ಕಲಾಸ್ವಾದಕ್ಕೊಂದು ಕೈಗನ್ನಡಿ: ಪಂಪನ ನೀಳಾಂಜನೆ
ಪಂಪನು ಕನ್ನಡದ ಆದಿಕವಿ. ಕ್ರಿ.ಶ. 10 ನೇ ಶತಮಾನದಲ್ಲಿ ಅರಿಕೇಸರಿಯ ಆಸ್ಥಾನದಲ್ಲಿದ್ದವನು. ಪಂಪಭಾರತ ಮತ್ತು ಆದಿಪುರಾಣ ಈತನ ಎರಡು ಕೃತಿಗಳು. ಇವುಗಳಲ್ಲಿ ಆದಿಪುರಾಣವು ಜೈನಧರ್ಮಕ್ಕೆ ಸಂಬಂಧಿಸಿದ ಕಾವ್ಯ. ಈ ಕೃತಿಯನ್ನು ಕ್ರಿ.ಶ. 942 ರಲ್ಲಿ ರಚಿಸಿರುವುದಾಗಿ ಪಂಪನೇ ಹೇಳಿಕೊಂಡಿರುತ್ತಾನೆ. ಈ ಕೃತಿ ರಚನೆಗೆ ಆತನು ತೆಗೆದುಕೊಂಡ ಕಾಲ ಕೇವಲ ಮೂರು ತಿಂಗಳಂತೆ.
ಆದಿಪುರಾಣದಲ್ಲಿ ಬರುವ ರಸಘಟ್ಟಗಳಲ್ಲಿ ಒಂದು ನೀಳಾಂಜನೆಯ ನಾಟ್ಯ. ಜಿನಸೇನಾಚಾರ್ಯರ ಪೂರ್ವಪುರಾಣದಲ್ಲಿ ಸುಮಾರು ಮೂರು ಶ್ಲೋಕಗಳಲ್ಲಿ ನೀಳಾಂಜನೆಯ ನಾಟ್ಯದ ವರ್ಣನೆಯಿದೆ. ಆದರೆ ಪಂಪನು ಅದನ್ನು 30 ಪದ್ಯಗಳಿಗೆ ಇಲ್ಲಿ ವಿಸ್ತರಿಸಿರುತ್ತಾನೆ.ಜೈನರ ಮೊದಲನೆಯ ತೀರ್ಥಂಕರನಾದ ವೃಷಭನಾಥನ ವೈರಾಗ್ಯಕ್ಕೆ ಪ್ರೇರಣೆಯಾಗಿ ಈ ನಾಟ್ಯ ಸನ್ನಿವೇಶವು ಮೂಡಿಬಂದಿದೆ.
ಪಂಪನ ನೀಳಾಂಜನೆಯ ನಾಟ್ಯದ ವರ್ಣನೆಯು ಪಂಪನ ಕಲಾಪ್ರತಿಭೆಗೆ ಸಾಕ್ಷಿಯಾಗಿದೆ. ಪಂಪನಿಗೆ ನಾಟ್ಯಶಾಸ್ತ್ರದ ಮೇಲಿದ್ದ ಅಪಾರ ಅನುಭವಗಳನ್ನು ಈ ಭಾಗದ ವರ್ಣನೆಗಳು ಸಾಬೀತು ಪಡಿಸುತ್ತವೆ.ನೀಳಾಂಜನೆಯು ಅಸಾಮಾನ್ಯ ಸೌಂದರ್ಯದ ಅದ್ಭುತ ನರ್ತಕಿ ಎಂಬುದನ್ನು ಮನವರಿಕೆ ಮಾಡಿಕೊಡುವ ಯತ್ನದಲ್ಲಿ ಪಂಪನು ತನ್ನ ಕಲಾ ಪರಿಣತಿಯನ್ನೂ ಓದುಗರ ಮುಂದಿಡುತ್ತಾನೆ. ಇಲ್ಲಿ ಕಂಡುಬರುವ ನಾಟ್ಯಶಾಸ್ತ್ರದ ಪಾರಿಭಾಷಿಕ ಪದಗಳಾದ ಭಾರತಿ, ಸಾತ್ವತಿ, ಕೈಶಿಕಿ, ಆರಭಟಿ, ಆಹಾರ್ಯ, ಜತಿ ಮೊದಲಾದವುಗಳು ಇದನ್ನೇ ಪುಷ್ಟೀಕರಿಸುವಂತಿವೆ. ಶಾಸ್ತ್ರದ ಈ ವಿಚಾರಗಳಿಗಷ್ಟೇ ಈ ಭಾಗ ಸೀಮಿತವಾಗದಿರುವುದು ಇಲ್ಲಿ ಅಗತ್ಯವಾಗಿ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶ. ನಾಟ್ಯ ಕಲಾವಿದೆಯನ್ನು ಮತ್ತು ನಾಟ್ಯದಂತಹ ಕಲೆಯನ್ನು ಅಂದಿನ ಶ್ರೀಮಂತ ಸಮಾಜ ನೋಡುತ್ತಿದ್ದ ರೀತಿಯನ್ನೂ ಪಂಪನು ಓದುಗರ ಮುಂದೆ ಬೇಸರದಿಂದ ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆ ಮೂಲಕ ನೀಳಾಂಜನೆಯ ಪರವಾದ ಅನುಕಂಪವನ್ನೂ ಸಹೃದಯ ಬಂಧುಗಳಿಂದ ನಿರೀಕ್ಷಿಸುತ್ತಾನೆ.
ನೀಳಾಂಜನೆ ನಾಟ್ಯವನ್ನೆಸಗುವ ಸಭೆಯಲ್ಲಿ ಉಪಸ್ಥಿತರಿರುವ ಪ್ರೇಕ್ಷಕರತ್ತ ಗಮನಿಸೋಣ. ಅಲ್ಲಿರುವವರಲ್ಲಿ ಹೆಚ್ಚಿನವರು ಅರಸರು, ಇಂದ್ರಾದಿ ದೇವತೆಗಳು. ಹಾಗಾಗಿ ಇದು ಸಭ್ಯರೆಂದು ಭಾಸವಾಗುವವರು ಉಪಸ್ಥಿತರಿದ್ದ ಶ್ರೀಮಂತರ ಸಭೆ. ಇವರೆಲ್ಲಾ ನಾಟ್ಯ ಕಲೆಯ ಆರಾಧಕರೇ?. ಹಾಗೆ ಎದೆತಟ್ಟಿ ಹೇಳುವಂತಿಲ್ಲ. ಇವರಿಗೆ ನಾಟ್ಯ ಕೇವಲ ಮನೋರಂಜನೆಯ ಮಾಧ್ಯಮ. ಇಲ್ಲಿ ನೆರೆದವರೆಲ್ಲರೂ ಎಲ್ಲಾ ರಸಗಳಲ್ಲೂ ಪ್ರಿಯರಲ್ಲ. ಕೇವಲ ಶೃಂಗಾರರಸಪ್ರಿಯರು. ಒಂದರ್ಥದಲ್ಲಿ ಇವರ ಪಾಲಿಗೆ ಇದೊಂದು ಮೋಜಿನ ವಿಷಯ. ಆದರೆ ನೀಳಾಂಜನೆಯು ನಾಟ್ಯದಲ್ಲಿ ನಿಜವಾದ ಪರಿಶ್ರಮವುಳ್ಳವಳು. ಅದನ್ನು ಗೌರವಭಾವದಿಂದ ಕರಗತ ಮಾಡಿಕೊಂಡವಳು.ಪಂಪನ ಪ್ರಕಾರ ನಾಟ್ಯಶಾಸ್ತ್ರಕ್ಕೆ ಹೊಸಭಾಷ್ಯ ಬರೆಯುವ ಸಾಮಥ್ರ್ಯವುಳ್ಳವಳು.ಅಂತಹ ಅದ್ಭುತ ಕಲಾವಿದೆಗೆ ಈ ಮಂದಿಯ ಮುಂದೆ ನಾಟ್ಯ ಪ್ರದರ್ಶನ ನೀಡಬೇಕಾದುದು ಅನಿವಾರ್ಯ ಕರ್ಮ. ಅದು ಆ ಕಾಲದ ಸ್ಥಿತಿಯೂ ಆಗಿತ್ತು. ಅಲ್ಲಿನ ಈ ಪ್ರೇಕ್ಷಕರನ್ನು ಆಕಷರ್ಿಸಲು ನೀಳಾಂಜನೆ ತನ್ನ ಮನಸ್ಸಿಗೆ ಹಿತವಾಗಿಯೋ ಅಥವಾ ಅಹಿತವಾಗಿಯೋ ಹಲವು ಕಸರತ್ತುಗಳನ್ನು ನಾಟ್ಯದ ವೇಳೆ ಕೈಗೊಳ್ಳಲೇಬೇಕು. ಇದು ಸಭ್ಯತೆಯ ಎಲ್ಲೆಯನ್ನು ಮೀರುವಂತೆ ಮಡಿವಂತ ಕಣ್ಣುಗಳಿಗೆ ಕಾಣಿಸಬಹುದು. ಆದರೆ ಅಲ್ಲಿರುವ ಅರಸು ಸಮುದಾಯದಿಂದ ಶಹಭಾಸ್ಗಿರಿ ಪಡೆಯಲು ಈ ತಂತ್ರ ಆಕೆಗೆ ಅನಿವಾರ್ಯ. ಅಲ್ಲಿರುವ ಪ್ರೇಕ್ಷಕ ಸಮುದಾಯಕ್ಕೆ ನೀಳಾಂಜನೆಯ ಈ ಭಂಗಿಗಳು ಕೊಟ್ಟಷ್ಟು ಆನಂದವನ್ನು ಅವಳ ನೈಜ ಶಾಸ್ತ್ರೀಯ ನಾಟ್ಯವೈಖರಿ ಖಂಡಿತಾ ನೀಡದು. ಪಂಪನ ಒಂದೆರಡು ಪದ್ಯಗಳು ಈ ಅಂಶಗಳನ್ನು ಪುಷ್ಟೀಕರಿಸುವಂತಿವೆ. ಅವುಗಳ ಸಾರಾಂಶ ಹೀಗಿದೆ. ಅಲ್ಲಿರುವ ದೇವತೆಗಳು, ಅರಸರು ಆಕೆಯ ನಾಭಿಮೂಲ ಮತ್ತು ಬಾಹುಮೂಲಗಳನ್ನು ಕಣ್ಣುಗಳನ್ನು ಮುಚ್ಚದೆ ನೋಡುತ್ತಾ ಕುಳಿತರಂತೆ. ಮನ್ಮಥನು ಈ ಭಾಗಗಳಲ್ಲಿ ಅಮೃತವನ್ನು ಬಯ್ತಿಟ್ಟಿದ್ದನಂತೆ. ಈ ಅಮೃತವು ಇಂದ್ರಾದಿ ದೇವತೆಗಳ ಮತ್ತು ಅರಸರ ಕಣ್ಣುಗಳಿಗೆ ತಂಪನ್ನು ನೀಡಿದುವಂತೆ. ಆಕೆ ರೇಷ್ಮೆ ವಸ್ತ್ರವನ್ನುಟ್ಟಿದ್ದಳು.ಪ್ರೇಕ್ಷಕರನ್ನು ಆಕರ್ಷಿಸಲು ತನ್ನ ದೇವಾಂಗವಸ್ತ್ರದ ಒಳ ಉಡುಗೆಯನ್ನು ಆಗಾಗ ಪಕ್ಕಕ್ಕೆ ಸರಿಸುವಳು. ಎದೆಯ ಮೇಲೆ ಕಂಗೊಳಿಸುತ್ತಿರುವ ತನ್ನ ಕಂಠದ ಹಾರವನ್ನು ಆಗಾಗ ಸರಿಪಡಿಸಿಕೊಳ್ಳುವಳು.ಇದು ಮದನರಾಜರಾಜ್ಯವಿಲಾಸ ಎಂಬಂತೆ ಕಂಗೊಳಿಸಿತಂತೆ. ನೀಳಾಂಜನೆಯ ಈ ಅಭಿನಯ ಅಥವಾ ಕಸರತ್ತುಗಳು ಸಭ್ಯಸಮಾಜಕ್ಕೆ ಅಸಹ್ಯವಾಗಿ ಕಾಣಿಸಬಹುದು. ಆದರೆ ಅಲ್ಲಿ ನೆರೆದಿರುವ ಪ್ರೇಕ್ಷಕ ಸಮುದಾಯ ಇದನ್ನು ಆಕೆಯಿಂದ ನಿರೀಕ್ಷಿಸುತ್ತಿದೆ. ಈ ರೀತಿ ಆಕೆ ನರ್ತಿಸದಿದ್ದಲ್ಲಿ ಅಲ್ಲಿರುವ ಸಮುದಾಯಕ್ಕೆ ರಸಾಸ್ವಾದ ಆಗದು. ಇದನ್ನು ಹೊರತುಪಡಿಸಿದ ಯಾವುದೇ ಪ್ರಬುದ್ಧ ಅಭಿನಯವೇ ಇರಲಿ. ಅದು ಅವರ ಮನ ಸೂರೆಗೊಳ್ಳದು. ಹಾಗಾಗಿ ಅಲ್ಲಿರುವವರೆಲ್ಲಾ ಈ ವಿಧದ ಅಭಿನಯವನ್ನೇ ಕಾದುಕುಳಿತವರು.ಅದೇ ಅವರ ಪ್ರಧಾನ ಆಸಕ್ತಿ.ಒಂದರ್ಥದಲ್ಲಿ ಇದು ಕೀಳು ಮನೋರಂಜನೆಯ ದೃಷ್ಟಿಯನ್ನು ಬಿಂಬಿಸುವಂತೆ ಭಾಸವಾಗಬಹುದು.ಆದರೆ ಅಲ್ಲಿರುವ ಶ್ರೀಮಂತ ಪ್ರೇಕ್ಷಕರ ಮನ:ಸ್ಥಿತಿ ಇದನ್ನು ಮೀರಿ ಎತ್ತರಕ್ಕೇರಲಾರದು.
ಪಂಪನ ನೀಳಾಂಜನೆ ನಾಟ್ಯದ ಪ್ರಸಂಗದ ಮುಂದಿನ ಸನ್ನಿವೇಶದಲ್ಲಿ ನೀಳಾಂಜನೆ ರಂಗದಿಂದ ಅದೃಶ್ಯಳಾಗುತ್ತಾಳೆ. ಈ ಸೂಕ್ಷ ಸಂಗತಿ ಅಲ್ಲಿದ್ದ ವೃಷಭನಾಥನ ಗಮನಕ್ಕೆ ಮಾತ್ರ ಬರುತ್ತದೆ. ನಾಟ್ಯದ ಮೋಹದ ಮತ್ತಿನಲ್ಲಿ ಮುಳುಗಿದ್ದ ಉಳಿದವರಿಗೆ ಇದರ ಅರಿವಾಗುವುದೇ ಇಲ್ಲ. ಇಂದ್ರನು ರಸ ಭಂಗವಾಗದಂತೆ ಮತ್ತೊಂದು ಪಾತ್ರವನ್ನು ಕೂಡಲೇ ತಂದು ನಿಲ್ಲಿಸಿ, ನಾಟ್ಯ ಮುಂದುವರಿಯುವಂತೆ ನೋಡಿಕೊಳ್ಳುತ್ತಾನೆ. ಪಂಪನು ಕಾವ್ಯಭಾಗವನ್ನು ಅಷ್ಟಕ್ಕೇ ಸೀಮಿತಗೊಳಿಸದೆ ಕಲೆಯ ವಿಚಾರದಲ್ಲಿ ಬೇರೆ ಯಾವುದೋ ಸಂದೇಶವನ್ನು ಕೊಡುವ ಪ್ರಯತ್ನವನ್ನು ಮಾಡುತ್ತಿದ್ದಾನೆ. ಕಲಾವಿದೆಯೊಬ್ಬಳನ್ನು ಮೋಜು ಅಥವಾ ಮನೋರಂಜನೆಯನ್ನು ಕೊಡುವ ವಸ್ತುವನ್ನಾಗಿ ಅಥವಾ ಯಂತ್ರವನ್ನಾಗಿ ನೋಡುವ ಪರಿಪಾಠದ ವಿರುದ್ಧ ಪಂಪನ ಅಸಮಾಧಾನವಿದೆ. ಮಾನವೀಯತೆ ಮರೆತ ಮೋಜಿನ ಶ್ರೀಮಂತ ಸಮಾಜದ ವಿರುದ್ಧ ಆಕ್ರೋಶವಿದೆ.ಅವಳು ಅದೃಶ್ಯಳಾದಾಗ ಅವಳ ಬಗ್ಗೆ ಒಂದಿನಿಸೂ ಅನುಕಂಪವನ್ನು ಸೂಚಿಸದೇ ನಾಟ್ಯವನ್ನು ಮುಂದುವರಿಸುವುದಕ್ಕೇ ಮಾತ್ರ ಇಂದ್ರಾದಿಗಳು ಶ್ರಮಿಸಿದ ಬಗ್ಗೆ ಆಕ್ಷೇಪವಿದೆ. ಈ ಕಾರಣಕ್ಕಾಗಿಯೇ ಪಂಪನೂ ಅವಳ ಅದೃಶ್ಯದ ದುರಂತದ ಬಗ್ಗೆ ಒಂದೇ ಒಂದು ನೋವಿನ ಮಾತನ್ನೂ ಅಲ್ಲಿದ್ದ ಅರಸರು ಅಥವಾ ಇಂದ್ರಾದಿಗಳ ಮೂಲಕ ಹೊರಹಾಕಿಲ್ಲ. ಅವರ ಅನುಕಂಪವನ್ನು ಬಿಂಬಿಸುವ ಯಾವುದೇ ಪದ್ಯವನ್ನೂ ಎಡೆಯಲ್ಲಿ ತರುವ ಗೋಜಿಗೆ ಹೋಗಿಲ್ಲ. ಈ ಮೂಲಕ ಪಂಪನು ತನ್ನ ನಾಟ್ಯದ ಮೂಲಕ ಸಭೆಯಲ್ಲಿ ಮಿಂಚಿನ ಸಂಚಾರವನ್ನು ಉಂಟುಮಾಡಿದ ಕಲಾವಿದೆಯನ್ನು ಈ ತರನಾಗಿ ನಡೆಸಿಕೊಳ್ಳುವುದು ಸೂಕ್ತವೇ?. ಎಂಬ ಪ್ರಶ್ನೆಯನ್ನು ಓದುಗರ ಮುಂದೆ ಇಡುವ ಪ್ರಯತ್ನ ಮಾಡುತ್ತಾನೆ.ಪಂಪನ ಪ್ರಕಾರ ಆ ಸಭೆಯಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ನೀಳಾಂಜನೆಯ ಬಗ್ಗೆ ಗೌರವ ಮತ್ತು ಅನುಕಂಪ ಹೊಂದಿದ್ದ ಒಬ್ಬ ವ್ಯಕ್ತಿ ವೃಷಭನಾಥ. ವೃಷಭನಾಥನು ಅವಳನ್ನು ವೇದನೆಯಿಂದ ನಾರೀ ರೂಪದ ಯಂತ್ರ ಎಂದೇ ಕರೆಯುತ್ತಾನೆ. ಅವನಿಗೆ ಮಾತ್ರ ಈಕೆಯ ಅದೃಶ್ಯದ ಸುಳಿವು ಸಿಕ್ಕುತ್ತದೆ. ಹಾಗಾಗಿ ವೃಷಭನಾಥನ ಬಗ್ಗೆ ಪಂಪನಿಗೆ ವಿಶೇಷ ಗೌರವ. ಈತನನ್ನು ಪಂಪನು ವಿದ್ಯಾನಿಲಯ ಎಂದು ಕರೆಯುತ್ತಾನೆ. ಪ್ರಾಪಂಚಿಕವಾದ ಬಯಕೆಗಳಲ್ಲಿ ತುಂಬಿದ ಜನರಿಂದ ಇಂತಹ ಕಲಾವಿದೆೆ ಗೌರವವನ್ನು ನಿರೀಕ್ಷಿಸುವುದು ಮೂರ್ಖತನವಾದೀತು. ಅಧ್ಯಾತ್ಮದತ್ತ ಒಲವುಳ್ಳ ಅಂದರೆ ಶುದ್ಧ ಮನಸ್ಸಿನ ವ್ಯಕ್ತಿಗಳಿಂದ ಮಾತ್ರ ಕಲಾವಿದೆಗೆ ನಿಜವಾದ ಅರ್ಥದಲ್ಲಿ ಗೌರವ ಲಭಿಸೀತು. ವಿದ್ಯೆ ಎಂದರೆ ಸದಾ ಎಚ್ಚರ. ವೃಷಭನಾಥನನ್ನು ಹೊರತುಪಡಿಸಿ ಲೌಕಿಕವಾದ ಮೋಹದಲ್ಲಿ ಮುಳುಗಿದ್ದ ಉಳಿದ ಯಾವ ಪ್ರೇಕ್ಷಕರಿಗೂ ಅಲ್ಲಿ ಎಚ್ಚರವಿಲ್ಲ. ವೃಷಭನಾಥನ ಪಾಲಿಗೆ ಆಕೆ ಸಂಸಾರದ ಅನಿತ್ಯತೆಯನ್ನು ತನ್ನ ಮನಸ್ಸಿಗೆ ನಾಟುವಂತೆ ತೋರಿಸಿ,ತನ್ನ ಕಣ್ಣನ್ನು ತೆರೆಸಿದವಳು.ಅವನ ಪಾಲಿಗೆ ಸಂಸ್ಕೃತಿ ನಾಟಕದ ಪಾಠವನ್ನು ಬೋಧಿಸಿದವಳು.ಈ ಪ್ರಸಂಗದ ಕೊನೆಯಲ್ಲಿ ಎಂತಹ ಪ್ರೇಕ್ಷಕವರ್ಗ ಬೇಕು ಎಂಬುದನ್ನು ವೃಷಭನಾಥನ ಮೂಲಕ ಸೂಚಿಸಲು ಪಂಪನು ಪ್ರಯತ್ನಿಸಿದ್ದಾನೆ.ಕಲೆ ಅಂತರಂಗದಚಕ್ಷುವನ್ನುತೆರೆಸಬೇಕು.ಲೌಕಿಕ ಬೇಡಿಕೆಗಳತ್ತ ಅಂಕುಶವನ್ನೊಡ್ಡುವಂತಿರಬೇಕು. ಲೌಕಿಕದಿಂದ ಅಲೌಕಿಕದತ್ತ ನಮ್ಮನ್ನು ಸೆಳೆಯುವಂತಿರಬೇಕು.ಕಲೆಯತ್ತ ನಿಜವಾದ ಆಸಕ್ತಿ ಇರುವ ಪ್ರೇಕ್ಷಕರಲ್ಲಿ ಈ ಮನೋಭಾವಗಳಿರಬೇಕು.ಈ ಹಿನ್ನೆಲೆಯಲ್ಲಿ ಕಲೆ ಮತ್ತು ಕಲಾವಿದರನ್ನು ನೋಡುವ ಗುಣ ಸಮಾಜದಲ್ಲಿ ಬೇರೂರಬೇಕು. ಅದಕ್ಕೆ ಬೇಕಾದುದು ಕಲೆಯ ಬಗ್ಗೆ ಅನುಭಾವದ ನೆಲೆಯ ಸ್ಪಂದನ.
ಜಾಗತೀಕರಣ, ವ್ಯಾಪಾರೀಕರಣದ ಇಂದಿನ ದಿನಗಳಲ್ಲಿ ಕಲೆ ಮತ್ತು ಸ್ತ್ರೀಯನ್ನು ನೋಡುವ ನಮ್ಮ ಕಣ್ಣುಗಳಲ್ಲಿ ಮತ್ತೊಮ್ಮೆ ಮಲಿನತೆ ಮೂಡಿಬರುತ್ತಿದೆ.ಅಂತರಂಗದ ಸೌಂದರ್ಯಕ್ಕಿಂತ ಬಹಿರಂಗದ ಸೌಂದರ್ಯವೇ ಆಕರ್ಷಣೆಯ ಪ್ರಧಾನ ವಿಷಯವಾಗಿದೆ. ಇಂದಿಗೂ ಮಾಧ್ಯಮಗಳಲ್ಲಿ ತೋರಿಸುವ ಹೆಣ್ಣಿನ ಅರೆಬರೆ ಉಡುಗೆಗಳ ಹಿಂದೆ ಬಾರೀ ಪ್ರಮಾಣದ ಆರ್ಥಿಕ ಲಾಭದ ಹುನ್ನಾರವಿದೆ. ಕೆಲವು ಧಾರಾವಾಹಿ ಅಥವಾ ಚಲನಚಿತ್ರಗಳಲ್ಲಿ ಹೆಣ್ಣಿನ ಚಿತ್ರಣ ಇಂದಿನ ದಿನಗಳಲ್ಲಿ ವಿವೇಚನಾರ್ಹ. ಆರ್ಥಿಕಲಾಭದೃಷ್ಟಿಯಿಂದ ಕೀಳುಮಟ್ಟದ ಅಭಿರುಚಿಯ ಸಾಧನವನ್ನಾಗಿ ಕಲೆ ಮತ್ತು ಹೆಣ್ಣನ್ನು ಬಳಸಿಕೊಳ್ಳುವುದರ ವಿರುದ್ಧ ಸಮಾಜ ಜಾಗೃತವಾಗಬೇಕಾಗಿದೆ. ಈ ದೃಷ್ಟಿಯಿಂದ ಪಂಪನ ಸಂದೇಶ ಸಮಕಾಲೀನ ಸಂದರ್ಭದಲ್ಲೂ ಮಹತ್ತ್ವವಾಗಿದೆ.
ಡಾ.ಶ್ರೀಕಾಂತ್ ಸಿದ್ದಾಪುರ.