ಶನಿವಾರ, ಫೆಬ್ರವರಿ 26, 2011

Sri A.G.Kodgi & Agriculture

ಪ್ರಗತಿಪರ ಕೃಷಿಕ ಎ.ಜಿ.ಕೊಡ್ಗಿ
ಶ್ರೀ ಎ.ಜಿ.ಕೊಡ್ಗಿಯವರು ಇದೀಗ  ಮುರನೇ
 ಹಣಕಾಸು ಆಯೋಗದ ಅನುಷ್ಠಾನ ಕಾರ್ಯಪಡೆಯ ಅಧ್ಯಕ್ಷರು. ರಾಜಕೀಯವಾಗಿ ವಿವಿಧ ಹಂತದ ಹುದ್ದೆಗಳನ್ನು ಅಲಂಕರಿಸಿದವರು. ಇವುಗಳ ನಡುವೆ ತಮ್ಮ ಹಿರಿಯರಿಂದ ಬಂದ ಕೃಷಿಯನ್ನು ಕಡೆಗಣಿಸಿದವರಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಅಂದಿನ ಕಾಲದಲ್ಲಿ ಕಡಿಮೆ ಬೆಲೆಯಲ್ಲಿ ಸೈಟ್ ಕೊಳ್ಳುವ ಅವಕಾಶ ಲಭಿಸಿದ್ದರೂ, ಕೃಷಿಯ ಮೇಲಿನ ಖುಷಿಯಿಂದ ಅಮಾವಾಸೆಬೈಲಿನಂತಹ ಗ್ರಾಮೀಣ ಪ್ರದೇಶವನ್ನೇ ವಾಸ್ತವ್ಯಕ್ಕಾಗಿ ಆರಿಸಿಕೊಂಡವರು.
ಕೊಡ್ಗಿಯವರಿಗೆ ಕೃಷಿಯ ಆಸಕ್ತಿ ಬಾಲ್ಯದಿಂದಲೇ ಬೆಳೆದು ಬಂದಿದೆ. ಅವರ ತಂದೆ ಕೀತರ್ಿಶೇಷ ಕೃಷ್ಣರಾಯ ಕೊಡ್ಗಿಯವರು ಆ ಕಾಲದ ಪ್ರಗತಿಪರ ಕೃಷಿಕರು.  ನೂರಾರು ಎಕರೆ  ಕೃಷಿಭೂಮಿಗೆ ಮಾಲಿಕರು. ಇದರೊಂದಿಗೆ ಸ್ವಾತಂತ್ರ್ಯ ಹೋರಾಟಗಾರರು. ಡಾ. ಶಿವರಾಮ ಕಾರಂತರ ಗೌರವಕ್ಕೂ ಪಾತ್ರರಾದವರು. ತಂದೆಯವರಿಂದಲೇ  ಕೃಷಿಕ್ಷೇತ್ರದತ್ತ ಕೊಡ್ಗಿಯವರು ಆಕಷರ್ಿತರಾದರು.   ಭೂಮಸೂದೆಯು ಕನರ್ಾಟಕದಲ್ಲಿ ಜಾರಿಯಾದ ದಿನಗಳು. ಅಂದಿನ ಮುಖ್ಯಮಂತ್ರಿ ಅರಸರ ಆತ್ಮೀಯರಲ್ಲಿ ಒಬ್ಬರು ಕೊಡ್ಗಿಯವರು. ಭೂಮಸೂದೆ ಕಾನೂನಿನ ಅನುಷ್ಠಾನಕ್ಕೆ ಸಂಪೂರ್ಣ ಬೆಂಬಲ ನೀಡಿದರು. ತಮ್ಮ ಸ್ವಂತ ಭೂಮಿಯನ್ನೂ ಒಕ್ಕಲುಗಳಿಗೆ ಮಸೂದೆಯನ್ವಯ ನೀಡಿದರು. ಕೃಷಿಕ್ಷೇತ್ರದ ದುಡಿಮೆಯಲ್ಲಿ ಸ್ವಾನುಭವ ಹೊಂದಿದ ಕೊಡ್ಗಿಯವರು, ಈ ಕ್ಷೇತ್ರದ ಸಮಸ್ಯೆ ಮತ್ತು ಅದರ ಪರಿಹಾರದ ಬಗ್ಗೆ ತಮ್ಮದೇ ಆದ ಚಿಂತನೆಗಳನ್ನು ಹೊಂದಿದವರು. ಸಮಸ್ಯೆಗಳ ನಡುವೆ ನಲುಗುತ್ತಿರುವ ಇಂದಿನ ದಿನಗಳಲ್ಲಿ ಈ ಚಿಂತನೆಗಳು ಹೆಚ್ಚು ಪ್ರಸ್ತುತ.
ಅಸಮರ್ಪಕ ನಿರ್ವಹಣಾ ವಿಧಾನ : 
ಕೃಷಿಕ್ಷೇತ್ರದ ಕೆಲವು ಸಮಸ್ಯೆಗಳಿಗೆ ಕೃಷಿಕರೇ ಕಾರಣರು. ಅವರಿಗೆ ಸಮರ್ಪಕವಾದ ತರಬೇತಿಯ ಕೊರತೆ ಇದಕ್ಕೆ ಪ್ರಮುಖ ಕಾರಣ. ಕೃಷಿಕರು ಕೃಷಿಕ್ಷೇತ್ರದಲ್ಲಿ ಯಾವುದೇ ಪ್ರಯೋಗಕ್ಕೆ ತೆರಳುವ ಮುನ್ನ ಅದರ ಲಾಭ ಮತ್ತು ನಷ್ಟಗಳ ಅಂದಾಜು ಲೆಕ್ಕವನ್ನು ಮಾಡಬೇಕು. ಯಾವುದೇ ಗೊತ್ತುಗುರಿಯಿಲ್ಲದೇ ಸಾಲ ಮಾಡಿ, ಕೃಷಿ ಮಾಡಿದಲ್ಲಿ ವರ್ಷದಿಂದ ವರ್ಷಕ್ಕೆ ನಷ್ಟವೇ ಅಧಿಕವಾದೀತು. ಈ ಬಗ್ಗೆ ಕೃಷಿಕರಿಗೆ ಪ್ರತಿ ಗ್ರಾಮಮಟ್ಟದಲ್ಲಿ ತರಬೇತಿಗಳನ್ನು ಏರ್ಪಡಿಸಿ, ಸೂಕ್ತ ಮಾರ್ಗದರ್ಶನ ಮಾಡಬೇಕು.
ಮಿಶ್ರಬೆಳೆ ಪದ್ಧತಿ :
ಇಂದಿಗೂ ಕೆಲವು ಕೃಷಿಕರು ಏಕ ಬೆಳೆ ಪದ್ಧತಿಗೇ ಜೋತು ಬಿದ್ದಿದ್ದಾರೆ. ಇದರಿಂದ ಕೃಷಿಯಲ್ಲಿ ಲಾಭ ಪಡೆಯುವ ಸಾಧ್ಯತೆ ಕ್ಷೀಣ. ಇದಕ್ಕಾಗಿ ಮಿಶ್ರಬೆಳೆ ಪದ್ಧತಿಯನ್ನು ಕೃಷಿಕರು ಅಳವಡಿಸಿಕೊಳ್ಳಬೇಕಾಗಿದೆ. ಅಡಿಕೆ ಅಥವಾ ತೆಂಗಿನ ತೋಟವನ್ನೇ ತೆಗೆದುಕೊಳ್ಳಿ. ಅಲ್ಲಿ ಬಾಳೆ, ಕಾಳುಮೆಣಸು, ವೆನಿಲ್ಲಾ, ವೀಳ್ಯದೆಲೆ ಮೊದಲಾದವುಗಳನ್ನು ಮಧ್ಯ ಮಧ್ಯ ಬೆಳೆಸಬಹುದು.
ಸ್ಥಿರ ಮಾರುಕಟ್ಟೆ :
ಕೃಷಿಕ್ಷೇತ್ರದ ಪ್ರಮುಖ ಸಮಸ್ಯೆ ಉತ್ಪನ್ನಗಳ ಬೆಲೆಗಳಲ್ಲಿ ಆಗುತ್ತಿರುವ ಏರಿಳಿತ. ಯಾವುದೇ ಉತ್ಪನ್ನದ ಬೆಲೆ ಇದ್ದಕ್ಕಿದ್ದಂತೆ ಕುಸಿದಾಗ, ಸಹಜವಾಗಿ ಕೃಷಿಕ ಕಂಗಾಲಾಗುತ್ತಾನೆ. ಈ ದೃಷ್ಟಿಯಿಂದ ರೈತರ ಬೆಳೆಗಳ ಬೆಲೆಯ ವಿಚಾರದಲ್ಲಿ ಸ್ಥಿರ ಮಾರುಕಟ್ಟೆಯ ಅಗತ್ಯವಿದೆ.  ಈ ಬಗ್ಗೆ ಗಂಭೀರ ಚಿಂತನೆಗಳಾಗಬೇಕಿವೆ. ಪ್ರತಿಯೊಬ್ಬ ರೈತನಿಗೂ ಒಂದು ಕೃಷಿ ಪಾಸ್ ಪುಸ್ತಕವನ್ನು ಸರಕಾರ ನೀಡಬೇಕು. ಅದರಲ್ಲಿ ರೈತನು ತಾನು ಬೆಳೆಯುತ್ತಿರುವ ಬೆಳೆ, ಅದರ ವಿಸ್ತೀರ್ಣ ಮತ್ತು ಬೆಳೆದ ಬೆಳೆಗಳ ಪ್ರಮಾಣಗಳನ್ನು ನಮೂದಿಸಬೇಕು. ಇದರೊಂದಿಗೆ ಅಗತ್ಯವಾಗಿರುವ ಬೆಳೆಗಳ ಪ್ರಮಾಣದ ಅಂದಾಜು ಲೆಕ್ಕವನ್ನೂ ತೆಗೆಯಬೇಕು. ಹೀಗೆ ಐದು ವರ್ಷಗಳ ಕಾಲದಲ್ಲಿ ಕಲೆಹಾಕಿದ  ಈ ಮಾಹಿತಿಗಳ ಆಧಾರದ ಮೇಲೆ ಬೆಳೆಯ ಬೆಲೆಯನ್ನು ನಿರ್ಧರಿಸಬೇಕು. ಇದರಿಂದ ಸ್ಥಿರ ಮಾರುಕಟ್ಟೆಯನ್ನು ರೈತರ ಉತ್ಪನ್ನಗಳಿಗೆ ನೀಡಬಹುದು. ಇದರೊಂದಿಗೆ ಕೆಲವು ಹಳ್ಳಿಗಳನ್ನು ಒಂದು ಗುಂಪುಗಳನ್ನಾಗಿ ವಿಂಗಡಿಸಿ, ರೈತರ ಉತ್ಪನ್ನಗಳನ್ನು ಮಾರಲು ಅಲ್ಲಿ ಸೂಕ್ತ ಮಾರುಕಟ್ಟೆಯನ್ನು ಸರಕಾರ ವ್ಯವಸ್ಥೆ ಮಾಡಬೇಕು.
ಉಪಉತ್ಪನ್ನಗಳ ತಯಾರಿ :
ಕೃಷಿಯಲ್ಲಿ ಬೆಳೆದ ಯಾವುದೇ ಬೆಳೆಯ ಹೆಚ್ಚುವರಿಯನ್ನು ್ನ ವ್ಯರ್ಥ ಎಂದು ಬದಿಗಿರಿಸುವ ಅಥವಾ ಎಸೆಯುವ ಪರಿಪಾಠ ಉಚಿತವಲ್ಲ. ಅವುಗಳಿಂದ ಉಪಉತ್ಪನ್ನಗಳನ್ನು ಸಿದ್ಧಪಡಿಸಿ, ಮಾರುಕಟ್ಟೆಗೆ ಸರಬರಾಜು ಮಾಡುವಂತಾಗಬೇಕು. ಹಾಲನ್ನೇ ತೆಗೆದುಕೊಂಡರೆ, ಅಲ್ಲಿ ಉಳಿದ ಹಾಲಿನಿಂದ ಉಪಉತ್ಪನ್ನಗಳನ್ನು ತಯಾರಿಸಿ, ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ. ಈ ಕ್ರಮವನ್ನೇ ಕೃಷಿಗೂ ಬಳಸಬಹುದು. ಹಣ್ಣು, ತರಕಾರಿ ಮತ್ತು ಇತರ ಬೆಳೆಗಳ ವಿಚಾರದಲ್ಲಿ ಈ ಕ್ರಮವು ಕೃಷಿಕರ ಹಿತವನ್ನು ಕಾಪಾಡೀತು.
ಪ್ರಾಕೃತಿಕ ವಿಕೋಪಕ್ಕೆ ಸರಕಾರದ ಸ್ಪಂದನ :
ರೈತರು ಪ್ರಾಕೃತಿಕ ಉಪಟಳಕ್ಕೆ ಆಗಾಗ ಗುರಿಯಾಗುತ್ತಿರುತ್ತಾರೆ. ಇಲ್ಲಿ ರೈತ ಅಸಹಾಯಕ. ಇಂತಹ ಸಂದರ್ಭದಲ್ಲಿ ಸರಕಾರವು ರೈತರ ಸಹಾಯಕ್ಕೆ ಮುಂದಾಗಬೇಕು. ಈ ರೀತಿಯ ವಿಕೋಪಕ್ಕೆ ಒಳಗಾದ ಭಾಗದ ರೈತರ ಎಲ್ಲಾ ಸಾಲಗಳನ್ನು ಸರಕಾರ ಮನ್ನಾ ಮಾಡಬೇಕು.  ಬೆಳೆವಿಮೆಯನ್ನು ಪ್ರತಿ ಕುಟುಂಬಕ್ಕೂ ವಿಸ್ತರಿಸಬೇಕು. ಉಚಿತ ಗೊಬ್ಬರ, ಉಚಿತ ಬೀಜ, ಕಡಿಮೆ ಬಡ್ಡಿಯ ಸಾಲ ಮೊದಲಾದ ಸವಲತ್ತುಗಳನ್ನು ಸರಕಾರ ಈ ಸಂದರ್ಭದಲ್ಲಿ ರೈತರಿಗೆ ನೀಡಬೇಕು. ಪ್ರಾಕೃತಿಕ ವಿಕೋಪದಿಂದ ನಷ್ಟವನ್ನು ಅನುಭವಿಸುತ್ತಿರುವ ರೈತನಿಗೆ ಸರಕಾರವು ಸಕಲ ರೀತಿಯಲ್ಲೂ ಸಹಕರಿಸುವ ಮೂಲಕ ರೈತರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು.
ಸಹಕಾರಿ ಸಂಘಗಳನ್ನು ಹೆಚ್ಚು ಶಕ್ತಿಶಾಲಿಯನ್ನಾಗಿರಿಸುವುದು :
ರಾಜ್ಯದ ಎಲ್ಲಾ ಭಾಗಗಳಲ್ಲೂ ರೈತರ ಸಹಕಾರಿ ಬ್ಯಾಂಕುಗಳನ್ನು ಇನ್ನಷ್ಟು ಬಲಪಡಿಸಬೇಕು. ರೈತರಿಗೆ ಈ ಬ್ಯಾಂಕುಗಳು ಸರಳವಾದ ರೀತಿಯಲ್ಲಿ, ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಮುಂದಾಗಬೇಕು. ಸಹಕಾರಿ ಬ್ಯಾಂಕುಗಳು ರೈತರಿಗೆ ಸಾಲ ನೀಡುವಲ್ಲಿ ಕ್ಲಿಷ್ಟ ಪದ್ಧತಿಯನ್ನು ಅನುಸರಿಸಿದಲ್ಲಿ, ರೈತರು ಲೇವಾದೇವಿದಾರರ ಬಳಿ ಸಾಲ ಪಡೆಯಲು ಮುಂದಾಗುತ್ತಾರೆ. ಇದರಿಂದ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ದೃಷ್ಟಿಯಿಂದ ಸಹಕಾರಿ ಬ್ಯಾಂಕುಗಳು ರೈತಮಿತ್ರನಂತೆ ನಡೆದುಕೊಳ್ಳಬೇಕು.
ಗ್ರಾಮೀಣ ಭಾಗಗಳ ಅಭಿವೃದ್ಧಿ :
ಇದೀಗ ಗ್ರಾಮೀಣ ಭಾರತ ಕಣ್ಮರೆಯಾಗುವಂತೆ ಕಾಣಿಸುತ್ತಿದೆ. ಗ್ರಾಮೀಣ ಭಾಗವನ್ನು ತೊರೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದು ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದನ್ನು ತಡೆಗಟ್ಟಲು ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ. ಆರೋಗ್ಯ, ಶಿಕ್ಷಣ ಮೊದಲಾದ ಹತ್ತು ಹಲವು ವಿಚಾರಗಳಲ್ಲಿ ಗ್ರಾಮೀಣಭಿವೃದ್ಧಿಗೆ ಸರಕಾರ ಮುಂದಾಗಬೇಕು. ವಿಶೇಷ ಆಥರ್ಿಕ ವಲಯದ ವಿಸ್ತರಣೆಯು ನಗರ ಭಾಗದ ಫಲವತ್ತಾದ  ಕೃಷಿಯೋಗ್ಯ ಭೂಮಿಯನ್ನು ಬಲಿ ತೆಗೆದುಕೊಳ್ಳಬಾರದು. ಗ್ರಾಮೀಣ ಭಾಗದಲ್ಲಿ ಕೃಷಿ ಯೋಗ್ಯವಲ್ಲದ ಭೂಮಿ ಸಾಕಷ್ಟಿದೆ.  ಗ್ರಾಮೀಣ ಭಾಗದ ಈ ಭೂಭಾಗದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಖಾಸಗಿ ಕಂಪೆನಿಗಳು ಮುಂದೆ ಬರಬೇಕು. ಸರಕಾರವೂ ಈ ನಿಟ್ಟಿನಲ್ಲಿ ಉದ್ದಿಮೆದಾರರಿಗೆ ವಿಶೇಷ ಆಥರ್ಿಕ ಪ್ರೋತ್ಸಾಹದ ಕ್ರಮಗಳನ್ನೂ ಪ್ರಕಟಿಸಬೇಕು. ಇದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ. ಗ್ರಾಮೀಣ ಭಾಗದಿಂದ ಉದ್ಯೋಗವನ್ನು ಅರಸಿ ನಗರಕ್ಕೆ ವಲಸೆ ಹೋಗುವವರ ಸಂಖ್ಯೆಯೂ ಕಡಿಮೆಯಾಗುತ್ತದೆ.
ರೈತರಿಗೆ ನಿರಂತರ ವಿದ್ಯುತ್ ಪೂರೈಕೆ :
ಕೃಷಿ ಕೆಲಸಕ್ಕೆ ಅಗತ್ಯವಾದ ವಿದ್ಯುತ್ ಪೂರೈಕೆಯನ್ನು ರೈತರಿಗೆ ನಿರಂತರ ನೀಡಬೇಕು. ರೈತರ ಕೃಷಿ ನೀರಾವರಿಗೆ ಉಪಯುಕ್ತವಾದ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೂ ಸರಕಾರ ಮುಂದಾಗಬೇಕು.
ಆಧುನಿಕ ಯಂತ್ರಗಳ ಬಳಕೆ :
ಕರಾವಳಿ ಮತ್ತು ಮಲೆನಾಡ ಭಾಗಗಳಲ್ಲಿ ಕೃಷಿಕಾಮರ್ಿಕರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಎರಡು ಪರಿಹಾರಗಳಿವೆ. ಒಂದು ಸ್ವಂತ ದುಡಿಮೆ. ಇನ್ನೊಂದು ಆಧುನಿಕ ಯಂತ್ರಗಳ ಬಳಕೆ. ಇಂದು ಹೆಚ್ಚಿನ ಕೃಷಿ ಕೆಲಸಗಳನ್ನು ಯಂತ್ರಗಳ ಸಹಾಯದಿಂದ ನಿರ್ವಹಿಸಬಹುದು. ಇದರ ಬಗ್ಗೆ ರೈತರಿಗೆ ಅರಿವನ್ನುಂಟು ಮಾಡಬೇಕಾಗಿದೆ. ಇದಲ್ಲದೆ ಈ ಯಂತ್ರಗಳನ್ನು ಹೆಚ್ಚಿನ ರೈತರಿಗೆ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕಾಗಿದೆ.
ಇದೀಗ ಕೃಷಿಯತ್ತ ವಿಮುಖರಾಗುವವರೇ ಹೆಚ್ಚು. ಗ್ರಾಮೀಣ ಭಾಗ ಅದರಲ್ಲೂ ಕೃಷಿ ಎಂದರೆ ಯಾರಿಗೂ ಬೇಡದ ಕ್ಷೇತ್ರವಾಗಿದೆ.  ಹಳ್ಳಿಗಳಲ್ಲಿ ಉಳಿದಿರುವ ಕೃಷಿಕರ ಬದುಕೂ ನಿರಾಶಾದಾಯಕವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಆಹಾರದ ಅಭಾವವೂ ದೇಶವನ್ನು ಮುಂದೊಂದು ದಿನ ಕಾಡೀತು.  ಇಂತಹ ಪರಿಸ್ಥಿತಿಯಲ್ಲಿ ಕೃಷಿಕ್ಷೇತ್ರದ ಸಮಗ್ರ ಅಭಿವೃದ್ಧಿಯತ್ತ ಗಂಭೀರವಾಗಿ ಚಿಂತಿಸಬೇಕಾಗಿದೆ. ಪ್ರಗತಿಪರ ಕೃಷಿಕರ, ರೈತಮುಖಂಡರ, ಕೃಷಿತಜ್ಞರ ಸಲಹೆಗಳನ್ನು ಸರಕಾರ ಸ್ವೀಕರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳಗಲಿ ಎಂದು  ಆಶಿಸೋಣ.
      ಡಾ.ಶ್ರೀಕಾಂತ್ಸಿದ್ದಾಪುರ.

ಶುಕ್ರವಾರ, ಫೆಬ್ರವರಿ 18, 2011

Article on Holeshankaranarayana

ಪ್ರಶಾಂತ ಪರಿಸರದ ಶ್ರೀ ಕ್ಷೇತ್ರ ಹೊಳೆಶಂಕರನಾರಾಯಣ
ಶ್ರೀ ಶಂಕರನಾರಾಯಣ ಕ್ಷೇತ್ರದ ಹೆಸರನ್ನು ಕೇಳದವರೇ ವಿರಳ. ಶಂಕರ ಮತ್ತು ನಾರಾಯಣರು ಒಂದೇ ದೇಹದಿಂದ ಅವತಾರ ತಾಳಿದುದು ಇಲ್ಲಿನ ವೈಶಿಷ್ಟ್ಯ.  ಶಂಕರನಾರಾಯಣ ಎಂದಾಕ್ಷಣ ತಟ್ಟನೆ ನಮ್ಮ ಗಮನಕ್ಕೆ ಬರುವುದು ಪ್ರಸಿದ್ಧ ಕ್ಷೇತ್ರ ಶ್ರೀ ಕ್ರೋಢ ಶಂಕರನಾರಾಯಣ.  ಶ್ರೀ ಶಂಕರನಾರಾಯಣ ದೇವರಿಗೆ ಸಂಬಂಧಿಸಿದ ಇನ್ನೂ ನಾಲ್ಕು ಕ್ಷೇತ್ರಗಳು ಈ ಪರಿಸರದಲ್ಲಿದ್ದು, ಅವುಗಳ ಇತಿಹಾಸವು ಬೆಳಕಿಗೆ ಬರಬೇಕಾಗಿದೆ. ಈ ನಾಲ್ಕರಲ್ಲಿ ಒಂದಾದ ಸಿದ್ದಾಪುರ ಸಮೀಪದ ಹೊಳೆಶಂಕರನಾರಾಯಣವು ಇದೀಗ ಭಕ್ತರ ಗಮನವನ್ನು ಹೆಚ್ಚು ಸೆಳೆಯುತ್ತಿದೆ. ಅಗಸ್ತ್ಯರ ತಪೋಭೂಮಿ ಎಂಬ ಪಾವಿತ್ರ್ಯವೂ ಈ ಸ್ಥಳಕ್ಕಿದೆ.
ಕ್ಷೇತ್ರವಿರುವ ಪ್ರದೇಶ:
ಹೊಳೆಶಂಕರನಾರಾಯಣವು ಸಿದ್ದಾಪುರದಿಂದ ವಾರಾಹಿ ಯೋಜನಾ ಪ್ರದೇಶಕ್ಕೆ ಹೋಗುವ ಮಾರ್ಗದಲ್ಲಿದೆ. ಕುಂದಾಪುರ ತಾಲೂಕಿನ ಸಿದ್ದಾಪುರದಿಂದ ಸುಮಾರು 5 ಕಿ.ಮೀ. ದೂರದಲ್ಲಿದೆ.  ಕ್ಷೇತ್ರದ ಸುತ್ತಲೂ ಹಸಿರು ಕಾನನ ಮನಸ್ಸಿಗೆ ಮುದನೀಡುತ್ತದೆ. ತುಂಬಿ ಹರಿಯುವ ನದಿ ಇನ್ನೊಂದು ಆಕರ್ಷಣೆ.  ಜನಜಂಗುಳಿಯಿಂದ ದೂರವಿರುವ ಈ ಪ್ರದೇಶದ ಪ್ರಶಾಂತ ವಾತಾವರಣ ಎಂಥವರ ಮನಸ್ಸನ್ನೂ ಶಾಂತಗೊಳಿಸುತ್ತದೆ. ಇಲ್ಲೇ ಸಮೀಪದಲ್ಲಿ ಕನರ್ಾಟಕ ಸರಕಾರದ ಬಹು ಬೇಡಿಕೆಯ ವಾರಾಹಿ ನೀರಾವರಿ ಯೋಜನೆಯ ಕಾರ್ಯವೂ ನಡೆಯುತ್ತಿದೆ.
ಪೌರಾಣಿಕ ಹಿನ್ನೆಲೆ :
ಖರ ಮತ್ತು ರಟ್ಟಾಸುರರ ಅಟ್ಟಹಾಸಕ್ಕೆ ಮಂಗಳ ಹಾಡಲು ಹರಿ ಮತ್ತು ಹರರನ್ನು ಒಂದೇ ದೇಹಧಾರಿಗಳಾಗಿ  ಧರೆಗಿಳಿಸಬೇಕಾಯಿತು.  ಈ ಮಹತ್ಕಾರ್ಯದಲ್ಲಿ ಕ್ರೋಢ ಮಹಷರ್ಿಗಳೊಂದಿಗೆ ನಾಲ್ವರು ಮುನಿಗಳಾದ ಜಮದಗ್ನಿ, ಲೋಮಶ, ಮಾಂಡವ್ಯ ಮತ್ತು ಅಗಸ್ತ್ಯರೂ ಬೇರೆ ಬೇರೆ ಪ್ರದೇಶಗಳಲ್ಲಿ ತಪಸ್ಸನ್ನು ಕೈಗೊಂಡರು. ಅಗಸ್ತ್ಯರು ಆರಿಸಿಕೊಂಡ ಏಕಾಂತ ಸ್ಥಳವೇ ಹೊಳೆಶಂಕರನಾರಾಯಣ.  ಅಗಸ್ತ್ಯರು ಸಂಕರ್ಷಣಾತ್ಮಕನಾದ ಅಘೋರನನ್ನು ಕುರಿತು ಘೋರ ತಪಸ್ಸನ್ನು ಮಾಡಿದರು. ಈ ಐವರ ತಪಸ್ಸಿಗೆ ಮೆಚ್ಚಿದ ಹರಿ ಮತ್ತು ಹರರು ಒಂದಾಗಿ ಐವರಿಗೂ ಕಾಣಿಸಿಕೊಂಡರು. ಇವರ  ಬೇಡಿಕೆಯಂತೆ ಖರ ಮತ್ತು ರಟ್ಟಾಸುರರನ್ನು ಕೊಂದರು. ಮುನಿಗಳೈವರ ಅಪೇಕ್ಷೆಯಂತೆ ಅವರು ತಪಸ್ಸು ಮಾಡಿದ ಐದೂ ಸ್ಥಳಗಳಲ್ಲಿ ಶಂಕರನಾರಾಯಣರು ನೆಲೆ ನಿಂತರು.  ಈ ಐದು ಶಂಕರನಾರಾಯಣಗಳೇ ಕ್ರೋಢ ಶಂಕರನಾರಾಯಣ, ಹೊಳೆಶಂಕರನಾರಾಯಣ, ಮಾಂಡವಿ ಶಂಕರನಾರಾಯಣ, ಬೆಳ್ವೆ ಶಂಕರನಾರಾಯಣ ಮತ್ತು ಆವಸರ್ೆ ಶಂಕರನಾರಾಯಣ.
ಐತಿಹಾಸಿಕ ಹಿನ್ನೆಲೆ :
ಹೊಳೆಶಂಕರನಾರಾಯಣವು ಐತಿಹಾಸಿಕವಾಗಿಯೂ ಗಮನ ಸೆಳೆಯುತ್ತಿದೆ. ಕೆಳದಿ ಅರಸರ ಕಾಲದ ಶಾಸನವೊಂದರಲ್ಲಿ ಈ ಕ್ಷೇತ್ರದ ಉಲ್ಲೇಖವಿದೆ. ಶಾಸನದ ಪ್ರಕಾರ ಈ ಕ್ಷೇತ್ರವು ಬೇಚಹಳ್ಳಿ (ಇಂದಿನ ಬೆಚ್ಚಳ್ಳಿ) ಗ್ರಾಮದಲ್ಲಿದೆ. ಕೆಳದಿ ಅರಸನಾದ ವೀರಭದ್ರ ನಾಯಕನು 1642 ರಲ್ಲಿ ಈ ದೇವಸ್ಥಾನದ ಅರ್ಚನೆಯ ವೆಚ್ಚಕ್ಕೆ ಉಂಬಳಿ ಬಿಟ್ಟ ಉಲ್ಲೇಖ ಈ ಶಾಸನದಲ್ಲಿದೆ.
ಹೊಳೆಶಂಕರನಾರಾಯಣ ಕ್ಷೇತ್ರದ ಕಳೆಯನ್ನು ಹೆಚ್ಚಿಸಿದವರು ಡಾ.ಜಿ.ಶಂಕರ್. ಅವರ ಮುಂದಾಳತ್ವದಲ್ಲಿ ಜೀಣರ್ೋದ್ಧಾರಗೊಂಡಿರುವ ಈ ಕ್ಷೇತ್ರವು ಇನ್ನಷ್ಟು ಭಕ್ತರನ್ನು ಸೆಳೆಯುವಂತಾದರೆ ಪರಿಶ್ರಮ ಸಾರ್ಥಕವಾದೀತು. ಹಾಗಾಗಲಿ ಎಂದು ಆಶಿಸೋಣ.            

shankaranarayana God at Holeshankaranarayana


Sree kshetra Holeshankaranarayana

ಗುರುವಾರ, ಫೆಬ್ರವರಿ 17, 2011

swami vivekananda



ವಿಶಿಷ್ಟಗುಣಗಳ ವಿಭೂತಿಪುರುಷ ವಿವೇಕಾನಂದ
 ರಾಮಕೃಷ್ಣ ಪರಮಹಂಸರ ಭಕ್ತರಾಗಿದ್ದ ಬಾಬು ಬಲರಾಮ ಮತ್ತು ಬಾಬು ಸುರೇಂದ್ರನಾಥರು ಅಕಾಲದಲ್ಲಿ ದೈವಾಧೀನರಾಗುತ್ತಾರೆ. ಈ ವಾತರ್ೆಯು ಪರಮಹಂಸರ ಪಟ್ಟದ ಶಿಷ್ಯರಾಗಿದ್ದ ಸಂತರಿಗೂ ತಲುಪುತ್ತದೆ.  ಅಗಲಿದ ಇಬ್ಬರು ಶ್ರೇಷ್ಠ ಭಕ್ತರಿಗಾಗಿ ಆ ಸಂತ ಕಣ್ಣೀರು ಸುರಿಸುತ್ತಾರೆ. ಅವರೊಂದಿಗಿದ್ದ ಇತರರು ಆಶ್ಚರ್ಯದಿಂದ ಸ್ವಾಮೀಜಿಯವರನ್ನು ಪ್ರಶ್ನಿಸುತ್ತಾರೆ. ಸ್ವಾಮಿ ಸಾಧುವಾದ ನಿಮಗೂ ಈ ಪರಿ ಕಣ್ಣೀರೇ?.  ಈ ಪ್ರಶ್ನೆಗೆ ಸಂತನ ಉತ್ತರ ಹೀಗಿತ್ತು. ಸಂನ್ಯಾಸಿಯಾದ ಮಾತ್ರಕ್ಕೆ ಹೃದಯವಿಲ್ಲವೇ ?. ನಿಜವಾದ ಸಂನ್ಯಾಸಿ ಇತರರಿಗಾಗಿ ಹೆಚ್ಚು ಮರುಗುವನು.
 ಈ ರೀತಿಯಾಗಿ  ಮರುಗಿದ ಯತಿಗಳೇ ಮಾನವೀಯತೆಗೆ ಒತ್ತುಕೊಟ್ಟು ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ವೀರ ಸಂತ ವಿವೇಕಾನಂದರು.  1863 ಜನವರಿ 12 ರಂದು ವಿವೇಕಾನಂದರ ಜನನವಾಯಿತು. ಕಲ್ಕತ್ತಾದಲ್ಲಿನ ವಕೀಲ ವಿಶ್ವನಾಥ ದತ್ತ ಮತ್ತು ಭುವನೇಶ್ರರಿ ದೇವಿಯವರು ಸ್ವಾಮೀಜಿಯವರ ತಂದೆ, ತಾಯಿಯವರು.  ಅಜ್ಜ ದುಗರ್ಾಚರಣದಾಸರು ಆಗರ್ಭ ಶ್ರೀಮಂತಿಕೆಯ ನಡುವೆಯೇ ವೈರಾಗ್ಯವನ್ನು ಒಪ್ಪಿ ಸಂನ್ಯಾಸ ಸ್ವೀಕರಿಸಿದವರು.  ಬಾಲ್ಯದಿಂದಲೇ ಸ್ವಾಮೀಜಿಯವರಲ್ಲಿ ಮಾನವೀಯ ಗುಣಗಳ ಅಂಕುರವಾಗತೊಡಗಿತ್ತು. ಅವರೇ ಒಂದು ಕಡೆ ಇದನ್ನು ಸ್ಮರಿಸಿಕೊಳ್ಳುತ್ತಾರೆ. ಅವರು ಬಾಲ್ಯದಲ್ಲಿದ್ದಾಗ ಒಬ್ಬ ಬಾಲಕ ಗಾಡಿಯೊಂದರ ಚಕ್ರದಡಿ ಸಿಲುಕಿ ಸಾಯುವ ಅಪಾಯದಲ್ಲಿ ಇದ್ದಿದ್ದನಂತೆ. ಸ್ವಾಮಿ ವಿವೇಕಾನಂದರು ಅಂದರೆ ಅಂದಿನ ನರೇಂದ್ರ ಧೈರ್ಯದಿಂದ ಬಾಲಕನ ಪ್ರಾಣವನ್ನು ಉಳಿಸಿದರಂತೆ. ಒಮ್ಮೆ ಒಬ್ಬ ಬಡ ಹುಡುಗ ರಸ್ತೆಯ ಬದಿ ವಿಪರೀತ ಜ್ವರದಿಂದ ನರಳುತ್ತಿದ್ದನು. ಅದನ್ನು ಗಮನಿಸಿದ ನರೇಂದ್ರ ಆ ಬಾಲಕನನ್ನು ಮನೆಯ ತನಕ ತಲುಪಿಸಿದರು.  ಮಾನವೀಯತೆ ಮತ್ತು ಧ್ಯರ್ಯಗಳೇ ನರೇಂದ್ರನ ಯಶಸ್ಸಿನ ಬಂಡವಾಳವಾಗಿದ್ದವು. ಅವರೇ ಒಂದು ಕಡೆ ತನ್ನೀ ಗುಣಗಳ ಕುರಿತು ಆಡಿ ಕೊಂಡಿರುತ್ತಾರೆ. ಈ ವಿಧದ ಧೈರ್ಯವಿಲ್ಲದಿದ್ದರೆ ಕಾಸಿಲ್ಲದೇ ಕಡಲನ್ನು ದಾಟಲು ಸಾಧ್ಯವಾಗುತ್ತಿತ್ತೇ?. ಭಿಕಾರಿಯಾಗಿ ಭೂಪ್ರದಕ್ಷಿಣೆ ಬರಲು ಸಾಧ್ಯವಾಗುತ್ತಿತ್ತೇ?.
ನರೇಂದ್ರನ ಬಾಲ್ಯ :
ಬಾಲ್ಯದಲ್ಲಿರುವಾಗ ವಿಶ್ವನಾಥ ದತ್ತರು ಮಗನಿಗೆ ಒಂದು ಮಾತನ್ನು ಹೇಳುತ್ತಿದ್ದರು. ಎಂದಿಗೂ ದರ್ಪಕ್ಕೆ ಮಣಿಯಬೇಡ. ಯಾವುದಕ್ಕೂ ಅದ್ಭುತ ಅಥವಾ ವಿಸ್ಮಯ ಎಂದು ಅತಿಯಾದ ಆದರ ತೋರಬೇಡ. ತಂದೆಯ ಈ ಹಿತನುಡಿಯೇ ಬಾಲಕ ನರೇಂದ್ರನಲ್ಲಿ ಈ ಧೈರ್ಯವನ್ನು ತುಂಬಿತು.  ತಾಯಿ ಭುವನೇಶ್ವರಿ ದೇವಿ ಮಗನಿಗೆ ಭಾರತದ ವೀರ ಪುರುಷರ ಕತೆಗಳನ್ನು ಹೇಳುತ್ತಿದ್ದಳು. ವಿವೇಕಾನಂದರ ತಂದೆಯಾದರೂ ಸಾಕಷ್ಟು ಶ್ರೀಮಂತರು. ಮನೆಗೆ ಬಂದ ಸಾಧು, ಸಂತರನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದರು. ಅವರಿಗೆ ದಾನ ಮತ್ತು ಧರ್ಮಗಳನ್ನು ಮಾಡುವುದರಲ್ಲಿಯೂ ಹಿಂದೇಟು ಹಾಕುತ್ತಿರಲಿಲ್ಲ. ಕುಟುಂಬದ ಈ ಹಿನ್ನೆಲೆಗಳೇ ಬಾಲಕ ನರೇಂದ್ರನ ಮೇಲೆ ಪ್ರಭಾವ ಬೀರಿದವು.
ರಾಮಕೃಷ್ನರ ಭೇಟಿ :
 ತಂದೆ ವಿಶ್ವನಾಥ ದತ್ತರಿಗೆ ಮಗನನ್ನು ವಕೀಲನನ್ನಾಗಿ ಮಾಡುವ ಉತ್ಸಾಹ. ಆದರೆ ನರೇಂದ್ರನಿಗೆ ಅಧ್ಯಾತ್ಮದತ್ತ ಅಧಿಕ ಒಲವು. ಯೋಗ, ಧ್ಯಾನ, ಸಮಾಧಿ ಎಂದರೆ ರೋಮಾಂಚನ. ತನ್ನ ಅಧ್ಯಾತ್ಮತೃಷೆಯನ್ನು ನೀಗಿಸಬಲ್ಲ ಗುರುವಿನ ಹುಡುಕಾಟದಲ್ಲಿ ನರೇಂದ್ರನು ಇದ್ದನು. ಈ ಸಂದರ್ಭದಲ್ಲಿ ಆತನ ಕಿವಿಯ ಮೇಲೆ ಬಿದ್ದ ಹೆಸರು ದಕ್ಷಿಣೇಶ್ವರದ ರಾಮಕೃಷ್ಣ ಪರಮಹಂಸರು. ಒಮ್ಮೆ ಕಾಲೇಜಿನಲ್ಲಿ ಇಂಗ್ಲೀಷ್ ತರಗತಿ ನಡೆಯುತ್ತಿತ್ತು. ಹೇಸ್ಟಿ ಎಂಬ ಇಂಗ್ಲೀಷ್ ಅಧ್ಯಾಪಕರು ಅಂದು ಪಾಠ ಮಾಡುತ್ತಿದ್ದರು. ಪಾಠದ ವಿಷಯ ವಡ್ಸರ್್ವತರ್್ ಕವಿಯ ದಿ ಎಕ್ಸ್ಕರ್ಷನ್ ಕವನ. ಈ ಕವನದ ಹಿನ್ನೆಲೆಯಲ್ಲಿ ಭಾವಾತೀತ ಸಮಾಧಿಯ ಕುರಿತು ವಿವರಿಸುತ್ತಾ ಸಾಗಿದ ಅಧ್ಯಾಪಕರು ರಾಮಕೃಷ್ಣ ಪರಮಹಂಸರಲ್ಲಿ ಈ ಸಮಾಧಿ ಸ್ಥಿತಿಯನ್ನು ಕಾಣಬಹುದು ಎಂದರು. ಅಂದಿನಿಂದ ರಾಮಕೃಷ್ಣರತ್ತ ವಿಶೇಷ ಗೌರವ ತಾಳಿದ ನರೇಂದ್ರನು 1881 ರಲ್ಲಿ ದಕ್ಷಿಣೇಶ್ವರಕ್ಕೆ ಬಂದು ರಾಮಕೃಷ್ಣರನ್ನು ಭೇಟಿ ಮಾಡಿದನು.
ಗುರು-ಶಿಷ್ಯರ ಸಮಾಗಮ :
 ವಿವೇಕಾನಂದರು ಯಾವುದನ್ನೂ ಸುಲಭದಲ್ಲಿ ಒಪ್ಪಿಕೊಳ್ಳುವವರಲ್ಲ. ರಾಮಕೃಷ್ಣರನ್ನೂ ಅವರು ಧೈರ್ಯದಿಂದಲೇ ಪ್ರಶ್ನಿಸುತ್ತಾರೆ. ನೀವು ದೇವರನ್ನು ನೋಡಿದ್ದೀರಾ?. ರಾಮಕೃಷ್ಣರು ಅಷ್ಟೇ ಧೈರ್ಯದಿಂದ ಉತ್ತರ ಕೊಡುತ್ತಾರೆ. ಹೌದು, ನೋಡಿದ್ದೇನೆ.  ಈ ತನಕ ತನ್ನ ಪ್ರಶ್ನೆಗೆ ಇಷ್ಟು ಧೈರ್ಯವಾಗಿ ಉತ್ತರ ಕೊಟ್ಟ ಸಂತರನ್ನು ವಿವೇಕಾನಂದರು ನೋಡಿರಲಿಲ್ಲ. ರಾಮಕೃಷ್ಣರಿಗೆ ಕಾಂಚನ ಮತ್ತು ಕಾಮಿನಿಯರತ್ತ ನಿರಾಸಕ್ತಿ.  ಮಣ್ಣನ್ನೂ, ಹೊನ್ನನ್ನೂ ಸಮಾನವಾಗಿ ಕಾಣುತ್ತಿದ್ದರು. ವಿವೇಕಾನಂದರಿಗೆ ಇದರ ಸತ್ಯಾಸತ್ಯತೆ ತಿಳಿಯುವ ಕುತೂಹಲ. ಅದಕ್ಕಾಗಿ ಗುರುವನ್ನೂ ಪರೀಕ್ಷೆಗೆ ಗುರಿಪಡಿಸಿದರು.  ಅವರು ವಿಶ್ರಮಿಸುವ ಹಾಸಿಗೆಯ ಅಡಿ ಒಂದೆರಡು  ಬಂಗಾರದ ನಾಣ್ಯಗಳನ್ನಿಟ್ಟರು. ರಾಮಕೃಷ್ಣರು ಬಂದವರೇ ಹಾಸಿಗೆಯ  ಮೇಲೆ ಕುಳಿತರು. ವಿವೇಕಾನಂದರು ದೂರದಲ್ಲಿ ನಿಂತು ಕುತೂಹಲದಿಂದ ಎಲ್ಲವನ್ನೂ ಗಮನಿಸುತ್ತಿದ್ದರು. ರಾಮಕೃಷ್ಣರಿಗೆ ಚೇಳು ಕಡಿದ ಅನುಭವವಾಯಿತು. ಅವರು ಎದ್ದೆದ್ದು ನಿಲ್ಲುತ್ತಿದ್ದರು. ಕೊನೆಗೆ ಈ ಬಂಗಾರವು ಇದ್ದ ಸಂಗತಿ ತಿಳಿಯಿತು. ವಿವೇಕಾನಂದರು ತಮ್ಮನ್ನು ಪರೀಕ್ಷಿಸಲು ತಾನೇ ಈ ಕೆಲಸ ಮಾಡಿದೆನೆಂದು ಸತ್ಯವನ್ನು ಅನಂತರ ಬಿಚ್ಚಿಟ್ಟರು. ರಾಮಕೃಷ್ಣ ಪರಮಹಂಸರಿಗೂ ಸಂತೋಷವಾಯಿತು.
ರಾಜಾ ಮಂಗಳಸಿಂಗರಿಗೆ ಮುಖಭಂಗ ;
 ಭಾರತದ ಸಮಗ್ರವಾದ ಪರಿಚಯಕ್ಕೆ ಸ್ವಾಮೀಜಿ ಆಯ್ದುಕೊಂಡ ಹಾದಿ ಭಾರತ ಪರ್ಯಟನ. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಪ್ರವಾಸ ಕೈಗೊಂಡ ಸ್ವಮೀಜಿಯವರು ಈ ದೇಶದ ಜನ ಜೀವನವನ್ನು ಸಂಪೂರ್ಣವಾಗಿ ಅರಗಿಸಿಕೊಂಡರು. ವಿವೇಕಾನಂದರು ಹೀಗೆ ಪ್ರವಾಸದಲ್ಲಿದ್ದಾಗ ರಾಜಾ ಮಂಗಳಸಿಂಗನನ್ನು ಅವನ ದಿವಾನರ ಮೂಲಕ ಒಮ್ಮೆ ಭೇಟಿಯಾದರು. ಮಂಗಳಸಿಂಗನು ಬ್ರಿಟಿಷರೊಂದಿಗೆ ಕೈಜೋಡಿಸಿ, ಪಾಶ್ಚಾತ್ಯ ಸಂಸ್ಕೃತಿಯನ್ನು ಅತಿಯಾಗಿ ಕೊಂಡಾಡುತ್ತಿದ್ದನು. ಸ್ವಾಮೀಜಿಯವರಿಂದಾದರೂ ರಾಜನ ಮನ:ಪರಿವರ್ತನೆಯಾಗಲಿ ಎಂಬ ಬಯಕೆ ಅವನ ದಿವಾನರದ್ದು.  ಸ್ವಾಮೀಜಿಯವರನ್ನು ಕಂಡ ಕೂಡಲೇ ಮಂಗಳಸಿಂಗನು ಅಹಂಕಾರದಿಂದ ಪ್ರಶ್ನಿಸಿದನು.  ಎಲ್ಲವನ್ನೂ ಬಿಟ್ಟು ನೀವು ಯಾಕೆ ಈ ಸಂನ್ಯಾಸವನ್ನು  ಸ್ವೀಕರಿಸಿದಿರಿ?. ವಿವೇಕಾನಂದರ ಉತ್ತರವೂ ಅಷ್ಟೇ ತೀಕ್ಷ್ಣವಾಗಿತ್ತು. ಅಮೂಲ್ಯವಾದ ಭಾರತೀಯ ಸಂಸ್ಕೃತಿಯನ್ನು ಬಿಟ್ಟು ನೀವು ಪಾಶ್ಚಾತ್ಯರ ಗುಲಾಮರಾಗಿ ಬ್ರಿಟಿಷರೊಂದಿಗೆ ಏಕೆ ಕೈ ಜೋಡಿಸುತ್ತಿದ್ದೀರಿ?. ಒಮ್ಮೆ ಮಂಗಳಸಿಂಗರು ಸ್ವಾಮೀಜಿಯವರ ಮುಂದೆ ಮೂತರ್ಿಪೂಜೆಯನ್ನು ಖಂಡಿಸಿ ಮಾತನಾಡಿದರು. ಕೂಡಲೇ ಸ್ವಾಮೀಜಿ ಅಲ್ಲೆ ಇದ್ದ ಮಂಗಳಸಿಂಗರ ಭಾವಚಿತ್ರಕ್ಕೆ ಉಗುಳುವಂತೆ ಅರಮನೆಯ ಸಿಬ್ಬಂದಿಗಳಿಗೆ ಆದೇಶಿದರು. ಎಲ್ಲರೂ ತಬ್ಬಿಬ್ಬಾದರು. ಕೊನೆಗೆ ವಿವೇಕಾನಂದರು ಹೇಳಿದರು. ಅಲ್ಲಿ ನಿಮ್ಮ ರಾಜನಿಲ್ಲ. ಅದು ಅವನ ಭಾವಚಿತ್ರ. ಆದರೆ ಅದರಲ್ಲಿಯೇ  ನೀವು ನಿಮ್ಮ ರಾಜನನ್ನು ಕಾಣುತ್ತಿರುವಿರಿ. ಮೂತರ್ಿಪೂಜೆಯ ಮರ್ಮವೂ ಇಷ್ಟೇ. ಅದು ಅವರವರ ಭಾವಕ್ಕೆ ಬಿಟ್ಟ ವಿಚಾರ.
ಸರ್ವಧರ್ಮ ಸಮ್ಮೇಳನ :
 1893 ಸೆಪ್ಟೆಂಬರ್ 11 ಚಿಕಾಗೋ ನಗರದಲ್ಲಿ ವಿಶ್ವಧರ್ಮ ಸಮ್ಮೇಳನ.  ಈ ಸಮ್ಮೇಳನದಲ್ಲಿ ಸ್ವಾಮೀಜಿಯವರ ವಾಕ್ವೈಖರಿ ಎಲ್ಲರನ್ನೂ ಬೆಕ್ಕಸ ಬೆರಗು ಮಾಡಿತು. ಮುಂದೆ ಅಲ್ಲಿಯೇ ಇದ್ದ ಶ್ರೀಮಂತರೊಬ್ಬರಿಂದ ಸ್ವಾಮೀಜಿಯವರಿಗೆ ಆಹ್ವಾನವೂ ಬಂದಿತು. ಅ ಶ್ರೀಮಂತರ ಮನೆಯಲ್ಲಿ ಹಂಸತೂಲಿಕಾತಲ್ಪದಲ್ಲಿ ಮಲಗುವ ಅವಕಾಶವನ್ನು ಸ್ವಾಮೀಜಿಯವರಿಗೆ ಕಲ್ಪಿಸಲಾಯಿತು.  ಆ ಕ್ಷಣವೇ ಭಾರತದ ಬಡಜನರ  ದೀನ ಸ್ಥಿತಿ ಅವರ ಕಣ್ಮುಂದೆ  ಬಂದು ನಿಂತಿತು.  ಅವರಿಗರಿವಿಲ್ಲದೇ ಕಣ್ಣೀರು ಸುರಿಯಿತು. ಭಾರತವನ್ನು ಈ ಬಡತನದ ಶಾಪದಿಂದ ಪಾರುಮಾಡು ಎಂದು ತಾಯಿಯನ್ನು ಅಲ್ಲೇ ಪ್ರಾಥರ್ಿಸಿದರು. ಅದು ಅವರ ಪಾಲಿಗೆ ಸುಖದ ಸುಪ್ಪತ್ತಿಗೆಯಾಗುವ ಬದಲು ಮುಳ್ಳಿನ ಹಾಸಿಗೆಯಂತಾಯಿತು. ಕೊನೆಗೂ ಆ ವೈಭವದ ಹಂಸತೂಲಿಕಾತಲ್ಪವನ್ನು ತ್ಯಜಿಸಿದರು.
ಯುವಕರ ಮೇಲೆ ಅತಿ ವಿಶ್ವಾಸ :
 ಸ್ವಾಮೀಜಿಯವರಿಗೆ ದೇಶದ ಯುವಕರ ಮೇಲೆ ಅತಿಯಾದ ನಂಬಿಕೆ ಇದ್ದಿತ್ತು. ತರುಣ ಸ್ನೇಹಿತರೇ, ಮೊದಲು ಬಲಿಷ್ಠರಾಗಿ. ಗೀತಾಧ್ಯಯನಕ್ಕಿಂತ ಫುಟ್ಬಾಲ್ ಆಟದಿಂದ ಮುಕ್ತಿಗೆ ಹತ್ತಿರ ಹೋಗುವಿರಿ. ಇವು ಕೆಚ್ಚಿನ ಮಾತುಗಳು. ನಿಮ್ಮ ಬಾಹುಗಳ ಮಾಂಸಖಂಡಗಳಲ್ಲಿ ಸ್ವಲ್ಪ ಹೆಚ್ಚು ಶಕ್ತಿ ಇದ್ದರೆ, ನೀವು ಗೀತೆಯನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳಬಲ್ಲಿರಿ
ಜನವರಿ 12, ರಾಷ್ಟ್ರೀಯ ಯುವದಿನವನ್ನಾಗಿ  ಆಚರಿಸಲಾಗುತ್ತಿದೆ. ಸ್ವಾಮೀಜಿಯವರ ಚಿಂತನೆ, ಸಂದೇಶಗಳ ಮಂಥನ ಇಂದು ಹೆಚ್ಚು ಪ್ರಸ್ತುತ.  ಈ ಹಿನ್ನೆಲೆಯಿಂದ ಅರ್ಥಪೂರ್ಣವಾಗಿ ಸ್ವಾಮೀಜಿಯವರ ಜಯಂತಿ ಆಚರಿಸಲ್ಪಡಲಿ.
     ಡಾ.ಶ್ರೀಕಾಂತ್ಸಿದ್ದಾಪುರ.

ಬುಧವಾರ, ಫೆಬ್ರವರಿ 16, 2011

D.V.G

kannada

'ನುಡಿ ಮತ್ತು ನಡೆ'ಗಳ ನಡುವೆ
ಝೆನ್ ಕತೆಗಳನ್ನು ಕೇಳದವರಿಲ್ಲ. ಅದರ ಒಂದು ಕತೆ ಹೀಗಿದೆ. ಝೆನ್ ಗುರುಗಳೊಬ್ಬರು ಸಾವಿರಾರು ಉಪನ್ಯಾಸ ನೀಡಿದವರು. ನೂರಾರು ಕೃತಿಗಳಲ್ಲಿ ತಮ್ಮ ಚಿಂತನೆಗಳನ್ನು ದಾಖಲಿಸಿದವರು. ಬದುಕಿನ ಕೊನೆಗೆ ಅವರಿಗೆ ಜ್ಞಾನೋದಯವಾಯಿತಂತೆ. ಆಗ ಅವರೇ ಹೇಳಿದರಂತೆ.  ನಾನು ದೊಡ್ಡ ತಪ್ಪು ಮಾಡಿ ಬಿಟ್ಟೆ. ಉಪನ್ಯಾಸ ಮತ್ತು ಬರವಣಿಗೆಗಳಲ್ಲಿ ಜೀವನ ವ್ಯರ್ಥ ಮಾಡಿದೆ.  ಅವುಗಳ ಅನುಷ್ಠಾನದತ್ತ ಗಮನ ಕೊಡದೆ ಕೆಟ್ಟೆ.  ಮುಂದಿನ ಜನ್ಮದಲ್ಲಿ ಮೊದಲು ನಾನು ಮಾಡುವ ಕರ್ತವ್ಯ ಇವುಗಳ ಅನುಷ್ಠಾನ ಪ್ರಯತ್ನ.  ಇಂದು ನಮ್ಮ ನುಡಿ ಮತ್ತು ನಡೆಗೆ ಇಂದು ಭಾರೀ ಅಂತರ. ನಾವೆಲ್ಲಾ ಉಪದೇಶದಲ್ಲಿ ನಿಸ್ಸೀಮರು. ಆದರೆ ಅದರಂತೆ ಬದುಕುವಲ್ಲಿ ವಿಫಲರು. ಆದರೆ ನುಡಿದಂತೆ ನಡೆದ ಅನೇಕ ಹಿರಿಯರು ನಮ್ಮ ನಡುವೆ ಮಿಂಚಿ ಮರೆಯಾಗಿದ್ದಾರೆ. ಅವರ ಜೀವನದಲ್ಲಿ ನಡೆಗೂ, ನುಡಿಗೂ ಸಾಕಷ್ಟು ಹೊಂದಾಣಿಕೆ ಇದ್ದಿತ್ತು. ಬದುಕಿಗೂ, ಬರವಣಿಗೆಗೂ ಸಾಮರಸ್ಯವಿತ್ತು. ಕನ್ನಡದ ಖ್ಯಾತ ಸಾಹಿತಿ ಶ್ರೀ ಎಲ್.ಎಸ್. ಶೇಷಗಿರಿ ರಾಯರು ತಮ್ಮ ಕೃತಿಯೊಂದರಲ್ಲಿ ಹಿರಿಯರ ಇಂತಹ ಹಲವು ಘಟನೆಗಳನ್ನು ಮನೋಜ್ಞವಾಗಿ ಚಿತ್ರಿಸಿರುತ್ತಾರೆ.
ನನಗೆ ಉಡಲು ಒಳ್ಳೆಯ ಸೀರೆಗಳಿರಲಿಲ್ಲ:
ಡಿ.ವಿ.ಜಿ ಕನ್ನಡದ ಖ್ಯಾತ ಸಾಹಿತಿ. ಮಂಕುತಿಮ್ಮನ ಕಗ್ಗ ಇವರ ಶ್ರೇಷ್ಠ ಕೃತಿಗಳಲ್ಲಿ ಒಂದು. ಅವರು ಎಂದೂ ಕೀತರ್ಿಗೆ ಆಸೆ ಪಟ್ಟವರಲ್ಲ. ಪತ್ರಿಕೆಯವರು ಸಂದರ್ಶನದ ನೆಪದಲ್ಲಿ ಬಂದಾಗಲೂ ಸೌಜನ್ಯವಾಗಿ ತಿರಸ್ಕರಿಸಿದವರು. ಬದುಕಿನಲ್ಲಿ ಆಸೆಯ ದಾಸರಾದವರಲ್ಲ.  ಹಣಕ್ಕಾಗಿ ಬಾಯ್ಬಿಟ್ಟವರಲ್ಲ. ಕಡುಬಡತನದ ನಡುವೆಯೂ ಸಂತೃಪ್ತ ಬದುಕನ್ನು ಸಾಗಿಸಿದವರು. ಅವರ ಜೀವನದ ಒಂದು ಘಟನೆ ಅವರ ಬಡತನದ ಚಿತ್ರಣವನ್ನು ನೀಡುತ್ತಿದೆ. ಒಮ್ಮೆ ಡಿ.ವಿ.ಜಿ. ಯವರ ಧರ್ಮಪತ್ನಿಗೆ ನೆರಮನೆಯಿಂದ ಅರಸಿನ ಕುಂಕುಮಕ್ಕಾಗಿ ಕರೆ ಬಂದಿತು. ಮಡದಿಗೆ ಹೋಗುವಂತೆ ಡಿ.ವಿ.ಜಿ. ಯವರೂ ಹೇಳಿದ್ದರು. ಆದರೆ ಆಕೆ ಹೋಗಿರಲಿಲ್ಲ. ಹೋಗದಿರಲು ಕಾರಣವೇನೆಂದು ಡಿ.ವಿ.ಜಿ. ನಂತರ ವಿಚಾರಿಸಿದರು. ಆಗ ಅವರ ಮಡದಿ ಹೇಳಿದ ಮಾತು ಅವರ ಬಡತನದ ತೀವ್ರತೆಯ ಅರಿವನ್ನು ಉಂಟುಮಾಡುವಂತಿದೆ. ನನಗೆ ಉಡಲು ಒಳ್ಳೆ ಸೀರೆ ಇಲ್ಲ. ಹೇಗೆ ಹೋಗಲಿ?.  ಈ ವಿಧದ ತೀವ್ರವಾದ ಬಡತನದ ನಡುವೆಯೂ ಬದುಕಿನ ಬದ್ಧತೆಗೆ ತಿಲಾಂಜಲಿ ನೀಡಲಿಲ್ಲ.
ಹಾಯಾಗಿದ್ದ ಚೆಕ್ಗಳು :
ಡಿ.ವಿ.ಜಿ ಯವರು ಎಂದೂ ಸರಕಾರ ಅಥವಾ ಇತರರಿಂದ ಹಣಕಾಸನ್ನು ನಿರೀಕ್ಷಿಸಿದವರಲ್ಲ. ಅವುಗಳು ತಾವಾಗಿಯೇ ಬಂದಾಗಲೂ ಒಲ್ಲೆ ಎಂದವರು.  ಸರ್ ಎಂ.ವಿಶ್ವೇಶ್ವರಯ್ಯನವರೊಂದಿಗೆ ನಡೆದ ಇನ್ನೊಂದು ಘಟನೆ ಇಲ್ಲಿ ಗಮನಾರ್ಹ.  ವಿಶ್ವೇಶ್ವರಯ್ಯನವರಿಗೆ ಡಿ.ವಿ.ಜಿ.ಯವರ ಬಗ್ಗೆ ಅತ್ಯಂತ ಗೌರವ. ತಮ್ಮ ಕೆಲಸ ಕಾರ್ಯಗಳಿಗೆ ಆಗಾಗ ಅವರ ನೆರವುಗಳನ್ನು ಪಡೆಯುತ್ತಿದ್ದವರು.  ಡಿ.ವಿ.ಜಿ. ಯವರ ಈ ಸಹಾಯಕ್ಕಾಗಿ ಒಮ್ಮೆ ಚೆಕ್ ನೀಡಲು ವಿಶ್ವೇಶ್ವರಯ್ಯನವರು ಮುಂದಾದರು. ಆದರೆ ಅದನ್ನು ಸ್ವೀಕರಿಸಲು ಡಿ.ವಿ.ಜಿ.ಯವರು ಒಪ್ಪಲೇ ಇಲ್ಲ. ನೀವು ಸ್ವೀಕರಿಸದಿದ್ದರೆ ಮುಂದೆ ನಿಮ್ಮಿಂದ ಯಾವುದೇ ನೆರವನ್ನು ಪಡೆಯಲು ತಾನು ಬರುವುದಿಲ್ಲ ಎಂಬ ಬೆದರಿಕೆಯನ್ನೂ ವಿಶ್ವೇಶ್ವರಯ್ಯನವರು ನೀಡಿದರು. ಕೊನೆಗೂ ಅವರ ಒತ್ತಡಕ್ಕೆ ಮಣಿದು ಚೆಕ್ಕನ್ನು ಸ್ವೀಕರಿಸಿದರು. ಆದರೆ ಡಿ.ವಿ.ಜಿ. ತೀರಿಕೊಂಡ ಬಳಿಕ ಅಚ್ಚರಿಯ ಸಂಗತಿಯೊಂದು ಕಾದಿತ್ತು. ಅವರು ವಿಶ್ವೇಶ್ವರಯ್ಯನವರು ಕೊಟ್ಟ ಯಾವ ಚೆಕ್ಕನ್ನೂ ಕ್ಯಾಶಿಗಾಗಿ ಬ್ಯಾಂಕಿಗೆ ನೀಡಿರಲಿಲ್ಲ. ಅವುಗಳು ಡಿ.ವಿ.ಜಿ.ಯವರ  ಬಳಿಯಲ್ಲಿಯೇ ಇದ್ದಿದ್ದವು.
ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭಿಸಿಯೇ ಬಿಟ್ಟರು :
ಜೀವನದಲ್ಲಿ ಶಿಸ್ತು ಮತ್ತು ದಕ್ಷತೆಯೊಂದಿಗೆ ಡಿ.ವಿ.ಜಿ. ಯವರು ಎಂದೂ ರಾಜಿ ಮಾಡಿಕೊಂಡವರಲ್ಲ. ಖ್ಯಾತ ಸಾಹಿತಿ ಎಲ್. ಎಸ್. ಶೇಷಗಿರಿ ರಾಯರು ಈ ಸಂಬಂಧ ಒಂದು ಘಟನೆಯನ್ನು ನೀಡಿರುತ್ತಾರೆ. ಕಾರ್ಯಕ್ರಮವೊಂದಕ್ಕೆ ಡಿ.ವಿ.ಜಿ. ಯವರನ್ನು ಶೇಷಗಿರಿ ರಾಯರು ಆಹ್ವಾನಿಸಿದ್ದರು. ಆರು ಗಂಟೆಗೆ ಕಾರ್ಯಕ್ರಮ ಆರಂಭವಾಗ ಬೇಕಾಗಿತ್ತು. ಆದರೆ ಇಂದಿನಂತೆ ಅಂದೂ ಜನರ ಅಭಾವ.  ಜನರು ಸೇರಬಹುದೆಂಬ ನಿರೀಕ್ಷೆಯಿಂದ ಐದು ನಿಮಿಷ ಮುಂದೂಡುವ ಪ್ರಯತ್ನದಲ್ಲಿ ಶೇಷಗಿರಿ ರಾಯರು ನಿರತರಾಗಿದ್ದರು. ಆದರೆ ಆರು ಗಂಟೆಗೆ ಸರಿಯಾಗಿ ಡಿ.ವಿ.ಜಿ. ವೇದಿಕೆಯನ್ನೇರಿಯೇ ಬಿಟ್ಟರು.  ಡಿ.ವಿ.ಜಿ. ವೇದಿಕೆಯನ್ನೇರಿದವರೇ ಈಗ ಪ್ರಾರ್ಥನೆ ಎಂದು ಘೋಷಿಸಿಯೇ ಬಿಟ್ಟರು. ಎಲ್.ಎಸ್. ರವರಿಗೆ ಆಶ್ಚರ್ಯ.
ದೀಘಾಯುಸ್ಸು ಎಂದರೆ ----:
ಜೀವನದಲ್ಲಿ ಸುಖ ಮತ್ತು ದು:ಖಗಳು ಸಾಮಾನ್ಯ. ಅದನ್ನು ಎದುರಿಸಿದವನೇ ನಿಜವಾದ ಧೀರ. ಹೀಗೆಲ್ಲಾ ಉಪದೇಶಿಸುವುದು ಸುಲಭ. ಆದರೆ ಆ ಕಷ್ಟಗಳನ್ನು ಸಹಿಸಿ, ಸಾಮಾನ್ಯರಿಗೂ ಸವಿ ನೀಡುವವರು ಎಷ್ಟು ಮಂದಿ?. ಇದನ್ನು ನೆನಪಿಸಿಕೊಂಡಾಗ ನೆನಪಾಗುವವರಲ್ಲಿ ಒಬ್ಬರು ಹಾಸ್ಯ ಬರಹಗಾರ ನಾ. ಕಸ್ತೂರಿಯವರು.  ಕನ್ನಡದ ಹಾಸ್ಯ ಲೇಖಕ ನಾ.ಕಸ್ತೂರಿಯವರ ಬದುಕೂ ಆಶಾದಾಯಕವಾಗಿರಲಿಲ್ಲ. 18-20 ವರ್ಷದ ಮಗನನ್ನು ತಮ್ಮ ನಡುವಯಸ್ಸಿನಲ್ಲೇ ಕಳೆದುಕೊಂಡವರು. ಒಬ್ಬಳೇ ಮಗಳ ಸಾಂಸಾರಿಕ ಬದುಕೂ ಸುಖವಾಗಿರಲಿಲ್ಲ. ಮಗಳು ತಂದೆಯ ಮನೆಗೇ ಮರಳಬೇಕಾದ ಪರಿಸ್ಥಿತಿ ಒದಗಿತು. ಅವರ ಇಳಿ ವಯಸ್ಸಿನಲ್ಲೂ ವಿಧಿ ಅವರ ಬೆನ್ನು ಬಿಡಲಿಲ್ಲ. ಅವರ ಇನ್ನೊಬ್ಬ ಮಗನೂ ಇಹದ ಬದುಕಿಗೆ ವಿದಾಯ ಹೇಳಬೇಕಾಯಿತು. ಆದರೆ ಈ ಕಹಿಗಳನ್ನು ಉಂಡು ಹಾಸ್ಯದ ಮೂಲಕ ಸಿಹಿಯನ್ನೇ ಓದುಗರಿಗೆ ನೀಡಿದರು. ಅವರ ಅನರ್ಥಕೋಶದಲ್ಲಿ ಬರುವ ಒಂದು ವಿವರಣೆ ಅವರ ಈ ನೋವಿಗೆ ಕನ್ನಡಿ ಹಿಡಿದಂತಿದೆ. ಅವರೇ 'ದೀಘರ್ಾಯುಸ್ಸು' ಎಂಬುದಕ್ಕೆ 'ನೆಂಟರಿಷ್ಟರ ಸಾವನ್ನು ನೋಡುವ ಸಂಕಟ' ಎಂಬ ಅರ್ಥ ನೀಡಿರುತ್ತಾರೆ.  'ಅಕ್ರೂರ' ಎಂದರೆ 'ನಿವೃತ್ತರಾದ ಅಧಿಕಾರಿ' ಎಂಬ ಅರ್ಥ ನೀಡಿರುತ್ತಾರೆ.
ಮಕ್ಕಳಿಗೆ ಸೆಲ್ಯೂಟ್ ಮಾಡಲು ಕಲಿಸಿದರು :
ದೇಶಪ್ರೇಮದ ಬಗ್ಗೆ ಮಾತನಾಡುವುದೇ ಈಗೀಗ ಫ್ಯಾಶನ್ ಎಂಬಂತೆ ಆಗಿ ಬಿಟ್ಟಿದೆ.  ದೇಶಪ್ರೇಮಿಗಳೆಂದು ಹೇಳಿಕೊಳ್ಳುವವರ ಹಗರಣಗಳು ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿವೆ.  ದೇಶಪ್ರೇಮದ ವಿಚಾರದಲ್ಲಿ ಪ್ರಾಮಾಣಿಕತೆ ಮೆರೆದವರು ಜ||ಕಾರ್ಯಪ್ಪ. ಭಾರತೀಯ ಸೇನಾ ಮಹಾದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರ ಹೆಸರನ್ನು ಕೇಳದವರೇ ಇಲ್ಲ.  ಕರ್ತವ್ಯ ನಿಷ್ಠೆ, ಮಾನವೀಯತೆ, ಶಿಸ್ತಿಗೆ ಹೆಸರಾದವರು. ಒಮ್ಮೆ ಅವರು ಭಾರತೀಯ ಸೇನೆಯ ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದರು.  ಅವರೊಂದಿಗೆ ಅವರ ಗೆಳೆಯರೊಬ್ಬರು ಇದ್ದರು. ಗೆಳೆಯರಿಗೆ ಸಿಗರೇಟ್ ಸೇದಲು ತವಕ. ಕಿಸೆಯಿಂದ ಸಿಗರೇಟಿನ ಪ್ಯಾಕ್ ತೆಗೆದಾಗ ಕಾರ್ಯಪ್ಪನವರು ಆಕ್ಷೇಪಿಸಿದರು. ಇದು ಸಕರ್ಾರಿ ವಾಹನ. ಇದರಲ್ಲಿ ಸಿಗರೇಟ್ ಸೇವನೆ ನಿಷಿದ್ಧ.  ಅವರ ಬಗ್ಗೆ ಬರೆಯುತ್ತಾ ಎಲ್.ಎಸ್. ಶೇಷಗಿರಿ ರಾಯರು ಕೆಲವು ಕುತೂಹಲದ ಅಂಶಗಳನ್ನು ಪಟ್ಟಿ ಮಾಡುತ್ತಾರೆ. ಅವರ ಕಿಸೆಯಲ್ಲಿ ಚಾಕಲೇಟ್, ಸೂಜಿ ಮತ್ತು ನೂಲು, ಬಾಚಣಿಗೆಗಳು ಯಾವಾಗಲೂ ಇರುತ್ತಿದ್ದವಂತೆ. ರಸ್ತೆಯ ಬದಿಯಲ್ಲಿ ಬಡ ಮಕ್ಕಳನ್ನು ಕಂಡಾಗ ಅವರ ಕೆದರಿದ ತಲೆಯನ್ನು ತಾವೇ ಬಾಚುತ್ತಿದ್ದರಂತೆ. ಆ ಮಕ್ಕಳಿಗೆ ಚಾಕಲೇಟ್ ನೀಡಿ ಭಾರತದ ಧ್ವಜಕ್ಕೆ ಸೆಲ್ಯೂಟ್ ಮಾಡುವ ಕ್ರಮವನ್ನೂ ಕಲಿಸುತ್ತಿದ್ದರಂತೆ.
ನೀನು ಏನಾಗಿದ್ದಿಯೋ ಅದನ್ನು ಸಾಧ್ಯ ಮಾಡಿತಲ್ಲವೇ?.:
ವಿ. ಸೀತಾರಾಮಯ್ಯನವರಿಗೆ ಒಮ್ಮೆ ಯುವಕನೋರ್ವನಿಂದ ಒಂದು ಪ್ರಶ್ನೆ ಎದುರಾಯಿತಂತೆ. ದೇಶ ನನಗೆ ಏನು ಮಾಡಿದೆ?.  ಆಗ ವಿ.ಸೀ. ಯವರು ಹೀಗೆ ಉತ್ತರಿಸಿದರು. ಈ ಪ್ರಶ್ನೆಯನ್ನು ನೀನು ಕೇಳಲು ಸಾಧ್ಯವಾಗುವಂತೆ ಮಾಡಿತಲ್ಲವೇ?.
ಇಂದು ನಮ್ಮ ವ್ಯವಸ್ಥೆ ಎಲ್ಲಾ ರಂಗಗಳಲ್ಲೂ ಕೆಡಲು ಪ್ರಮುಖ ಕಾರಣ ನುಡಿ ಮತ್ತು ನಡೆಗಳ ನಡುವಿನ ಅಂತರ. ಸಮಾಜವೂ ನಮ್ಮನ್ನು ಗಂಭೀರವಾಗಿ ಗಮನಿಸುತ್ತಿದೆ.  ಬಸವಣ್ಣನವರು ಹೇಳಿದಂತೆ ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮನು ಒಲಿಯನು. ಈ ದೆಸೆಯಲ್ಲಿ ನಮ್ಮ ಚಿಂತನೆ ಸಾಗಬೇಕಾಗಿದೆ.
      ಡಾ.ಶ್ರೀಕಾಂತ್ ಸಿದ್ದಾಪುರ

ಭಾನುವಾರ, ಫೆಬ್ರವರಿ 13, 2011

Sri A.G. Kodgi

A.G. Kodgi, basically an agriculturist, now he is chairman, 3rd finance commission recommondations implementation committee(Task force).  His life & achievements are in this book.

Yoga sangathi

A book on yogasana, pranayama & meditation with photos

Oscar Fernandes Father Roque Fernandes- book written by Dr.Srikanthsiddapura

A book on Roque Fernandees & his wife Leonissa Fernandees.  Roque Fernandees, father of Oscar Fernandees, M.P. was a renowned head master of Udupi.

ಮಂಗಳವಾರ, ಫೆಬ್ರವರಿ 8, 2011

kadri Inscription

siddapura-short history

ಕಣ್ಮರೆಯಾದ ಸಿದ್ದಾಪುರದ ಗತವೈಭವ
 ಸಿದ್ದಾಪುರ ಕುಂದಾಪುರ ತಾಲೂಕಿನ ಚಿಕ್ಕ ಗ್ರಾಮ.  ಇಂದು ಈ ಪರಿಸರದ  ಪ್ರಭಾವೀ ವ್ಯಾಪಾರ ಕೇಂದ್ರ. ಸಿದ್ದಾಪುರವು ಇತ್ತೀಚೆಗೆ ಕ್ರೀಡಾಸಾಧನೆಯ ಮೂಲಕ ಜಗತ್ತಿನ  ಗಮನವನ್ನೂ ಸೆಳೆದಿದೆ.  ಈ ಗ್ರಾಮದ ಅಶ್ವಿನಿ ಚಿದಾನಂದ ಶೆಟ್ಟಿಯವರು ಕಾಮನ್ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಮೂರು ಚಿನ್ನವನ್ನು ತನ್ನದಾಗಿರಿಸಿಕೊಂಡಿರುತ್ತಾರೆ.  ಈ ಎಲ್ಲದರ ನಡುವೆಯೂ ಸಿದ್ದಾಪುರವು ಐತಿಹಾಸಿಕವಾಗಿ ಮೆರೆದಾಡಿದ ಸ್ಥಳ ಎಂಬುದು ಅನೇಕರಿಗೆ ಅರಿಯದು. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಐತಿಹಾಸಿಕ ವೈಭವಗಳು ಕಾಲಗರ್ಭದಲ್ಲಿ ಹೂತು ಹೋಗಿರುವುದು.
 ಹೊನ್ನೆಕಂಬಳಿ ಅರಸರ ರಾಜಧಾನಿ :
 ತುಳುನಾಡಿನ ಅರಸುಮನೆತನಗಳಲ್ಲಿ ಹೊನ್ನೆಕಂಬಳಿ ಮನೆತನವೂ ಒಂದು. ಈ ಮನೆತನದವರು  ಈಗಿನ ಕುಂದಾಪುರ ತಾಲೂಕು ಮತ್ತು  ಈ ತಾಲೂಕಿಗೆ ಹೊಂದಿಕೊಂಡ ಘಟ್ಟದ ಮೇಲಿನ ಕೆಲವು ಪ್ರದೇಶಗಳನ್ನು ಆಳಿಕೊಂಡಿದ್ದರು.  ಈ ಅರಸುಮನೆತನದ ರಾಜಧಾನಿ ಸಿದ್ದಾಪುರವಾಗಿತ್ತು ಎಂಬುದು  ಇತ್ತೀಚಿನ ಸಂಶೋಧನೆಗಳಿಂದ ದೃಢೀಕರಿಸಲ್ಪಟ್ಟಿದೆ.  ಸಿದ್ದಾಪುರದ ಈ ಪರಿಸರವು  ಹಿಂದೆ ಕಡರಿ (ಈಗಿನ ಕಡ್ರಿ)ಎಂಬ ಹೆಸರಿನಿಂದ ಪ್ರಸಿದ್ಧವಾಗಿತ್ತು.  ಇಲ್ಲಿಗೆ ಸಮೀಪದ ಜನ್ಸಾಲೆ ಎಂಬಲ್ಲಿ ದೊರೆತ ಶಾಸನವು ಇದಕ್ಕೆ ಪ್ರಬಲ ಪುರಾವೆಯಾಗಿದೆ.  ಈ ಶಾಸನದ ಕಾಲ ಕ್ರಿ.ಶ. 1457. ಈ ಶಾಸನದಲ್ಲಿ ಕದಳಿ ಎಂಬ ಹೆಸರಿನ ಉಲ್ಲೇಖವಿದ್ದು, ಇದೇ ಈಗಿನ ಕಡ್ರಿಯಾಗಿರಬಹುದೆಂಬ ನಿಲುವು ಸಂಶೋಧಕರದ್ದು. ಇದನ್ನು ಪತ್ತೆ ಮಾಡಿದ ಖ್ಯಾತ ಸಂಶೋಧಕ ಡಾ.ವಸಂತ ಶೆಟ್ಟಿಯವರು ಹಿಂದೆ ಕದಳಿ ಎಂಬುದು ಹೊನ್ನೆಕಂಬಳಿ ಅರಸರ ರಾಜಧಾನಿಯಾಗಿರಬಹುದೆಂದೂ ಊಹಿಸುತ್ತಾರೆ. ಅನಂತರ ಕೆಳದಿ ಅರಸರ ಕಾಲದಲ್ಲಿ ರಾಜಧಾನಿಯು ಹೊಸಂಗಡಿಗೆ ವಗರ್ಾವಣೆಯಾಗಿರಬಹುದು. ಈ ಶಾಸನವು ಐತಿಹಾಸಿಕವಾಗಿ ಗಮನ ಸೆಳೆಯಲು ಇನ್ನೊಂದು ಪ್ರಮುಖ ಕಾರಣ ಈ ಶಾಸನದಲ್ಲಿ ಉಲ್ಲೇಖಿಸಲ್ಪಟ್ಟ ತಿರುಮಲ ಅರಸನೇ  ಸದ್ಯ ದೊರೆತ ಹೊನ್ನೆಕಂಬಳಿ ಮನೆತನದ ಅರಸರಲ್ಲಿ ಮೊದಲಿಗನಾಗಿರಬಹುದೆಂಬ ಸಂದೇಹ.
 ಕಡ್ರಿ ಶಾಸನ :
 ಸಿದ್ದಾಪುರದ ಇತಿಹಾಸಕ್ಕೆ ಸಂಬಂಧಿಸಿದ ಮೊದಲ ಶಾಸನ ಕಡ್ರಿ ಶಾಸನ. ಸಿದ್ದಾಪುರ ಸಮೀಪದ ಕಡ್ರಿಯ ಹಣುಬಿನ ಗದ್ದೆಯಲ್ಲಿ ಇಂದಿಗೂ ಈ ಶಾಸನವಿದ್ದು, ಇದು ಅಳುಪರ ಕಾಲದ ಶಾಸನವಾಗಿದೆ. ಈ ಶಾಸನದ ಕಾಲ ಕ್ರಿ.ಶ. 1111.  ಈ ಶಾಸನವು ತನ್ನ ಒಡೆಯನ ಪರವಾಗಿ ಹೋರಾಡಿ ಮಡಿದ ಗೆಲ್ಲರಸನಿಗೆ ದತ್ತಿ ನೀಡಿದ ವಿವರಗಳನ್ನು ತಿಳಿಸುತ್ತಿದೆ.
 ಎರಡನೇ ಬಸಪ್ಪ ನಾಯಕನ ಕಾಲದಲ್ಲಿ ಸಿದ್ದಾಪುರ :
 ಸಿದ್ದಾಪುರವು ಐತಿಹಾಸಿಕವಾಗಿ ಗಮನ ಸೆಳೆದದ್ದು ಕೆಳದಿ ಅರಸರ ಕಾಲದಲ್ಲಿ.  ಲಿಂಗಣ್ಣ ಕವಿಯ ಕೆಳದಿ ನೃಪ ವಿಜಯದ ಪ್ರಕಾರ ಕೆಳದಿ ಅರಸನಾದ ಎರಡನೇ ಬಸಪ್ಪ ನಾಯಕನು ಕ್ರಿ.ಶ.1740 ರಿಂದ 1755 ರ ತನಕ ಆಳಿದನು. ಈ ಅವಧಿಯಲ್ಲಿ ಸಿದ್ದಾಪುರದ ಬೆಳವಣಿಗೆಗೆ ಈತನ ಕೊಡುಗೆ ಗಮನಾರ್ಹವಾದುದು. ಈ ಕಾಲದಲ್ಲಿಯೇ ಇದು ಪ್ರಬಲ ವೀರಶೈವ ಕೇಂದ್ರವಾಗಿ ಮೆರೆದಾಡಿತು.  ಕೆಳದಿ ನೃಪ ವಿಜಯವು ಕೊಡುವ ವಿವರಣೆಯಂತೆ ಬಸಪ್ಪ ನಾಯಕನು ಶಿವಜಂಗಮ ಧಮರ್ಾರ್ಥವಾಗಿ ಇಲ್ಲಿ ದೊಡ್ಡ ಮಠವನ್ನು ಕಟ್ಟಿಸಿದನು.  ಈ ಮಠವಿರುವ ಪ್ರದೇಶವನ್ನು ಮಂತ್ರರಾಜಪುರ ಎಂದು ನಾಮಕರಣ ಮಾಡಿಸಿದನು. ಈ ಮಠವನ್ನು ಗುರು ನಂಜುಂಡಸ್ವಾಮಿಗಳಿಗೆ ಧಾರೆ ಎರೆದು ಶಾಸನವೊಂದನ್ನೂ ಕೆತ್ತಿಸಿದನು.  ಈತನ ಅವಧಿಯಲ್ಲಿ ಸಿದ್ಧೇಶ್ವರ ದೇವಸ್ಥಾನವೂ ಈ ಪ್ರದೇಶದಲ್ಲಿ ನಿಮರ್ಾಣಗೊಂಡಿತು.  ಪ್ರತೀ ವರ್ಷವೂ ಅದರ ಉತ್ಸವವು ವೈಭವಯುತವಾಗಿ ನಡೆಯುವಂತೆ ಅರಸನು ವ್ಯವಸ್ಥೆ ಮಾಡಿದ್ದನು. ಸ್ವತ: ರಾಜನೇ ಈ ಉತ್ಸವದಂದು ಹಾಜರಾಗಿ ವೀಕ್ಷಿಸುತ್ತಿದ್ದ ವಿವರಗಳೂ ಲಿಂಗಣ್ಣನ ಕೃತಿಯಲ್ಲಿ ಸ್ಪಷ್ಟವಾಗಿದೆ.

 ಇದಕ್ಕೆ ಕುರುಹಾಗಿ ಈಗ ಮಠದ ಅವಶೇಷ ಉಳಿದಿಲ್ಲ. ದೇವಾಲಯದ ಕುರುಹೂ ಕಣ್ಮರೆಯಾಗಿದೆ. ಆದರೆ ಈ ಪ್ರದೇಶದಲ್ಲಿ ಸುಮಾರು ಆರು ಕೆರೆಗಳಿದ್ದು, ಅವುಗಳಲ್ಲಿ ಒಂದು ಕೆರೆ ಸ್ನಾನದ ಕೆರೆ. ಬಹುಶ: ಅರಸರು ಇಲ್ಲಿ ಸ್ನಾನ ಮಾಡುತ್ತಿದ್ದಿರಬಹುದೇ?. ಮುಸುರೆ ಕೆರೆ, ಛತ್ರದ ಕೆರೆ ಇತ್ಯಾದಿ ಇತರ ಕೆರೆಗಳು. ಈ ಕೆರೆಗಳ ಹೆಸರೇ ಸೂಚಿಸುವಂತೆ ಇಲ್ಲಿಗೆ ಸಾಕಷ್ಟು ಪ್ರವಾಸಿಗಳು ಬರುತ್ತಿದ್ದಿರಬಹುದು. ಊಟ, ಉಪಚಾರಗಳು ನಡೆಯುತ್ತಿದ್ದಿರಬಹುದು.
 ಸಿದ್ದಾಪುರದ ಸುಬ್ರಾಯ ದೇವರು :
  ಈ ಊರಿನ ಕೆಳಪೇಟೆಯಲ್ಲಿ ನಾಗನ ದೇವಾಲಯವೊಂದು ಇಂದಿಗೂ ಇದೆ. ಇದು ಸುಮಾರು ಆರು ಅಡಿ ಎತ್ತರವಿದೆ. ಕಪ್ಪು ಶಿಲೆಯಿಂದ ಕೆತ್ತಲ್ಪಟ್ಟಿದೆ. ಇಂದಿಗೂ ಫಳ ಫಳ ಹೊಳೆಯುತ್ತಿದ್ದು, ದಕ್ಷಿಣ ಭಾರತದಲ್ಲಿಯೇ ಅತ್ಯಾಕರ್ಷಕ ವಿಗ್ರಹವಾಗಿದೆ.  ಈ ದೇವಾಲಯವೂ ಇದೇ ಕಾಲದಲ್ಲಿ ತಲೆಯೆತ್ತಿರಬಹುದೆಂಬ ಬಗ್ಗೆ ಸಾಕಷ್ಟು ಆಧಾರಗಳಿವೆ.
 ನಾಥ ಪಂಥದ ಪ್ರಮುಖ ಕೇಂದ್ರ :
 ಸಿದ್ದಾಪುರ ಸಮೀಪದ ಯಡಮೊಗೆಯಲ್ಲಿ ಇಂದಿಗೂ ನಾಥ ಪಂಥದವರ ಮಠವಿದೆ. ಸಿದ್ದಾಪುರ ಮತ್ತು ಆಸುಪಾಸಿನ ಪ್ರದೇಶಗಳು ಒಂದು ಕಾಲದಲ್ಲಿ ನಾಥ ಪಂಥದ ಪ್ರಮುಖ ಕೇಂದ್ರವಾಗಿದ್ದಿರಬಹುದು. ಇಲ್ಲಿನ ಜನ್ಸಾಲೆ ಶಾಸನವು ಇದನ್ನು ಸಾಬೀತು ಪಡಿಸುತ್ತಿದೆ.  ಜನ್ಸಾಲೆಯ ಗೋಪಿನಾಥ ಸ್ವಾಮೀ ದೇವಾಲಯದ ಮುಂಭಾಗದಲ್ಲಿ ಇಂದಿಗೂ ಈ ಶಾಸನವಿದೆ. ಈ  ಶಾಸನದ ಪ್ರಕಾರ ಇಲ್ಲಿ ಕಾಲಭೈರವ ದೇವಸ್ಥಾನವಿದ್ದಿತ್ತು. ಹೊನ್ನೆಕಂಬಳಿ ಅರಸನಾದ  ತಿರುಮಲ ಸಾಮಂತನು ಈ ಪಂಥದವರ ಮಠದ ಸ್ವಾಮಿಗಳಾಗಿದ್ದ ಶಿವಯೋಗಿ ಮಾಧವ ಸ್ವಾಮಿಗಳಿಗೆ ಕೆಲವು ಗದ್ದೆಗಳನ್ನು ದತ್ತಿಯಾಗಿ ನೀಡಿದ ವಿವರಗಳು ಈ ಶಾಸನದಲ್ಲಿದೆ. ಮಾಧವ ಸ್ವಾಮಿಗಳು ಇಲ್ಲಿನ ಗೋಪಿನಾಥ ದೇವಾಲಯದ ಅರ್ಚನೆಗೆ ದತ್ತಿ ನೀಡಿದ ಉಲ್ಲೇಖವೂ  ಶಾಸನದಲ್ಲಿದ್ದು,   ಸಾಮರಸ್ಯದ ದೃಷ್ಟಿಯಿಂದ ಇದು ಗಮನಾರ್ಹ ಅಂಶವಾಗಿದೆ. ಈ ಪರಿಸರದಲ್ಲಿ ಧಾಮರ್ಿಕ ಸೌಹಾರ್ದವಿದ್ದಿತ್ತು ಎಂಬುದಕ್ಕೆ ಈ ಶಾಸನವೇ ಸಾಕ್ಷಿ ಎಂದು ಶಾಸನ ಸಂಶೋಧಕ ಡಾ.ಜಗದೀಶ ಶೆಟ್ಟಿಯವರು ತಿಳಿಸುತ್ತಾರೆ. 
 ಅಂದು ಐತಿಹಾಸಿಕವಾಗಿ ಗಮನ ಸೆಳೆದ ಸಿದ್ದಾಪುರದ ಇತಿಹಾಸ ಇಂದು ಸಂಪೂರ್ಣ ಮರೆಯಾಗಿರುವುದು ದುರಂತ. ಈ ಪರಿಸರದಲ್ಲಿ ಅನೇಕ ಮಹತ್ವದ ಸಂಗತಿಗಳು ಭೂಮಿಯೊಳಗೆ ಹುದುಗಿರಬಹುದು. ಉತ್ಖನನದಿಂದ ಇನ್ನಷ್ಟು ಸತ್ಯಗಳು ಹೊರಬರಬಹುದು. ಈ ಕೆಲಸ ಇನ್ನು ಮುಂದೆ ಆಗಬೇಕಾಗಿದೆ.
       ಡಾ.ಶ್ರೀಕಾಂತ್ಸಿದ್ದಾಪುರ.

Ashwini chidananda Shetty

ಚಿನ್ನದಾನಂದ ತಂದ  ಅಕ್ಕುಂಜೆ ಅಶ್ವಿನಿ ಚಿದಾನಂದ ಶೆಟ್ಟಿ
ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಅಕ್ಕುಂಜೆ ಜನ್ಸಾಲೆ ಸಮೀಪದ ಚಿಕ್ಕ ಹಳ್ಳಿ. ಇಲ್ಲಿನ ಅಕ್ಕುಂಜೆ ಮನೆತನ ಈ ಪರಿಸರದಲ್ಲಿ ಹೆಸರುವಾಸಿ. ಶೈಕ್ಷಣಿಕ, ಸಾಮಾಜಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಇಲ್ಲಿನ ಗಣ್ಯರು ತಮ್ಮನ್ನು ತೊಡಗಿಸಿಕೊಂಡವರು. ಇಂತಹ ಮನೆತನದಲ್ಲಿ ಹುಟ್ಟಿದವಳು ದೇಶಕ್ಕೆ ಮೂರು ಸ್ವರ್ಣತಂದ ಅಶ್ವಿನಿ ಚಿದಾನಂದ ಶೆಟ್ಟಿ.
ಕೌಟುಂಬಿಕ ಹಿನ್ನೆಲೆ :
ಅಶ್ವಿನಿಯ ತಂದೆ ಚಿದಾನಂದ ಶೆಟ್ಟಿ, ತಾಯಿ ಯಶೋಧ.  ಈಕೆಯ ಅಕ್ಕ ದೀಪ್ತಿ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಅಣ್ಣ ಅಮಿತ್ ಶೆಟ್ಟಿ ಬೆಂಗಳೂರಿನಲ್ಲಿ ಉದ್ಯಮಿ. ಮೂಲತ: ಕೃಷಿ ಕುಟುಂಬ. ಈ ಕುಟುಂಬದವರು ಹಿಂದಿನಿಂದಲೂ ಕ್ರೀಡೆ ಮತ್ತು ಕಲೆಗಳಲ್ಲಿ ಆಸಕ್ತರು. ಈಕೆಯ ಅಜ್ಜ ಸುಬ್ಬಣ್ನ ಶೆಟ್ಟಿಯವರು ಕೃಷಿಯನ್ನು ಆಳವಾಗಿ ಪ್ರೀತಿಸಿದವರು. ಇದರೊಂದಿಗೆ ದಾಸ ಕೀರ್ತನನೆಗಳಲ್ಲಿ ಅಪಾರ ಗೌರವ. ಭಜನೆ ಇವರ ಒಂದು ಪ್ರಮುಖ ಹವ್ಯಾಸ. ಈಕೆಯ ಮಾವಂದಿರಾದ ವಿಜಯಕುಮಾರ್ ಶೆಟ್ಟಿ ಮತ್ತು ದಿಲೀಪ್ಕುಮಾರ್ ಶೆಟ್ಟಿ ಕೃಷಿಯನ್ನೇ ಅವಲಂಬಿಸಿ ದುಡಿಯುತ್ತಿರುವ  ಯುವಕರು. ಜೊತೆಗೆ ಶ್ರಮಜೀವಿಗಳು. ತಮ್ಮ ವಿದ್ಯಾಭ್ಯಾಸದ ದಿನಗಳಲ್ಲಿ ಓಟದಲ್ಲಿ ಸಾಧನೆಯನ್ನು ತೋರಿಸಿದವರು. ಈಜೂ ಕೂಡ ಇವರ ಇನ್ನೊಂದು ಆಸಕ್ತಿ ಕ್ಷೇತ್ರ. ತಂದೆ ಚಿದಾನಂದರು ಸದಾ ಸಮಚಿತ್ತದವರು. ಸಜ್ಜನಿಕೆ ಇವರ ವ್ಯಕ್ತಿತ್ವದ ಪ್ರಮುಖ ಅಂಶ. ಮಗಳು ಏಷ್ಯನ್ ಗೇಮ್ಸ್ನಲ್ಲಿ ತೋರಿದ ಸಾಧನೆ ಮೆಚ್ಚಿ ನೂರಾರು ಕರೆಗಳು ಬಂದಾಗ ಎಲ್ಲರಿಗೂ ಹಸನ್ಮುಖರಾಗಿಯೇ ಉತ್ತರಿಸಿದವರು.  ಈ ಎಲ್ಲಾ ಸಾಧನೆಗಳಿಗೆ ನಿಮ್ಮ ಪ್ರೋತ್ಸಾಹ ಮತ್ತು ಆಶೀವರ್ಾದಗಳೇ ಪ್ರಮುಖ ಕಾರಣಗಳೆಂದು  ನಿರಹಂಕಾರದಿಂದ ನುಡಿದವರು. ಅಶ್ವಿನಿಯನ್ನು ಅಭಿನಂದಿಸುವ ನೆಪದಲ್ಲಿ ನೂರಾರು ಮಂದಿ ಮನೆಗೆ ಬಂದಾಗ ಅವರನ್ನು ಆದರದಿಂದ ಸ್ವಾಗತಿಸಿ, ತುಂಬು ಮಾತುಗಳಿಂದ ಗೌರವಿಸಿದವರು. ಈಕೆಯ ತಾಯಿ ಯಶೋಧ ಬಂದ ಅತಿಥಿಗಳಿಗೆ  ಯಾವುದೇ ಬೇಸರವಿಲ್ಲದೇ ಸಂತಸದಿಂದ ಆತಿಥ್ಯ ನೀಡಿದವರು.  ಈ ದಂಪತಿಗಳ ಸುಪುತ್ರಿಯಾಗಿ 7-10-1987 ರಂದು ಅಶ್ವಿನಿ ಜನಿಸಿದಳು.
ವಿದ್ಯಾಭ್ಯಾಸ :
ಅಶ್ವಿನಿ ಬೆಳೆದದ್ದು ಹಳ್ಳಿಯ ಕೃಷಿಕುಟುಂಬದಲ್ಲಿ. ಈಕೆಯ ಓಟದ ಆರಂಭವೇ ಈ ಜೀವನದಿಂದ ಸ್ಫೂತರ್ಿ ಪಡೆದುದು. ತಂದೆ ಚಿದಾನಂದ ಶೆಟ್ಟಿ ಮಗಳನ್ನು ಸಿದ್ದಾಪುರ  ಪೌಢಶಾಲಾ ಮೈದಾನಕ್ಕೆ ಆಗಾಗ ಕರೆದುಕೊಂಡು ಹೋಗಿ ಓಟಕ್ಕೆ ಪ್ರೋತ್ಸಾಹಿಸುತ್ತಿದ್ದರು. ಹೊಸಂಗಡಿಯ ಕೆ.ಪಿ.ಸಿ. ಯ ಆಂಗ್ಲಮಾಧ್ಯಮ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ಈಕೆ ಪ್ರೌಢಶಿಕ್ಷಣವನ್ನು ಬೆಂಗಳೂರಿನ ವಿದ್ಯಾನಗರದ ಕ್ರೀಡಾ ಮತ್ತು ವಸತಿಶಾಲೆಯಲ್ಲಿ ಮುಂದುವರಿಸಿದಳು. ಈಕೆಯ ಕ್ರೀಡಾಸಕ್ತಿಯನ್ನು ಗುರುತಿಸಿ, ಪ್ರೋತ್ಸಾಹಿಸಿದವರು ಇಲ್ಲಿನ ಶಿಕ್ಷಕ ಮತ್ತು ತರಬೇತುದಾರ ಶ್ರೀ ಮಂಜುನಾಥ.  ಮುಂದೆ ಒಂದು ವರ್ಷ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿದ ಈಕೆ ಕ್ರೀಡಾರಂಗದಲ್ಲಿ  ಸಾಧಿಸುತ್ತಾ ಸಾಗಿದಳು.
ಟಾಟಾ ಅಥ್ಲೆಟಿಕ್ ಅಕಾಡೆಮಿ :
ಈಕೆಯನ್ನು ಕ್ರೀಡಾರಂಗಕ್ಕೆ ಅಮೂಲ್ಯ ಕೊಡುಗೆಯಾಗಿ ನೀಡುವಲ್ಲಿ ಶ್ರಮಿಸಿದ ಇನ್ನೊಂದು ಸಂಸ್ಥೆ ಟಾಟಾ ಅಥ್ಲೆಟಿಕ್ ಅಕಾಡೆಮಿ. ಜೆಮ್ಶೆಡ್ಪುರದಲ್ಲಿರುವ ಈ ಸಂಸ್ಥೆಯಲ್ಲಿ ಈಕೆಗೆ ತರಬೇತುದಾರರಾಗಿ ಲಭಿಸಿದವರು ಶ್ರೀ ಸನ್ಮಾನ್ಸಿಂಗ್.  ಇವರ ಮಾರ್ಗದರ್ಶನವು ಈಕೆಯ ಸಾಧನೆಯ ಛಲಕ್ಕೆ ಮತ್ತಷ್ಟು ಹುರುಪನ್ನು ನೀಡಿತು.
ಭಾರತೀಯ ಕ್ರೀಡಾ ಪ್ರಾಧಿಕಾರ :
ಈ ಕ್ಷೇತ್ರದಲ್ಲಿ ಮಹತ್ವದ ಸಾಧನೆಯ ಕನಸು ಹೊತ್ತ ಅಶ್ವಿನಿಗೆ ಮುಂದಿನ ತರಬೇತಿಯ ಅವಕಾಶ ನೀಡಿದುದು ಭಾರತೀಯ ಕ್ರೀಡಾ ಪ್ರಾಧಿಕಾರ. ಸುಮಾರು ಎರಡು ವರ್ಷಗಳ ತರಬೇತಿಯನ್ನು ಪಾಟಿಯಾಲ ಮತ್ತು ಬೆಂಗಳೂರಿನಲ್ಲಿ ಪಡೆದ ಈಕೆ ಈ ಕ್ಷೇತ್ರದಲ್ಲಿ ತಾರೆಯಾಗಿ ಹೊರಹೊಮ್ಮಲು ಭದ್ರ ವೇದಿಕೆಯನ್ನು ಈ ಪ್ರಾಧಿಕಾರವು ಕಲ್ಪಿಸಿತು.  ಮುಂದೆ ಉಕ್ರೇನಿನ ಯೂರಿ ಆಕರ್ೋಡನಿಕ್ರಿಂದ ತರಬೇತಿ ಪಡೆಯುವ ಭಾಗ್ಯ ಪಡೆದು  ಈ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ದೇಶದ ಜನರ ಮುಂದೆ ತೆರೆದಿಟ್ಟಳು.
ಕ್ರೀಡಾ ಸಾಧನೆಯಲ್ಲಿ ಸಾಗರೋಲ್ಲಂಘನ :
ಬೇರೆ ಬೇರೆ ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಅಶ್ವಿನಿ ದೇಶದ ಕೀತರ್ಿಯನ್ನು ಸಾಗರದಾಚೆಗೂ ಮುಟ್ಟಿಸುವಲ್ಲಿ ಹಿಂದೆ ಬೀಳಲಿಲ್ಲ. ಮಲೇಷಿಯಾ, ಇರಾನ್, ಡಾಕ್ಕಾ, ಚೀನಾ ಮೊದಲಾದ ದೇಶಗಳಲ್ಲಿ ನಡೆದ ಸ್ಪಧರ್ೆಗಳಲ್ಲಿ ಭಾರತವನ್ನು ಪ್ರತಿನಿಧಿಸಿ, ದೇಶದ ಜನರ ಗೌರವಕ್ಕೆ ಪಾತ್ರಳಾದಳು.
ಕಾಮನ್ವೆಲ್ತ್ ಕ್ರೀಡಾಕೂಟ :
ಅಶ್ವಿನಿಯ ಸಾಧನೆಯನ್ನು ದೇಶಕ್ಕೆ ಪರಿಚಯಿಸಿದ ಕ್ರೀಡಾಕೂಟ ದೆಹಲಿಯ ಕಾಮನ್ವೆಲ್ತ್. 12-10-2010 ರಲ್ಲಿ ನಡೆದ 19 ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅಶ್ವಿನಿ  4 ಥ 400 ಮೀಟರ್ ರಿಲೇಯಲ್ಲಿ ಭಾರತಕ್ಕೆ ಚಿನ್ನವನ್ನು ತಂದು ಚಿನ್ನದ ಹುಡುಗಿಯಾದಳು.
ಏಷ್ಯನ್ ಕ್ರೀಡಾಕೂಟ :
  ಚೀನಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟಕ್ಕೆ ಲಗ್ಗೆ ಇಟ್ಟ ಅಶ್ವಿನಿ ಅಲ್ಲಿಯೂ ಹಿಂದೆ ಬೀಳಲಿಲ್ಲ. ನವೆಂಬರ್ 25 ಮತ್ತು 27 ರಂದು ನಡೆದ 16 ನೇ ಏಷ್ಯನ್ ಕ್ರೀಡಾಕೂಟದಲ್ಲಿ 400 ಮೀಟರ್ ಹಡರ್್ಲ್ಸ್ ಮತ್ತು ರಿಲೇಯಲ್ಲಿ ಎರಡು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. ಭಾರತದ  ಗೌರವವನ್ನು ಹೆಚ್ಚಿಸಿದಳು.
 ಒಲಿಂಪಿಕ್ನತ್ತ ಚಿತ್ತ :
ಪಿ.ಟಿ. ಉಷಾಳೇ ತನ್ನ ಸಾಧನೆಗೆ ಪ್ರಧಾನ ಪ್ರೇರಣೆ ಎಂದು ಅಭಿಮಾನಪೂರ್ವಕವಾಗಿ ಹೇಳಿಕೊಳ್ಳುವ ಅಶ್ವಿನಿಯ ಚಿತ್ತ ಮುಂದಿನ ಒಲಿಂಪಿಕ್ನತ್ತ. 2012 ರಲ್ಲಿ ಲಂಡನ್ನಿನಲ್ಲಿ  ನಡೆಯಲಿರುವ ಒಲಿಂಪಿಕ್ನಲ್ಲಿ ಪದಕ ಪಡೆಯುವ ಗುರಿ ಈಕೆಯ ಮುಂದಿದೆ. ತಂದೆ ಚಿದಾನಂದ ಶೆಟ್ಟಿಯವರು ನನ್ನ ಮಗಳಲ್ಲಿ ಹಿಡಿದ ಕೆಲಸವನ್ನು ಸಾಧಿಸಿ ತೋರಿಸುವ ಛಲಗಾರಿಕೆ ಇದೆ. ಅದಕ್ಕೆ ಅಗತ್ಯವಾದ ಕಠಿನ ಶ್ರಮವೂ ಆಕೆಯಲ್ಲಿದೆ. ಹಾಗಾಗಿ ಒಲಿಂಪಿಕ್ನಲ್ಲೂ ಪದಕ ಪಡೆಯುವಳೆಂಬ ವಿಶ್ವಾಸ ನನಗಿದೆ ಎನ್ನುತ್ತಾರೆ.
ಕೃತಜ್ಞತಾ ಭಾವ :
ಅಶ್ವಿನಿ ಶ್ರೀಮಂತ ಮನೆತನದವಳಲ್ಲ. ಮಧ್ಯಮವರ್ಗದ ಕುಟುಂಬದವಳು. ಈ ಸಾಧನೆಗಳು ಆಕೆಯಲ್ಲಿ ಯಾವುದೇ ಅಹಂಭಾವವನ್ನು ಬೆಳೆಸಿಲ್ಲ. ಕನರ್ಾಟಕ ಸರಕಾರದ 2010 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನಳಾದ ಈಕೆ ತನ್ನ ಸಾಧನೆಯ ಸಂಪೂರ್ಣ ಫಲ ನನ್ನನ್ನು ನಿರಂತರ ಪ್ರೋತ್ಸಾಹಿಸಿದ ಕ್ರೀಡಾಭಿಮಾನಿಗಳಿಗೆ ಸಲ್ಲುತ್ತದೆ ಎಂದು ನಮ್ರಳಾಗಿ ನುಡಿಯುತ್ತಾಳೆ.  ಗ್ರಾಮೀಣ ಭಾಗದಲ್ಲಿರುವ ಈಕೆಯ ಮನೆಗೆ ವಾಹನ ಚಲನೆಗೆ ಯೋಗ್ಯವಾದ ರಸ್ತೆಯ ಕೊರತೆ ಕಾಡುತ್ತಿದೆ. ಗದ್ದೆಯ ಅಂಚಿನಲ್ಲೇ ಕೆಲವು ದೂರ ನಡೆದು ಸಾಗಬೇಕಾಗಿದೆ. ಇದೀಗ ಮನೆಯ ತನಕ ರಸ್ತೆ ನಿಮರ್ಾಣದ ಭರವಸೆಯೂ ಶಾಸಕರಿಂದ ಲಭಿಸಿರುತ್ತದೆ.  ಬಂಗಾರದ ಹುಡುಗಿ ದೇಶಕ್ಕೆ ಬಂಗಾರ ತಂದಾಗ ಪಟಾಕಿ ಸಿಡಿಸಿ ಸಂಭ್ರಮಿಸಿದ ಇಲ್ಲಿನ ಅಭಿಮಾನಿಗಳಿಗೆ ಮನೆಮಗಳಾದ ಅಶ್ವಿನಿಯ ಈ ಸಾಧನೆ ಅತೀವ ಸಂತಸ ತಂದಿದೆ.   ಡಿಸೆಂಬರ್ ಒಂದರಂದು ಹುಟ್ಟೂರಿನಲ್ಲಿ ಸಂಭ್ರಮದ ಸನ್ಮಾನ ಸಮಾರಂಭ ಏರ್ಪಡಿಸಿರುವ ಇಲ್ಲಿನ ಜನತೆ ತೋರಿಸಿದ ಅಭಿಮಾನಕ್ಕೆ  ಅಶ್ವಿನಿ ಕುಟುಂಬ ಕೃತಜ್ಞತಾಭಾವ ಸಲ್ಲಿಸುತ್ತಿದೆ. ಇದೀಗ ಅಶ್ವಿನಿ ಒಲಿಂಪಿಕ್ನಲ್ಲೂ ಪದಕ ಪಡೆಯಲಿ ಎಂದು  ಇಲ್ಲಿನ ಜನರು ನಿರಂತರ ಭಗವಂತನಲ್ಲಿ ಪ್ರಾಥರ್ಿಸುತ್ತಿದ್ದಾರೆ.               
ಡಾ.ಶ್ರೀಕಾಂತ್ಸಿದ್ದಾಪುರ