ಸೋಮವಾರ, ಮೇ 16, 2011

Pranayama

ಪ್ರಾಣಾಯಾಮದ ಮಹತ್ತ್ವ
 ಬದುಕಿಗೆ ಉಸಿರಾಟ ಅನಿವಾರ್ಯ. ಇದು ನಮಗೆ ಅರಿವಿಲ್ಲದೇ ನಡೆಯುತ್ತಿರುವ ಈ ಕ್ರಿಯೆ.  ಉಸಿರಾಟ ನಿಂತ ತತ್ಕ್ಷಣ ನಮ್ಮ ಬದುಕಿಗೂ ಪೂರ್ಣವಿರಾಮ. ಸರಳವಾಗಿ ಹೇಳುವುದಾದರೆ ಈ ಉಸಿರಾಟದ ಬಗ್ಗೆ ಗಮನ ಕೊಡುವಂತೆ ನಮ್ಮನ್ನು ಎಚ್ಚರಿಸುವ  ಶಾಸ್ತ್ರವೇ ಪ್ರಾಣಾಯಾಮ.
 ಉಸಿರಾಟದ ಲೆಕ್ಕಾಚಾರ :  ನಾವು ನಿರಂತರ ಉಸಿರಾಡುತ್ತೇವೆ. ಅದರೆ ಅದರ ಕಡೆ ಎಷ್ಟು ಗಮನವನ್ನು ಕೊಡುತ್ತಿದ್ದೇವೆ?. ಹೀಗೆ ಪ್ರಶ್ನಿಸಿಕೊಂಡಾಗ ಉತ್ತರ ಕೊಡುವಲ್ಲಿ ಪ್ರತಿಯೊಬ್ಬರೂ  ಸಹಜವಾಗಿಯೇ ಎಡವುತ್ತಾರೆ.  ನಮ್ಮ ಪ್ರಾಚೀನ ಋಷಿ ಮುನಿಗಳು ಉಸಿರಾಟದ ಬಗ್ಗೆ ಎಷ್ಟು ಗಮನ ಹರಿಸುತ್ತಿದ್ದರು ಎಂದರೆ ಇದರ ಮೂಲಕವೇ ತಮ್ಮ ಬದುಕಿನ ಆಯುಷ್ಯವನ್ನು ಅವರು ಅಳೆಯುತ್ತಿದ್ದರು. ಒಂದು ಲೆಕ್ಕಾಚಾರದ ಪ್ರಕಾರ ಸಾಮಾನ್ಯವಾಗಿ ಮನುಷ್ಯನ ಉಸಿರಾಟ ನಿಮಿಷಕ್ಕೆ 15. ಅಂದರೆ ಒಂದು ಗಂಟೆಗೆ 900. ಒಂದು ದಿನಕ್ಕೆ  21600.
  ನಮ್ಮ ದೇಹದ ಹೊರಭಾಗವನ್ನು ಸ್ನಾನದ ಮೂಲಕ ಶುದ್ಧಿಕರಿಸುತ್ತೇವೆ. ಆದರೆ ನಮ್ಮ ದೇಹದ ಒಳಭಾಗದ ಶುದ್ಧತೆ ಬೇಡವೇ ?. ಅದು ಪ್ರಾಣಾಯಾಮದಿಂದ ಸಾಧ್ಯ. ನಮ್ಮ ದೇಹದ ಒಳಭಾಗದಲ್ಲಿ ಕೆಲಸ ನಿರ್ವಹಿಸುವ ನಾಡಿಗಳ ಸಂಖ್ಯೆಯ ಬಗ್ಗೆ ಯೋಚಿಸಿದಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ. ಅವುಗಳ ಸಂಖ್ಯೆ ಸುಮಾರು 6000 ಮೈಲುಗಳಷ್ಟು ಉದ್ದವಾಗಬಹುದು. ಎಂದು ಬಿ.ಕೆ.ಎಸ್.ಅಯ್ಯಂಗಾರ್ ತಿಳಿಸುತ್ತಾರೆ. ಪಂಚಕೋಶಗಳಲ್ಲಿ ಪ್ರಾಣಮಯ ಕೋಶ ಒಂದು ಮುಖ್ಯವಾದುದು. ಅದರಲ್ಲಿ 101 ಪ್ರಮುಖ ನಾಡಿಗಳಿವೆಯಂತೆ.  ಈ ಒಂದೊಂದರಲ್ಲೂ ಮತ್ತೆ ನೂರು ಕವಲುಗಳು. ಈ ಒಂದೊಂದು ಕವಲಿನಲ್ಲೂ 72,000 ನಾಡಿಗಳು. ಸ್ವಾಮಿ ರಾಮ್ದೇವ್ ತಿಳಿಸುವಂತೆ ನಮ್ಮ ದೇಹದಲ್ಲಿರುವ ಒಟ್ಟು ನಾಡಿಗಳ ಸಂಖ್ಯೆ ಸುಮಾರು 72 ಕೋಟಿ, 72 ಲಕ್ಷ, ಹತ್ತು ಸಾವಿರದ ಇನ್ನೂರ ಹತ್ತು.  ಇವುಗಳ ಸಮರ್ಪಕ ಕಾರ್ಯನಿರ್ವಹಣೆಗೆ ಪ್ರಾಣಾಯಾಮ ಅತ್ಯಗತ್ಯ.
 ಮನಸ್ಸು ಮತ್ತು ಉಸಿರಾಟ: ಆಧುನಿಕ ಆರೋಗ್ಯ ಮತ್ತು ಜೀವನಶೈಲಿಯ ದೃಷ್ಟಿಯಿಂದಲೂ ಪ್ರಾಣಾಯಾಮ ಅತ್ಯಗತ್ಯ. ನಮ್ಮ ಮನಸ್ಸೇ ಬಹುತೇಕ ಕಾಯಿಲೆಗೂ ಮೂಲ ಎಂಬ ಸಂಗತಿ ಇದೀಗ ಹೆಚ್ಚು ಸುದ್ದಿಯಲ್ಲಿದೆ. ಮನಸ್ಸಿಗೂ, ಉಸಿರಾಟಕ್ಕೂ ನೇರ ಸಂಬಂಧವಿದೆ. ಮನಸ್ಸು ಉದ್ವೇಗ, ಹತಾಶೆ, ಭಯ, ಗೊಂದಲಕ್ಕೆ ಒಳಗಾದಾಗ ಉಸಿರಾಟದ ವೇಗವೂ ಹೆಚ್ಚಾಗುತ್ತದೆ. ಉಸಿರಾಟದ ಮೇಲಿನ ಹಿಡಿತದಿಂದ ಮಾನಸಿಕವಾದ ಈ ಅಸಮತೋಲನವನ್ನು ನಿಯಂತ್ರಿಸಬಹುದು. ಬುದ್ಧನು ಉಪದೇಶಿಸಿದ ಒಂದು ವಿಧದ ಧ್ಯಾನ ನೇರವಾಗಿ ಉಸಿರಾಟಕ್ಕೆ ಸಂಬಂಧಿಸಿದೆ. ದೀರ್ಘ ಉಸಿರಾಟ ಮತ್ತು ಅದರ ಕಡೆ ಗಮನ ಹರಿಸುವುದರ ಮೂಲಕ ಮನಸ್ಸನ್ನು ನಮ್ಮ ಅಧೀನಕ್ಕೆ ತರಬಹುದು. ಇದನ್ನೇ ಯೋಗದಲ್ಲಿ ಪ್ರಾಣಾನುಸಂಧಾನ ಎಂದು ಕರೆಯುತ್ತಾರೆ. ಇಂದಿನ ಒತ್ತಡದ ಯುಗದಲ್ಲಿ ಮನಸ್ಸನ್ನು ಸದಾ ಪ್ರಶಾಂತ ಸ್ಥಿತಿಯಲ್ಲಿಡಲು ಈ ಕ್ರಿಯೆ ಹೆಚ್ಚು ಸಹಕಾರಿ.
 ನಮ್ಮ ಉಸಿರಾಟದ ಕ್ರಮ : ಪ್ರಾಣಾಯಾಮದ ಶಾಸ್ತ್ರದ ಪ್ರಕಾರ ನಮ್ಮ ಉಸಿರಾಟದ ಕ್ರಮದಲ್ಲಿಯೇ ದೋಷವಿದೆ. ನಮ್ಮ ಉಸಿರಾಟ ಅಬ್ಬಬ್ಬಾ ಎಂದರೆ ಎದೆಯ ತನಕ. ಆದರೆ ಇದರಿಂದ ಹೆಚ್ಚಿನ ಆಮ್ಲಜನಕವನ್ನು ಬಳಸಿಕೊಳ್ಳುವುದು ಅಸಾಧ್ಯ. ಒಂದು ಅಭಿಪ್ರಾಯದಂತೆ ಒಂದು ಉಸಿರಾಟದ ವೇಳೆ ಸುಮಾರು ಮುಕ್ಕಾಲು ಲೀಟರ್ಗಳಷ್ಟು ಗಾಳಿಯನ್ನು ಒಳಸೇವಿಸುವ ಸಾಮಥ್ರ್ಯ ನಮಗಿದೆ. ಅದರೆ ನಾವು ಸೇವಿಸುತ್ತಿರುವುದು ಕೇವಲ ಮುಕ್ಕಾಲು ಮಿಲಿ ಲೀಟರ್ಗಳಷ್ಟು ಮಾತ್ರ. ದೀರ್ಘ ಉಸಿರಾಟದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ನಮ್ಮ ಆಂತರಿಕ ಕ್ರಿಯೆಗೆ ಲಭಿಸುತ್ತದೆ. ಒಳಗಿನ ಕಲ್ಮಶವಾದ ಗಾಳಿಯೂ ಹೆಚ್ಚಿನ ಪ್ರಮಾಣದಲ್ಲಿ ಹೊರಹಾಕಲ್ಪಡುತ್ತದೆ. ನಮ್ಮ ಉಸಿರಾಟದ ಇನ್ನೊಂದು ದೋಷ ಅದರಲ್ಲಿ ಲೋಪವಾಗುತ್ತಿರುವ ಲಯಬದ್ಧತೆ. ಪ್ರಾಣಾಯಾಮದ ಮೂಲಕ ಉಸಿರಾಟದಲ್ಲಿನ ಲಯಬದ್ಧತೆಯನ್ನು ಕಾಯ್ದುಕೊಳ್ಳಬಹುದು.  ಇದರಿಂದ ಮನಸ್ಸಿನ ಮೇಲಿನ ನಿಯಂತ್ರಣ ಸಾಧ್ಯ. ಆದರೆ ಇದು ಒಂದೆರಡು ದಿನಗಳಲ್ಲಿ ಆಗುವ ಕೆಲಸವಲ್ಲ. ಅದಕ್ಕೆ ಗಡಿಬಿಡಿಯೂ ತರವಲ್ಲ. ಅದರಿಂದ ಪ್ರತಿಕೂಲ ಪರಿಣಾಮಗಳಾಗಬಹುದು.  ಸಂಸ್ಕೃತದ ಒಂದು ಶ್ಲೋಕದ ಪ್ರಕಾರ ಇದು ಆನೆ, ಸಿಂಹ, ಹುಲಿಗಳನ್ನು ನಿಧಾನವಾಗಿ ಪಳಗಿಸುತ್ತಾ ನಮ್ಮ ವಶಪಡಿಸಿಕೊಳ್ಳುವ ಜಾಣ್ಮೆಯಂತೆ. ಈ ಪ್ರಾಣಿಗಳನ್ನು ಪಳಗಿಸುವಾಗ ಸ್ವಲ್ಪ ಅಜಾಗರೂಕರಾದರೂ ಅವುಗಳು ನಮ್ಮ ಮೇಲೆ ಎರಗಬಹುದು. ಪ್ರಾಣಾಯಾಮದ ಮೂಲಕ ಉಸಿರಾಟದ ನಿಯಂತ್ರಣದ ವೇಳೆಯೂ ಈ ಎಚ್ಚರ ಅತ್ಯಗತ್ಯ.
 ಪ್ರಾಣಾಯಾಮದ ಪ್ರಯೋಜನಗಳು : ಪ್ರಾಣಾಯಾಮದ ಅಭ್ಯಾಸದಿಂದ ನಮ್ಮ ಆಯುಷ್ಯ ಹೆಚ್ಚುತ್ತದೆ. ಅತಿ ಕಡಿಮೆ ವೇಗದಲ್ಲಿ ಉಸಿರಾಡುವ (ನಿಮಿಷಕ್ಕೆ 5 ಸಲ) ಮೊಸಳೆ ಹೆಚ್ಚು ದೀರ್ಘ ಕಾಲ ಬದುಕುತ್ತದೆ. ಮನುಷ್ಯನ ಉಸಿರಾಟ ನಿಮಿಷಕ್ಕೆ 15. ಅದನ್ನು ಇನ್ನೂ ಕಡಿಮೆ ಸಂಖ್ಯೆಗೆ ಇಳಿಸಿದರೆ ನಮ್ಮ ಆಯುಷ್ಯವನ್ನೂ ಇನ್ನಷ್ಟು ಹೆಚ್ಚು ವರ್ಷಗಳಿಗೆ ಏರಿಸಬಹುದು.  ಇದರೊಂದಿಗೆ ವೃದ್ಧಾಪ್ಯದ ಲಕ್ಷಣಗಳು ಬಹಳ ನಿಧಾನವಾಗಿ ನಮ್ಮನ್ನು ಆವರಿಸುತ್ತದೆ. ಅಂದರೆ ವಯಸ್ಸಾಗಿದ್ದರೂ ಹೆಚ್ಚು ಕಾಲ ಯುವಕ ಅಥವಾ ಯುವತಿಯರಂತೆ ಇತರರ ಕಣ್ಣಿಗೆ ಕಾಣಿಸಬಹುದು.
ಠ ಮುಖ ಮತ್ತು ಕಣ್ಣುಗಳ ಕಾಂತಿ ಹೆಚ್ಚಳ. ಮನಸ್ಸು ಸದಾ ಪ್ರಶಾಂತವಾಗಿರುತ್ತದೆ. ಎಂತಹ ಸಂಕಷ್ಟಗಳನ್ನೂ ಸಾವಧಾನದಿಂದ ಸ್ವೀಕರಿಸುವ ಚಿತ್ತಸ್ಥಿತಿ ನಮ್ಮದಾಗುತ್ತದೆ.
ಠ ಆರೋಗ್ಯದ ದೃಷ್ಟಿಯಿಂದಲೂ ಇದರ ಉಪಯೋಗ ಸಾಕಷ್ಟಿದೆ. ಮಧುಮೇಹ, ರಕ್ತದೊತ್ತಡ, ತಲೆನೋವು ಮೊದಲಾದ ಹಲವು ರೋಗಗಳಿಗೆ ಉಪಯುಕ್ತವಾದ ಪ್ರಾಣಾಯಾಮಗಳಿವೆ. ಇದನ್ನು ತಜ್ಞರ ಮಾರ್ಗದರ್ಶನದಲ್ಲಿ ಅಭ್ಯಸಿಸಬೇಕು. ಹೆಚ್ಚಿನ ಆಮ್ಲಜನಕ ಸೇವನೆಯಿಂದ ದೇಹದ ಎಲ್ಲಾ ಭಾಗಗಳೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತವೆ. ವಿಶೇಷವಾಗಿ ಸ್ಮರಣ ಶಕ್ತಿಯ ಹೆಚ್ಚಳ ಮತ್ತು ಮೆದುಳಿನ ಸಾಮಥ್ರ್ಯದ ಹೆಚ್ಚಿನ ಬಳಕೆಗೂ ಪ್ರಾಣಾಯಾಮ ಸಹಕಾರಿ.
      ಡಾ.ಶ್ರೀಕಾಂತ್ರಾವ್  ಸಿದ್ದಾಪುರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ