ಮಂಗಳವಾರ, ಫೆಬ್ರವರಿ 8, 2011

siddapura-short history

ಕಣ್ಮರೆಯಾದ ಸಿದ್ದಾಪುರದ ಗತವೈಭವ
 ಸಿದ್ದಾಪುರ ಕುಂದಾಪುರ ತಾಲೂಕಿನ ಚಿಕ್ಕ ಗ್ರಾಮ.  ಇಂದು ಈ ಪರಿಸರದ  ಪ್ರಭಾವೀ ವ್ಯಾಪಾರ ಕೇಂದ್ರ. ಸಿದ್ದಾಪುರವು ಇತ್ತೀಚೆಗೆ ಕ್ರೀಡಾಸಾಧನೆಯ ಮೂಲಕ ಜಗತ್ತಿನ  ಗಮನವನ್ನೂ ಸೆಳೆದಿದೆ.  ಈ ಗ್ರಾಮದ ಅಶ್ವಿನಿ ಚಿದಾನಂದ ಶೆಟ್ಟಿಯವರು ಕಾಮನ್ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಮೂರು ಚಿನ್ನವನ್ನು ತನ್ನದಾಗಿರಿಸಿಕೊಂಡಿರುತ್ತಾರೆ.  ಈ ಎಲ್ಲದರ ನಡುವೆಯೂ ಸಿದ್ದಾಪುರವು ಐತಿಹಾಸಿಕವಾಗಿ ಮೆರೆದಾಡಿದ ಸ್ಥಳ ಎಂಬುದು ಅನೇಕರಿಗೆ ಅರಿಯದು. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಐತಿಹಾಸಿಕ ವೈಭವಗಳು ಕಾಲಗರ್ಭದಲ್ಲಿ ಹೂತು ಹೋಗಿರುವುದು.
 ಹೊನ್ನೆಕಂಬಳಿ ಅರಸರ ರಾಜಧಾನಿ :
 ತುಳುನಾಡಿನ ಅರಸುಮನೆತನಗಳಲ್ಲಿ ಹೊನ್ನೆಕಂಬಳಿ ಮನೆತನವೂ ಒಂದು. ಈ ಮನೆತನದವರು  ಈಗಿನ ಕುಂದಾಪುರ ತಾಲೂಕು ಮತ್ತು  ಈ ತಾಲೂಕಿಗೆ ಹೊಂದಿಕೊಂಡ ಘಟ್ಟದ ಮೇಲಿನ ಕೆಲವು ಪ್ರದೇಶಗಳನ್ನು ಆಳಿಕೊಂಡಿದ್ದರು.  ಈ ಅರಸುಮನೆತನದ ರಾಜಧಾನಿ ಸಿದ್ದಾಪುರವಾಗಿತ್ತು ಎಂಬುದು  ಇತ್ತೀಚಿನ ಸಂಶೋಧನೆಗಳಿಂದ ದೃಢೀಕರಿಸಲ್ಪಟ್ಟಿದೆ.  ಸಿದ್ದಾಪುರದ ಈ ಪರಿಸರವು  ಹಿಂದೆ ಕಡರಿ (ಈಗಿನ ಕಡ್ರಿ)ಎಂಬ ಹೆಸರಿನಿಂದ ಪ್ರಸಿದ್ಧವಾಗಿತ್ತು.  ಇಲ್ಲಿಗೆ ಸಮೀಪದ ಜನ್ಸಾಲೆ ಎಂಬಲ್ಲಿ ದೊರೆತ ಶಾಸನವು ಇದಕ್ಕೆ ಪ್ರಬಲ ಪುರಾವೆಯಾಗಿದೆ.  ಈ ಶಾಸನದ ಕಾಲ ಕ್ರಿ.ಶ. 1457. ಈ ಶಾಸನದಲ್ಲಿ ಕದಳಿ ಎಂಬ ಹೆಸರಿನ ಉಲ್ಲೇಖವಿದ್ದು, ಇದೇ ಈಗಿನ ಕಡ್ರಿಯಾಗಿರಬಹುದೆಂಬ ನಿಲುವು ಸಂಶೋಧಕರದ್ದು. ಇದನ್ನು ಪತ್ತೆ ಮಾಡಿದ ಖ್ಯಾತ ಸಂಶೋಧಕ ಡಾ.ವಸಂತ ಶೆಟ್ಟಿಯವರು ಹಿಂದೆ ಕದಳಿ ಎಂಬುದು ಹೊನ್ನೆಕಂಬಳಿ ಅರಸರ ರಾಜಧಾನಿಯಾಗಿರಬಹುದೆಂದೂ ಊಹಿಸುತ್ತಾರೆ. ಅನಂತರ ಕೆಳದಿ ಅರಸರ ಕಾಲದಲ್ಲಿ ರಾಜಧಾನಿಯು ಹೊಸಂಗಡಿಗೆ ವಗರ್ಾವಣೆಯಾಗಿರಬಹುದು. ಈ ಶಾಸನವು ಐತಿಹಾಸಿಕವಾಗಿ ಗಮನ ಸೆಳೆಯಲು ಇನ್ನೊಂದು ಪ್ರಮುಖ ಕಾರಣ ಈ ಶಾಸನದಲ್ಲಿ ಉಲ್ಲೇಖಿಸಲ್ಪಟ್ಟ ತಿರುಮಲ ಅರಸನೇ  ಸದ್ಯ ದೊರೆತ ಹೊನ್ನೆಕಂಬಳಿ ಮನೆತನದ ಅರಸರಲ್ಲಿ ಮೊದಲಿಗನಾಗಿರಬಹುದೆಂಬ ಸಂದೇಹ.
 ಕಡ್ರಿ ಶಾಸನ :
 ಸಿದ್ದಾಪುರದ ಇತಿಹಾಸಕ್ಕೆ ಸಂಬಂಧಿಸಿದ ಮೊದಲ ಶಾಸನ ಕಡ್ರಿ ಶಾಸನ. ಸಿದ್ದಾಪುರ ಸಮೀಪದ ಕಡ್ರಿಯ ಹಣುಬಿನ ಗದ್ದೆಯಲ್ಲಿ ಇಂದಿಗೂ ಈ ಶಾಸನವಿದ್ದು, ಇದು ಅಳುಪರ ಕಾಲದ ಶಾಸನವಾಗಿದೆ. ಈ ಶಾಸನದ ಕಾಲ ಕ್ರಿ.ಶ. 1111.  ಈ ಶಾಸನವು ತನ್ನ ಒಡೆಯನ ಪರವಾಗಿ ಹೋರಾಡಿ ಮಡಿದ ಗೆಲ್ಲರಸನಿಗೆ ದತ್ತಿ ನೀಡಿದ ವಿವರಗಳನ್ನು ತಿಳಿಸುತ್ತಿದೆ.
 ಎರಡನೇ ಬಸಪ್ಪ ನಾಯಕನ ಕಾಲದಲ್ಲಿ ಸಿದ್ದಾಪುರ :
 ಸಿದ್ದಾಪುರವು ಐತಿಹಾಸಿಕವಾಗಿ ಗಮನ ಸೆಳೆದದ್ದು ಕೆಳದಿ ಅರಸರ ಕಾಲದಲ್ಲಿ.  ಲಿಂಗಣ್ಣ ಕವಿಯ ಕೆಳದಿ ನೃಪ ವಿಜಯದ ಪ್ರಕಾರ ಕೆಳದಿ ಅರಸನಾದ ಎರಡನೇ ಬಸಪ್ಪ ನಾಯಕನು ಕ್ರಿ.ಶ.1740 ರಿಂದ 1755 ರ ತನಕ ಆಳಿದನು. ಈ ಅವಧಿಯಲ್ಲಿ ಸಿದ್ದಾಪುರದ ಬೆಳವಣಿಗೆಗೆ ಈತನ ಕೊಡುಗೆ ಗಮನಾರ್ಹವಾದುದು. ಈ ಕಾಲದಲ್ಲಿಯೇ ಇದು ಪ್ರಬಲ ವೀರಶೈವ ಕೇಂದ್ರವಾಗಿ ಮೆರೆದಾಡಿತು.  ಕೆಳದಿ ನೃಪ ವಿಜಯವು ಕೊಡುವ ವಿವರಣೆಯಂತೆ ಬಸಪ್ಪ ನಾಯಕನು ಶಿವಜಂಗಮ ಧಮರ್ಾರ್ಥವಾಗಿ ಇಲ್ಲಿ ದೊಡ್ಡ ಮಠವನ್ನು ಕಟ್ಟಿಸಿದನು.  ಈ ಮಠವಿರುವ ಪ್ರದೇಶವನ್ನು ಮಂತ್ರರಾಜಪುರ ಎಂದು ನಾಮಕರಣ ಮಾಡಿಸಿದನು. ಈ ಮಠವನ್ನು ಗುರು ನಂಜುಂಡಸ್ವಾಮಿಗಳಿಗೆ ಧಾರೆ ಎರೆದು ಶಾಸನವೊಂದನ್ನೂ ಕೆತ್ತಿಸಿದನು.  ಈತನ ಅವಧಿಯಲ್ಲಿ ಸಿದ್ಧೇಶ್ವರ ದೇವಸ್ಥಾನವೂ ಈ ಪ್ರದೇಶದಲ್ಲಿ ನಿಮರ್ಾಣಗೊಂಡಿತು.  ಪ್ರತೀ ವರ್ಷವೂ ಅದರ ಉತ್ಸವವು ವೈಭವಯುತವಾಗಿ ನಡೆಯುವಂತೆ ಅರಸನು ವ್ಯವಸ್ಥೆ ಮಾಡಿದ್ದನು. ಸ್ವತ: ರಾಜನೇ ಈ ಉತ್ಸವದಂದು ಹಾಜರಾಗಿ ವೀಕ್ಷಿಸುತ್ತಿದ್ದ ವಿವರಗಳೂ ಲಿಂಗಣ್ಣನ ಕೃತಿಯಲ್ಲಿ ಸ್ಪಷ್ಟವಾಗಿದೆ.

 ಇದಕ್ಕೆ ಕುರುಹಾಗಿ ಈಗ ಮಠದ ಅವಶೇಷ ಉಳಿದಿಲ್ಲ. ದೇವಾಲಯದ ಕುರುಹೂ ಕಣ್ಮರೆಯಾಗಿದೆ. ಆದರೆ ಈ ಪ್ರದೇಶದಲ್ಲಿ ಸುಮಾರು ಆರು ಕೆರೆಗಳಿದ್ದು, ಅವುಗಳಲ್ಲಿ ಒಂದು ಕೆರೆ ಸ್ನಾನದ ಕೆರೆ. ಬಹುಶ: ಅರಸರು ಇಲ್ಲಿ ಸ್ನಾನ ಮಾಡುತ್ತಿದ್ದಿರಬಹುದೇ?. ಮುಸುರೆ ಕೆರೆ, ಛತ್ರದ ಕೆರೆ ಇತ್ಯಾದಿ ಇತರ ಕೆರೆಗಳು. ಈ ಕೆರೆಗಳ ಹೆಸರೇ ಸೂಚಿಸುವಂತೆ ಇಲ್ಲಿಗೆ ಸಾಕಷ್ಟು ಪ್ರವಾಸಿಗಳು ಬರುತ್ತಿದ್ದಿರಬಹುದು. ಊಟ, ಉಪಚಾರಗಳು ನಡೆಯುತ್ತಿದ್ದಿರಬಹುದು.
 ಸಿದ್ದಾಪುರದ ಸುಬ್ರಾಯ ದೇವರು :
  ಈ ಊರಿನ ಕೆಳಪೇಟೆಯಲ್ಲಿ ನಾಗನ ದೇವಾಲಯವೊಂದು ಇಂದಿಗೂ ಇದೆ. ಇದು ಸುಮಾರು ಆರು ಅಡಿ ಎತ್ತರವಿದೆ. ಕಪ್ಪು ಶಿಲೆಯಿಂದ ಕೆತ್ತಲ್ಪಟ್ಟಿದೆ. ಇಂದಿಗೂ ಫಳ ಫಳ ಹೊಳೆಯುತ್ತಿದ್ದು, ದಕ್ಷಿಣ ಭಾರತದಲ್ಲಿಯೇ ಅತ್ಯಾಕರ್ಷಕ ವಿಗ್ರಹವಾಗಿದೆ.  ಈ ದೇವಾಲಯವೂ ಇದೇ ಕಾಲದಲ್ಲಿ ತಲೆಯೆತ್ತಿರಬಹುದೆಂಬ ಬಗ್ಗೆ ಸಾಕಷ್ಟು ಆಧಾರಗಳಿವೆ.
 ನಾಥ ಪಂಥದ ಪ್ರಮುಖ ಕೇಂದ್ರ :
 ಸಿದ್ದಾಪುರ ಸಮೀಪದ ಯಡಮೊಗೆಯಲ್ಲಿ ಇಂದಿಗೂ ನಾಥ ಪಂಥದವರ ಮಠವಿದೆ. ಸಿದ್ದಾಪುರ ಮತ್ತು ಆಸುಪಾಸಿನ ಪ್ರದೇಶಗಳು ಒಂದು ಕಾಲದಲ್ಲಿ ನಾಥ ಪಂಥದ ಪ್ರಮುಖ ಕೇಂದ್ರವಾಗಿದ್ದಿರಬಹುದು. ಇಲ್ಲಿನ ಜನ್ಸಾಲೆ ಶಾಸನವು ಇದನ್ನು ಸಾಬೀತು ಪಡಿಸುತ್ತಿದೆ.  ಜನ್ಸಾಲೆಯ ಗೋಪಿನಾಥ ಸ್ವಾಮೀ ದೇವಾಲಯದ ಮುಂಭಾಗದಲ್ಲಿ ಇಂದಿಗೂ ಈ ಶಾಸನವಿದೆ. ಈ  ಶಾಸನದ ಪ್ರಕಾರ ಇಲ್ಲಿ ಕಾಲಭೈರವ ದೇವಸ್ಥಾನವಿದ್ದಿತ್ತು. ಹೊನ್ನೆಕಂಬಳಿ ಅರಸನಾದ  ತಿರುಮಲ ಸಾಮಂತನು ಈ ಪಂಥದವರ ಮಠದ ಸ್ವಾಮಿಗಳಾಗಿದ್ದ ಶಿವಯೋಗಿ ಮಾಧವ ಸ್ವಾಮಿಗಳಿಗೆ ಕೆಲವು ಗದ್ದೆಗಳನ್ನು ದತ್ತಿಯಾಗಿ ನೀಡಿದ ವಿವರಗಳು ಈ ಶಾಸನದಲ್ಲಿದೆ. ಮಾಧವ ಸ್ವಾಮಿಗಳು ಇಲ್ಲಿನ ಗೋಪಿನಾಥ ದೇವಾಲಯದ ಅರ್ಚನೆಗೆ ದತ್ತಿ ನೀಡಿದ ಉಲ್ಲೇಖವೂ  ಶಾಸನದಲ್ಲಿದ್ದು,   ಸಾಮರಸ್ಯದ ದೃಷ್ಟಿಯಿಂದ ಇದು ಗಮನಾರ್ಹ ಅಂಶವಾಗಿದೆ. ಈ ಪರಿಸರದಲ್ಲಿ ಧಾಮರ್ಿಕ ಸೌಹಾರ್ದವಿದ್ದಿತ್ತು ಎಂಬುದಕ್ಕೆ ಈ ಶಾಸನವೇ ಸಾಕ್ಷಿ ಎಂದು ಶಾಸನ ಸಂಶೋಧಕ ಡಾ.ಜಗದೀಶ ಶೆಟ್ಟಿಯವರು ತಿಳಿಸುತ್ತಾರೆ. 
 ಅಂದು ಐತಿಹಾಸಿಕವಾಗಿ ಗಮನ ಸೆಳೆದ ಸಿದ್ದಾಪುರದ ಇತಿಹಾಸ ಇಂದು ಸಂಪೂರ್ಣ ಮರೆಯಾಗಿರುವುದು ದುರಂತ. ಈ ಪರಿಸರದಲ್ಲಿ ಅನೇಕ ಮಹತ್ವದ ಸಂಗತಿಗಳು ಭೂಮಿಯೊಳಗೆ ಹುದುಗಿರಬಹುದು. ಉತ್ಖನನದಿಂದ ಇನ್ನಷ್ಟು ಸತ್ಯಗಳು ಹೊರಬರಬಹುದು. ಈ ಕೆಲಸ ಇನ್ನು ಮುಂದೆ ಆಗಬೇಕಾಗಿದೆ.
       ಡಾ.ಶ್ರೀಕಾಂತ್ಸಿದ್ದಾಪುರ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ