ಭಾನುವಾರ, ಮೇ 15, 2011

Osho

ನಾಭಿ ಕೆಂದ್ರ

ಇದೀಗ ಪರೀಕ್ಷಾ ಫಲಿತಾಂಶಗಳು ಹೊರಬಂದಿವೆ. ಅದರ ಹಿಂದೆಯೇ ಅನುತ್ತೀರ್ಣರಾದವರಲ್ಲಿ ಕೆಲವರು ಆತ್ಮಹತ್ಯೆಯತ್ತ ಮುಂದಾಗುತ್ತಿದ್ದಾರೆ. ಇದನ್ನೊಂದು ಗಂಭೀರ ಸಮಸ್ಯೆಯಾಗಿ ಸಮಾಜವು ಸ್ವೀಕರಿಸುತ್ತಿದೆ.  ಹಾಗಾಗಿ ಅನುತ್ತೀರ್ಣರಲ್ಲಿ ಧೈರ್ಯ ತುಂಬುವ ಪ್ರಯತ್ನಗಳೂ ನಡೆಯುತ್ತಿವೆ.  ವಿದ್ಯಾಥರ್ಿಗಳ ಈ ಮನ:ಸ್ಥಿತಿಗೆ ಕಾರಣಗಳೇನು ?. ಇದು ನಮ್ಮ ಶಿಕ್ಷಣ ಪದ್ಧತಿಯ ದೋಷವೇ?. ಅಥವಾ ಮಕ್ಕಳ ಬೆಳವಣಿಗೆಯತ್ತ ನಾವು ತೋರಿಸುತ್ತಿರುವ ನಿರ್ಲಕ್ಷವೇ?.
ಶರೀರದ ಮೂರು ಕೇಂದ್ರಗಳು: ನಮ್ಮ ಶರೀರದ ಕುರಿತು ಪ್ರಾಚೀನ ಮುನಿಗಳು ಸಾಕಷ್ಟು ಅಧ್ಯಯನ ನಡೆಸಿರುತ್ತಾರೆ. ಅವರ ಪ್ರಕಾರ ನಮ್ಮ ಶರೀರದಲ್ಲಿ ಮೂರು ಮುಖ್ಯ ಕೇಂದ್ರಗಳಿವೆ. ನಾಭಿಯ ಸಮೀಪ, ಎದೆಯ ಭಾಗದಲ್ಲಿ ಮತ್ತು ಮೆದುಳಿನ ಕಡೆ.  ಒಂದು ಜೈವಿಕ ಕೇಂದ್ರ, ಇನ್ನೊಂದು ಭಾವನೆಗಳ ಕೇಂದ್ರ ಹಾಗೂ ಮತ್ತೊಂದು ಚಿಂತನೆಗಳ ಕೇಂದ್ರ. ಈ ಮೂರೂ ಕೇಂದ್ರಗಳಿಗೆ ಅವುಗಳದ್ದೇ ಆದ ಕೆಲಸಗಳಿವೆ. ಆ ಕೆಲಸಗಳನ್ನು ಆಯಾ ಕೇಂದ್ರಗಳಿಗೆ  ಸಮರ್ಪಕವಾಗಿ ನಿರ್ವಹಿಸುವ ಹೊಣೆಯನ್ನು ಹೊರಿಸುವ ಕೆಲಸ ನಮ್ಮಿಂದಾಗಬೇಕು. ಈ ಮೂರರಲ್ಲಿ ಯಾವುದೇ ಒಂದು ಕೇಂದ್ರಕ್ಕೆ ವಿಪರೀತವಾದ ಕೆಲಸದ ಹೊರೆಯನ್ನು ಹೊರಿಸಿದಲ್ಲಿ ಸಹಜವಾಗಿ ಸಮತೋಲನ ತಪ್ಪುತ್ತದೆ.  ಉಳಿದ ಕೇಂದ್ರಗಳು ನಿಷ್ಕ್ರೀಯವಾಗುತ್ತವೆ.  ಈಗ ನಡೆಯುತ್ತಿರುವುದೂ ಇದುವೇ. ನಾವು ಮೂರು ಕೇಂದ್ರಗಳಲ್ಲಿ ಮೆದುಳಿಗೆ ಮಾತ್ರ ಅತ್ಯಧಿಕ ಕೆಲಸಗಳನ್ನು ನೀಡುತ್ತಿದ್ದೇವೆ. ನಮ್ಮ ಶಿಕ್ಷಣ ಪದ್ಧತಿಯೂ ಈ ಕೇಂದ್ರದ ಸುತ್ತ ಸಂಚರಿಸುವುದಕ್ಕೇ ಆದ್ಯತೆ ನೀಡುತ್ತಿದೆ. ಇನ್ನೊಂದರ್ಥದಲ್ಲಿ ಎದೆ ಮತ್ತು ನಾಭಿಗಳಲ್ಲಿರುವ ಕೇಂದ್ರಗಳು ನಿರ್ವಹಿಸಬೇಕಾದ ಕೆಲಸಗಳನ್ನೂ ಮೆದುಳಿನ ಕೇಂದ್ರಕ್ಕೆ ವಗರ್ಾಯಿಸುವ ಪ್ರಯತ್ನ ನಡೆಯುತ್ತಿದೆ.
ಜೈವಿಕ ಕೇಂದ್ರ ನಾಭಿ : ಮನುಷ್ಯನ ಶರೀರದಲ್ಲಿ ನಾಭಿ ಕೇಂದ್ರ ಅತ್ಯಂತ ಮುಖ್ಯವಾದುದು ಎಂಬುದು ಹಿರಿಯರ ಅಭಿಮತ. ಇದು ಜೈವಿಕ ಕೇಂದ್ರ. ಮಗು ತಾಯಿಯ ಗರ್ಭದಲ್ಲಿರುತ್ತದೆ. ಆಗ ತಾಯಿಯ ಜೀವಶಕ್ತಿ ನಾಭಿ ಕೇಂದ್ರದ ಮೂಲಕವೇ ಮಗುವಿನೊಳಗೆ ಪ್ರವೇಶಿಸುತ್ತದೆ.  ಆತ್ಮನನ್ನು ಪ್ರವೇಶಿಸಲೂ ನಾಭಿ ಕೇಂದ್ರವೇ ಮೂಲ ಆಧಾರವಂತೆ.  ನಾಭಿ ಕೇಂದ್ರ ಎಷ್ಟು ಪ್ರಭಾವಶಾಲಿ ಎಂಬ ಬಗ್ಗೆ ಓಶೋ ಒಂದು ಕಡೆ  ವಿಜ್ಞಾನಿಗಳು ನಡೆಸಿದ ಪ್ರಯೋಗಗಳ ಆಧಾರದ ಮೇಲೆ ಹೇಳುತ್ತಾರೆ. ಹೃದಯ ಬಡಿತ ನಿಂತ ಆರು ನಿಮಿಷಗಳ ಕಾಲ ಜೀವಶಕ್ತಿಯು ಈ ನಾಭಿ ಕೇಂದ್ರದಲ್ಲಿ ಆಶ್ರಯ ಪಡೆದಿರುತ್ತದಂತೆ.  ಈ ಅವಧಿಯಲ್ಲಿ ಹೃದಯವನ್ನು ಪುನರುತ್ತೇಜನಗೊಳಿಸಲು ನಾವು ಸಫಲರಾದಲ್ಲಿ ಜೀವಗಳನ್ನು ಉಳಿಸಬಹುದಂತೆ. ಯಾವುದೇ ಅಪಾಯ ಅಥವಾ ಅವಗಡಗಳ ಮೊದಲ ಸೂಚನೆ ಲಭಿಸುವುದು ಈ ನಾಭಿ ಕೇಂದ್ರಕ್ಕೆಂದು ತಜ್ಞರ ಅಭಿಪ್ರಾಯ. ಆಗ ಈ ಕೇಂದ್ರದಲ್ಲಿ ಕಂಪನದ ಅನುಭವ ಉಂಟಾಗುವುದು.  ಈ ನಾಭಿ ಕೆಂದ್ರದ ಮೂಲಕವೇ ಗರ್ಭದಲ್ಲಿರುವ ಮಗು ತಾಯಿಯ ಜೈವಿಕ ಶಕ್ತಿ ಪಡೆಯುತ್ತಿರುತ್ತದೆ. ಆದುದರಿಂದಲೇ ಮಗು ಹುಟ್ಟಿದ ಕೂಡಲೇ ಹೊಕ್ಕುಳ ಬಳ್ಳಿಯನ್ನು ಕತ್ತರಿಸುತ್ತಾರೆ. ಮಗುವು ತಾಯಿಯ ಗರ್ಭದಿಂದ ಹೊರಬಂದಾಗ ಅತ್ತರೆ ಅದು ಆರೋಗ್ಯದ ಸಂಕೇತ ಎಂಬ ನಂಬಿಕೆ ನಮ್ಮದು. ಈ ಅಳುವಿಕೆಗೆ ಮುಖ್ಯ ಕಾರಣ ನಾಭಿ ಮೂಲಕ ಈ ತನಕ ಯಾವ ಶಕ್ತಿಯನ್ನು ಮಗು ಪಡೆಯುತ್ತಿತ್ತೋ ಅದನ್ನು ಕಳೆದುಕೊಂಡ ವೇದನೆ.  ಹಾಗಾಗಿ ತಾಯಿಯ ಗರ್ಭದಲ್ಲಿರುವಾಗಲೇ ಈ ನಾಭಿ ಕೇಂದ್ರವು ಸಕ್ರಿಯವಾಗಿ ಕೆಲಸ ಮಾಡುತ್ತಿರುತ್ತದೆ.
ಭಾವನೆಗಳ ಕೇಂದ್ರ ಹೃದಯ : ಮನುಷ್ಯನು ತಾಯಿಯ ನಾಭಿ ಕೇಂದ್ರದ ಸಂಪರ್ಕ ಕಳೆದುಕೊಂಡ ಅನಂತರ ಅವನ ಸಂಬಂಧ ತಾಯಿಯ ಎದೆಯೊಂದಿಗೆ. ಮಗುವಿನ ಬೆಳವಣಿಗೆಯು  ತಾಯಿಯ ಎದೆಯ ಹಾಲನ್ನು ಅವಲಂಬಿಸಿಕೊಂಡಿರುತ್ತದೆ.  ಮಗುವು ಈ ಹಂತದಲ್ಲಿ ತಾಯಿಯ ಅಪ್ಪುಗೆಯಲ್ಲಿ ಸಾಕಷ್ಟು ಸಮಯ ಇರುತ್ತದೆ. ತಾಯಿ ತನ್ನ ಮಗುವಿಗೆ ಎದೆಯ ಹಾಲನ್ನು ನೀಡುವಲ್ಲಿ ಅಸಡ್ಡೆ ತೋರಿಸಿದಲ್ಲಿ ಹೃದಯದ ಈ ಕೇಂದ್ರ ವಿಕಾಸವಾಗದು. ಕೆಲವೊಮ್ಮೆ ಮಕ್ಕಳಿಗೆ ಬಲಾತ್ಕಾರವಾಗಿ ಎದೆಯ ಹಾಲನ್ನು ಬಿಡಿಸುವುದುಂಟು. ಕೆಲವು ತಾಯಂದಿರಿಗೆ ಮಗುವಿಗೆ ಎದೆ ಹಾಲನ್ನು ನೀಡುವುದೆಂದರೆ ನಿರಾಸಕ್ತಿ. ಎಷ್ಟು ಬೇಗ ಮಗುವನ್ನು ಈ ಅಭ್ಯಾಸದಿಂದ ಬಿಡಿಸುವುದೆಂಬ ಬಯಕೆ. ಈ ಹಂಬಲಗಳೆಲ್ಲವೂ ಪರೋಕ್ಷವಾಗಿ ಮಕ್ಕಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಹ ಮಕ್ಕಳು ಪ್ರಾಯ ಬಂದ ಮೇಲೆ ವಿಕೃತ ಕಾಮಿಗಳಾದರೂ ಅಚ್ಚರಿ ಪಡಬೇಕಾಗಿಲ್ಲ. ಹಾಗಾಗಿ ಮಗುವಿನಲ್ಲಿ ಹೃದಯದ ಈ ಕೇಂದ್ರದ ವಿಕಾಸಕ್ಕೆ ಆದ್ಯತೆ ನೀಡಬೇಕು.
ಚಿಂತನೆಗಳ ಕೇಂದ್ರ ಮೆದುಳು :
 ಈ ಕೇಂದ್ರದ ವಿಕಾಸಕ್ಕೆ ಇಂದು ಎಲ್ಲಿಲ್ಲದ ಪ್ರಯತ್ನ ನಡೆಯುತ್ತಿದೆ.  ಶಾಲಾ, ಕಾಲೇಜುಗಳ ಶಿಕ್ಷಣದ ಮುಖ್ಯ ಗುರಿಯೇ ಮೆದುಳಿನ ಚಟುವಟಿಕೆಗಳನ್ನು ಅತಿಯಾಗಿ ಬೆಳೆಸುವುದು.  ಹಾಗಾಗಿ ಈ ಕೇಂದ್ರಕ್ಕೆ ವಿಪರೀತ ಒತ್ತಡ. ಈ ಅತಿಯಾದ ಒತ್ತಡದಿಂದ ಉಳಿದ ಕೇಂದ್ರಗಳತ್ತ ನಾವು ಅನಾಸಕ್ತರು. ಹಾಗಾಗಿ ಭಯ, ಚಂಚಲತೆ, ದ್ವೇಷ, ಅಸೂಯೆ ಮೊದಲಾದ ವಿಕಾರಗಳು ಕಾಣಿಸಿಕೊಳ್ಳುವುದು. ಆತ್ಮಹತ್ಯೆಯಂತಹ ನಿಧರ್ಾರದ ಹಿಂದೆ ಮೆದುಳಿನ ಈ ಕೇಂದ್ರದ ಮೇಲಿನ ಅತಿಯಾದ ಒತ್ತಡವೂ  ಒಂದು ಕಾರಣ. ಇದಕ್ಕೆ ಪೂರಕವಾದ ಇತರ ಕೇಂದ್ರಗಳ ವಿಕಾಸಕ್ಕೆ ನಾವು ಕೊಡುವ ಕನಿಷ್ಠ ಕಾಳಜಿಯೂ ಈ ಅನಾಹುತಕ್ಕೆ ಅವಕಾಶ ನೀಡುತ್ತದೆ.
ನಾಭಿ ಕೇಂದ್ರದ ವಿಕಾಸ ಸಾಧ್ಯವೇ ?. ಹೃದಯ ಮತ್ತು ನಾಭಿ ಕೇಂದ್ರಗಳ ವಿಕಾಸದತ್ತ ಗಮನ ಹರಿಸಬೇಕಾದ ತುತರ್ು ಕೆಲಸ ಇಂದು ಅನಿವಾರ್ಯ. ಅದರಲ್ಲೂ ನಾಭಿ ಕೇಂದ್ರದ ವಿಕಾಸ ಅತ್ಯಗತ್ಯ. ಇದರ ವಿಕಾಸಕ್ಕಾಗಿ ಮಕ್ಕಳಲ್ಲಿ ಧೈರ್ಯ ತುಂಬುವ ಕೆಲಸ ನಡೆಯಬೇಕು. ನಮ್ಮ ಹಿಂದಿನವರು ಹಲವು ವೀರರ ಕತೆಗಳನ್ನು ಮನೆಯಲ್ಲಿ ಮಕ್ಕಳಿಗೆ ಹೇಳುತ್ತಿದ್ದರು. ಇದು ಪರೋಕ್ಷವಾಗಿ ಅವರಲ್ಲಿ ಧೈರ್ಯ ತುಂಬುವ ಪ್ರಯತ್ನ.  ಮಕ್ಕಳನ್ನು ಸಾಹಸ ಕ್ರಿಯೆಗಳತ್ತ ಹುರಿದುಂಬಿಸುವುದರಿಂದಲೂ ಈ ಕೇಂದ್ರದ ವಿಕಾಸವಾಗುತ್ತದೆ. ಮಕ್ಕಳಿಗೆ ಪ್ರತಿ ಸಂದರ್ಭದಲ್ಲೂ ಭಯ ಭಿತ್ತಿ, ಇದನ್ನು ಮಾಡಬೇಡ, ಅದನ್ನು ಮಾಡಬೇಡ ಎಂದು ಎಚ್ಚರಿಸುತ್ತಿದ್ದಲ್ಲಿ ನಾಭಿ ಕೇಂದ್ರ ನಿಷ್ಕ್ರೀಯವಾಗುತ್ತದೆ. ಜೀವನದಲ್ಲಿ ಗಂಡಾಂತರಗಳು ಎದುರಾದಷ್ಟೂ ಈ ಕೇಂದ್ರವು ಸಕ್ರಿಯವಾಗುತ್ತದೆ. ನೀತ್ಸೆ ಎಂಬ ತತ್ತ್ವಜ್ಞಾನಿಯನ್ನು ಒಮ್ಮೆ ಒಬ್ಬರು ಕೇಳಿದರಂತೆ. ವ್ಯಕ್ತಿತ್ವವನ್ನು ವಿಕಾಸಗೊಳಿಸುವುದು ಹೇಗೆ?. ಆಗ ಆತ ಕೊಟ್ಟ ಉತ್ತರ. ನಿಮ್ಮ ವ್ಯಕ್ತಿತ್ವ ವಿಕಾಸಗೊಳ್ಳಬೇಕಾದರೆ ಗಂಡಾಂತರದಲ್ಲಿ ಜೀವಿಸಿ. ಹಾಗಾಗಿ ಗಂಡಾಂತರಗಳು ಎದುರಾದಾಗಲೆಲ್ಲಾ ಅದನ್ನು ಸ್ವಸ್ಥ ಮನಸ್ಸಿನಿಂದ ಸ್ವೀಕರಿಸಬೇಕು. ಇದರಿಂದ ನಾಭಿ ಕೇಂದ್ರ ವಿಕಾಸವಾಗುತ್ತದೆ. ನಾಭಿ ಕೇಂದ್ರದ ವಿಕಾಸಕ್ಕೆ ಅಗತ್ಯವಾದ ಇನ್ನೊಂದು ಕ್ರಮ ನಮ್ಮ ಉಸಿರಾಟದಲ್ಲಿದೆ. ಪ್ರಾಣಾಯಾಮದ ಅಭ್ಯಾಸ ಇಲ್ಲಿ ಮುಖ್ಯವಾದುದು.  ನಮ್ಮ ಉಸಿರಾಟದ ಕ್ರಿಯೆಗಳು ಈಗ ಹೆಚ್ಚೆಂದರೆ ಎದೆಯ ತನಕ. ಆದರೆ ನಾಭಿಯವರೆಗೆ ಉಸಿರನ್ನು ಎಳೆದುಕೊಳ್ಳುವ ಅಭ್ಯಾಸ ಬಹು ಪ್ರಯೋಜನಕಾರಿ. ಈ ಕೇಂದ್ರದ ವಿಕಾಸಕ್ಕೆ ವಿಭಾಗೀಯ ಪ್ರಾಣಾಯಾಮವನ್ನೂ ಅಭ್ಯಸಿಸಬಹುದು. ಓಂ ಕಾರದಲ್ಲಿರುವ ಅ ವನ್ನು ಉಚ್ಚರಿಸುವಾಗ ನಾಭಿ ಕೇಂದ್ರದತ್ತ ಗಮನವಿಟ್ಟಲ್ಲಿ ಈ ಕೇಂದ್ರದ ವಿಕಾಸಕ್ಕೆ ಅನುಕೂಲ.
ಇವುಗಳನ್ನು ನಮ್ಮ ಶಿಕ್ಷಣ ಪದ್ಧತಿಯಲ್ಲಿ ವಡಿಸಬಹುದೇ ?:
 ನಮ್ಮ ಶಿಕ್ಷಣ ಪದ್ಧತಿಯಲ್ಲಿ ಜೀವದ ಎಲ್ಲಾ ಕೇಂದ್ರಗಳನ್ನು ವಿಕಾಸಗೊಳಿಸುವ ಕೆಲಸವಾಗಬೇಕಿದೆ. ಅದಕ್ಕಾಗಿ ಮನೆಯವರು ಮತ್ತು ಶಿಕ್ಷಣ ಸಂಸ್ಥೆಗಳು ಶ್ರಮಿಸಬೇಕಾಗಿವೆ. ಮಕ್ಕಳಿಗೆ ನಮ್ಮ ದೇಶದ ವೀರಪುರುಷರ ಕತೆಗಳನ್ನು ತಿಳಿಸುವ ಕೆಲಸವಾಗಬೇಕಾಗಿದೆ. ಕೇವಲ ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಬೋಧಿಸುವುದರಿಂದಷ್ಟೇ ಈ ಕೆಲಸವಾಗದು.   ಶಿಕ್ಷಣದಲ್ಲಿ ಸಾಹಸಕ್ಕೆ ಪೂರಕವಾದ ಕ್ರೀಡೆ ಅಥವಾ ಕೆಲಸಗಳತ್ತ ಗಮನ ಹರಿಸಬೇಕು. ಸಾಹಸಕ್ಕೆ ಸಂಬಂಧಿಸಿದ ಈ ಚಟುವಟಿಕೆಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ. ಶಿಕ್ಷಣದಲ್ಲಿ ಯೋಗ ಮತ್ತು ಪ್ರಾಣಾಯಾಮಗಳನ್ನು ಶಿಸ್ತುಬದ್ಧವಾಗಿ ಕಲಿಸುವ ಕೆಲಸವಾಗಬೇಕು. 
 ಆದರೆ ಇವುಗಳು ಸಾಧ್ಯವೇ ?.  ಜಾಗತೀಕರಣದ ನೆಪದಲ್ಲಿ ಶಿಕ್ಷಣ ವ್ಯಾಪಾರೀಕರಣಗೊಳ್ಳುತ್ತಿದೆ. ಕೇವಲ ಉದ್ಯೋಗ ಗಳಿಕೆ ಮಾತ್ರ ಇಲ್ಲಿಯ ಮುಖ್ಯ ಉದ್ದೇಶ. ಅದಕ್ಕೆ ಪೂರಕವಾದ  ವಿಷಯಗಳ ಅಧ್ಯಯನಕ್ಕಷ್ಟೇ ಆದ್ಯತೆ. ಸಾಹಸ ಕ್ರೀಡೆ, ಸಂಸ್ಕೃತಿ, ಕಲೆ, ಇತಿಹಾಸ, ಸಾಹಿತ್ಯ, ಭಾಷಾ ಕಲಿಕೆ, ಪ್ರಾಣಾಯಾಮಗಳೆಲ್ಲಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿವೆ. ಇವುಗಳ ಕಲಿಕೆಯಿಂದ ಏನೂ ಪ್ರಯೋಜನವಿಲ್ಲ ಎಂಬ ಮನೋಭಾವ ಮೂಡುತ್ತಿದೆ. ಪರಿಣಾಮವಾಗಿ ಬೆಳವಣಿಗೆಯಲ್ಲಿ ಅಸಮತೋಲನ ಎದ್ದು ಕಾಣುತ್ತಿದೆ. ಮಕ್ಕಳಲ್ಲಿ ಸಾಹಸದ ಮನೋಭಾವವೂ ಕಣ್ಮರೆಯಾಗಿ, ಹತಾಶೆಯಂತಹ ಮಾನಸಿಕ ರೋಗಗಳು ಅವರನ್ನು ಕಾಡುತ್ತಿವೆ. ಇದರಿಂದ ಆತ್ಮಹತ್ಯೆಯಂತಹ ದುರಂತಗಳು ಹೆಚ್ಚುತ್ತಿವೆ.  ಈ ದುರಂತವನ್ನು ತಡೆಗಟ್ಟುವಲ್ಲಿ ಸಮಾಜ, ಸರಕಾರ ಮತ್ತು ಶಿಕ್ಷಣ ಸಂಸ್ಥೆಗಳು ಶ್ರಮಿಸಬೇಕಾಗಿವೆ.
       ಡಾ.ಶ್ರೀಕಾಂತ್ಸಿದ್ದಾಪುರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ