಷ್ಟೇ ಕವನದಲ್ಲಿ ಹೇಳಿ ಮುಕ್ತಾಯಗೊಳಿಸುತ್ತಾರೆ. ಇದರ   ಬಗ್ಗೆ ಯಾವುದೇ ನಿಲುವನ್ನು ತಾಳುವ ಸ್ವಾತಂತ್ರ್ಯವನ್ನು ಓದುಗರಿಗೇ ಬಿಡುತ್ತಾರೆ. ಆದರೂ ಕವನದ ಕೆಲವು ಸಾಲುಗಳು ಓದುಗರನ್ನು ವಿವಿಧ ಚಿಂತನೆಗೆ ಹಚ್ಚಿಸಲು ಸಹಾಯವಾಗುವಂತಿವೆ. ನಾಗಿಯಂತಹ ಮುಗ್ಧ ಯುವತಿಯನ್ನು ಪ್ರೀತಿಯ ನಾಗಸ್ವರ ದಿಕ್ಕು ತಪ್ಪಿಸಿತು ಎಂಬುದು ಕವನದಲ್ಲಿ ಕಾಣಿಸುವ ಒಂದು ಸಾಮಾನ್ಯ ಅಂಶ. 'ಯಾರು ಹಾಕಿ ಹೋದರವಳ ಎದೆಗೆ ಗಂಧ ಧೂಪವ?' 'ಯಾರು ಹೊತ್ತಿಸಿಟ್ಟರೊಳಗೆ ಬಂಗಾರದ ದೀಪವ?' 'ಪ್ರೀತಿ ಪಂಜು ಹೊತ್ತಿಸಿತ್ತು ನಾಗವೇಣಿ ನಾಗಿಗೆ' ಎಂಬ ಸಾಲುಗಳು ಹಳ್ಳಿಯ ಮುಗ್ಧ ಯುವತಿ ನಾಗಿಯ ಬಗ್ಗೆ ಅನುಕಂಪವನ್ನು ಸೂಚಿಸುವಂತಿವೆ. ಕವನದಲ್ಲಿ ಬರುವ 'ಪ್ರೀತಿ ಹೊತ್ತಿಸಿಟ್ಟ ದೀಪ, ದಾರಿಯಲ್ಲು ಕತ್ತಲು' 'ಕತ್ತಲಲ್ಲಿ ಎಡಹುವಂತೆ ದೀಪವಾರಿತು' 'ದೀಪ ನಿಲ್ಲಬಹುದೇ ಗಾಳಿ ಬಂದು ಮುತ್ತಲು' ಮೊದಲಾದ ಸಾಲುಗಳು ಕುರುಡು ಪ್ರೀತಿಯ ವಿರುದ್ಧ ಜಾಗರೂಕರಾಗಿರುವಂತೆ ಯುವಸಮುದಾಯವನ್ನು ಎಚ್ಚರಿಸುವಂತಿವೆ. ಇಂತಹ ಕ್ಷಣಿಕ ಪ್ರೀತಿಗೊಳಗಾದ ಯುವ ಜೋಡಿ ಜೀವನದ ಕೊನೆಯವರೆಗೂ ಒಂದಾಗಿ ಬಾಳಿಯಾರೇ? ಎಂಬುದರತ್ತ ಚಿಂತಿಸುವಂತೆ ಮಾಡುತ್ತವೆ. 'ಪ್ರೀತಿ ಹೆಜ್ಜೆಯಿಡುವ ಹಾದಿ, ಹಿಂದೆ ಬರದ ಹಾದಿಯು' ಎಂಬ ಸಾಲು ಪ್ರೀತಿಯ ತೀವ್ರತೆಯನ್ನು ವಿವರಿಸುವುದರೊಂದಿಗೆ, ನಾಪತ್ತೆಯಂತಹ ಪ್ರಕರಣಗಳು ಹೆಚ್ಚುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಹೆಚ್ಚು ಚಿಂತನಾರ್ಹವಾಗಿವೆ. 'ಇಲ್ಲೆ ಅಲ್ಲವೇನು ಹೆಣ್ಣಿಗಿರುವ ಭಯ ಅನಾದಿಯು' ಎಂಬ ಸಾಲು ಸ್ತ್ರೀಯರ ಕುರಿತಂತೆ ಮನುವಿನ ನಿಲುವನ್ನು ಮತ್ತೊಮ್ಮೆ ವಿಮಶರ್ೆಗೆ ಒಡ್ಡುವಂತಿದೆ. ಸ್ತ್ರೀ ತನ್ನ ಬಗ್ಗೆ ತಾನೇ ಜಾಗರೂಕಳಾಗಿ ಚಿಂತಿಸುವುದರ ಮೂಲಕವೇ ಮಾನಸಿಕ ಮತ್ತು ದೈಹಿಕವಾದ ಗುಲಾಮಗಿರಿಯಿಂದ ಹೊರಬರಬೇಕಾಗಿದೆ. ಅದರಲ್ಲಿಯೇ ಆಕೆಯ ಸ್ವಾತಂತ್ರ್ಯದ ಸತ್ತ್ವ ಅಡಗಿದೆ. 
          ನರಸಿಂಹಸ್ವಾಮಿಯವರು 'ಪ್ರೇಮವೆನಲು ಹಾಸ್ಯವೇ' ಎಂದು ತಮ್ಮ ಕವಿತೆಯೊಂದರಲ್ಲಿ ಪ್ರಶ್ನಿಸುತ್ತಾರೆ. ಆಧುನಿಕ ಕಾಲದಲ್ಲಿ  ಅನೇಕ ಮುಗ್ಧ ಯುವತಿಯರ ಪಾಲಿಗೆ ಪ್ರೇಮವೇ ಪಾಶವಾಗುತ್ತಿರುವುದು ದುರಂತ.  ಪ್ರೇಮದ ಹೆಸರಿನಲ್ಲಿ ವಂಚಿಸುವ ಪ್ರಯತ್ನದ ವಿರುದ್ಧ ಯುವತಿಯರು ಜಾಗೃತರಾಗಬೇಕಾಗಿದೆ. ಕೃತಕವಾದ ಆಕರ್ಷಣೆಗಳಿಗೆ ಒಳಗಾಗದೇ ಎಚ್ಚರದಿಂದ ಹೆಜ್ಜೆ ಇಡಬೇಕೆಂಬುದೇ ಕವಿಯ ಸಂದೇಶವಾಗಿರಬಹುದಲ್ಲವೇ?.
ಡಾ.ಶ್ರೀಕಾಂತ್ ಸಿದ್ದಾಪುರ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ