ಬುಧವಾರ, ಫೆಬ್ರವರಿ 16, 2011

kannada

'ನುಡಿ ಮತ್ತು ನಡೆ'ಗಳ ನಡುವೆ
ಝೆನ್ ಕತೆಗಳನ್ನು ಕೇಳದವರಿಲ್ಲ. ಅದರ ಒಂದು ಕತೆ ಹೀಗಿದೆ. ಝೆನ್ ಗುರುಗಳೊಬ್ಬರು ಸಾವಿರಾರು ಉಪನ್ಯಾಸ ನೀಡಿದವರು. ನೂರಾರು ಕೃತಿಗಳಲ್ಲಿ ತಮ್ಮ ಚಿಂತನೆಗಳನ್ನು ದಾಖಲಿಸಿದವರು. ಬದುಕಿನ ಕೊನೆಗೆ ಅವರಿಗೆ ಜ್ಞಾನೋದಯವಾಯಿತಂತೆ. ಆಗ ಅವರೇ ಹೇಳಿದರಂತೆ.  ನಾನು ದೊಡ್ಡ ತಪ್ಪು ಮಾಡಿ ಬಿಟ್ಟೆ. ಉಪನ್ಯಾಸ ಮತ್ತು ಬರವಣಿಗೆಗಳಲ್ಲಿ ಜೀವನ ವ್ಯರ್ಥ ಮಾಡಿದೆ.  ಅವುಗಳ ಅನುಷ್ಠಾನದತ್ತ ಗಮನ ಕೊಡದೆ ಕೆಟ್ಟೆ.  ಮುಂದಿನ ಜನ್ಮದಲ್ಲಿ ಮೊದಲು ನಾನು ಮಾಡುವ ಕರ್ತವ್ಯ ಇವುಗಳ ಅನುಷ್ಠಾನ ಪ್ರಯತ್ನ.  ಇಂದು ನಮ್ಮ ನುಡಿ ಮತ್ತು ನಡೆಗೆ ಇಂದು ಭಾರೀ ಅಂತರ. ನಾವೆಲ್ಲಾ ಉಪದೇಶದಲ್ಲಿ ನಿಸ್ಸೀಮರು. ಆದರೆ ಅದರಂತೆ ಬದುಕುವಲ್ಲಿ ವಿಫಲರು. ಆದರೆ ನುಡಿದಂತೆ ನಡೆದ ಅನೇಕ ಹಿರಿಯರು ನಮ್ಮ ನಡುವೆ ಮಿಂಚಿ ಮರೆಯಾಗಿದ್ದಾರೆ. ಅವರ ಜೀವನದಲ್ಲಿ ನಡೆಗೂ, ನುಡಿಗೂ ಸಾಕಷ್ಟು ಹೊಂದಾಣಿಕೆ ಇದ್ದಿತ್ತು. ಬದುಕಿಗೂ, ಬರವಣಿಗೆಗೂ ಸಾಮರಸ್ಯವಿತ್ತು. ಕನ್ನಡದ ಖ್ಯಾತ ಸಾಹಿತಿ ಶ್ರೀ ಎಲ್.ಎಸ್. ಶೇಷಗಿರಿ ರಾಯರು ತಮ್ಮ ಕೃತಿಯೊಂದರಲ್ಲಿ ಹಿರಿಯರ ಇಂತಹ ಹಲವು ಘಟನೆಗಳನ್ನು ಮನೋಜ್ಞವಾಗಿ ಚಿತ್ರಿಸಿರುತ್ತಾರೆ.
ನನಗೆ ಉಡಲು ಒಳ್ಳೆಯ ಸೀರೆಗಳಿರಲಿಲ್ಲ:
ಡಿ.ವಿ.ಜಿ ಕನ್ನಡದ ಖ್ಯಾತ ಸಾಹಿತಿ. ಮಂಕುತಿಮ್ಮನ ಕಗ್ಗ ಇವರ ಶ್ರೇಷ್ಠ ಕೃತಿಗಳಲ್ಲಿ ಒಂದು. ಅವರು ಎಂದೂ ಕೀತರ್ಿಗೆ ಆಸೆ ಪಟ್ಟವರಲ್ಲ. ಪತ್ರಿಕೆಯವರು ಸಂದರ್ಶನದ ನೆಪದಲ್ಲಿ ಬಂದಾಗಲೂ ಸೌಜನ್ಯವಾಗಿ ತಿರಸ್ಕರಿಸಿದವರು. ಬದುಕಿನಲ್ಲಿ ಆಸೆಯ ದಾಸರಾದವರಲ್ಲ.  ಹಣಕ್ಕಾಗಿ ಬಾಯ್ಬಿಟ್ಟವರಲ್ಲ. ಕಡುಬಡತನದ ನಡುವೆಯೂ ಸಂತೃಪ್ತ ಬದುಕನ್ನು ಸಾಗಿಸಿದವರು. ಅವರ ಜೀವನದ ಒಂದು ಘಟನೆ ಅವರ ಬಡತನದ ಚಿತ್ರಣವನ್ನು ನೀಡುತ್ತಿದೆ. ಒಮ್ಮೆ ಡಿ.ವಿ.ಜಿ. ಯವರ ಧರ್ಮಪತ್ನಿಗೆ ನೆರಮನೆಯಿಂದ ಅರಸಿನ ಕುಂಕುಮಕ್ಕಾಗಿ ಕರೆ ಬಂದಿತು. ಮಡದಿಗೆ ಹೋಗುವಂತೆ ಡಿ.ವಿ.ಜಿ. ಯವರೂ ಹೇಳಿದ್ದರು. ಆದರೆ ಆಕೆ ಹೋಗಿರಲಿಲ್ಲ. ಹೋಗದಿರಲು ಕಾರಣವೇನೆಂದು ಡಿ.ವಿ.ಜಿ. ನಂತರ ವಿಚಾರಿಸಿದರು. ಆಗ ಅವರ ಮಡದಿ ಹೇಳಿದ ಮಾತು ಅವರ ಬಡತನದ ತೀವ್ರತೆಯ ಅರಿವನ್ನು ಉಂಟುಮಾಡುವಂತಿದೆ. ನನಗೆ ಉಡಲು ಒಳ್ಳೆ ಸೀರೆ ಇಲ್ಲ. ಹೇಗೆ ಹೋಗಲಿ?.  ಈ ವಿಧದ ತೀವ್ರವಾದ ಬಡತನದ ನಡುವೆಯೂ ಬದುಕಿನ ಬದ್ಧತೆಗೆ ತಿಲಾಂಜಲಿ ನೀಡಲಿಲ್ಲ.
ಹಾಯಾಗಿದ್ದ ಚೆಕ್ಗಳು :
ಡಿ.ವಿ.ಜಿ ಯವರು ಎಂದೂ ಸರಕಾರ ಅಥವಾ ಇತರರಿಂದ ಹಣಕಾಸನ್ನು ನಿರೀಕ್ಷಿಸಿದವರಲ್ಲ. ಅವುಗಳು ತಾವಾಗಿಯೇ ಬಂದಾಗಲೂ ಒಲ್ಲೆ ಎಂದವರು.  ಸರ್ ಎಂ.ವಿಶ್ವೇಶ್ವರಯ್ಯನವರೊಂದಿಗೆ ನಡೆದ ಇನ್ನೊಂದು ಘಟನೆ ಇಲ್ಲಿ ಗಮನಾರ್ಹ.  ವಿಶ್ವೇಶ್ವರಯ್ಯನವರಿಗೆ ಡಿ.ವಿ.ಜಿ.ಯವರ ಬಗ್ಗೆ ಅತ್ಯಂತ ಗೌರವ. ತಮ್ಮ ಕೆಲಸ ಕಾರ್ಯಗಳಿಗೆ ಆಗಾಗ ಅವರ ನೆರವುಗಳನ್ನು ಪಡೆಯುತ್ತಿದ್ದವರು.  ಡಿ.ವಿ.ಜಿ. ಯವರ ಈ ಸಹಾಯಕ್ಕಾಗಿ ಒಮ್ಮೆ ಚೆಕ್ ನೀಡಲು ವಿಶ್ವೇಶ್ವರಯ್ಯನವರು ಮುಂದಾದರು. ಆದರೆ ಅದನ್ನು ಸ್ವೀಕರಿಸಲು ಡಿ.ವಿ.ಜಿ.ಯವರು ಒಪ್ಪಲೇ ಇಲ್ಲ. ನೀವು ಸ್ವೀಕರಿಸದಿದ್ದರೆ ಮುಂದೆ ನಿಮ್ಮಿಂದ ಯಾವುದೇ ನೆರವನ್ನು ಪಡೆಯಲು ತಾನು ಬರುವುದಿಲ್ಲ ಎಂಬ ಬೆದರಿಕೆಯನ್ನೂ ವಿಶ್ವೇಶ್ವರಯ್ಯನವರು ನೀಡಿದರು. ಕೊನೆಗೂ ಅವರ ಒತ್ತಡಕ್ಕೆ ಮಣಿದು ಚೆಕ್ಕನ್ನು ಸ್ವೀಕರಿಸಿದರು. ಆದರೆ ಡಿ.ವಿ.ಜಿ. ತೀರಿಕೊಂಡ ಬಳಿಕ ಅಚ್ಚರಿಯ ಸಂಗತಿಯೊಂದು ಕಾದಿತ್ತು. ಅವರು ವಿಶ್ವೇಶ್ವರಯ್ಯನವರು ಕೊಟ್ಟ ಯಾವ ಚೆಕ್ಕನ್ನೂ ಕ್ಯಾಶಿಗಾಗಿ ಬ್ಯಾಂಕಿಗೆ ನೀಡಿರಲಿಲ್ಲ. ಅವುಗಳು ಡಿ.ವಿ.ಜಿ.ಯವರ  ಬಳಿಯಲ್ಲಿಯೇ ಇದ್ದಿದ್ದವು.
ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭಿಸಿಯೇ ಬಿಟ್ಟರು :
ಜೀವನದಲ್ಲಿ ಶಿಸ್ತು ಮತ್ತು ದಕ್ಷತೆಯೊಂದಿಗೆ ಡಿ.ವಿ.ಜಿ. ಯವರು ಎಂದೂ ರಾಜಿ ಮಾಡಿಕೊಂಡವರಲ್ಲ. ಖ್ಯಾತ ಸಾಹಿತಿ ಎಲ್. ಎಸ್. ಶೇಷಗಿರಿ ರಾಯರು ಈ ಸಂಬಂಧ ಒಂದು ಘಟನೆಯನ್ನು ನೀಡಿರುತ್ತಾರೆ. ಕಾರ್ಯಕ್ರಮವೊಂದಕ್ಕೆ ಡಿ.ವಿ.ಜಿ. ಯವರನ್ನು ಶೇಷಗಿರಿ ರಾಯರು ಆಹ್ವಾನಿಸಿದ್ದರು. ಆರು ಗಂಟೆಗೆ ಕಾರ್ಯಕ್ರಮ ಆರಂಭವಾಗ ಬೇಕಾಗಿತ್ತು. ಆದರೆ ಇಂದಿನಂತೆ ಅಂದೂ ಜನರ ಅಭಾವ.  ಜನರು ಸೇರಬಹುದೆಂಬ ನಿರೀಕ್ಷೆಯಿಂದ ಐದು ನಿಮಿಷ ಮುಂದೂಡುವ ಪ್ರಯತ್ನದಲ್ಲಿ ಶೇಷಗಿರಿ ರಾಯರು ನಿರತರಾಗಿದ್ದರು. ಆದರೆ ಆರು ಗಂಟೆಗೆ ಸರಿಯಾಗಿ ಡಿ.ವಿ.ಜಿ. ವೇದಿಕೆಯನ್ನೇರಿಯೇ ಬಿಟ್ಟರು.  ಡಿ.ವಿ.ಜಿ. ವೇದಿಕೆಯನ್ನೇರಿದವರೇ ಈಗ ಪ್ರಾರ್ಥನೆ ಎಂದು ಘೋಷಿಸಿಯೇ ಬಿಟ್ಟರು. ಎಲ್.ಎಸ್. ರವರಿಗೆ ಆಶ್ಚರ್ಯ.
ದೀಘಾಯುಸ್ಸು ಎಂದರೆ ----:
ಜೀವನದಲ್ಲಿ ಸುಖ ಮತ್ತು ದು:ಖಗಳು ಸಾಮಾನ್ಯ. ಅದನ್ನು ಎದುರಿಸಿದವನೇ ನಿಜವಾದ ಧೀರ. ಹೀಗೆಲ್ಲಾ ಉಪದೇಶಿಸುವುದು ಸುಲಭ. ಆದರೆ ಆ ಕಷ್ಟಗಳನ್ನು ಸಹಿಸಿ, ಸಾಮಾನ್ಯರಿಗೂ ಸವಿ ನೀಡುವವರು ಎಷ್ಟು ಮಂದಿ?. ಇದನ್ನು ನೆನಪಿಸಿಕೊಂಡಾಗ ನೆನಪಾಗುವವರಲ್ಲಿ ಒಬ್ಬರು ಹಾಸ್ಯ ಬರಹಗಾರ ನಾ. ಕಸ್ತೂರಿಯವರು.  ಕನ್ನಡದ ಹಾಸ್ಯ ಲೇಖಕ ನಾ.ಕಸ್ತೂರಿಯವರ ಬದುಕೂ ಆಶಾದಾಯಕವಾಗಿರಲಿಲ್ಲ. 18-20 ವರ್ಷದ ಮಗನನ್ನು ತಮ್ಮ ನಡುವಯಸ್ಸಿನಲ್ಲೇ ಕಳೆದುಕೊಂಡವರು. ಒಬ್ಬಳೇ ಮಗಳ ಸಾಂಸಾರಿಕ ಬದುಕೂ ಸುಖವಾಗಿರಲಿಲ್ಲ. ಮಗಳು ತಂದೆಯ ಮನೆಗೇ ಮರಳಬೇಕಾದ ಪರಿಸ್ಥಿತಿ ಒದಗಿತು. ಅವರ ಇಳಿ ವಯಸ್ಸಿನಲ್ಲೂ ವಿಧಿ ಅವರ ಬೆನ್ನು ಬಿಡಲಿಲ್ಲ. ಅವರ ಇನ್ನೊಬ್ಬ ಮಗನೂ ಇಹದ ಬದುಕಿಗೆ ವಿದಾಯ ಹೇಳಬೇಕಾಯಿತು. ಆದರೆ ಈ ಕಹಿಗಳನ್ನು ಉಂಡು ಹಾಸ್ಯದ ಮೂಲಕ ಸಿಹಿಯನ್ನೇ ಓದುಗರಿಗೆ ನೀಡಿದರು. ಅವರ ಅನರ್ಥಕೋಶದಲ್ಲಿ ಬರುವ ಒಂದು ವಿವರಣೆ ಅವರ ಈ ನೋವಿಗೆ ಕನ್ನಡಿ ಹಿಡಿದಂತಿದೆ. ಅವರೇ 'ದೀಘರ್ಾಯುಸ್ಸು' ಎಂಬುದಕ್ಕೆ 'ನೆಂಟರಿಷ್ಟರ ಸಾವನ್ನು ನೋಡುವ ಸಂಕಟ' ಎಂಬ ಅರ್ಥ ನೀಡಿರುತ್ತಾರೆ.  'ಅಕ್ರೂರ' ಎಂದರೆ 'ನಿವೃತ್ತರಾದ ಅಧಿಕಾರಿ' ಎಂಬ ಅರ್ಥ ನೀಡಿರುತ್ತಾರೆ.
ಮಕ್ಕಳಿಗೆ ಸೆಲ್ಯೂಟ್ ಮಾಡಲು ಕಲಿಸಿದರು :
ದೇಶಪ್ರೇಮದ ಬಗ್ಗೆ ಮಾತನಾಡುವುದೇ ಈಗೀಗ ಫ್ಯಾಶನ್ ಎಂಬಂತೆ ಆಗಿ ಬಿಟ್ಟಿದೆ.  ದೇಶಪ್ರೇಮಿಗಳೆಂದು ಹೇಳಿಕೊಳ್ಳುವವರ ಹಗರಣಗಳು ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿವೆ.  ದೇಶಪ್ರೇಮದ ವಿಚಾರದಲ್ಲಿ ಪ್ರಾಮಾಣಿಕತೆ ಮೆರೆದವರು ಜ||ಕಾರ್ಯಪ್ಪ. ಭಾರತೀಯ ಸೇನಾ ಮಹಾದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರ ಹೆಸರನ್ನು ಕೇಳದವರೇ ಇಲ್ಲ.  ಕರ್ತವ್ಯ ನಿಷ್ಠೆ, ಮಾನವೀಯತೆ, ಶಿಸ್ತಿಗೆ ಹೆಸರಾದವರು. ಒಮ್ಮೆ ಅವರು ಭಾರತೀಯ ಸೇನೆಯ ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದರು.  ಅವರೊಂದಿಗೆ ಅವರ ಗೆಳೆಯರೊಬ್ಬರು ಇದ್ದರು. ಗೆಳೆಯರಿಗೆ ಸಿಗರೇಟ್ ಸೇದಲು ತವಕ. ಕಿಸೆಯಿಂದ ಸಿಗರೇಟಿನ ಪ್ಯಾಕ್ ತೆಗೆದಾಗ ಕಾರ್ಯಪ್ಪನವರು ಆಕ್ಷೇಪಿಸಿದರು. ಇದು ಸಕರ್ಾರಿ ವಾಹನ. ಇದರಲ್ಲಿ ಸಿಗರೇಟ್ ಸೇವನೆ ನಿಷಿದ್ಧ.  ಅವರ ಬಗ್ಗೆ ಬರೆಯುತ್ತಾ ಎಲ್.ಎಸ್. ಶೇಷಗಿರಿ ರಾಯರು ಕೆಲವು ಕುತೂಹಲದ ಅಂಶಗಳನ್ನು ಪಟ್ಟಿ ಮಾಡುತ್ತಾರೆ. ಅವರ ಕಿಸೆಯಲ್ಲಿ ಚಾಕಲೇಟ್, ಸೂಜಿ ಮತ್ತು ನೂಲು, ಬಾಚಣಿಗೆಗಳು ಯಾವಾಗಲೂ ಇರುತ್ತಿದ್ದವಂತೆ. ರಸ್ತೆಯ ಬದಿಯಲ್ಲಿ ಬಡ ಮಕ್ಕಳನ್ನು ಕಂಡಾಗ ಅವರ ಕೆದರಿದ ತಲೆಯನ್ನು ತಾವೇ ಬಾಚುತ್ತಿದ್ದರಂತೆ. ಆ ಮಕ್ಕಳಿಗೆ ಚಾಕಲೇಟ್ ನೀಡಿ ಭಾರತದ ಧ್ವಜಕ್ಕೆ ಸೆಲ್ಯೂಟ್ ಮಾಡುವ ಕ್ರಮವನ್ನೂ ಕಲಿಸುತ್ತಿದ್ದರಂತೆ.
ನೀನು ಏನಾಗಿದ್ದಿಯೋ ಅದನ್ನು ಸಾಧ್ಯ ಮಾಡಿತಲ್ಲವೇ?.:
ವಿ. ಸೀತಾರಾಮಯ್ಯನವರಿಗೆ ಒಮ್ಮೆ ಯುವಕನೋರ್ವನಿಂದ ಒಂದು ಪ್ರಶ್ನೆ ಎದುರಾಯಿತಂತೆ. ದೇಶ ನನಗೆ ಏನು ಮಾಡಿದೆ?.  ಆಗ ವಿ.ಸೀ. ಯವರು ಹೀಗೆ ಉತ್ತರಿಸಿದರು. ಈ ಪ್ರಶ್ನೆಯನ್ನು ನೀನು ಕೇಳಲು ಸಾಧ್ಯವಾಗುವಂತೆ ಮಾಡಿತಲ್ಲವೇ?.
ಇಂದು ನಮ್ಮ ವ್ಯವಸ್ಥೆ ಎಲ್ಲಾ ರಂಗಗಳಲ್ಲೂ ಕೆಡಲು ಪ್ರಮುಖ ಕಾರಣ ನುಡಿ ಮತ್ತು ನಡೆಗಳ ನಡುವಿನ ಅಂತರ. ಸಮಾಜವೂ ನಮ್ಮನ್ನು ಗಂಭೀರವಾಗಿ ಗಮನಿಸುತ್ತಿದೆ.  ಬಸವಣ್ಣನವರು ಹೇಳಿದಂತೆ ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮನು ಒಲಿಯನು. ಈ ದೆಸೆಯಲ್ಲಿ ನಮ್ಮ ಚಿಂತನೆ ಸಾಗಬೇಕಾಗಿದೆ.
      ಡಾ.ಶ್ರೀಕಾಂತ್ ಸಿದ್ದಾಪುರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ